ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಆಟಗಾರರ ಛೇಡಿಸುವಿಕೆಗೆ ನಗುತ್ತಿದ್ದೆ’

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ‘ಇವತ್ತೂ ಶೌಚಾಲಯಕ್ಕೆ ಹೋಗ್ತಿಯಾ ಎಂದು ಭಾರತದ ಆಟಗಾರರು ನನ್ನನ್ನು ಛೇಡಿಸಿದರು. ಅದಕ್ಕಾಗಿಯೇ ನಾನು ಕ್ರೀಸ್‌ನಲ್ಲಿ ನಗುತ್ತ ನಿಂತಿದ್ದೆ’–
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾತು ಹೇಳಿದಾಗ ಮಾಧ್ಯಮ ಪ್ರತಿನಿಧಿಗಳು ನಗೆಗಡಲಲ್ಲಿ ತೇಲಿದರು.

ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಹೊಟ್ಟೆನೋವು ಅನುಭವಿಸಿದ್ದ ರೆನ್‌ಶಾ ನಿವೃತ್ತಿ ಪಡೆದು ಶೌಚಾಲಯಕ್ಕೆ ತೆರಳಿದ್ದು ಸುದ್ದಿಯಾಗಿತ್ತು.  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ಭಾನುವಾರ ಭಾರತದ ಬೌಲರ್‌ಗಳನ್ನು ಅತ್ಯಂತ ತಾಳ್ಮೆಯಿಂದ ಎದುರಿಸಿದ ಅವರ  ಏಕಾಗ್ರತೆಯನ್ನು ಭಂಗಗೊಳಿಸಲು ಭಾರತದ ಆಟಗಾರರು ಈ ಚಟಾಕಿ ಹಾರಿಸಿದ್ದರು.

‘ಇದೆಲ್ಲ ಆಟದ ಒಂದು ಭಾಗ. ನಾನು ಕೂಡ ಅದನ್ನು ಲಘುವಾಗಿ ತೆಗೆದುಕೊಂಡಿದ್ದೇನೆ. ಒಂದಿಷ್ಟು ವಿಚಲಿತಗೊಳ್ಳದೇ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದು ಸಂತಸ ಮೂಡಿಸಿದೆ’ ಎಂದು 20 ವರ್ಷ ವಯಸ್ಸಿನ ರೆನ್‌ಶಾ ಹೇಳಿದರು.

ನಾಯಕರ ವಾಕ್ಸಮರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್‌ ಪಂದ್ಯದಲ್ಲಿ ಕಟಕಿಯಾಟದ ಪ್ರಕರಣಗಳು ನಡೆಯುವ ಸಂಪ್ರದಾಯವು ಇಲ್ಲಿಯೂ ಮುಂದುವರಿಯಿತು.

ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೆಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು. 
‘ಸ್ಮಿತ್ ಮತ್ತು ಕೊಹ್ಲಿ ನಡುವೆ ಕೆಲವು ಮಾತುಗಳ ವಿನಿಮಯ ಆಗಿದ್ದು ನಿಜ. ಆದರೆ, ಅವರಿಬ್ಬರೂ ಏನು ಮಾತನಾಡಿದರು ಎಂಬುದು ಸ್ಪಷ್ಟವಾಗಿ ಕೇಳಿಸಲಿಲ್ಲ’ ಎಂದು ಚೇತೇಶ್ವರ್ ಪೂಜಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಸೋಮವಾರ ಬೇಗನೆ ನಾಲ್ಕು ವಿಕೆಟ್ ಪಡೆದು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತೇವೆ. ದೊಡ್ಡ ಮೊತ್ತದ ಗುರಿಯನ್ನು ಆಸ್ಟ್ರೇಲಿಯಾಕ್ಕೆ ನೀಡುತ್ತೇವೆ’ ಎಂದು ಪೂಜಾರ ಹೇಳಿದರು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT