ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಸಿಯಂ ಸ್ಥಳಾಂತರಕ್ಕೆ ಕಾನೂನು ಅಡ್ಡಿ

ವಾರದಿಂದ ಫಿಲ್ಟರ್‌ ಹೌಸ್ ನವೀಕರಣ ಕಾರ್ಯ ಸ್ಥಗಿತ: ಪೌರಾಯುಕ್ತ, ಜಿಲ್ಲಾಧಿಕಾರಿಗೆ ಪತ್ರ
Last Updated 6 ಮಾರ್ಚ್ 2017, 6:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾಧಿಕಾರಿ, ಪೌರಾಯುಕ್ತರ ಲಿಖಿತ ಆದೇಶವಿದ್ದರೂ ಕಾನುನು ಪ್ರಕಾರ ಖಾತೆಯಾಗದ ಕಾರಣ ನಗರದ ರಂಗಯ್ಯನ ಬಾಗಿಲು ಸಮೀಪವಿರುವ ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯವನ್ನು ಕೋಟೆ ರಸ್ತೆಯ ಫಿಲ್ಟರ್‌ ಹೌಸ್‌ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯ ಸ್ಥಗಿತಗೊಂಡಿದೆ.

ಹೀಗಾಗಿ ಕಳೆದ ತಿಂಗಳಿನಿಂದ ನಡೆಯುತ್ತಿದ್ದ ಫಿಲ್ಟರ್ ಹೌಸ್ ನವೀಕರಣ ಕಾರ್ಯಕ್ಕೆ ನಗರಸಭೆ ಬ್ರೇಕ್ ಹಾಕಿದೆ. ಸಮರ್ಪಕ ದಾಖಲೆಗಳನ್ನು ಸಲ್ಲಿಸುವ ಜತೆಗೆ, ಕಾನೂನು ಪ್ರಕಾರ ಫಿಲ್ಟರ್ ಹೌಸ್‌ ಅನ್ನು ತಮ್ಮ ಇಲಾಖೆಗೆ ಹೆಸರಿಗೆ ಖಾತೆ ಮಾಡಿಸಿಕೊಳ್ಳುವಂತೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಪೌರಾಯುಕ್ತರು ಸಲಹೆ ನೀಡಿದ್ದಾರೆ.

ಹತ್ತು ವರ್ಷಗಳ ಹಿಂದಿನ ಪ್ರಕ್ರಿಯೆ: ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯವನ್ನು ಫಿಲ್ಟರ್‌ಹೌಸ್‌ಗೆ ವರ್ಗಾವಣೆ ಮಾಡುವ ವಿಷಯ ಹತ್ತು ವರ್ಷಗಳಷ್ಟು ಹಳೆಯದು. ಆಗಿನಿಂದಲೂ ಈ ಸಂಬಂಧ ಪತ್ರ ವ್ಯವಹಾರಗಳು ನಡೆಯುತ್ತಿದ್ದವು. ಇದಕ್ಕೆ ಸಂಬಂಧಿಸಿ­ದಂತೆ ಅಂದಿನ ಜಿಲ್ಲಾಧಿಕಾರಿ (ಫೆಬ್ರುವರಿ 24, 2007 ರಂದು) ಹಾಗೂ ಪೌರಾಯುಕ್ತರು (ಏಪ್ರಿಲ್ 13, 2007) ರಂದು ಫಿಲ್ಟರ್‌ ಹೌಸ್‌ ಅನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿ ಸುವಂತೆ ಆದೇಶಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಂತರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ನಂತರ ಆ ಪ್ರಕರಣವನ್ನು ಹಿಂಪಡೆಯ ಲಾಗಿದ್ದರೂ ಫಿಲ್ಟರ್‌ ಹೌಸ್‌ಗೆ ವಸ್ತು ಸಂಗ್ರಹಾಲಯ ಸ್ಥಳಾಂತರಗೊಂಡಿಲ್ಲ.


ತಿಂಗಳಿನಿಂದ ಕಾಮಗಾರಿ ಆರಂಭ: ಇತ್ತೀಚೆಗೆ ಒಂದಷ್ಟು ಅಡೆತಡೆಗಳನ್ನು  ನಿವಾರಿಸಿದ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು, ಒಂದು ತಿಂಗಳಿ­ನಿಂದ ಫಿಲ್ಟರ್ ಹೌಸ್ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಫಿಲ್ಟರ್‌ ಹೌಸ್‌ ಕಟ್ಟಡದ ಕಾಂಪೌಂಡ್, ಚಾವಣಿ ಸೇರಿದಂತೆ ಅಗತ್ಯವಾದ ರಿಪೇರಿ ಹಾಗೂ ಅವಶ್ಯಕವಾದ ನವೀಕರಣ ಕೆಲಸ ಶುರುವಾಯಿತು. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೌರಾಯುಕ್ತರು, ‘ಕಾನೂನಾ ತ್ಮಕವಾಗಿ ಪುರಾತತ್ವ ಇಲಾಖೆಗೆ ಫಿಲ್ಟರ್‌ಹೌಸ್‌ ಹಸ್ತಾಂತರವಾಗಿಲ್ಲ.  ದಾಖಲೆಗಳ ಸಮೇತ ನಮ್ಮ ಕಚೇರಿಗೆ ಅರ್ಜಿ ಸಲ್ಲಿಸಿ, ಕ್ರಮಬದ್ಧವಾಗಿ ಈ ಆಸ್ತಿಯನ್ನು ಪುರಾತತ್ವ ಇಲಾಖೆಗೆ ವರ್ಗಾ ಯಿಸಿಕೊಳ್ಳಬೇಕು’ ಎಂದು ಪುರಾತತ್ವ ಇಲಾಖೆಗೆ ತಿಳಿಸುವ ಜತೆಗೆ, ನವೀಕರಣ ಕಾರ್ಯ ನಿಲ್ಲಿಸುವಂತೆ ಸೂಚಿಸಿದರು.


‘ಹಸ್ತಾಂತರದ ಆದೇಶವಿದ್ದರೂ ಅದನ್ನು ಪೌರಾಯುಕ್ತರು ಒಪ್ಪಲಿಲ್ಲ. ನವೀಕರಣಕ್ಕೂ ಮುನ್ನ ಖಾತೆ ಮಾಡಿಸಿ­ಕೊಳ್ಳ­ಬೇಕು. ಅದಕ್ಕಾಗಿ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ ಎನ್ನುತ್ತಿದ್ದಾರೆ. ಹೀಗಾಗಿ  ಒಂದು ವಾರದಿಂದ ನವೀಕರಣ ಕಾರ್ಯ ನಿಲ್ಲಿಸಿದ್ದೇವೆ’ ಎಂದು ರಾಜ್ಯ ಪುರಾತತ್ವ ಇಲಾಖೆ ಉಸ್ತುವಾರಿ ಸಹಾಯಕ ನಿರ್ದೇಶಕ ಪ್ರಹ್ಲಾದ್ ‘ಪ್ರಜಾವಾಣಿ’ಗೆ ವಿವರಿಸಿದರು.


ಕಾನೂನು ಪ್ರಕಾರ ಖಾತೆಯಾಗಬೇಕು: ಈ ಕುರಿತು ‘ಪ್ರಜಾವಾಣಿ’ಗೆ ಪೌರಾಯುಕ್ತ ಚಂದ್ರಪ್ಪ ಪ್ರತಿಕ್ರಿಯಿಸಿದ್ದು ಹೀಗೆ: ‘ಕೇವಲ ಪತ್ರದಲ್ಲಿ ಫಿಲ್ಟರ್‌ ಹೌಸ್‌ ಹಸ್ತಾಂತರವಾಗಿದೆ ಎಂದು ಉಲ್ಲೇಖ ವಾಗಿದೆ. ಆದರೆ ಕಾನೂನು ಪ್ರಕಾರ ಖಾತೆಯಾಗಿಲ್ಲ.  ಫಿಲ್ಟರ್‌ಹೌಸ್ ನಗರ ಸಭೆಯ ಆಸ್ತಿ. ಅದನ್ನು ಇನ್ನೊಂದು ಇಲಾಖೆಗೆ ಹಸ್ತಾಂತರಿಸುವ ಮುನ್ನ, ಅದಕ್ಕೆ ಒಂದು ಬೆಲೆ ನಿಗದಿಪಡಿಸಬೇಕು. ಆ ಮೊತ್ತವನ್ನು ಪುರಾತತ್ವ ಇಲಾಖೆಯವರು ನಗರಸಭೆಗೆ ಪಾವತಿ ಸಬೇಕು. ನಂತರ ಖಾತೆ ಮಾಡಿಕೊಡ ಲಾಗುತ್ತದೆ. ಆಗ ಅದು ಅಧಿಕೃತವಾಗಿ ಪುರಾತತ್ವ ಇಲಾಖೆಯ ಆಸ್ತಿಯಾಗುತ್ತದೆ’.

‘ಈ ಹತ್ತು ವರ್ಷಗಳಲ್ಲಿ ಇಂಥ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿಯೇ ವಸ್ತು ಸಂಗ್ರಹಾಲಯ ಸ್ಥಳಾಂತರ ನನೆಗುದಿಗೆ ಬಿದ್ದಿದೆ. ಈ ಹಂತದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮುಂದೆ ಏನು ಮಾಡಬೇಕೆಂದು ಮಾಹಿತಿ ನೀಡಿದ್ದೇನೆ’ ಎಂದು ಚಂದ್ರಪ್ಪ ತಿಳಿಸಿದರು.
‘ಇದು ನಗರದ ಅಭಿವೃದ್ಧಿ ವಿಚಾರ. ಹೀಗಿದ್ದಾಗ ಸ್ವತ್ತುಗಳನ್ನು ಇಲಾಖೆಯಿಂದ ಇಲಾಖೆಗೆ ಉಚಿತವಾಗಿ ವರ್ಗಾಯಿಸ ಬಹುದಲ್ಲವೇ’ ಎಂಬ ಪ್ರಶ್ನೆಗೆ ಪೌರಾಯುಕ್ತರು, ‘ಅದು ಸಾಧ್ಯವಿರಬಹು ದೇನೋ. ಆದರೆ ಅದಕ್ಕೊಂದು ಕಾನೂನಾತ್ಮಕ ಪ್ರಕ್ರಿಯೆ ಇದೆ. ಆ ಪ್ರಕಾರವೇ ನಡೆಯಬೇಕು’ ಎಂದರು.

ಫಿಲ್ಟರ್‌ಹೌಸ್‌ಗೆ ವಸ್ತು ಸಂಗ್ರಹಾಲಯ ವರ್ಗಾಯಿಸಲು ಪುನಃ ಪತ್ರ ವ್ಯವಹಾರ ಶುರುವಾಗಿದೆ. ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ.  ಪ್ರವಾಸಿಗರಿಗೆ ಕೋಟೆ ಸಮೀಪದಲ್ಲೇ ಮ್ಯೂಸಿಯಂ ತೋರಿಸುವ ಅವಕಾಶ ಈಗ ಹಿರಿಯ ಅಧಿಕಾರಿಗಳ ಕೈಯಲ್ಲಿದೆ.

ರಾಜರ ಕಾಲದ ಫಿಲ್ಟರ್‌ಹೌಸ್‌
ಫಿಲ್ಟರ್‌ ಹೌಸ್‌, ಮೈಸೂರು ದಿವಾನ್ ಮಿರ್ಜಾ ಇಸ್ಮಾಯಿಲ್ ಕಾಲದ ಕಟ್ಟಡ. ಒಂದಾನೊಂದು ಕಾಲದಲ್ಲಿ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುತ್ತಿದ್ದ ಕಟ್ಟಡ. ಅದಕ್ಕಾಗಿಯೇ ಈ ಕಟ್ಟಡಕ್ಕೆ ಫಿಲ್ಟರ್ ಹೌಸ್ ಎಂದು ಹೆಸರು. ಕೆಲವು ದಶಕಗಳಿಂದ ನೀರು ಪೂರೈಕೆ ಸ್ಥಗಿತಗೊಂಡ ಮೇಲೆ ಕಟ್ಟಡ ಪಾಳು ಬಿದ್ದಿತ್ತು. 2007ರಲ್ಲಿ ಈ ಕಟ್ಟಡವನ್ನು ಪುನರ್ ಬಳಕೆ ಮಾಡಲು ಚರ್ಚೆ ನಡೆಯಿತು. ಅದಕ್ಕಾಗಿ ರಂಗಯ್ಯನ ಬಾಗಿಲು ಬಳಿಯ ಪುರಾತತ್ವ ವಸ್ತು ಸಂಗ್ರಹಾಲಯವನ್ನು ಫಿಲ್ಟರ್‌ಹೌಸ್‌ಗೆ ವರ್ಗಾಯಿಸುವ ಚರ್ಚೆ ನಡೆಯಿತು. ಈ ನಡುವೆ, ಇದೇ ಜಾಗದಲ್ಲಿ ವಸ್ತು ಸಂಗ್ರಹಾಲಯದ ಬದಲಿಗೆ ಶೌಚಾಲಯ ನಿರ್ಮಿಸುವ ಕುರಿತು ಚರ್ಚೆ ನಡೆಯಿತು.

* ಈವರೆಗೆ ನಡೆದಿರುವ  ಪತ್ರ ವ್ಯವ ಹಾರಗಳು, ನ್ಯಾಯಾಲಯದ ದಾಖ ಲಾತಿಗಳನ್ನು ಪೌರಾಯುಕ್ತರು, ಜಿಲ್ಲಾ ಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
– ಪ್ರಹ್ಲಾದ್, ಸಹಾಯಕ ನಿರ್ದೇಶಕ , ರಾಜ್ಯ ಪುರಾತತ್ವ ಇಲಾಖೆ

* ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ದಾಖಲೆಗಳನ್ನು ನೀಡಿದ ಬಳಿಕ ಫಿಲ್ಟರ್ ಹೌಸ್ ಹಸ್ತಾಂತರಿಸಲಿ. ಯಾವುದೇ ಸಮಸ್ಯೆ ಇಲ್ಲ.
– ಚಂದ್ರಪ್ಪ, ಪೌರಾಯುಕ್ತರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT