ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಕ್ಕಿಲ್ಲ ಮೂಲ ಸೌಲಭ್ಯ

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ
Last Updated 6 ಮಾರ್ಚ್ 2017, 9:49 IST
ಅಕ್ಷರ ಗಾತ್ರ
ಮಂಡ್ಯ: ನಗರದ ನೂರಡಿ ರಸ್ತೆಯ ಅಂಬೇಡ್ಕರ್‌ ವೃತ್ತದಲ್ಲಿ ಇರುವ ಎನ್‌.ಕೆ. ಗುಂಡೂರಾವ್‌ ಉದ್ಯಾನವು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಉದ್ಯಾನವು ಚಿಕ್ಕದಾಗಿದೆ, ಆದರೆ, ಚೊಕ್ಕದಾಗಿಲ್ಲ. ನಿತ್ಯ ಸಾವಿರಾರು ಜನರು ಓಡಾಡುವ ಮಾರ್ಗದಲ್ಲಿಯೂ ಇದೆ. ಆದರೂ, ನಗರಸಭೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.
 
ಉದ್ಯಾನದಲ್ಲಿ ಮರದ ರಂಬೆ, ಕೊಂಬೆಗಳನ್ನು ಹಲವಾರು ದಿನಗಳ ಹಿಂದೆಯೇ ಅಲ್ಲಿ ಹಾಕಲಾಗಿದೆ. ಆದರೆ, ಅವುಗಳನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ.
 
ರೆಂಬೆಗಳನ್ನು ಹಾಕಿರುವ ಜಾಗದಲ್ಲಿ ಮದ್ಯದ ಹಲವಾರು ಪೌಚ್‌, ಬಾಟಲಿಗಳು ಬಿದ್ದಿವೆ. ಜತೆಗೆ ಅದನ್ನು ಕುಡಿಯಲು ಬಳಸುವ ಗ್ಲಾಸ್‌ಗಳನ್ನೂ ಕಾಣಬಹುದು. ಸಿಗರೇಟ್‌ ಪ್ಯಾಕ್‌ಗಳೂ ಬಿದ್ದಿವೆ. ಅದೆಲ್ಲವನ್ನೂ ನೋಡಿದರೆ ಅಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣ ಆಗಿರುವುದನ್ನು ತಳ್ಳಿ ಹಾಕುವಂತಿಲ್ಲ. 
 
ಉದ್ಯಾನದ ಕೆಲವು ಭಾಗದಲ್ಲಿ ದೊಡ್ಡದಾದ ಗಿಡಗಳು ಇವೆ. ಜತೆಗೆ ಸಣ್ಣದಾದ ಗಿಡಗಳನ್ನೂ ನೆಡಲಾಗಿದೆ. ನೆಲದ ಮೇಲೆಯೂ ಸ್ವಲ್ಪ ಹಸಿರಿದೆ. ಆದರೆ, ನಿರ್ವಹಣೆ ಮಾಡದ್ದರಿಂದ ಉದ್ಯಾನದೊಳಕ್ಕೆ ಹೋಗಲು ಜನರು ಹಿಂದೆ–ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ.
ಉದ್ಯಾನದಲ್ಲಿ ದೊಡ್ಡದಾದ ವಾಟರ್‌ ಟ್ಯಾಂಕ್‌ ಇದೆ. ಜತೆಗೆ ಅಲ್ಲಿಯೇ ಕಟ್ಟಡವೊಂದರ ನಿರ್ಮಾಣಕ್ಕೆ ಬುನಾದಿ ಹಾಕಲಾಗಿದೆ. ಅಷ್ಟಕ್ಕೇ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ನಿರ್ಮಾಣಕ್ಕಾಗಿ ಹಾಕಲಾಗಿದ್ದ ಮಣ್ಣು, ಉಸುಕು ಹರಡಿಕೊಂಡಿದೆ.
 
ಉದ್ಯಾನದಲ್ಲಿ ಕೂಡಲು ಯಾವುದೇ ವ್ಯವಸ್ಥೆ ಇಲ್ಲ. ಜತೆಗೆ ಪಾದಚಾರಿ ಮಾರ್ಗವಿಲ್ಲ. ವಿದ್ಯುತ್‌ ದೀಪಗಳನ್ನೂ ಹಾಕಿಲ್ಲ. ಹಾಗಾಗಿ ಇಲ್ಲಿ ಇಲ್ಲಗಳ ಪಟ್ಟಿಯೇ ದೊಡ್ಡದಾಗಿದೆ.
 
ಭಾನುವಾರ ಬಂತೆಂದರೆ ಸಾಕು ಸಾವಿರ ಸಂಖ್ಯೆಯಲ್ಲಿ ಜನರು ಜಿಲ್ಲಾಧಿಕಾರಿ ಕಚೇರಿ ಮುಂದಿನ ಉದ್ಯಾನಕ್ಕೆ ಲಗ್ಗೆ ಇಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ನಗರದ ಹಲವಾರು ಬಡಾವಣೆಗಳಲ್ಲಿರುವ ಉದ್ಯಾನಗಳು ಮೂಲ ಸೌಲಭ್ಯ ಹೊಂದಿಲ್ಲದಿರುವುದರಿಂದ ಇಲ್ಲಿಗೆ ಬರುತ್ತಾರೆ.
 
ನಗರದಲ್ಲಿರುವ ಕೆಲವು ಉದ್ಯಾನಗಳಲ್ಲಿ ಪಾದಚಾರಿ ಮಾರ್ಗವಿದ್ದರೆ, ಹಸಿರಿಲ್ಲ. ಹಸಿರು ಇದ್ದ ಕಡೆಗಳಲ್ಲಿ ಕೂಡಲು ಜಾಗವಿಲ್ಲ. ಕೂಡಲು ಜಾಗವಿದ್ದಲ್ಲಿ ವಿದ್ಯುತ್‌ ದೀಪವಿಲ್ಲ. ಇದಕ್ಕೆ ಅಪವಾದ ಎನ್ನು ವಂತಹ ಬೆರಳೆಣಿಕೆಯ ಉದ್ಯಾನಗಳು ಮಾತ್ರ ಸಿಗುತ್ತವೆ. ಉಳಿದವು ಮೂಲ ಸೌಲಭ್ಯ ಕೊರತೆಯಿಂದ ಬಳಲುತ್ತಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT