ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನ’ದ ನೆನಪುಗಳು

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೆರಿಬಿಯನ್ ದ್ವೀಪಗಳ ನಾಡಿಗೂ ಬೆಂಗಳೂರಿಗೂ ಅವಿನಾವ ಭಾವ ನಂಟಿದೆ. ಅದನ್ನು ಗಟ್ಟಿಯಾಗಿ ಬೆಸೆದಿರುವುದು ಕ್ರಿಕೆಟ್‌. ವೆಸ್ಟ್‌ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ 43 ವರ್ಷಗಳ ಹಿಂದೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಅದರ ನಂತರ ಅವರು ಕ್ರಿಕೆಟ್‌ ಜಗತ್ತಿನ ದಂತಕಥೆಯಾದರು. ಉದ್ಯಾನನಗರಿಯೂ ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆಯುತ್ತ ಸಾಗಿದೆ.

ಇದೀಗ ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್‌–ಗಾವಸ್ಕರ್ ಸರಣಿಯ ಎರಡನೇ ಟೆಸ್ಟ್‌ ಸಂದರ್ಭದಲ್ಲಿ ಚಿನ್ನಸ್ವಾಮಿ ಅಂಗಳದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇಲ್ಲಿ ನಡೆದ ಟೆಸ್ಟ್‌ಗಳ ಸಂಗತಿಗಳು ರೋಮಾಂಚನ ಮೂಡಿಸುತ್ತವೆ.  

ಕ್ರಿಕೆಟ್‌ನಲ್ಲಿ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ ನಗರಗಳ ಆಧಿಪತ್ಯಕ್ಕೆ ಸೆಡ್ಡು ಹೊಡೆದು ಬೆಳೆದ ಕರ್ನಾಟಕದ ಕ್ರಿಕೆಟ್‌ ಇವತ್ತು ದೊಡ್ಡ ಶಕ್ತಿಯಾಗಿದೆ.  ಇಲ್ಲಿ ಮೊಟ್ಟಮೊದಲ ಟೆಸ್ಟ್ ನಡೆದಿದ್ದು 1974ರಲ್ಲಿ.

ಅದಾಗಲೇ ಭಾರತದ ಕೀರ್ತಿ ಪತಾಕೆಯನ್ನು ವಿದೇಶದ ನೆಲದಲ್ಲಿಯೂ ಹಾರುವಂತೆ ಮಾಡಿ ಅಭಿಮಾನಿಗಳ ಕಣ್ಮಣಿಯಾಗಿದ್ದವರು ಕರ್ನಾಟಕದ ಬಿ.ಎಸ್‌. ಚಂದ್ರಶೇಖರ, ಎರ್ರಪಳ್ಳಿ ಪ್ರಸನ್ನ, ಬ್ಯಾಟಿಂಗ್ ನಿಪುಣ ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್ ಅಂದು ಕಣಕ್ಕಿಳಿದಿದ್ದರು.

ಆಗಿನ್ನೂ ನಿರ್ಮಾಣ ಹಂತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣವು ಚೊಚ್ಚಲ ಟೆಸ್ಟ್‌ಗೆ ಲಾಲಿ ಹಾಡಿತು. ಆಗಿನ ದೈತ್ಯ ತಂಡ ವಿಂಡೀಸ್‌ನ ಗಾರ್ಡನ್‌ ಗ್ರಿನೀಜ್ ಮತ್ತು ವಿವಿಯನ್ ರಿಚರ್ಡ್ಸ್‌, ಭಾರತದ ಹೇಮಂತ್ ಕಾನಿಟ್ಕರ್  ಪದಾರ್ಪಣೆ ಮಾಡಿದ್ದರು. ಕ್ಲೈವ್‌ ಲಾಯ್ಡ್ ನಾಯಕತ್ವದ ಬಳಗವು 267 ರನ್‌ಗಳ ಬೃಹತ್ ಜಯದೊಂದಿಗೆ ಮರಳಿತ್ತು.   

ಮೊದಲ ಜಯದ ಸಂಭ್ರಮ
ಇಂಗ್ಲೆಂಡ್ ತಂಡವು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದಿತ್ತು. ಟೋನಿ ಗ್ರೇಗ್ ನಾಯಕತ್ವದ ತಂಡವನ್ನು ಬಿಷನ್‌ಸಿಂಗ್ ಬೇಡಿ ಮುಂದಾಳತ್ವದ ತಂಡವು ಸೋಲಿಸಿತ್ತು. ಸ್ಪಿನ್ ತ್ರಿವಳಿಗಳಾದ ಚಂದ್ರಶೇಖರ್ (76ಕ್ಕೆ6), ಪ್ರಸನ್ನ ಮತ್ತು ಬೇಡಿ ಅವರ ಸ್ಪಿನ್ ಸುಳಿಯಲ್ಲಿ ಇಂಗ್ಲೆಂಡ್ ಮುಳುಗಿತು. ಆ ಪಂದ್ಯದಲ್ಲಿ ಜಿಆರ್‌ವಿ ಅರ್ಧಶತಕ (70) ಬಾರಿಸಿದ್ದರು.

ದೈತ್ಯರ ಮುಂದೆ ಡ್ರಾ
1978ರಲ್ಲಿ ವಿಂಡೀಸ್ ತಂಡವು ಆಲ್ವಿನ್ ಕಾಳಿಚರಣ್ ನಾಯಕತ್ವದಲ್ಲಿ ಬಂದಿಳಿಯಿತು. ಸುನಿಲ್ ಗಾವಸ್ಕರ್ ಬಳಗವು ಕೆರಿಬಿಯನ್ ಆಟಗಾರರ ಮುಂದೆ ದಿಟ್ಟ ಹೋರಾಟ ಮಾಡಿತು. ಕರ್ಸನ್ ಗಾವ್ರಿ ಮತ್ತು ಕಪಿಲ್‌ದೇವ್ ಅವರ ದಾಳಿಯ ಮುಂದೆ ವಿಂಡೀಸ್ ಗೆಲುವಿನ ಕನಸು ನನಸಾಗಲಿಲ್ಲ. 

ಜಿಆರ್‌ವಿ ಶತಕದ ಸೊಬಗು
ಕಾನ್ಪುರದಲ್ಲಿ 1969ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಿಆರ್‌ವಿ  ತಮ್ಮ ತವರಿನ ಅಂಗಳದಲ್ಲಿ ಶತಕ ಹೊಡೆಯಲು ಹತ್ತು ವರ್ಷ ಕಾಯಬೇಕಾಯಿತು. 1979ರಲ್ಲಿ ಅವರು ಆಸ್ಟ್ರೇಲಿಯಾದ ಎದುರು ತಮ್ಮ ಆಸೆ ಈಡೇರಿಸಿಕೊಂಡರು. ಕಿಮ್ ಹ್ಯೂಗ್ಸ್‌ ನೇತೃತ್ವದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಮಳೆಯಿಂದಾಗಿ  ಆಸ್ಟ್ರೇಲಿಯಾ ತಂಡದ ಗೆಲುವಿನ ಆಸೆ ಕಮರಿತು. 

ಸನ್ನಿ ಹೊಳಪು
ಕ್ರಿಕೆಟ್‌ ಜಗತ್ತಿನ ಲಿಟಲ್ ಮಾಸ್ಟರ್ ಸುನಿಲ್ ಗಾವಸ್ಕರ್ (ಸನ್ನಿ) ಶತಕಕ್ಕೆ ವೇದಿಕೆಯಾಗಿದ್ದು 1981ರ ಇಂಗ್ಲೆಂಡ್ ಎದುರಿನ ಟೆಸ್ಟ್. ಮೊದಲ ಇನಿಂಗ್ಸ್‌ನಲ್ಲಿ ಕೀತ್ ಫ್ಲೆಚರ್‌ ಬಳಗದ ಎದುರು ಮುನ್ನಡೆ ಸಾಧಿಸಲು ಭಾರತ ತಂಡಕ್ಕೆ ಸಾಧ್ಯ ವಾಗಿದ್ದು ಸನ್ನಿ ಹೊಡೆದ ಶತಕದಿಂದ. ತಂಡದ ನಾಯಕರಾಗಿ ಅವರು ಈ ಸಾಧನೆ ಮಾಡಿದ್ದರು. ಆ ತಂಡದಲ್ಲಿ ಕರ್ನಾಟಕದ ಜಿಆರ್‌ವಿ ಮತ್ತು ಸೈಯದ್ ಕಿರ್ಮಾನಿ ಅವರು ಇದ್ದರು. ಪಂದ್ಯ ಡ್ರಾ ಆಯಿತು.

ಪಾಕ್ ಎದುರು ಮಿಂಚಿದ್ದ ಸನ್ನಿ
1983ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಎದುರು ಟೆಸ್ಟ್‌ ಕೂಡ ಡ್ರಾ ಆಯಿತು. ಭಾರತ ತಂಡಕ್ಕೆ ಆಗ ಕಪಿಲ್‌ದೇವ್ ನಾಯಕರಾಗಿದ್ದರು.  ಆ ಪಂದ್ಯಕ್ಕೂ ಮಳೆ ಕಾಡಿತ್ತು.  ಮೊದಲ ಇನಿಂಗ್ಸ್‌ನಲ್ಲಿ ಪಾಕ್ ತಂಡದ ಜಾವೇದ್ ಮಿಯಾಂದಾದ್ 99 ರನ್‌ ಗಳಿಸಿ ಔಟಾಗಿದ್ದರು.  ಎರಡನೇ ಇನಿಂಗ್ಸ್‌ನಲ್ಲಿ ಮಿಂಚಿದ್ದ ಗಾವಸ್ಕರ್ 185 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. 

ಪಾಕ್‌ ಎದುರು ಸೋಲು
1987ರಲ್ಲಿ ಇಲ್ಲಿ ಆಡಿದ ಪಾಕ್‌ ತಂಡದ ಎಡಗೈ ಸ್ಪಿನ್ನರ್ ಇಕ್ಬಾಲ್‌ ಖಾಸೀಂ ಅವರು ಭಾರತ ತಂಡಕ್ಕೆ ದೊಡ್ಡ ಪೆಟ್ಟು ನೀಡಿದ್ದರು.  ಆ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದ ಅವರು ಪಾಕ್ ತಂಡಕ್ಕೆ 16 ರನ್‌ಗಳ  ಗೆಲುವು  ಒಲಿಯುವಂತೆ ಮಾಡಿದ್ದರು. ಇತ್ತೀಚೆಗೆ ಪುಣೆಯಲ್ಲಿ ಆಸ್ಟ್ರೇಲಿಯಾ ಆಟಗಾರ ಓಕೀಫ್ ಮಾಡಿದ್ದ ಕೆಲಸವನ್ನೇ ಇಕ್ಬಾಲ್ ಆಗ ಮಾಡಿದ್ದರು. ಗಾವಸ್ಕರ್ (96 ರನ್) ನಾಲ್ಕು ರನ್‌ಗಳಿಂದ ಶತಕವಂಚಿತರಾಗಿದ್ದರು.

ಗೆಲುವಿನ ಹ್ಯಾಟ್ರಿಕ್
1988, 1994 ಮತ್ತು 1995ರಲ್ಲಿ ಇಲ್ಲಿ ನಡೆದ ಮೂರು ಪಂದ್ಯಗಳಲ್ಲಿಯೂ  ಗೆದ್ದ ಭಾರತ ತಂಡವು ‘ಹ್ಯಾಟ್ರಿಕ್’ ಸಾಧನೆ ಬರೆಯಿತು. 88ರಲ್ಲಿ ನ್ಯೂಜಿಲೆಂಡ್ ಎದುರು ನವಜೋತ್‌ ಸಿಂಗ್ ಸಿಧು ಶತಕ ಮತ್ತು ನರೇಂದ್ರ ಹಿರ್ವಾನಿ ಅವರ ಆರು ವಿಕೆಟ್‌ಗಳ ಸಾಧನೆ ರಂಗೇರಿತ್ತು.

1994ರ ಪಂದ್ಯದಲ್ಲಿ ಶ್ರೀಲಂಕಾ ಎದುರು ಸಿಧು 99 ರನ್ ಹೊಡೆದಿದ್ದರು. ನಾಯಕ ಮೊಹಮ್ಮದ್ ಅಜರುದ್ದೀನ್ ಶತಕ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್‌ ಕೂಡ 96 ರನ್ ಗಳಿಸಿ ಔಟಾಗಿದ್ದರು. ಕನ್ನಡಿಗ ಅನಿಲ್ ಕುಂಬ್ಳೆ ಅವರ ಅಮೋಘ ಬೌಲಿಂಗ್ ಮುಂದೆ ಅರ್ಜುನ ರಣತುಂಗ ಬಳಗವು ಸೋಲಿನ ಹಾದಿ ಹಿಡಿದಿತ್ತು. 1995ರಲ್ಲಿ ಮತ್ತೊಮ್ಮೆ ಕಿವೀಸ್ ಬಳಗವು ಅಜರ್ ಬಳಗದ ಸಂಘಟಿತ ಹೋರಾಟದ ಮುಂದೆ ಸೋಲಿಗೆ ಶರಣಾಯಿತು.

ಸಚಿನ್ ಶತಕ ವ್ಯರ್ಥ
1998ರಲ್ಲಿ ಚಿನ್ನಸ್ವಾಮಿ ಅಂಗಳವು ಭಾರತದ ಮತ್ತೊಂದು ಸೋಲಿಗೆ ಸಾಕ್ಷಿಯಾಗಬೇಕಾಯಿತು.  ಮಾರ್ಕ್ ಟೇಲರ್ ನಾಯಕತ್ವದ ಆಸ್ಟ್ರೇಲಿಯಾ ತಂಡದ ಎದುರು 8 ವಿಕೆಟ್‌ಗಳ ಸೋಲನುಭವಿಸಿತು. ಮೊದಲ ಇನಿಂಗ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ (177) ಅವರು ಗಳಿಸಿದ್ದ ಅಮೋಘ ಶತಕವು ವ್ಯರ್ಥವಾಯಿತು. ಮಾರ್ಕ್‌ ವಾ ಶತಕ (153) ಮತ್ತು ಮೈಕೆಲ್ ಕಾಸ್ಟ್ರೊವಿಜ್ ಅವರ ಅಮೋಘ ಬೌಲಿಂಗ್ (5 ವಿಕೆಟ್) ಪ್ರವಾಸಿ ತಂಡಕ್ಕೆ ಜಯದ ಕಾಣಿಕೆ ನೀಡಿದವು.

ಜಯದ ಲಯಕ್ಕೆ ಮರಳಿದ ಬಳಗ
2000ನೇ ಇಸವಿಯಲ್ಲಿ ಅಜರುದ್ದೀನ್ ಗಳಿಸಿದ  ಶತಕದ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಗೆದ್ದು ಬೀಗಿತು. ಅದರೊಂದಿಗೆ ಚಿನ್ನಸ್ವಾಮಿಯಲ್ಲಿ ಗೆಲುವಿನ ಲಯಕ್ಕೆ ಮರಳಿತು. 2001ರಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯವೂ ಡ್ರಾ ಆಯಿತು.

ಮತ್ತೆ ಪೆಟ್ಟು ಕೊಟ್ಟ ಆಸ್ಟ್ರೇಲಿಯಾ –ಪಾಕ್
2004ರ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮೈಕೆಲ್ ಕ್ಲಾರ್ಕ್‌ ಶತಕ ಹೊಡೆದರು ಭಾರತದ ನಿರಾಸೆಗೆ ಕಾರಣರಾದರು. 20015ರಲ್ಲಿ ಪಾಕ್‌ ತಂಡವು ಮತ್ತೊಮ್ಮೆ ಭಾರತ ತಂಡಕ್ಕೆ ಸೋಲಿನ ಕಹಿ ಉಣಿಸಿತ್ತು. ಯೂನಿಸ್ ಖಾನ್ (267) ಮತ್ತು ಇಂಜಮಾಮ್ ಉಲ್ ಹಕ್ (184) ಅವರ ಜೊತೆಯಾಟವು ಇಂದಿಗೂ ಇಲ್ಲಿಯ ಗರಿಷ್ಠ ಜೊತೆಯಾಟದ ದಾಖಲೆಯಾಗಿ ಉಳಿದಿದೆ. ವೀರೇಂದ್ರ ಸೆಹ್ವಾಗ್ ದಾಖಲಿಸಿದ್ದ ದ್ವಿಶತಕ (201) ವ್ಯರ್ಥವಾಯಿತು. 2007ರಲ್ಲಿ ಪಾಕ್ ಎದುರು ಮತ್ತು 2008ರಲ್ಲಿ ಆಸ್ಟ್ರೇಲಿಯಾ ತಂಡಗಳ ಎದುರಿನ ಪಂದ್ಯಗಳು ಡ್ರಾ ಆದವು.

ಸಚಿನ್ ದ್ವಿಶತಕದ ರಂಗು
ಚಿನ್ನಸ್ವಾಮಿ ಅಂಗಳದಲ್ಲಿ ಅಂತೂ ಇಂತೂ ಆಸ್ಟ್ರೇಲಿಯಾ ಎದುರು ಜಯ ಸಾಧಿಸುವ ದಿನ ಬಂದೇ ಬಂತು. ಅದು 2010–11ರ ಸಾಲಿನ ಬಾರ್ಡರ್‌ ಗಾವಸ್ಕರ್ ಟ್ರೋಫಿಯ ಪಂದ್ಯದಲ್ಲಿ. 2 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಮೊಹಾಲಿಯಲ್ಲಿ ನಡೆದಿತ್ತು. ಅಲ್ಲಿ  ಭಾರತ 1 ವಿಕೆಟ್‌ ಅಂತರದ ಜಯ ಸಾಧಿಸಿತ್ತು.

ಎರಡನೇ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. ಸಚಿನ್ ತೆಂಡೂಲ್ಕರ್ ಅವರ  ದ್ವಿಶತಕದ ಬಲದಿಂದ ಮಹೇಂದ್ರಸಿಂಗ್ ದೋನಿ ಬಳಗವು ಜಯಭೇರಿ ಬಾರಿಸಿತು. ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ತೀವ್ರ ಮುಖಭಂಗ ಅನುಭವಿಸಿದರು.

2012ರಲ್ಲಿಯೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸುಂದರ ಶತಕ  ಮತ್ತು ಆರ್. ಅಶ್ವಿನ್ ಅವರ ಸ್ಪಿನ್ ಮೋಡಿಯಿಂದ ಜಯ ಭಾರತದ ಪಾಲಾಯಿತು. 2015ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಅದೇ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು. ಆದರೆ, ಮಳೆಯಿಂದಾಗಿ ಪಂದ್ಯ ಅಪೂರ್ಣವಾಯಿತು. 

ಚಿನ್ನಸ್ವಾಮಿಯಲ್ಲಿ ಟೆಸ್ಟ್ ಆಡಿದ ರಾಜ್ಯದ ಆಟಗಾರರು
ಬಿ.ಎಸ್‌. ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಗುಂಡಪ್ಪ ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯದ್ ಕಿರ್ಮಾನಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್.

ಚಿನ್ನಸ್ವಾಮಿ ಅಂಗಳದ ವಿಶೇಷಗಳು
*1974; ಚಿನ್ನಸ್ವಾಮಿಯಲ್ಲಿ ಮೊದಲ ಟೆಸ್ಟ್ ನಡೆಯಿತು. ವೆಸ್ಟ್‌ ಇಂಡೀಸ್ ಎದುರು ಭಾರತಕ್ಕೆ ಸೋಲು
*1977: ಇಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 140 ರನ್‌ಗಳಿಂದ ಜಯಿಸಿತು.
*ಜಿ.ಆರ್‌. ವಿಶ್ವನಾಥ್: 1977ರಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಅರ್ಧಶತಕ (ಅಜೇಯ 79), 1978ರಲ್ಲಿ ವಿಂಡೀಸ್ ಎದುರು ಅರ್ಧಶತಕ (70), 1979ರಲ್ಲಿ ಆಸ್ಟ್ರೇಲಿಯಾ ಎದುರು ಶತಕ (ಅಜೇಯ 161) ದಾಖಲಿಸಿದ್ದರು.
*ರೋಜರ್ ಬಿನ್ನಿ: ಆಲ್‌ರೌಂಡರ್‌ ರೋಜರ್‌ ಬಿನ್ನಿ ಅವರು 1979ರಲ್ಲಿ ಇಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದರು. 1987ರಲ್ಲಿ  ಇಲ್ಲಿಯೇ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪದಾರ್ಪಣೆ ಮಾಡಿದ ಕ್ರೀಡಾಂಗಣದಲ್ಲಿ ವಿದಾಯದ ಪಂದ್ಯ ಆಡಿದ ಏಕೈಕ ಆಟಗಾರನ ಶ್ರೇಯ ಅವರದ್ದು.
*ಅಪ್ಪ–ಮಗ: ರೋಜರ್‌ ಬಿನ್ನಿ ಮತ್ತು ಅವರ ಪುತ್ರ ಸ್ಟುವರ್ಟ್ ಬಿನ್ನಿ ಅವರಿಬ್ಬರೂ ಈ ಕ್ರೀಡಾಂಗಣದಲ್ಲಿ ಟೆಸ್ಟ್ ಆಡಿದ್ದಾರೆ.
*ಸಚಿನ್ ತೆಂಡೂಲ್ಕರ್: 2010–11 ರಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್‌ನಲ್ಲಿ  ದ್ವಿಶತಕ (214) ಗಳಿಸಿದ್ದರು.
*ಮಳೆಯ ಆಟ: 2015ರಲ್ಲಿ ದಕ್ಷಿಣ ಆಫ್ರಿಕಾ ಎದುರು ಆಯೋಜಿಸಲಾಗಿದ್ದ ಪಂದ್ಯವು ಮಳೆಯಿಂದಾಗಿ ಅಪೂರ್ಣವಾಯಿತು.

ಅಂಕಿಅಂಶ: ಚನ್ನಗಿರಿ ಕೇಶವಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT