ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನಪ್ರಿಯ: ₹10ಕ್ಕೆ ತಿಂಡಿ,₹20ಕ್ಕೆ ಊಟ

ಐವರಿಂದ ಹೋಟೆಲ್ ನಿರ್ವಹಣೆ ಹಸಿದವರ ಇಷ್ಟದ ಜಾಗ
Last Updated 6 ಮಾರ್ಚ್ 2017, 8:33 IST
ಅಕ್ಷರ ಗಾತ್ರ

ಗಂಗಾವತಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ  ಗುಣಮಟ್ಟದ ತಿಂಡಿ, ಊಟಕ್ಕೆ ಜನ ನೂರಾರು ರೂಪಾಯಿ ಖರ್ಚು  ಮಾಡಬೇಕು. ಅಪರೂಪಕ್ಕೊಮ್ಮೆ ಹೊಟೇಲ್ ತಿಂಡಿ, ಊಟ ಬಯಸುವ ಜನ ಜೇಬಿಗೆ ಭಾರ ಮಾಡಿಕೊಂಡು ಹೊರಗಿನ ರುಚಿ ಸವಿಯಬೇಕು.

ಆದರೆ ನಗರದಲ್ಲಿರುವ ಹೋಟೆಲ್  ಒಂದು  ಕಡಿಮೆ ಹಣಕ್ಕೆ ಜನರಿಗೆ ಊಟ, ತಿಂಡಿ ನೀಡುವ ಮೂಲಕ ಜನರ ಗಮನ ಸೆಳೆದು ಸದ್ದು ಮಾಡುತ್ತಿದೆ. ಅದೂ ಚಹಾ ಕುಡಿದು ಮುಗಿಸಬಹುದಾದ ಮೊತ್ತಕ್ಕೆ ಹೊಟ್ಟೆ ತುಂಬ ಊಟ, ತಿಂಡಿ ನೀಡುತ್ತಿದೆ ಎಂದರೆ ನಂಬಲೇಬೇಕು.

ದುರುಗಮ್ಮ ದೇವಸ್ಥಾನದ ಎದುರು ಇರುವ ಧ್ಯಾನಪ್ರಿಯ ಎಂಬ ಹೋಟೆಲ್  ಅಗ್ಗದ ದರಕ್ಕೆ ಊಟ, ತಿಂಡಿ ನೀಡಿ ಬಡ ಜನರ ಮೆಚ್ಚಿಗೆಗೆ ಪಾತ್ರವಾಗಿದೆ.

ಕನಕಗಿರಿಯಲ್ಲಿ ಸರ್ಕಾರೇತರ ಸಂಸ್ಥೆಯ ನೌಕರ ಖಾಜಿ ನಾಗರಾಜ, ಹೋಟೆಲ್ ನಡೆಸುತ್ತಿದ್ದು, ಈ ಮೂಲಕವೂ ಜನ ಸೇವೆ ಮಾಡಬಹುದು ಎಂದು ತೋರಿಸಿದ್ದಾರೆ.

ಕೇವಲ ₹10ಕ್ಕೆ ಇಡ್ಲಿ, ಅವಲಕ್ಕಿ, ಮಂಡಕ್ಕಿ ವಗ್ಗರಣೆ, ಚಿತ್ರನ್ನಾ, ಪುಳಿಯೋಗರೆ, ದೋಸೆ, ಪೂರಿ, ಮಧ್ಯಾಹ್ನ ₹20ಕ್ಕೆ ಅನ್ನ, ಹಪ್ಪಳ, ಸಾಂಬರ್, ರಸಂ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ಪುಡಿಚಟ್ನಿ, ತರಕಾರಿ ಪಲ್ಯೆ ಸಿಗುತ್ತಿದೆ. ಈ ಮೂಲಕ ಬಡವರ ಸ್ನೇಹಿಯಾಗುವತ್ತಾ ಹೋಟೆಲ್ ಹೆಜ್ಜೆ ಇಟ್ಟಿದೆ.

‘ಎರಡು ರೊಟ್ಟಿ, ತರಕಾರಿ ಪಲ್ಯ ಅಥವಾ ಚಪಾತಿ ಬಾಜಿಗೆ ಕೇವಲ ₹10ಕ್ಕೆ ಸಿಗುತ್ತಿದೆ. ಇಷ್ಟು ಕಡಿಮೆ ಮೊತ್ತಕ್ಕೆ ಗಂಗಾವತಿಯ ಯಾವ ಹೋಟಲಲ್ಲೂ ಆಹಾರ ಸಿಗದು. ಕಳೆದ ಕೆಲ ದಿನದಿಂದ ಇಲ್ಲೇ ಊಟ ಮಾಡುತ್ತಿದ್ದೇನೆ. ಆಹಾರ ಚನ್ನಾಗಿದೆ’ ಎಂದು ಕಾರ್ಮಿಕ ಬಸವಣ್ಯಪ್ಪ ಕರಿಗಾರ ಹೇಳಿದರು.

ಊಟದ ಜೊತೆಗೆ ಉಪಾಸನೆ
ಹೋಟೆಲ್‌ನಲ್ಲಿ ಭಾರತೀಯ ಆಧ್ಯಾತ್ಮಿಕ ಮಹನೀಯರ ಧ್ಯಾನ, ಯೋಗದ ಮಹತ್ವ ಸಾರುವ ನೂರಾರು ಚಿತ್ರಗಳು ಗಮನವನ್ನು ಸೆಳೆಯುತ್ತಿವೆ. ‘ಇಷ್ಟು ಕಡಿಮೆ ಮೊತ್ತಕ್ಕೆ ಹೇಗೆ ಉಪಾಹಾರ, ಊಟ ನೀಡುತ್ತೀರಿ ಎಂದು ಹೋಟೆಲ್‌ ನಿರ್ವಾಹಕ ಖಾಜಿ ನಾಗರಾಜ ಅವರನ್ನು ಕೇಳಿದರೆ, ಲಾಭದ ಉದ್ದೇಶವಿಲ್ಲ. ಧ್ಯಾನ, ಯೋಗದ ಪ್ರಚಾರದ ಉದ್ದೇಶವಿದೆ. ಕೇವಲ ಪ್ರಚಾರ ಎಂದರೆ ಯಾರು ಬರುವುದಿಲ್ಲ. ಊಟದ ಜೊತೆಗೆ ಉಪಾಸನೆಗೆ ಈ ತಂತ್ರ’ ಎಂದರು.

‘ಇತರೆಡೆಯೂ ಸ್ಥಾಪಿಸುವೆ’
ಆಸಕ್ತರು ಕೈಜೋಡಿಸಿದರೆ ಇತರ ಕಡೆಯೂ  ಶಾಖೆ ತೆಗೆಯುವ ಆಸಕ್ತಿ ಮಾಲೀಕ ನಾಗರಾಜರದ್ದು. ಆಸಕ್ತರು ಹೆಚ್ಚಿನ ಮಾಹಿತಿಗೆ (ಮೊ: 7760999106) ಸಂಪರ್ಕಿಸಬಹುದು.

* ನಗರದ ಕೃಷಿ, ಹಮಾಲಿ ಕಾರ್ಮಿಕರು, ಬಡವರು, ಆಟೋ ಚಾಲಕರು, ವಿವಿಧ ಕೆಲಸಕ್ಕೆ ಹಳ್ಳಿಗಳಿಂದ ನಗರಕ್ಕೆ ಬರುವವರಿಗೆ  ಇಂತಹ ಹೋಟೆಲ್ ಗಳಿಂದ ಹೆಚ್ಚು ಪ್ರಯೋಜನವಿದೆ.
-ದಶರಥ ರಾಜಪುರೋಹಿತ್‌, ವರ್ತಕ, ಗಂಗಾವತಿ

ಊಟದ ಮಾಹಿತಿ
₹10 ಕ್ಕೆ- ಚಪಾತಿ, ಇಡ್ಲಿ, ಪೂರಿ, ಚಿತ್ರಾನ್ನ ಉಪಾಹಾರ
ಅಗ್ಗದ ಉಪಾಹಾರ - ಎರಡು ರೊಟ್ಟಿ, ತರಕಾರಿ ಪಲ್ಯ ಅಥವಾ ಚಪಾತಿ ಬಾಜಿ ಕೇವಲ ₹10ಕ್ಕೆ ಸಿಗುತ್ತಿದೆ
₹20ಕ್ಕೆ- ಅನ್ನ ಸಾಂಬಾರ್‌, ತರಕಾರಿ ಪಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT