ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಶೂಟಿಂಗ್‌ ಹೊಸ ದಿಕ್ಕಿನೆಡೆಗೆ...

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಭಾರತದಲ್ಲಿ ಶೂಟಿಂಗ್‌ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಖಂಡಿತಾ ಭಾವಿಸಿರಲಿಲ್ಲ. ಈ ದೇಶದಲ್ಲಿ ಶೂಟಿಂಗ್‌ ಕ್ರೀಡೆ ಸಾಕಷ್ಟು ಜನಮನ್ನಣೆ ಗಳಿಸಿದೆ ಎಂಬುದಕ್ಕೆ ಇದೊಂದು ನಿದರ್ಶನ. ಮುಂದಿನ ದಿನಗಳಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಇತರ ಮಹತ್ವದ ಕೂಟಗಳನ್ನೂ ಇಲ್ಲಿ ಆಯೋಜಿಸಬಹುದು’...

ಹೋದ ವಾರ ನವದೆಹಲಿಯಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಂಗರಿಯ ಪ್ರಮುಖ ಶೂಟರ್‌ ಪೀಟರ್‌ ಸಿದಿ ಅವರು ಆಡಿದ್ದ ಮೆಚ್ಚುಗೆಯ ನುಡಿಗಳಿವು. ಭಾರತದಲ್ಲಿ ಶೂಟಿಂಗ್‌ ಕ್ರೀಡೆ ಹೊಸ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ ಎಂಬುದಕ್ಕೆ ಪೀಟರ್‌ ಅವರ ಮಾತುಗಳೇ ಸಾಕ್ಷಿ.

ಭಾರತದಲ್ಲಿ ಈ ಕ್ರೀಡೆಗೆ  ವಿಶಿಷ್ಟ ಪರಂಪರೆ ಇದೆ. ಅಭಿನವ್‌ ಬಿಂದ್ರಾ, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಗಗನ್‌ ನಾರಂಗ್‌, ವಿಜಯ್‌ ಕುಮಾರ್‌, ಜಿತುರಾಯ್‌, ಹೀನಾ ಸಿಧು, ಅಂಜಲಿ ಭಾಗವತ್‌, ರಂಜನ್‌ಸೋಧಿ ಅವರಂತಹ ಸಾಧಕರು, ಒಲಿಂಪಿಕ್ಸ್‌, ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಅನೇಕ ಕೂಟಗಳಲ್ಲಿ ಪದಕಗಳಿಗೆ ಕೊರಳೊಡ್ಡಿ  ವಿಶ್ವದೆತ್ತರಕ್ಕೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಹಾಕಿಯ ಬಳಿಕ ಭಾರತಕ್ಕೆ ಚಿನ್ನ ಸಿಕ್ಕಿರುವುದು ಶೂಟಿಂಗ್‌ನಲ್ಲಿ ಎಂಬುದು ವಿಶೇಷ.

2004ರ ಅಥೆನ್ಸ್‌ ಒಲಿಂಪಿಕ್ಸ್‌ನ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ರಾಜ್ಯವರ್ಧನ್‌ ಸಿಂಗ್‌ ಬೆಳ್ಳಿ ಗೆದ್ದು ಹೊಸ ಭಾಷ್ಯ ಬರೆದಿದ್ದರು.ಅದಾಗಿ ನಾಲ್ಕು ವರ್ಷಗಳ ಬಳಿಕ (2008) ಚೀನಾದ ಬೀಜಿಂಗ್‌ನಲ್ಲಿ ಅಭಿನವ್‌ ಬಿಂದ್ರಾ ಚಿನ್ನಕ್ಕೆ ಗುರಿ ಇಟ್ಟು ಶೂಟಿಂಗ್‌ ಕ್ಷಿತಿಜದಲ್ಲಿ ಮಿನುಗಿದ್ದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ವಿಜಯ್‌ ಕುಮಾರ್‌ ಮತ್ತು ಗಗನ್‌ ನಾರಂಗ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿ ಈ ಕ್ರೀಡೆಗೆ ಹೊಸ ದಿಕ್ಕು ತೋರಿದ್ದರು. ಇವರ ಸಾಧನೆಯಿಂದ ಸ್ಫೂರ್ತಿ ಪಡೆದ ಅನೇಕ ಮಂದಿ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲೇ ಎತ್ತರದ ಸಾಧನೆ ಮಾಡುವ ಪಣ ತೊಟ್ಟಿದ್ದಾರೆ.

ಎನ್‌ಆರ್‌ಎಐ ಯೋಜನೆಗಳ ಫಲ
ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವ 28 ಪದಕಗಳಲ್ಲಿ ಗುರಿಕಾರರು ನಾಲ್ಕು ಪದಕ ಗೆದ್ದುಕೊಟ್ಟಿದ್ದಾರೆ. ಶೂಟರ್‌ಗಳ ಈ ಯಶಸ್ಸಿನ ಹಿಂದೆ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯ (ಎನ್‌ಆರ್‌ಎಐ) ಪರಿಶ್ರಮವೂ ಅಡಗಿದೆ.

1951ರಲ್ಲಿ ಅಸ್ತಿತ್ವಕ್ಕೆ ಬಂದ  ಈ ಸಂಸ್ಥೆ ಶೂಟಿಂಗ್‌ಗೆ ಹೊಸ ಸ್ವರೂಪ ನೀಡಿತು. ಶೂಟಿಂಗ್‌ ಕಂಪನ್ನು ದೇಶದ ಎಲ್ಲಾ ಭಾಗಗಳಿಗೂ ಪಸರಿಸುವ ಕಾರ್ಯಕ್ಕೆ ಮುಂದಾಗಿರುವ ಸಂಸ್ಥೆ ಇದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ.

ಪ್ರತಿಭಾನ್ವಿತ ಶೂಟರ್‌ಗಳನ್ನು ಗುರುತಿಸುವ ಉದ್ದೇಶದಿಂದ ನಿರಂತರವಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಯೋಮಾನದ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುತ್ತಿದೆ. ಇಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವವರಿಗೆ  ನುರಿತ ಕೋಚ್‌ಗಳಿಂದ ವಿಶೇಷ ತರಬೇತಿಗಳನ್ನು ಕೊಡಿಸಿ ಅವರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದೆ.

ಜೊತೆಗೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಶೂಟಿಂಗ್‌ ಕೇಂದ್ರಗಳನ್ನು ನಿರ್ಮಿಸುವ ನಿಟ್ಟಿನಲ್ಲೂ ಕಾರ್ಯಪ್ರವೃತ್ತವಾಗಿದೆ. ನವದೆಹಲಿ ಯಲ್ಲಿ ತಲೆ ಎತ್ತಿರುವ  ಕರ್ಣಿಸಿಂಗ್‌ ರೇಂಜ್‌ ಈ ಪೈಕಿ ಪ್ರಮುಖವಾದುದು. ಈ ಕೇಂದ್ರ ಹೊಂದಿರುವ ಸೌಕರ್ಯ ಗಳ ಬಗ್ಗೆ ಹಲವು ವಿದೇಶಿ ಶೂಟರ್‌ಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ಭಾರತದಲ್ಲಿ ಮೊದಲಿನಿಂದಲೂ ಶೂಟಿಂಗ್‌ ಕ್ರೀಡೆ ಜನಪ್ರಿಯತೆ ಹೊಂದಿದೆ. ಈ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸುವ ಉದ್ದೇಶ ನಮ್ಮದು.ಇದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ.

ತವರಿನಲ್ಲಿ ವಿಶ್ವಕಪ್‌ನಂತಹ ಮಹತ್ವದ ಕೂಟಗಳು ನಡೆಯುತ್ತಿರುವುದರಿಂದ ಜನರೂ ಈ ಕ್ರೀಡೆಯೆಡೆಗೆ ಆಕರ್ಷಿತರಾ ಗುತ್ತಿದ್ದಾರೆ’ ಎಂದು ಎನ್‌ಆರ್‌ಎಐ ಅಧ್ಯಕ್ಷ ರಣಿಂದರ್‌ ಸಿಂಗ್‌ ವಿಶ್ವಕಪ್‌ ವೇಳೆ ಹೇಳಿದ್ದರು.

ಈ ಕಾರ್ಯಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತ ಕ್ರೀಡಾ ಪ್ರಾಧಿಕಾರ ನೀಡಿರುವ ಸಹಕಾರದ ಬಗ್ಗೆಯೂ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಬಿಂದ್ರಾ ನೇತೃತ್ವದಲ್ಲಿ ಕಾರ್ಯಪಡೆ

2016ರ ರಿಯೊ ಒಲಿಂಪಿಕ್ಸ್‌ ಭಾರತದ ಶೂಟಿಂಗ್‌ ಲೋಕದ ಪಾಲಿಗೆ ನಿರಾಶದಾಯಕವಾಗಿತ್ತು. ಹಿಂದಿನ ಮೂರು ಒಲಿಂಪಿಕ್ಸ್‌ಗಳಲ್ಲಿ ಪದಕಗಳನ್ನು ಬೇಟೆಯಾಡಿದ್ದ ಶೂಟರ್‌ಗಳು ಬ್ರೆಜಿಲ್‌ನಲ್ಲಿ ಪದಕಕ್ಕೆ ಗುರಿ ಇಡಲು ವಿಫಲರಾಗಿದ್ದರು. ಜಿತುರಾಯ್‌, ನಾರಂಗ್‌, ಹೀನಾ, ಕೈನಾನ್‌ ಚೆನೈ ಮತ್ತು ಪಿ.ಎನ್‌. ಪ್ರಕಾಶ್‌ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿದ್ದರು. ಬಿಂದ್ರಾ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಭಾರತದ ಉತ್ತಮ ಸಾಧನೆ ಅನಿಸಿತ್ತು.

ಇದರಿಂದ ಎಚ್ಚೆತ್ತುಕೊಂಡ ಎನ್‌ಆರ್‌ಎಐ 2020ರ ಟೋಕಿಯೊ ಒಲಿಂಪಿಕ್ಸ್‌ ಗಮನದಲ್ಲಿಟ್ಟುಕೊಂಡು ಅನುಭವಿ ಶೂಟರ್‌ ಅಭಿನವ್‌ ಬಿಂದ್ರಾ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಿದೆ.

ಈ ಕಾರ್ಯಪಡೆ ಶಿಫಾರಸು ಮಾಡಿರುವ ಹಲವು ಅಂಶಗಳನ್ನು ಗಂಭೀರ ವಾಗಿ ಪರಿಗಣಿಸಿ ಅವುಗಳ ಸುಧಾರಣೆಗೆ ಒತ್ತು ನೀಡಿತ್ತು.ಇದರ ಆರಂಭಿಕ ಫಲ ವಿಶ್ವಕಪ್‌ನಲ್ಲಿ ಸಿಕ್ಕಿದೆ. ತವರಿನಲ್ಲಿ ನಡೆದ ಕೂಟದಲ್ಲಿ ಜಿತು ರಾಯ್‌, ಅಮನ್‌ಪ್ರೀತ್‌ ಸಿಂಗ್‌, ಅಂಕುರ್‌ ಮಿತ್ತಲ್‌, ಪೂಜಾ ಗಾಟ್ಕರ್, ಅಂಗದ್‌ ವೀರ್‌ಸಿಂಗ್‌ ಬಾಜ್ವ ಮತ್ತು ಹೀನಾ ಸಿಧು ಪದಕ ಗೆದ್ದು ಮಿಂಚಿದ್ದಾರೆ. 

ದುಬಾರಿ ವೆಚ್ಚ
ಶೂಟಿಂಗ್‌ ಶ್ರೀಮಂತರ ಕ್ರೀಡೆ ಎಂಬ ಮಾತುಗಳೂ ಇವೆ. ಈ ಕ್ರೀಡೆಗೆ ಬಳಸುವ ರೈಫಲ್‌ ಮತ್ತು ಪಿಸ್ತೂಲ್‌ಗಳನ್ನು ಕೊಂಡುಕೊಳ್ಳಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಜೊತೆಗೆ ತರಬೇತಿ ಹಾಗೂ ಇನ್ನಿತರ ಕಾರ್ಯಗಳಿಗೂ ಸಾಕಷ್ಟು ಹಣ ಖರ್ಚಾಗುತ್ತದೆ. ಇಷ್ಟೊಂದು ಹಣ ನೀಡಿ ತಮ್ಮ ಮಕ್ಕಳಿಗೆ ಶೂಟಿಂಗ್‌ ಕಲಿಸಲು ಪೋಷಕರೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರತಿಭೆ ಇದ್ದರು ಕೂಡ ಅನೇಕರು ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಇದು ಶೂಟಿಂಗ್‌ ಬೆಳವಣಿಗೆಗೆ ಅಲ್ಪ ಹಿನ್ನಡೆಯಾಗಿ ಪರಿಣಮಿಸಿದೆ.

ಅಭಿನವ್‌ ಪಣ
ಶೂಟಿಂಗ್‌ ಕ್ರೀಡೆಯನ್ನು ಬೇರುಮಟ್ಟದಿಂದ ಬಲಪಡಿಸುವ ಪಣ ತೊಟ್ಟಿರುವ ಬಿಂದ್ರಾ, ತಾವು ಸ್ಥಾಪಿಸಿರುವ ಅಭಿನವ್‌ ಬಿಂದ್ರಾ ಫೌಂಡೇಷನ್‌ ವತಿಯಿಂದ   ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದಾರೆ.

ಜೂನಿಯರ್‌ ಮಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿರುವ ಶೂಟರ್‌ಗಳನ್ನು ಗುರುತಿಸಿ ಅವರಿಗೆ ಅನುಭವಿ ಕೋಚ್‌ಗಳಿಂದ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿರುವ ಅವರು ಇದರ ಜೊತೆಗೆ ವಿಶೇಷ ಕಾರ್ಯಗಾರಗಳನ್ನು ಆಯೋಜಿಸಿ ಎಳೆಯ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದಕ್ಕಾಗಿ ಅವರು ಗೋ ಸ್ಪೋರ್ಟ್ಸ್‌ ಫೌಂಡೇಷನ್‌ ಜೊತೆಗೆ ಕೈಜೋಡಿಸಿದ್ದಾರೆ. ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರೂ ಈ ಫೌಂಡೇಷನ್‌ನ ಸಲಹಾ ಸಮಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT