ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಸಾಂಸ್ಕೃತಿಕ ಹಬ್ಬ’ಕ್ಕೆ ಅದ್ಧೂರಿ ಚಾಲನೆ

ಹೆಣ್ಣಿಗೆ ಶಿಕ್ಷಣ; ಪೋಷಕರ ಮನ ಬದಲಾಗಲಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸಲಹೆ
Last Updated 6 ಮಾರ್ಚ್ 2017, 8:49 IST
ಅಕ್ಷರ ಗಾತ್ರ

ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ಪ್ರಥಮ ಬಾರಿಗೆ ಆಯೋಜಿಸಿರುವ ‘ಮಹಿಳಾ ಸಾಂಸ್ಕೃತಿಕ ಹಬ್ಬ’ಕ್ಕೆ ಭಾನುವಾರ ಅದ್ದೂರಿ ಚಾಲನೆ ನೀಡಿತು.

ಡೊಳ್ಳು ಬಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ನೀಡಲು ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಪೋಷಕರು ಮುಂದಾಗಬೇಕು. ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದರು.

ಇಂದು ಎಸ್‌ಎಸ್‌ಎಲ್‌ಸಿ, ಪಿಯುಸಿ, ವೈದ್ಯಕೀಯ, ಎಂಜಿನಿಯರಿಂಗ್‌ ಪದವಿ ಯಲ್ಲಿ ಶ್ರದ್ಧೆಯಿಂದ ಓದುವ ಮೂಲಕ ವಿದ್ಯಾರ್ಥಿನಿಯರು ಪ್ರತಿ ವರ್ಷ ಮೇಲುಗೈ ಸಾಧಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಉದ್ಯಮ, ಬಾಹ್ಯಾಕಾಶ, ಬ್ಯಾಂಕಿಂಗ್‌, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ಅಗಾಧ ಸಾಧನೆ ಮಾಡಿದ್ದಾಳೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೌಶಲ ತರಬೇತಿ ಪಡೆಯುವ ಮೂಲಕ ನವೋದ್ಯಮ ಸ್ಥಾಪನೆಗೆ ಮಹಿಳೆಯರು ಆದ್ಯತೆ ನೀಡಬೇಕು ಎಂದರು. ಮಹಿಳಾ ವಿಶ್ವವಿದ್ಯಾಲಯ ಮತ್ತು ಸೈನಿಕ ಶಾಲೆ ವಿಜಯಪುರ ಜಿಲ್ಲೆಯ ಎರಡು ರತ್ನಗಳಿದಂತೆ. ಇವುಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಮಹಿಳಾ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಯತ್ನಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಮಹಿಳೆ ಎಂದಿಗೂ ಅಬಲೆಯಲ್ಲ ಎಂಬುದನ್ನು ಅರಿತು, ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಸಂಯೋಜಕಿ ಪ್ರೊ.ಆರ್‌. ಸುನಂದಮ್ಮ, ‘ಮಹಿಳೆ ತಿರುಗಿ ಕೆಟ್ಟಳು, ಪುರುಷ ಕೂತು ಕೆಟ್ಟ’ ಎಂಬ ಮಾತನ್ನು ಬದಲಾಯಿಸಿ, ಮಹಿಳೆ ತಿರುಗಾಡುವ ಮೂಲಕವೇ ಪ್ರಾಪಂಚಿಕ ಜ್ಞಾನ ಸಂಪಾದಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸ ಬೇಕು. ಈ ಮೂಲಕ ದೇಶವೂ ಅಭಿವೃದ್ಧಿಯಾ ಗಲಿದೆ ಎಂದು ಹೇಳಿದರು. ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಜಾದ್‌ ಪಟೇಲ್‌, ಪ್ರಭಾರ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಪ್ರೊ.ಎಸ್‌.ಎ.ಖಾಜಿ, ಹನುಮಂತಯ್ಯ ಪೂಜಾರಿ ಇದ್ದರು.

ಪತ್ರಕರ್ತೆಯರ ಸಮಾವೇಶ ಇಂದು
ಮಹಿಳಾ ಹಬ್ಬದ ಅಂಗವಾಗಿ ಇದೇ 6 ಮತ್ತು 7 ರಂದು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದೊಂದಿಗೆ ‘ಮಹಿಳಾ ಪತ್ರಕರ್ತೆಯರ ಸಮಸ್ಯೆ–ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಪ್ರೊ.ಓಂಕಾರ ಕಾಕಡೆ ತಿಳಿಸಿದ್ದಾರೆ.

ವಿಚಾರ ಸಂಕಿರಣವನ್ನು ಕುಲಪತಿ ಸಬಿಹಾ ಉದ್ಘಾಟಿಸ ಲಿದ್ದಾರೆ. ಹೈದರಾಬಾದ್‌ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಪತ್ರಕರ್ತೆ ಡಾ.ಆರ್‌. ಅಖಿಲೇಶ್ವರಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಅಧ್ಯಕ್ಷತೆ ವಹಿಸಲಿ ದ್ದಾರೆ. ಮಧ್ಯಾಹ್ನ 2.30ಕ್ಕೆ ಮೊದಲ ಗೋಷ್ಠಿಯಲ್ಲಿ ಪ್ರತ್ಯೇಕ ಮೂರು ತಂಡಗಳಲ್ಲಿ ಸಂವಾದ–ಚರ್ಚೆ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಹಿಳಾ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಗಮನ ಸೆಳೆದ ವಸ್ತು ಪ್ರದರ್ಶನ
‘ಮಹಿಳಾ ಸಾಂಸ್ಕೃತಿಕ ಹಬ್ಬ’ದ ಅಂಗವಾಗಿ ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಹಾಕಲಾಗಿದೆ.

ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಮಹಿಳಾ ಸ್ವಸಹಾಯ ಸಂಘಗಳು ಮತ್ತು ಮಹಿಳಾ ವಿವಿ ವಿದ್ಯಾರ್ಥಿನಿಯರು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಅಡುಗೆ ಪದಾರ್ಥಿಗಳು, ರೇಷ್ಮೆ ಸೀರೆ, ಒಡವೆಗಳು, ಆಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಅಪರೂಪದ ಛಾಯಾಚಿತ್ರಗಳು ಹಾಗೂ ಬಿಎಲ್‌ಡಿಇ ಸಂಸ್ಥೆಯ ಸಿದ್ದೇಶ್ವರ ಕಲಾ ಮಂದಿರದ ಚಿತ್ರಕಲೆಗಳು, ಜೈವಿಕ ಇಂಧನ ಮೂಲಗಳು ಗಮನ ಸೆಳೆಯುತ್ತಿವೆ.

ಹಾರಿಹೋದ ಶಾಮಿಯಾನ:
ಮಹಿಳಾ ಹಬ್ಬದ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಕಲಾಗಿರುವ ಬೃಹತ್‌ ಶಾಮಿಯಾನದ ಕೆಲ ಭಾಗ ಗಾಳಿಗೆ ಹಾರಿಹೋಯಿತು. ಇದರಿಂದ ಸ್ವಲ್ವ ಹೊತ್ತು ಅಸ್ತವ್ಯಸ್ತವಾಯಿತು.

* ಮಹಿಳಾ ಸಾಂಸ್ಕೃತಿಕ ಹಬ್ಬ ಇನ್ನು ಮುಂದೆ ನಿರಂತರವಾಗಿ ನಡೆಯುವುದು. ಜೊತೆಗೆ ಮಹಿಳಾ ಹಬ್ಬದ ವೈಶಿಷ್ಟ್ಯ ಕುರಿತು ಸಂಚಿಕೆಯನ್ನು ಹೊರತರಲಾಗುವುದು
ಪ್ರೊ.ಸಬಿಹಾ ಭೂಮಿಗೌಡ, ಕುಲಪತಿ, ಮಹಿಳಾ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT