ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ದಂಪತಿಗಳು ಸಾಮರಸ್ಯದಿಂದ ಬಾಳಲಿ

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 6 ಮಾರ್ಚ್ 2017, 6:23 IST
ಅಕ್ಷರ ಗಾತ್ರ
ಚಿತ್ರದುರ್ಗ:  ‘ನವ ದಂಪತಿಗಳು ಪ್ರೀತಿ, ಸಾಮರಸ್ಯದಿಂದ ದಾಂಪತ್ಯ ಜೀವನ ನಡೆಸಬೇಕು’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು. 
 
ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಬಸವ ಕೇಂದ್ರ ಮುರುಘಾಮಠ ಮತ್ತು ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ 27ನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
 
‘ದುಡಿಯುವ ಗಂಡಸು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಇದರಿಂದ ಇಡೀ ಕುಟುಂಬ ಬೀದಿಗೆ ಬರುತ್ತದೆ.  ಉತ್ತಮ ಮಾರ್ಗದಲ್ಲಿ ದುಡಿದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ಹೇಳಿದರು.
 
ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಮಾತನಾಡಿ, ‘ಸಾಮೂಹಿಕ ವಿವಾಹದಿಂದ ಅನಗತ್ಯ ಖರ್ಚು ಕಡಿಮೆ ಯಾಗುತ್ತದೆ. ವರದಕ್ಷಿಣೆ ಕಿರುಕುಳ ತಪ್ಪಿದಂತಾಗುತ್ತದೆ. ಮದುವೆ ಎಂಬುದು ಯಾರಿಗೂ ಹೊರೆ ಆಗಬಾರದು. ಇಲ್ಲಿ ಅತಿ ಹೆಚ್ಚು ಶ್ರಮ ಸಂಸ್ಕೃತಿಯವರೇ ಸೇರಿದ್ದೀರಿ. ನವದಂಪತಿಗಳ ಬದುಕು ಸದಾ ಆನಂದವಾಗಿರಲಿ’ ಎಂದರು.
 
ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಮಾಲತೇಶ್ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಬಹುತೇಕರೂ  ಮಕ್ಕಳ ಮದುವೆ ಅದ್ಧೂರಿಯಾಗಿ ಮಾಡಬೇಕು ಎಂಬ ಆಶಯ ಹೊಂದಿರುತ್ತಾರೆ. ಆದರೆ, ಶರಣರು ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಮೂಲಕ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
 
ಇದೇ ಸಂದರ್ಭದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ  ಡಾ.ಮಹೇಶ್‌ ಜೋಶಿ ಅವರಿಗೆ ‘ಸಾಂಸ್ಕೃತಿಕ ರಾಯಭಾರಿ’ ಬಿರುದನ್ನು ನೀಡಿ ಗೌರವಿಸಲಾಯಿತು. 
 
ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಬಸವಪ್ರಜ್ಞಾ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯೆ ರಾಜೇಶ್ವರಿ, ಪೈಲ್ವಾನ್ ತಿಪ್ಪೇಸ್ವಾಮಿ, ಶೇಷಣ್ಣಕುಮಾರ್, ಕೆಇಬಿ ಷಣ್ಮುಖಪ್ಪ, ಪರಮಶಿವಯ್ಯ, ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ, ಎಸ್.ವೀರೇಶ್  ಇದ್ದರು.  ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 51 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಶೈವ ಸಮಾಜ ಕಾರ್ಯದರ್ಶಿ ಜಿ.ಸಿ.ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಜಿ.ಟಿ. ಪ್ರದೀಪ್‌ಕುಮಾರ್ ನಿರೂಪಿಸಿದರು.
 
* ಮತ್ತೊಬ್ಬರ ಏಳಿಗೆಯನ್ನು ಗೌರವಿಸಿ. ಅಸಹನೆಯ ವರ್ತನೆ ಕೈಬಿಟ್ಟರೆ ಜೀವನವಿಡೀ ಉತ್ತಮವಾಗಿ ಬದುಕಬಹುದು.
-ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT