ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕ ಕಳೆದರೂ ದೊರೆಯದ ಪ್ರತ್ಯೇಕ ನೆಲೆ

ನಗರದ ಹೊರವಲಯಕ್ಕೆ ಹಂದಿಜೋಗಿಗಳ ಸ್ಥಳಾಂತರಿಸುವ ಪ್ರಕ್ರಿಯೆ ನನೆಗುದಿಗೆ
Last Updated 6 ಮಾರ್ಚ್ 2017, 6:12 IST
ಅಕ್ಷರ ಗಾತ್ರ
ಶಿವಮೊಗ್ಗ: ನಗರದ ಸೌಂದರ್ಯ, ನಾಗರಿಕರ ಬದುಕಿಗೆ ನಿತ್ಯವೂ ಕಿರಿಕಿರಿ ಉಂಟು ಮಾಡುವ ಹಂದಿಗಳ ಹಾವಳಿಗೆ ಮುಕ್ತಿ ನೀಡಲು ಪಾಲಿಕೆ ರೂಪಿಸಿದ್ದ ಹಂದಿಗಳ ಸ್ಥಳಾಂತರ ಯೋಜನೆ ದಶಕ ಕಳೆದರೂ ಈಡೇರಿಲ್ಲ.
 
ಹಂದಿಜೋಗಿಗಳಿಗೆ ನಗರದ ಹೊರವಲಯದಲ್ಲಿ ಪ್ರತ್ಯೇಕ ಜಮೀನು ನೀಡಿ, ಎಲ್ಲ ಹಂದಿಗಳನ್ನೂ ಒಂದೇ ಕಡೆ ಸಾಕಲು ಅವಕಾಶ ಮಾಡಿಕೊಡುವ ಪ್ರಸ್ತಾವ ಅನುಷ್ಠಾನಗೊಳಿಸಲು ಪಾಲಿಕೆ ಆಡಳಿತ ಆಸಕ್ತಿ ತೋರುತ್ತಿಲ್ಲ. 
 
10 ವರ್ಷಗಳ ಹಿಂದಿನ ಯೋಜನೆ: 10 ವರ್ಷಗಳ ಹಿಂದೆ  ಪೊನ್ನುರಾಜ್‌ ಅವರು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ನಗರದ ಹಂದಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೊದಲ ಬಾರಿ ಹೊಸ ಯೋಜನೆ ರೂಪಿಸಿದ್ದರು. 
 
ಹಂದಿಜೋಗಿಗಳಿಗೆ ನಗರದ ಹೊರವಲಯದಲ್ಲಿ ಪ್ರತ್ಯೇಕ ಜಮೀನು ನೀಡುವುದು, ಅಲ್ಲಿ ಫಾರಂ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ಕಲ್ಪಿಸು
ವುದು, ಹಂದಿಗಳನ್ನು ನಗರದ ಒಳಗೆ ಬಿಡದೆ ನಿರ್ದಿಷ್ಟ ಪ್ರದೇಶದಲ್ಲೇ ಸಾಕಲು ಅವಕಾಶ ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿತ್ತು.
 
ನಗರದ ಕೊಳಚೆ ಪ್ರದೇಶಗಳಲ್ಲಿ ಹಂದಿಗೂಡಿಗೂ, ವಾಸಿಸುವ ಮನೆಗಳಿಗೂ ವ್ಯತ್ಯಾಸ ಇಲ್ಲದಂತೆ ಬದುಕು ನಡೆಸುತ್ತಿದ್ದ ಹಂದಿಜೋಗಿಗಳಿಗೂ ಅದೇ ಸ್ಥಳದಲ್ಲಿ ಆಶ್ರಯ ಯೋಜನೆ ಅಡಿ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿತ್ತು.

ಸವಳಂಗ ರಸ್ತೆಗೆ ಸ್ಥಳಾಂತರಿಸಲು ನಿರ್ಧಾರ: ನಗರ ಪಾಲಿಕೆ ಆಯುಕ್ತ
ರಾಗಿದ್ದ ಧರ್ಮಪ್ಪ ಅವರು ಸದ್ಲೀಪುರದ ಬಳಿ 18 ಎಕರೆ ಜಾಗ ಗುರುತಿಸಿದ್ದರು. ಆದರೆ, ಅಂದು ಎಕರೆಗೆ ₹ 60 ಸಾವಿರ ನೀಡಿ ಖರೀದಿಸಲು ಪಾಲಿಕೆ ಮೀನಮೇಷ ಎಣಿಸಿದ ಕಾರಣ ಸ್ಥಳಾಂತರಗೊಳಿಸಲು ಸಾಧ್ಯವಾಗಿರಲಿಲ್ಲ. ಹಿಂದಿನ ಆಯುಕ್ತ ಎ.ಆರ್‌.ರವಿ ಅವರು ಸವಳಂಗ ರಸ್ತೆಯ ಅಬ್ಬಲಗೆರೆ ಬಳಿ ಇರುವ 80 ಎಕರೆ ಸರ್ಕಾರಿ ಭೂಮಿಯಲ್ಲಿ ಹಂದಿಜೋಗಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರು.

‘ಹೌಸಿಂಗ್‌ ಫಾರ್‌ ಆಲ್’ ಯೋಜನೆ ಅಡಿ ಅಲ್ಲೇ ಆಶ್ರಯ ಮನೆಗಳನ್ನು ಕಟ್ಟಿಕೊಡಲು ಮಾತುಕತೆ ನಡೆದಿತ್ತು. ಆದರೆ, ಈ ಯೋಜನೆಗಳು ಇದುವರೆಗೂ ಕಾರ್ಯಗತವಾಗಿಲ್ಲ. ಹಂದಿಜೋಗಿಗಳನ್ನು ಸ್ಥಳಾಂತರಿಸಲು ಗುರುತಿಸಿದ್ದ ಸರ್ಕಾರಿ ಜಮೀನು ಹಲವರು  ಒತ್ತುವರಿ ಮಾಡಿಕೊಂಡಿದ್ದಾರೆ.

ಸೋಗಾನೆ ವಿಮಾನ ನಿಲ್ದಾಣ ಯೋಜನೆ ಭೂಮಿಗೆ ನೀಡಿದ ಪರಿಹಾರದಂತೆ ಒತ್ತುವರಿ ಮಾಡಿಕೊಂಡ ರೈತರಿಗೆ ₹ 2 ಲಕ್ಷ ಪರಿಹಾರ ನೀಡಿ, ಭೂಮಿ ವಶಕ್ಕೆ ಪಡೆಯುವ ಯೋಜನೆಯೂ ಕಾರ್ಯಗತವಾಗಲಿಲ್ಲ.‘ಸ್ಥಳಾಂತರ ಯೋಜನೆ ರೂಪಿಸಿದಾಗ ಹಂದಿ ಸಾಕಣೆಯನ್ನೇ ಕಸುಬಾಗಿಸಿಕೊಂಡ 70 ಕುಟುಂಬಗಳನ್ನು ಗುರುತಿಸಲಾಗಿತ್ತು. ಪ್ರತ್ಯೇಕ ಜಮೀನು ನೀಡುತ್ತಾರೆ ಎಂದು ಗೊತ್ತಾಗುತ್ತಿದಂತೆ ಆ ಸಂಖ್ಯೆ 300 ದಾಟಿತು. ಹೆಚ್ಚಿನ ಹಣ ಖರ್ಚು ಮಾಡಲು ಅಂದಿನ ಪಾಲಿಕೆ ಆಡಳಿತ ಹಿಂದೆ ಮುಂದೆ ನೋಡಿತು. ಹಾಗಾಗಿ, ಯೋಜನೆ ವಿಫಲವಾಯಿತು’ ಎಂದು ವಿವರಿಸುತ್ತಾರೆ ಹಂದಿ ಸಾಕಣೆ ಮಾಡುವ ಶರಾವತಿ ನಗರದ ಮುತ್ತಪ್ಪ.
 
ಮಿತಿ ಮೀರಿದ ಹಂದಿಗಳ ಉಪಟಳ: ಶರಾವತಿ ನಗರ, ವಿದ್ಯಾನಗರ ರಸ್ತೆ, ಬುದ್ಧನಗರ ಮತ್ತಿತರ ಕೊಳಚೆ ಪ್ರದೇಶಗಳ ಭಾಗದಲ್ಲಿ 150ಕ್ಕೂ ಹೆಚ್ಚು ಹಂದಿ ಜೋಗಿ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳು ಸಾವಿರಾರು ಹಂದಿಗಳನ್ನು ಸಾಕುತ್ತಿದ್ದಾರೆ. ಹಂದಿಗಳ ಕಿವಿ, ಬಾಲ ಕತ್ತರಿಸಿ, ಗುರುತು ಮಾಡಿ ನಗರದ ಒಳಗೆ ಮುಕ್ತವಾಗಿ ಓಡಾಡಲು ಬಿಡುತ್ತಾರೆ. ನಗರದಲ್ಲಿ ಸುಮಾರು 10ರಿಂದ 15 ಸಾವಿರ ಹಂದಿಗಳಿವೆ. ಹೀಗೆ ಬಿಟ್ಟ ಹಂದಿಗಳು ಎಲ್ಲೆಂದರಲ್ಲಿ ಮೇಯುತ್ತಾ ಜನರಿಗೆ ಉಪಟಳ ನೀಡುತ್ತವೆ.
 
ಹಲವು ಬಾರಿ ಹಂದಿಗಳನ್ನು ಹಿಡಿದು ದೂರದ ಕಾಡಿಗೆ ಬಿಟ್ಟು ಬಂದರೂ ಅವುಗಳ ಹಾವಳಿ ಕಡಿಮೆಯಾಗಿಲ್ಲ. ಈಚೆಗೆ ಹಂದಿ ಹಿಡಿಯಲು ತಮಿಳುನಾಡಿನ ಹಂದಿಜೋಗಿಗಳನ್ನು ಕರೆಸಲಾಗಿತ್ತು. ಸ್ಥಳೀಯ ಹಂದಿಜೋಗಿಗಳು ಅವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಈ ವಿಚಾರ ದೊಡ್ಡಪೇಟೆ ಠಾಣೆ ಮೆಟ್ಟಿಲೇರಿತ್ತು.

ಕೆಲಸ ನೀಡಿದರೂ ಬಿಡದ ದಂಧೆ:
ನಗರದಲ್ಲಿ ಮಿತಿ ಮೀರಿದ ಹಂದಿಗಳ ಹಾವಳಿ ನಿಯಂತ್ರಿಸಲು ಹಂದಿಜೋಗಿಗಳಿಗೆ ಪ್ರತ್ಯೇಕ ಉದ್ಯೋಗ ದೊರಕಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಅದರಂತೆ ನಗರದ ಕಸ ಸಂಗ್ರಹಿಸುವ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಂದಿಜೋಗಿಗಳಿಗೆ ಅವಕಾಶ ನೀಡಲಾಯಿತು. ಆದರೆ, ಹಲವರು ಆ ಕೆಲಸ ಮಾಡುತ್ತಲೇ ಹಂದಿ ಸಾಕಣೆಯನ್ನೂ ನಡೆಸುತ್ತಿದ್ದಾರೆ.
 
‘ಈ ವೃತ್ತಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ಕಸ ಸಂಗ್ರಹಿಸುವ ಕೆಲಸ ನೀಡಿದರೂ ವಯಸ್ಸಾದವರು, ಆರೋಗ್ಯ ಸಮಸ್ಯೆ ಇರುವವರು ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಹಂದಿ ಸಾಕಲು ಪ್ರತ್ಯೇಕ ಜಾಗ ನೀಡಬೇಕು ಎನ್ನುತ್ತಾರೆ ಹಂದಿಜೋಗಿ ಸಮುದಾಯದ ಹನುಮಂತಪ್ಪ.
 
ಹಂದಿ ಸಾಕುವ ಖರ್ಚು ಶೂನ್ಯ!
ಹಂದಿ ಗೊಲ್ಲರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ ಅವರಲ್ಲಿ ಶೇ 20ರಷ್ಟು ಮಂದಿ ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೂ, ಹಂದಿ ಸಾಕಣಿಕೆ ನಿಲ್ಲಿಸಿಲ್ಲ. ಗುರುತು ಹಾಕಿ ಹಂದಿಗಳನ್ನು ನಗರದ ಒಳಗೆ ಮುಕ್ತವಾಗಿ ಬಿಡುತ್ತಾರೆ. ಅವು ಬಲಿತ ಮೇಲೆ ಹಿಡಿದು, ಮಾರಾಟ ಮಾಡುತ್ತಾರೆ. ಖರ್ಚು ಇಲ್ಲದೆಯೇ ಅವುಗಳನ್ನು ಸಾಕಿ, ಅಧಿಕ ಲಾಭ ಗಳಿಸುತ್ತಾರೆ.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT