ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಕುಡಿವ ನೀರು ಪೂರೈಕೆಗೆ ಹರಸಾಹಸ

ಬರ: ಯಲಬುರ್ಗಾ ತಾಲ್ಲೂಕಿನಲ್ಲಿ ಕ್ಷೀಣಿಸಿದ ಅಂತರ್ಜಲ ಮಟ್ಟ; ಜಾನುವಾರು ಮೇವಿಗೂ ತತ್ವಾರ
Last Updated 6 ಮಾರ್ಚ್ 2017, 8:38 IST
ಅಕ್ಷರ ಗಾತ್ರ
ಯಲಬುರ್ಗಾ: ಸತತ ಮೂರು ವರ್ಷಗಳಿಂದಲೂ ಮಳೆ ಸುರಿಯದೆ ಇರುವ ಕಾರಣ ಕೆರೆ, ಬಾವಿಗಳು ಬತ್ತಿಹೋಗಿ, ಅಂತರ್ಜಲವೂ ಕುಸಿದಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ತೀವ್ರ ಅಭಾವ ಇದೆ. ಜಾನುವಾರುಗಳು ಮೇವು ಹಾಗೂ ನೀರಿನ ಕೊರತೆಯಾಗಿ ಸಂಕಷ್ಟಕ್ಕೆ ಸಿಲುಕಿವೆ. 
 
ಸರ್ಕಾರ ತಕ್ಕಮಟ್ಟಿಗೆ ಸ್ಪಂದಿಸುತ್ತಿದೆಯಾದರೂ ನೀರಿನ ಮೂಲವೇ ಇಲ್ಲದೆ ಇರುವ ಕಾರಣ ಪರಿಣಾಮಕಾರಿ ನಿರ್ವಹಣೆಗೆ ಕಷ್ಟವಾಗುತ್ತಿದೆ. 
ಜಾನುವಾರುಗಳಿಗೆ ಗೋಶಾಲೆ ತೆರೆದು ತಾತ್ಕಾಲಿಕ ಅನುಕೂಲ ಮಾಡಿದ್ದರೂ ಅದೂ ಕೂಡಾ ಅಷ್ಟೊಂದು ಪರಿಣಾಮಕಾರಿ ಆಗಿಲ್ಲ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕೃಷಿ ಕಾರ್ಮಿಕರ ಬವಣೆ ಹೇಳತೀರದು. 
 
ಯಲಬುರ್ಗಾ, ಕುಕನೂರು ಪಟ್ಟಣವನ್ನು ಹೊರತುಪಡಿಸಿ ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳಿದ್ದು, ಅವುಗಳು ಒಳಗೊಂಡ 142 ಗ್ರಾಮಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ  ನೀರು ಪೂರೈಕೆಗೆ ಸುಮಾರು ವರ್ಷಗಳಿಂದಲೂ ನಡೆಯುತ್ತಾ ಬರುತ್ತಿದೆ.  ಆದರೆ ಸದ್ಯದ ಪರಿಸ್ಥಿತಿ ನೀರಿನ ಕೊರತೆ ಹಲವು ತೊಂದರೆಗಳಿಗೆ ಕಾಣವಾಗುತ್ತಿದೆ. 
 
ತಾಲ್ಲೂಕಿನಲ್ಲಿ  156 ಕೈಪಂಪ್‌ಗಳು ದುರಸ್ತಿಯಲ್ಲಿವೆ, 138 ಸಂಪೂರ್ಣ ಹಾಳಾಗಿವೆ. ಅದೇ ರೀತಿ ಕಿರು ನೀರು ಸರಬರಾಜು ಯೋಜನೆಗಳ ಅಡಿಯಲ್ಲಿ 252 ಘಟಕಗಳಲ್ಲಿ 188 ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. 38 ದುರಸ್ತಿಗೆ ಒಳಗಾಗಿದ್ದರೆ 25 ಘಟಕಗಳು ಕೆಟ್ಟಿವೆ.

ಕೊಳವೆ ನೀರು ಸರಬರಾಜು ವ್ಯವಸ್ಥೆ ಅಡಿಯಲ್ಲಿ 338 ಘಟಕಗಳಿದ್ದು, 248 ಘಟಕಗಳು ಚಾಲ್ತಿಯಲ್ಲಿವೆ, 43 ದುರಸ್ತಿಗೆ ಒಳಪಟ್ಟಿವೆ. ಉಳಿದಂತೆ 48ಘಟಕಗಳು ಹಾನಿಗೊಂಡಿವೆ.  ಲಭ್ಯವಿರುವ ಕೊಳವೆಬಾವಿಗಳು, ಕಿರು ನೀರು ಸರಬರಾಜು ಹಾಗೂ ಕೊಳವೆ ನೀರು ಪೂರೈಕೆ ವ್ಯವಸ್ಥೆಗಳಲ್ಲಿ ನೀರು ಸರಬರಾಜ ಮಾಡುತ್ತಿದ್ದರೂ ನೀರಿನ ಮೂಲಗಳೇ ಸರಿಯಾಗಿ ಲಭ್ಯವಿಲ್ಲ. 
 
ಅದೇ ರೀತಿಯ ಚಿಕ್ಕಮ್ಯಾಗೇರಿ, ತಳಕಲ್‌, ಅಡವಿಹಳ್ಳಿ ಗಾಣದಾಳ, ಹುಣಸಿಹಾಳ, ಶಿರೂರು, ಯಡ್ಡೋಣಿ ಹಾಗೂ ಕುಡಗುಂಟಿ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 
 
ಇವುಗಳ ಪೈಕಿ ಈಗಾಗಲೇ ಅಡವಿಹಳ್ಳಿ ಹಾಗೂ ಚಿಕ್ಕಮ್ಯಾಗೇರಿ ತಾಂಡಾಕ್ಕೆ 58 ದಿನ, ಶಿರೂರು 56, ಗಾಣದಾಳ 47ದಿನಗಳ ಕಾಲ ನೀರು ಪೂರೈಸಲಾಗಿದೆ. 
 
ಯಲಬುರ್ಗಾ ಪಟ್ಟಣದ ಸ್ಥಿತಿ: ಯಲಬುರ್ಗಾ ಪಟ್ಟಣದ ಹನ್ನೊಂದು ವಾರ್ಡ್‌ಗಳ ವ್ಯಾಪ್ತಿಗೆ ಸಂಬಂಧಿಸಿದಂತೆ 38 ಕೊಳವೆಬಾವಿಗಳಿದ್ದು, 10 ಕೈಪಂಪ್, 44 ಕಿರು ನೀರು ಸರಬರಾಜು ಘಟಕಗಳು ಹಾಗೂ 39 ಸಾರ್ವಜನಿಕ ನಳಗಳಿವೆ. 
 
ಇವುಗಳ ಮೂಲಕ ಪಟ್ಟಣದ ವಿವಿಧ ವಾರ್ಡಿನ ಜನರಿಗೆ ನೀರು ಪೂರೈಕೆಯಾಗುತ್ತಿವೆ. ಇತ್ತೀಚೆಗೆ ಅನುಷ್ಠಾನಗೊಂಡ ಹಿರೇಹಳ್ಳ ನೀರು ಪೂರೈಕೆ ಯೋಜನೆಯು ನೀರಿನ ಕೊರತೆಯಿಂದ ಸ್ಥಗಿತಗೊಂಡಿದೆ. 
 
ಉಳಿದಂತೆ ಲಭ್ಯವಿರುವ ಕೊಳವೆಬಾವಿಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೀರು ಲಭ್ಯವಿಲ್ಲದೇ ಪೂರೈಕೆಗೆ ಸಾಧ್ಯವಾಗದೇ ಸುಮಾರು 7ರಿಂದ 8 ವಾರ್ಡಿನಲ್ಲಿ ನಿತ್ಯ ನೀರಿಗೆ ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಕಳಪೆ ಕಾಮಗಾರಿಯ ಪರಿಣಾಮ ಅಲ್ಲಲ್ಲಿ ಪೈಪುಗಳು ಒಡೆದು ನೀರು ವ್ಯರ್ಥವಾಗುವುದು, ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಪೂರೈಸುವುದು ಹೀಗೆ ನೀರುಗಂಟಿಗಳ ಬೇಜವಾಬ್ದಾರಿತನವು ಕೂಡಾ ಕೃತಕ ನೀರಿನ ಅಭಾವಕ್ಕೆ ಕಾರಣ ಎಂದು ಜನಕಲ್ಯಾಣ ವೇದಿಕೆಯ ಕಾರ್ಯದರ್ಶಿ ಶರಣಬಸಪ್ಪ ದಾನಕೈ ಅಭಿಪ್ರಾಯಪಟ್ಟಿದ್ದಾರೆ.  
 
ಗ್ರಾಮೀಣ ಪ್ರದೇಶದಲ್ಲಿ ನೀರು ಸಂಗ್ರಹ ಹಾಗೂ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜೆಡಿಎಸ್‌ ಮುಖಂಡ ಶ್ರೀಪಾದಪ್ಪ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. 
 
ಬಹುತೇಕ ಶುದ್ಧ ನೀರಿನ ಘಟಕ ಬಂದ್
ಮಲ್ಕಸಮುದ್ರ ಗಾಣದಾಳ, ಮುಧೋಳ, ಲಿಂಗನಬಂಡಿ, ಯಡಿಯಾಪುರ, ಶಿರೂರ ಕಟಗಿಹಳಳಿ, ಮಕ್ಕಳ್ಳಿ ಹಾಗೂ ಬಳೂಟಗಿ ಗ್ರಾಮಗಳ್ಳಿ ತಿಂಗಳಿಗೆ ₹10ಸಾವಿರ ಹಣ ಪಾವತಿಸಿ ಖಾಸಗಿ ಮಾಲೀಕರ ಕೊಳವೆಬಾವಿಗಳಿಂದ ನೀರು ಪಡೆದು ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ. ಇವೆಲ್ಲವುಗಳ ನಡುವೆಯೂ ಶುದ್ಧ ನೀರಿನ ಘಟಕಗಳು ಕೂಡಾ ಅನೇಕ ಗ್ರಾಮಗಳಲ್ಲಿ ಸ್ಥಾಪನೆಗೊಂಡಿವೆ. 50ಸರ್ಕಾರಕ್ಕೆ ಸೇರಿವೆ 18 ಖಾಸಗಿಯವರದ್ದಾಗಿವೆ. ಆದರೆ ಇವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಘಟಕಗಳು ಬಂದ್‌ ಆಗಿ ಇದ್ದೂ ಇಲ್ಲದಂತಿವೆ.  ಅನೇಕ ಗ್ರಾಮಗಳಲ್ಲಿ ಊರಿಗೆ ಹೊಂದಿಕೊಂಡ ಅಕ್ಕಪಕ್ಕದ ತೋಟಕ್ಕೆ ಹೋಗಿ ನೀರು ಸಂಗ್ರಹಿಸುವುದು ಅನಿವಾರ್ಯವಾಗಿದೆ.
 
* ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪೂರೈಕೆಗೆ ಯಾವ ವ್ಯವಸ್ಥೆ ಅನುಕೂಲವಾಗುತ್ತದೆಯೋ,  ಅದನ್ನು ನಿರ್ವಹಿಸಲು ಸೂಚಿಸಲಾಗಿದೆ. ಹೊಸ ಕೊಳವೆಬಾವಿ ಕೊರೆಯಲಾಗುತ್ತಿದೆ.
-ಕೆ. ತಿಮ್ಮಪ್ಪ , ಇಒ, ತಾಲ್ಲೂಕು ಪಂಚಾಯಿತಿ ಯಲಬುರ್ಗಾ
 
* ಹಿರೇಹಳ್ಳ ಪ್ರದೇಶದಲ್ಲಿ 5 ಕೊಳವೆಬಾವಿ ಕೊರೆಯಿಸಿದರೂ ನಿರೀಕ್ಷಿಸಿದಷ್ಟು ನೀರು ಲಭಿಸಿಲ್ಲ. ಮಳೆ  ಬಂದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು.
-ನಾಗೇಶ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯಲಬುರ್ಗಾ
 
* ಕುಕನೂರಿನ ಎಪಿಎಂಸಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬಹುದು.  ವಾಹನಗಳ ಬಾಡಿಗೆ ಹಣ ಪಾವತಿಸುವ ಯೋಜನೆ ಈ ವರ್ಷ ಜಾರಿಯಿಲ್ಲ.
- ತಿಪ್ಪಣ್ಣ ತಳಕಲ್‌, ಪಶು ವೈದ್ಯಾಧಿಕಾರಿ ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT