ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನಗದು ವಹಿವಾಟಿಗೆ ಶುಲ್ಕ: ಅಪಕ್ವ ನಿರ್ಧಾರ

ಸಂಪಾದಕೀಯ
Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಗದುರಹಿತ  ವಹಿವಾಟು ಉತ್ತೇಜಿಸಲು ಬ್ಯಾಂಕ್‌ಗಳು ಜಾರಿಗೆ ತರಲು ಹೊರಟಿರುವ ಕ್ರಮಗಳು ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ಬ್ಯಾಂಕ್‌ ಶಾಖೆಗಳಲ್ಲಿ ನಡೆಯುವ ನಾಲ್ಕು ಅಥವಾ ಐದಕ್ಕಿಂತ ಹೆಚ್ಚಿನ ನಗದು ವಹಿವಾಟಿನ ಮೇಲೆ  ಶುಲ್ಕ ವಿಧಿಸಲು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮುಂದಾಗಿವೆ. ಉಳಿತಾಯ ಖಾತೆಗಳಲ್ಲಿ ₹ 1,000 ದಿಂದ  ₹ 5 ಸಾವಿರದಷ್ಟು ಕನಿಷ್ಠ ಮೊತ್ತ ಉಳಿಸಿಕೊಳ್ಳದಿದ್ದರೆ ದಂಡ ವಿಧಿಸುವುದನ್ನು ಏಪ್ರಿಲ್‌ನಿಂದ ಜಾರಿಗೆ ತರುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಪ್ರಕಟಿಸಿದೆ.  ನೋಟು ರದ್ದತಿಯ ಆಘಾತದಿಂದ ಅಸ್ತವ್ಯಸ್ತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಸರಿದಾರಿಗೆ ಬರುತ್ತಿವೆ ಎನ್ನುವಾಗಲೇ, ಬ್ಯಾಂಕಿಂಗ್ ವಹಿವಾಟು  ಇನ್ನಷ್ಟು ಹೊರೆಯಾಗುವ ಈ   ನಿರ್ಧಾರಗಳು ಗ್ರಾಹಕರ ಪಾಲಿಗೆ ಹೊಸ ಬರೆಯಾಗಿ ಪರಿಣಮಿಸಲಿವೆ. ಬ್ಯಾಂಕ್‌ ಶಾಖೆಗಳಲ್ಲಿ ನಗದು ವಹಿವಾಟಿಗೆ ಕಡಿವಾಣ ವಿಧಿಸುವುದು ಇದರ ಉದ್ದೇಶ ಎನ್ನಲಾಗಿದೆ. ಜೊತೆಗೆ  ಗ್ರಾಹಕರಿಗೆ ಒದಗಿಸುವ ಸೇವಾ ವೆಚ್ಚದ ಕಡಿತ ಹಾಗೂ ಗ್ರಾಹಕರು ಡಿಜಿಟಲ್‌ ವಹಿವಾಟು ನಡೆಸುವುದನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ಗಳು ಹೇಳಿಕೊಂಡಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ತಮ್ಮ ವಿರುದ್ಧ ಸರ್ಕಾರ ಆರಂಭಿಸಿರುವ ‘ಹಣಕಾಸು ಭಯೋತ್ಪಾದನೆ’ಯಾಗಿದೆ ಇದು ಎನ್ನುವ ದಿಗಿಲು ಗ್ರಾಹಕರಲ್ಲಿ ಮೂಡಿದೆ. ನಮ್ಮಲ್ಲಿ ಮೊದಲೇ ‘ಹಣಕಾಸು ಸಾಕ್ಷರತೆ’ ಪ್ರಮಾಣ ಕಡಿಮೆ ಇದೆ. ಜೊತೆಗೆ, ‘ಡಿಜಿಟಲ್  ಪಾವತಿ’ಯ ಹೊಸ ವ್ಯವಸ್ಥೆ ಬಗೆಗಿನ ತಿಳಿವಳಿಕೆಯಲ್ಲಿಯೂ ಜನರು ಹಿಂದೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ,  ಡಿಜಿಟಲ್‌ ಪಾವತಿಯಲ್ಲಿ ಹಣದ ಜಾಡಿನ ವಿವರಗಳೆಲ್ಲ ಸರ್ಕಾರಕ್ಕೆ ಸುಲಭವಾಗಿ ಸಿಗುವುದರಿಂದ ತೆರಿಗೆ ತಪ್ಪಿಸಿಕೊಳ್ಳಲು  ನಗದು ವಹಿವಾಟನ್ನೇ ಜನರು ಹೆಚ್ಚಾಗಿ ನೆಚ್ಚಿಕೊಳ್ಳುವ ಸಾಧ್ಯತೆಯೂ ಇದೆ. ಈ ಭೀತಿಗಳನ್ನೆಲ್ಲಾ ಸರ್ಕಾರ ಮೊದಲು ದೂರ ಮಾಡಬೇಕಾಗಿದೆ. ಜನರನ್ನು ಸಂಕಷ್ಟಕ್ಕೆ ದೂಡುವುದು, ಡಿಜಿಟಲ್‌ ವಹಿವಾಟು ಉತ್ತೇಜಿಸುವ ಸರಿಯಾದ ಕ್ರಮವಾಗಲಾರದು.

ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ನಿಯಮಗಳಿಗೆ ಈಗ ಚಾಲನೆ ನೀಡಲಾಗುತ್ತಿದೆ ಎಂದು ಬ್ಯಾಂಕ್‌ಗಳು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿವೆ. ಆದರೆ, ಡಿಜಿಟಲ್‌ ಆರ್ಥಿಕತೆಯತ್ತ ಸಾಗಲು  ಸದ್ಯದ ಸಂದರ್ಭದಲ್ಲಿ ಇಂತಹ ನಿರ್ಧಾರಗಳಿಂದ ಒಳಿತಿಗಿಂತ ಕೆಡುಕೇ ಹೆಚ್ಚು.  ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಕಡಿಮೆ ಇರುವಾಗ,   ನಗದು ವಹಿವಾಟಿಗೆ ಹೆಚ್ಚುವರಿ ಶುಲ್ಕ ವಿಧಿಸುವುದು ಬ್ಯಾಂಕ್‌ ಗ್ರಾಹಕರ ಪಾಲಿಗೆ ‘ಒಳ್ಳೆಯ ದಿನ’ಗಳಂತೂ ಅಲ್ಲವೇ ಅಲ್ಲ. ಹೆಚ್ಚು ಜನರನ್ನು ಬ್ಯಾಂಕಿಂಗ್‌ ವಹಿವಾಟಿಗೆ ಒಳಪಡಿಸುವ ಆರ್ಥಿಕ ಸೇರ್ಪಡೆಯ ಮೂಲ ಉದ್ದೇಶಕ್ಕೂ ಇದು ವಿರುದ್ಧವಾಗಿದೆ. ಒಂದೆಡೆ ಶೂನ್ಯ ಮೊತ್ತದ ಖಾತೆ ಆರಂಭಿಸುವ ಆಮಿಷ ಒಡ್ಡುವುದು, ಇನ್ನೊಂದೆಡೆ ಶಾಖೆಗಳಲ್ಲಿನ ನಗದು ವಹಿವಾಟನ್ನೇ ದುಬಾರಿಗೊಳಿಸುವುದು ಸರ್ಕಾರದ ವಿರೋಧಾಭಾಸದ ಧೋರಣೆಗೆ ಕನ್ನಡಿ ಹಿಡಿಯುತ್ತದೆ.  ನಗದುರಹಿತ ವಹಿವಾಟಿಗೆ ಉತ್ತೇಜನ, ಪುರಸ್ಕಾರ ನೀಡುವ ಬದಲಿಗೆ  ದಂಡ ವಿಧಿಸಲು ಹೊರಟಿರುವುದು ವಿಪರ್ಯಾಸವೇ ಸರಿ.   ದೇಶದ 133  ಕೋಟಿ ಜನಸಂಖ್ಯೆಗೆ 2.2 ಲಕ್ಷ ಎಟಿಎಂಗಳು ಮಾತ್ರ ಇರುವಾಗ, ಜನರು ಬ್ಯಾಂಕಿಂಗ್‌ ವಹಿವಾಟು ನಡೆಸಲು  ಬ್ಯಾಂಕ್‌ ಶಾಖೆಗಳನ್ನೇ ಹೆಚ್ಚಾಗಿ ಅವಲಂಬಿಸುವುದು ಅನಿವಾರ್ಯವಾಗಿದೆ.  ನಗದುರಹಿತ ವಹಿವಾಟಿನ ಮೂಲ ಸೌಕರ್ಯಗಳು ಮತ್ತು ಡಿಜಿಟಲ್‌ ಪಾವತಿ ಕುರಿತ ತಿಳಿವಳಿಕೆ ಕೊರತೆ ಬಹಳಷ್ಟಿದೆ.  ಮೊಬೈಲ್‌ ವಾಲೆಟ್‌ ಆ್ಯಪ್‌ಗಳ ಸುರಕ್ಷತೆ ಬಗೆಗಿನ ಅನುಮಾನಗಳು ಇನ್ನೂ ದೂರವಾಗಿಲ್ಲ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಸುರಕ್ಷತೆ ಕುರಿತ ಭಯ ಗ್ರಾಹಕರಲ್ಲಿ ಮನೆ ಮಾಡಿದೆ.  ವಾಸ್ತವ ಸ್ಥಿತಿ ಹೀಗಿರುವಾಗ ಇಂತಹ ನಿರ್ಧಾರಕ್ಕೆ ತಕ್ಷಣ ಬರುವುದು ಸರಿಯಲ್ಲ. ಇಂಟರ್‌ನೆಟ್‌ ಬ್ಯಾಂಕ್‌ ಮತ್ತು ಎಟಿಎಂ ಬಳಕೆ ಬಗ್ಗೆ ಹಿಂಜರಿಕೆ ತೋರುವ ಹಿರಿಯ ನಾಗರಿಕರಿಗೂ ಇದರಿಂದ ತೊಂದರೆಯಾಗಲಿದೆ.  ನಗದು ವಹಿವಾಟು ನಿರುತ್ತೇಜನಗೊಳಿಸಲು ಕಾಲ ಇನ್ನೂ ಪಕ್ವಗೊಂಡಿಲ್ಲ. ಈ ಕ್ರಮಗಳ  ಜಾರಿಗೆ  ತಡೆ ಒಡ್ಡಲು ಬ್ಯಾಂಕ್‌ಗಳ ಮನವೊಲಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿರುವುದು ಸರಿಯಾದ ನಿಲುವಾಗಿದೆ. ಈ ನಿರ್ಧಾರವನ್ನು ಇನ್ನಷ್ಟು ದಿನ ಮುಂದೂಡುವುದು ಒಳ್ಳೆಯದು.  ನಗದುರಹಿತ ವಹಿವಾಟನ್ನು ದಂಡ ವಿಧಿಸುವ ಮೂಲಕ  ಬಲವಂತವಾಗಿ ಹೇರಲು ಹೊರಟಾಗ  ಗ್ರಾಹಕರು  ಸ್ಪಂದಿಸದಿದ್ದಲ್ಲಿ ಸರ್ಕಾರದ ಮೂಲ ಉದ್ದೇಶವೇ ತಲೆಕೆಳಗಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT