ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆ ಪ್ರವೇಶ ಪರೀಕ್ಷೆ: ಗೊಂದಲ

ಪ್ರವೇಶಪತ್ರ ತಲುಪದೆ ಪರೀಕ್ಷೆಯಿಂದ ದೂರ ಉಳಿದ ವಿದ್ಯಾರ್ಥಿಗಳು
Last Updated 6 ಮಾರ್ಚ್ 2017, 7:14 IST
ಅಕ್ಷರ ಗಾತ್ರ
ದೇವದುರ್ಗ: ವಸತಿ ಶಾಲೆಗಳ ಪ್ರವೇಶಕ್ಕೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಯ ಹೊಸ ಮಾದರಿಯ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿತು. 
 
ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ  ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಸೈನಿಕ ವಸತಿ ಶಾಲೆ ಮತ್ತು ಆದರ್ಶ ವಿದ್ಯಾಲಯ ವಸತಿ ಶಾಲೆಗಳಿಗೆ 2017–18ನೇ ಸಾಲಿನ 6ನೇ ತರಗತಿ ಮಕ್ಕಳಿಗೆ ಪ್ರವೇಶಕ್ಕೆ ಭಾನುವಾರ ಪಟ್ಟಣದ 6 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಿತು. 
 
ಇದುವರೆಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಮೌಲ್ಯಾಂಕನ)ಗೆ ಪರೀಕ್ಷೆಯ ಜವಾಬ್ದಾರಿ ನೀಡಲಾಗಿದೆ. ಈ ಬದಲಾವಣೆ ಬಹಳಷ್ಟು ಗೊಂದಲಕ್ಕೆ ಕಾರಣವಾಗಿದೆ ಎಂಬ ದೂರುಗಳು ಪಟ್ಟಣದಲ್ಲಿ ಕೇಳಿಬಂದಿವೆ.
 
ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೆ ಪ್ರವೇಶ ಪತ್ರ ನೀಡುವಲ್ಲಿ ಲೋಪ ಕಂಡು ಬಂದಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ತಲುಪಿಲ್ಲ. ಪಾಲಕರು ಮಕ್ಕಳ ಪ್ರವೇಶಪತ್ರ ಪಡೆಯಲು ವಾರದಿಂದ ಪರದಾಡುವ  ಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಮಕ್ಕಳು ಪ್ರವೇಶಪತ್ರ ಇಲ್ಲದೆ ಪರೀಕ್ಷೆಗೆ ಹಾಜರಾಗಲಿಲ್ಲ. ಭಾನುವಾರ ಇಲ್ಲಿನ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದ ಪಾಲಕರು, ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ಸಮಸ್ಯೆ ವಿವರಿಸಿದರು.
 
ಇನ್ನೊಂದೆಡೆ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಮೇಲೆ ತೆರಳಿದ್ದಾರೆ. ಸಮನ್ವಯ ಅಧಿಕಾರಿ ಶಿವರಾಜ ಬಿರಾದಾರ ಅವರು ಪರೀಕ್ಷೆ ಮೇಲುಸ್ತುವಾರಿ ವಹಿಸಿ ಕೊಂಡಿದ್ದರು. 
 
ಈಗಾಗಲೇ ಪ್ರವೇಶ ಪರೀಕ್ಷೆ ಮೂರು ಬಾರಿ ಮುಂದೂಡಲಾಗಿತ್ತು. ಪಟ್ಟಣದ ಹೊರವಲಯದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಬಸವ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಡಾನ್‌ ಬಾಸ್ಕೋ ವಿದ್ಯಾಸಂಸ್ಥೆ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ 1,872 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 208 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಯ ಮುಖ್ಯಗುರು ಸೋಮಶೇಖರಪ್ಪ ತಿಳಿಸಿದರು.
 
‘ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಸ್.ಎಂ. ಹಟ್ಟಿ ಅವರು ರಜೆ ಮೇಲೆ ಹೋಗಿದ್ದಾರೆ. ಪ್ರವೇಶ ಪರೀಕ್ಷೆಗಳ ಉಸ್ತುವಾರಿಯನ್ನು ಪ್ರಭಾರಿಗಳಿಗೆ ವಹಿಸಲಾಗಿದೆ ಎಂದು ಶಿವರಾಜ ಬಿರಾದಾರ ತಿಳಿಸಿದರು.
 
ಓಎಂಆರ್ ಶೀಟ್‌ ಗೊಂದಲ
ಉತ್ತರ ಪತ್ರಿಕೆಯನ್ನು ಈ ಬಾರಿ ಓಎಂಆರ್ ಮಾದರಿಯಲ್ಲಿ ತಯಾರಿಸಲಾಗಿತ್ತು. ಇದರಿಂದ ಬಹುತೇಕ ಮಕ್ಕಳಿಗೆ ಗೊಂದಲವಾಯಿತು. ಪರೀಕ್ಷೆ ಆರಂಭವಾದ ಎಷ್ಟೊ ಸಮಯದ ವರೆಗೂ ಮಕ್ಕಳು ಉತ್ತರ ಎಲ್ಲಿ ಬರೆಯಬೇಕು ಎಂಬ ಗೊಂದಲದಲ್ಲಿಯೇ ಸಮಯ ಕಳೆದರು.
‘ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾವಣೆ ಕುರಿತು ಮತ್ತು ಓಎಂಆರ್‌ ಮಾದರಿಯ ಬಗ್ಗೆ ಮಕ್ಕಳಿಗೆ ಮೊದಲೇ ಮಾಹಿತಿ ನೀಡಬೇಕಾಗಿತ್ತು’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಜತೆಗೆ ಆದರ್ಶ ವಿದ್ಯಾಲಯ ವಸತಿ ಶಾಲೆಯ ಪ್ರವೆಶ ಪರೀಕ್ಷೆ ನಡೆಸಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT