ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನುಷ್ಯತ್ವ ಇಲ್ಲದ ವಿದ್ಯೆಗೆ ಬೆಲೆ ಇಲ್ಲ’

ಮೂಡುಬಿದಿರೆ ಸ್ವರಾಜ್‌ ಮೈದಾನ ಬಳಿ ಕಾಮಧೇನು ಸಭಾಭವನ ಉದ್ಘಾಟನೆ
Last Updated 6 ಮಾರ್ಚ್ 2017, 9:17 IST
ಅಕ್ಷರ ಗಾತ್ರ
ಮೂಡುಬಿದಿರೆ:  ಸ್ವಾತಂತ್ರ್ಯದ ಬಳಿಕ ನಮ್ಮಲ್ಲಿ ಹಲವಾರು ವಿದ್ಯಾವಂತ ಯುವಕರು ಸೃಷ್ಟಿಯಾಗಿದ್ದಾರೆ. ಆದರೆ ಕೆಲ ಯುವಕರ ನಡೆಯನ್ನು ಗಮನಿಸಿದರೆ ಭಯ ಹಾಗೂ ಬೇಸರ ತರುತ್ತಿದೆ.  ಸಂಸ್ಕೃತಿ, ಸಂಸ್ಕಾರವನ್ನು ಮರೆಯುತ್ತಿರುವ ಯುವಜನಾಂಗದಲ್ಲಿ ಮಾನವೀಯತೆ ದೂರವಾಗುತ್ತಿದೆ. ಹೆಣ್ಮಕ್ಕಳಿಗೆ ನೀಡುವ ಗೌರವ ಕುಂಠಿತವಾಗುತ್ತಿದೆ. ಸಂಸ್ಕಾರ, ಮನುಷ್ಯತ್ವವಿಲ್ಲದ ವಿದ್ಯೆಗೆ ಬೆಲೆ ಇರುವುದಿಲ್ಲ ಎಂದು ಹೈಕೋರ್ಟ್‌ ನ್ಯಾಯಾಧೀಶರಾದ ಬಿ.ಮನೋಹರ ಹೇಳಿದರು.
 
ಮೂಡುಬಿದಿರೆಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಮತ್ತು ಕಟ್ಟಡ ನಿರ್ಮಾಣ ಸಮಿತಿ ಜಂಟಿ ಆಶ್ರಯದಲ್ಲಿ ಸ್ವರಾಜ್‌ ಮೈದಾನ ಬಳಿ ನಿರ್ಮಾಣಗೊಂಡ ಕಾಮಧೇನು ಸಭಾಭವನ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ನಾರಾಯಣ ಗುರು ಮಹಾನ್‌ ಸಂತ, ಸರ್ವಧರ್ಮಗಳ ಹರಿಕಾರ. ಅವರ ಚಿಂತನೆ, ಬೋಧನೆ ಯುವಜನಾಂಗಕ್ಕೆ ಆದರ್ಶವಾಗಬೇಕು. ಈ ಮೂಲಕ ಯುವಕರು ಸಮುದಾಯದ, ಸಮಾಜದ ಆಸ್ತಿಯಾಗಿ ಮೂಡಿಬರಬೇಕು ಎಂದರು. 
 
ಮುಖ್ಯ ಅತಿಥಿ ಸ್ಥಾನದಿಂದ ಮಾತ ನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕೇವಲ 20 ಸೆಂಟ್ಸ್‌ ಜಾಗದಲ್ಲಿ ಸುಸಜ್ಜಿತ ಕಾಮಧೇನು ಭವನವನ್ನು ನಿರ್ಮಿಸಿದ ಬಿಲ್ಲವರ ಸಾಧನೆಯನ್ನು ಶ್ಲಾಘಿಸಿ ಈ ಸಭಾಭವನ ಎಲ್ಲರಿಗೂ ಉಪಯೋಗಕ್ಕೆ ಸಿಗಲಿ ಎಂದರು. 
 
ಎಂ. ಶೀನಪ್ಪ ಮಂಗಲ ಭವನ ಉದ್ಘಾಟಿಸಿ ಮಾತನಾಡಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ, ನಾರಾಯಣ ಗುರುಗಳ ಚಿಂತನೆ ಸಾಮರಸ್ಯದ ಬದುಕಿಗೆ ದಾರಿ ದೀಪ. ಸತ್ಯ, ನ್ಯಾಯದ ಪರ ಇರುವವ ರಿಗೆ ಕೋಟಿಚೆನ್ನಯರು ಆದರ್ಶ ಪ್ರಾಯರು ಎಂದರು. 
 
ಪ್ರಧಾನ ಭಾಷಣ ಮಾಡಿದ ಜಾನಪದ ವಿದ್ವಾಂಸ ಗಣೇಶ್‌ ಅಮೀನ್‌ ಸಂಕಮಾರ್, ವಿದ್ಯೆ ಮತ್ತು ಜ್ಞಾನದ ಅಮಲು ನಮಗೆ ಬೇಕು. ಸಂಘಟನೆ ಸಮುದಾಯದ ಬಲವರ್ಧನೆಗೆ ಸಮಾಜದ ಹಿತಕ್ಕಾಗಿ ಇರಬೇಕೆ ಹೊರತು ಸಂಘರ್ಷಕ್ಕಾಗಿ ಬಳಕೆಯಾಗಬಾರದು ಎಂದು ಯುವಕರಿಗೆ ಸಲಹೆ ನೀಡಿದರು.
 
ನಾಸಿಕ್‌ ಉದ್ಯಮಿ ಗಂಗಾಧರ ಕೆ. ಅಮೀನ್‌ ಕಾಮಧೇನು ಸಭಾಭವನ ಉದ್ಘಾಟಿಸಿದರು. ಪೂವಪ್ಪ ಕುಂದರ್‌ ಸಮಾರಂಭದ ಅಧ್ಯಕ್ಷತೆ ವಹಿಸಿದರು.  ಹೊಸ್ಮಾರು  ಬಲ್ಯೊಟ್ಟು ಸೇವಾಶ್ರಮದ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕರಾದ ಅಭಯಚಂದ್ರ ಜೈನ್, ವಿನಯ ಕುಮಾರ್‌ ಸೊರಕೆ, ಉದ್ಯಮಿ ರಮೇಶ್‌ ಕುಮಾರ್, ಉಮನಾಥ ಕೋಟ್ಯಾನ್, ಉದ್ಯಮಿ ಭಾಸ್ಕರ ಎಸ್‌. ಕೋಟ್ಯಾನ್,  ಭಾನುಮತಿ ಎಂ. ಶೀನಪ್ಪ, ಮಾಲತಿ ಗೋಪಿನಾಥ್, ರಂಜಿತ್‌ ಪೂಜಾರಿ, ಲಕ್ಷ್ಮಣ ಪೂಜಾರಿ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ನಾರಾಯಣ ಪಿಎಂ ಉಪಸ್ಥಿತರಿದ್ದರು.
ಬಿಲ್ಲವ ಸಮಾಜದ ಹಿರಿಯರನ್ನು, ಕಟ್ಟಡ ನಿರ್ಮಾಣದ ದಾನಿಗಳನ್ನು ಸನ್ಮಾನಿಸಲಾಯಿತು. 
 
* ಸಂಘಟನೆಯಿಂದ ಒಂದು ಸಮುದಾಯದ ಬಲವರ್ಧನೆಯಾಗಬೇಕು. ಸಂಘರ್ಷ ನಿರ್ಮಾಣ ಮಾಡುವುದು ಒಳ್ಳೆಯದಲ್ಲ.
– ಗಣೇಶ್‌ ಅಮೀನ್‌ ಸಂಕಮಾರ್‌, ತುಳು ವಿದ್ವಾಂಸ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT