ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗದ ದೀಪಗಳು; ಕತ್ತಲಲ್ಲಿ ಗಿರಿನಗರ

Last Updated 6 ಮಾರ್ಚ್ 2017, 7:41 IST
ಅಕ್ಷರ ಗಾತ್ರ

ಯಾದಗಿರಿ: ಬೀದಿ ಮತ್ತು ರಸ್ತೆ ದೀಪಗಳ ನಿರ್ವಹಣೆ ಇಲ್ಲದ ಕಾರಣ ಸೂರ್ಯಾಸ್ತದ ನಂತರ ಇಡೀ ಗಿರಿನಗರ ಕತ್ತಲಿನಲ್ಲಿ ಕಾಲ ತಳ್ಳುತ್ತಿದೆ. ಒಂದು ವರ್ಷದಿಂದ ನಗರದಲ್ಲಿ ಇಂಥಾಸ್ಥಿತಿ ಇದೆ. ಆದರೂ ನಗರಸಭೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಟೆಂಡರ್‌ ಕರೆದು ಕೈತೊಳೆದುಕೊಂಡಿದ್ದಾರೆ.

ಕತ್ತಲು ಕವಿಯುತ್ತಿದ್ದಂತೆ ವಾರ್ಡ್‌ ಸದಸ್ಯರನ್ನು ಜನರು ನಿತ್ಯ ಶಾಪ ಹಾಕುತ್ತಲೇ ಇದ್ದಾರೆ. ಆದರೆ,‘ ನಮ್ಮದೇನಿದೆ. ಎಲ್ಲವೂ ಟೆಂಡರ್‌ ಮೂಲಕವೇ ನಡೆಯಬೇಕಲ್ಲ. ನಗರಸಭೆ ಪೌರಾಯುಕ್ತರ ನಿರ್ಲಕ್ಷ್ಯದಿಂದ ನಗರಕ್ಕೆ ಇಂಥಾ ಸ್ಥಿತಿ ತಲೆದೋರಿದೆ. ಈಗ ಹೊಸ ಆಯುಕ್ತರು ಅಧಿಕಾರ ವಹಿಸಿಕೊಂಡ ಮೇಲೆ  ಬೀದಿದೀಪ ಅಳವಡಿಕೆ, ನಿರ್ವಹಣೆ ಕುರಿತು ಚರ್ಚೆ ನಡೆಸಬೇಕಾಗಿದೆ’ ಎಂದು ಸದಸ್ಯರು ಹೇಳುತ್ತಾರೆ.

ಮುಖ್ಯವಾಗಿ ನಗರದ ಹೃದಯಭಾಗವಾಗಿರುವ ಗ್ರಾಮೀಣ ಪೊಲೀಸ್‌ ಠಾಣೆರಸ್ತೆಯಿಂದ ನಗರಸಭೆ ಕಚೇರಿವರೆಗೂ ಸಂಪರ್ಕಿಸುವ ರಸ್ತೆಗಳಲ್ಲಿ ಒಂದೂ ದೀಪಗಳು ಬೆಳಗುತ್ತಿಲ್ಲ. ಚಿತ್ತಾಪುರ ರಸ್ತೆಯಲ್ಲಿ ಒಂದಷ್ಟು ಸೋಡಿಯಂ ದೀಪಗಳು ಬೆಳಕು ನೀಡುವುದನ್ನು ಹೊರತುಪಡಿಸಿದರೆ ಮತ್ತೆಲ್ಲೂ ಬೀದಿದೀಪಗಳು ಬೆಳಗುವುದು ಕಂಡುಬರುವುದಿಲ್ಲ ಎಂದು ನಗರ ನಿವಾಸಿಗಳಾದ ಪಟ್ಟೇದಾರ್, ಹೇಮಂತ್‌ ಹೇಳುತ್ತಾರೆ.

‘ಪ್ರಮುಖ ಅಂಗಡಿ, ಕಾಯಿಪಲ್ಯೆ, ಹಣ್ಣಿನ ಅಂಗಡಿಗಳು ಇರುವ ರೈಲ್ವೆ ಸ್ಷೇಷನ್ ಸಂಪರ್ಕ ರಸ್ತೆಯಲ್ಲಿ ದೀಪಗಳು ಬೆಳಗುತ್ತಿಲ್ಲ. ಈ ರಸ್ತೆಯಲ್ಲಿ ಹಂದಿ ಮತ್ತು ಬೀದಿ ದನಗಳ ಸಂಚಾರ ಯಥೇಚ್ಚ.  ರಾತ್ರಿ ಸಂದರ್ಭದಲ್ಲಿ ಇಲ್ಲಿ ಅಪಘಾತ ತಪ್ಪಿದ್ದಲ್ಲ. ಹಂದಿಗಳು ಬೇಕಾಬಿಟ್ಟಿ ನುಗ್ಗುವುದರಿಂದ ಆ ಕತ್ತಲಿನಲ್ಲಿ ದ್ವಿಚಕ್ರ ಸವಾರರು ಹೆಚ್ಚು ಜಾಗರೂಕರಾಗಿರಬೇಕಾಗಿರುತ್ತೆ. ಇಲ್ಲದಿದ್ದರೆ ಪ್ರಾಣಕ್ಕೆ ಕುತ್ತು’ ಎಂದು ನಿವಾಸಿ ಎಂ.ವಾಟ್ಕರ್ ಆತಂಕ ವ್ಯಕ್ತಪಡಿಸುತ್ತಾರೆ.

ಇಡೀ ನಗರಕ್ಕೆ ಬೆಳಕು ಇಲ್ಲ ಅಂತ ಗೊತ್ತಿದ್ದರೂ, ವರ್ಷಗಟ್ಟಲೇ ಟೆಂಡರ್ ಪ್ರಕ್ರಿಯೆಯಲ್ಲಿಯೇ ಕಾಲಕಳೆಯುವುದು ಎಷ್ಟು ಸರಿ. ಕತ್ತಲಲ್ಲಿ ಜನರು ಅನುಭವಿಸುತ್ತಿರುವ ತೊಂದರೆ ಎಂಥದ್ದು ಎಂಬುದನ್ನು ಅಧಿಕಾರಿ ಹಾಗೂ ಪುರಪಿತೃಗಳಿಗೆ ಹೋರಾಟಗಳ ಮೂಲಕವೇ ಮನವರಿಕೆ ಮಾಡಿಕೊಡಬೇಕೆ ಎಂಬುದಾಗಿ ನಗರ ನಿವಾಸಿಗಳು ಪ್ರಶ್ನಿಸುತ್ತಾರೆ.

ಇಡೀ ಗಿರಿನಗರದಲ್ಲಿ ಒಟ್ಟು 4,625 ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 1,312 ಟ್ಯೂಬ್‌ಲೈಟ್‌ ಕಂಬಗಳು, 1001 ಸೋಡಿಯಂ ಲೈಟ್ ಕಂಬಗಳು, ಒಟ್ಟು 7 ಹೈಮಾಸ್ಟ್‌ ಲೈಟ್‌ ಕಂಬಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಕನಿಷ್ಠ 300 ವಿದ್ಯುತ್‌ ಕಂಬಗಳು ಚೆನ್ನಾಗಿದ್ದು, ಉಳಿದೆಲ್ಲವೂ ದುರಸ್ತಿಗೆ ಬಂದಿವೆ ಎಂಬುದಾಗಿ ನಗರಸಭೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಹೇಳಿಹೇಳಿ ಸಾಕುಬೇಕಾಗಿದೆ: ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಈ ಕುರಿತು ಪೌರಾಯುಕ್ತರನ್ನು ಕೇಳಿದರೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಅಂತಾರೆ. ಈ ಮಾತು ಕೇಳಿ ನಮಗೂ ಸಾಕುಬೇಕಾಗಿದೆ ಎಂದು ನಗರಸಭೆ ಸದಸ್ಯೆ ಲಲಿತಾ ಮೌಲಾಲಿ ಅನಪುರ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಟೆಂಡರ್‌ ಪಡೆದವರಿಗೆ ನೋಟಿಸ್: ಟೆಂಡರ್ ಕರೆದು ತಿಂಗಳು ಕಳೆದಿದೆ. ಟೆಂಡರ್‌ ಬಿಡ್‌ ಮಾಡಿದವರು ಇದುವರೆಗೂ ಸಂಪರ್ಕಿಸಿಲ್ಲ. ಹಾಗಾಗಿ, ಅವರಿಗೆ ನೋಟಿಸ್‌ ನೀಡಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ಅಥವಾ ನೋಟಿಸ್‌ ಅವಧಿ ಮುಗಿದ ನಂತರ ಎರಡನೇ ವ್ಯಕ್ತಿಗೆ ಟೆಂಡರ್ ನೀಡಲಾಗುವುದು. ಒಟ್ಟು ₹ 1 ಕೋಟಿ ವೆಚ್ಚದಲ್ಲಿ ಇಡೀ ನಗರದಲ್ಲಿ  ಬೀದಿ, ರಸ್ತೆ ದೀಪಗಳನ್ನು ಅಳವಡಿಸಲು ನಗರಸಭೆ ಕ್ರಮ ತೆಗೆದುಕೊಂಡಿದೆ ಎಂದು ನಗರಸಭೆ ಅಧ್ಯಕ್ಷ ಶಶಿಧರೆಡ್ಡಿ ಹೊಸಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

* ಟೆಂಡರ್‌ ಪಡೆದವರಿಗೆ ಈ ಕೂಡಲೇ ಸಂಪರ್ಕಿಸಿ ದೀಪಗಳ ಜೋಡಣೆ ಕುರಿತು ಚರ್ಚೆ ನಡೆಸಿ, ಹೊರವಲಯದ ಪ್ರದೇಶಗಳಿಗೆ  ಆದ್ಯತೆ ನೀಡಲು ಸೂಚಿಸಲಾಗುವುದು
ಮಲ್ಲಿಕಾರ್ಜುನ, ಪ್ರಭಾರ ಪೌರಾಯುಕ್ತ ,ಯಾದಗಿರಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT