ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿದ ‘ಇ–ಶೌಚಾಲಯ’

ರಾಯಚೂರಿನಲ್ಲಿ ನಿರ್ವಹಣೆ ಕೊರತೆ
Last Updated 6 ಮಾರ್ಚ್ 2017, 7:27 IST
ಅಕ್ಷರ ಗಾತ್ರ
ರಾಯಚೂರು: ನಗರದ ಮೂರು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅನುಷ್ಠಾನ ಮಾಡಿದ್ದ ಇ–ಶೌಚಾಲಯಗಳು ಬಾಗಿಲು ಹಾಕಿ ವರ್ಷಗಳಾದರೂ ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಅಥವಾ ನಗರಸಭೆ ಮಾಡಿಲ್ಲ.
 
ನಗರದ ಬಿ.ಆರ್‌. ಅಂಬೇಡ್ಕರ್‌ ವೃತ್ತ, ನಗರಸಭೆ ಎದುರಿಗೆ ಮತ್ತು ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿ ಇ–ಶೌಚಾಲಯವನ್ನು 2012ರಲ್ಲಿ ಅಳವಡಿಕೆ ಮಾಡಲಾಗಿದೆ. ನಿರ್ಮಲ ನಗರ ಯೋಜನೆಯಲ್ಲಿ ಪ್ರತಿಯೊಂದು ಇ–ಶೌಚಾಲಯವನ್ನು ₹4.95 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಈ ಹೈಟೆಕ್‌ ಶೌಚಾಲಯ ಗಳನ್ನು ಆಗಿನ ಆಗ ನಗರಾಭಿವೃದ್ಧಿ ಸಚಿವ ಎಸ್‌.ಸುರೇಶಕುಮಾರ್‌ ಇದನ್ನು ಉದ್ಘಾಟಿಸಿದ್ದರು.
 
ಒಂದೆರೆಡು ವರ್ಷಗಳ ಕಾಲ ಸಾರ್ವಜನಿಕರ ಉಪಯೋಗಕ್ಕೆ ಬಂದ ಇ–ಶೌಚಾಲಯ, ನಂತರದಲ್ಲಿ ನಿರ್ವಹಣೆ ಕೊರತೆಯಿಂದ ಪದೇಪದೇ ಕೆಟ್ಟು ನಿಲ್ಲುತ್ತಿತ್ತು. ಕಡೆಗೆ ಬಾಗಿಲು ಮುಚ್ಚಲಾಯಿತು. 
 
ಹೈಟೆಕ್‌ ಶೌಚಾಲಯಗಳ ನಿಗಾವಣೆ ವಹಿಸಿರುವ ನಗರಸಭೆ ಅಧಿಕಾರಿಗಳಿಗೆ  ಇದರ ನಿರ್ವಹಣೆಯ ಗುತ್ತಿಗೆಯನ್ನು ಯಾರಿಗೆ ನೀಡಲಾಗಿದೆ ಎಂಬ ಮಾಹಿತಿಯೇ ಇಲ್ಲ. ಒಂದು ರೂಪಾಯಿ ನಾಣ್ಯ ಹಾಕಿ ಬಳಸುವ ಶೌಚಾಲಯದ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿ ಇಲ್ಲ. ಹಾಗಾಗಿ ಬೇಕಾಬಿಟ್ಟಿ ಉಪಯೋ ಗಿಸಿದ ಕಾರಣ ಇ–ಶೌಚಾಲಯ ಹಾಳಾಗಿದೆ ಎಂಬುದನಷ್ಟೆ ಅಧಿಕಾರಿಗಳು ಹೇಳುತ್ತಾರೆ. 
 
ಅಂಬೇಡ್ಕರ್‌ ವೃತ್ತ ಇ–ಶೌಚಾಲಯವು ಸಾರ್ವಜನಿಕರಿಗೆ ಬಹಳ ಉಪಕಾರಿಯಾಗಿತ್ತು. ಬಸ್‌ ನಿಲ್ದಾಣದಲ್ಲಿ ಗಬ್ಬುನಾರುವ ಶೌಚಾಲಯವನ್ನು ಉಪಯೋಗಿಸಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಸಮೀಪದಲ್ಲಿದ್ದ ಇ–ಶೌಚಾಲಯವನ್ನು ಅನೇಕರು ಬಳಸುತ್ತಿದ್ದರು. ಆದರೆ, ಇದು ಈಗ ಸ್ಥಗಿತವಾಗಿದೆ. ಅದೇ ರೀತಿ ಜನನಿಬಿಡ ಪ್ರದೇಶವಾದ ತಹಶೀಲ್ದಾರ್‌ ಕಚೇರಿ, ನಗರಸಭೆ, ಅಂಚೆ ಕಚೇರಿಯ ಇ–ಶೌಚಾಲಯಗಳು ಸಾರ್ವಜನಿಕರಿಗೆ ಉಪಯುಕ್ತವಾಗಿತ್ತು. ಆದರೆ, ಈಗ ಇವು ಕೆಟ್ಟುನಿಂತಿವೆ.
 
ಭಯ ಕಾರಣ
ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಮಹಿಳೆಯರಿಗೆ ಈ ಹೈಟೆಕ್‌ ಶೌಚಾಲಯದ ಬಗ್ಗೆ ಭಯ ಇತ್ತು. ಒಳಗೆ ಹೋಗಿ ಸಿಲುಕಿಕೊಂಡರೆ ಎಂಬ ಆತಂಕದಿಂದ ಹೆಚ್ಚಾಗಿ ಇದನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ, ಈ ಭಯ ಹೋಗಲಾಡಿ ಸುವಂತಹ ಕಾರ್ಯವನ್ನು ನಗರಸಭೆಯ ಅಧಿಕಾರಿಗಳು ಮಾಡಲಿಲ್ಲ. ಇ–ಶೌಚಾಲಯವನ್ನು ದುರಸ್ತಿಗೊಳಿಸಿ ಮತ್ತೆ ಚಾಲನೆಗೆ ತರಬೇಕು ಮತ್ತು ಅವುಗಳ ಬಳಿ ಒಬ್ಬರನ್ನು ನೇಮಿಸಿ ಅದರ ಬಳಕೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡುವ ವಿದ್ಯಾ ಪಾಟೀಲ್‌ ಹೇಳಿದರು.
 
ಮಾಹಿತಿ ಕೊರತೆ:
ಬಯಲು ಬಹಿರ್ದಿಸಿ ಹೋಗಲಾಡಿಸುವ ದೃಷ್ಟಿಯಿಂದ ಸ್ಥಾಪಿಸಲಾದ ಹೈಟೆಕ್‌ ಶೌಚಾಲಯದ ಉದ್ದೇಶ ಉತ್ತಮವಾದುದು. ಆದರೆ, ಇದನ್ನು ಬಳಕೆ ಮಾಡುವ ಬಗ್ಗೆ ಜನರಿಗೆ ಸಮಪರ್ಕವಾಗಿ ಮಾಹಿತಿ ಇಲ್ಲದ ಕಾರಣ ಯದ್ವಾತದ್ವ ಉಪಯೋಗಿಸಿದ್ದರಿಂದ ಇ–ಶೌಚಾಲಯಗಳು ಹಾಳಾದವು ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿಷಾದದಿಂದ ನುಡಿದರು.
 
ಇ–ಶೌಚಾಲಯ ಮಾಹಿತಿ
₹4.95 ಲಕ್ಷ - ಒಂದು ಇ–ಶೌಚಾಲಯದ ಮೊತ್ತ
3 ಸ್ಥಳಗಳಲ್ಲಿ ಅಳವಡಿಕೆ
₹1 ನಾಣ್ಯ ಹಾಕಿ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT