ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸಂಗೀತ ವಿಶ್ವವಿದ್ಯಾಲಯ: ಘಟಿಕೋತ್ಸವ ನಾಳೆ, 9 ವಿದ್ಯಾರ್ಥಿಗಳಿಗೆ ರ್‌್ಯಾಂಕ್‌
Last Updated 6 ಮಾರ್ಚ್ 2017, 9:53 IST
ಅಕ್ಷರ ಗಾತ್ರ
ಮೈಸೂರು:  ಕರ್ನಾಟಕ ರಾಜ್ಯ ಡಾ.ಗಂಗೂ ಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಎರಡನೇ ವಾರ್ಷಿಕ ಘಟಿಕೋತ್ಸವ ಮಾರ್ಚ್‌ 7ರಂದು ಇಲ್ಲಿ ಜರುಗಲಿದ್ದು 18 ವಿದ್ಯಾರ್ಥಿಗಳು ಚಿನ್ನದ ಪದಕ, 3 ವಿದ್ಯಾರ್ಥಿಗಳು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.  9 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು, ಒಟ್ಟು 47 ವಿದ್ಯಾರ್ಥಿಗಳು ಪದವಿ ಸ್ವೀಕರಿಸುವರು.
 
ನಗರದ ಬಲ್ಲಾಳ್‌ ವೃತ್ತದ ಬಳಿ ಇರುವ ನಿತ್ಯೋತ್ಸವ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಘಟಿಕೋತ್ಸವ ಆರಂಭವಾಗಲಿದೆ. ಅದಕ್ಕೂ ಮೊದಲು ಹಿರಿಯ ವಿದ್ಯಾರ್ಥಿಗಳಾದ ಹರೀಶ್‌ ಅವರಿಂದ ಸ್ಯಾಕ್ಸೊಫೋನ್‌, ಕಿರಣ್ಮಯಿ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಸುರಭಿ ಅವರಿಂದ ಕರ್ನಾಟಕ ಸಂಗೀತ ಗಾಯನ ಕಛೇರಿ ನಡೆಯಲಿದೆ ಎಂದು ವಿ.ವಿ ಕುಲಪತಿ ಸರ್ವಮಂಗಳಾ ಶಂಕರ್‌ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
 
‘2015–16 ಮತ್ತು 2016–17ನೇ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿರುವ 30 ಮಹಿಳೆಯರು, 17 ಪುರುಷರು ಪದವಿ ಸ್ವೀಕರಿಸುವರು. ಗೇಯ ಸಂಗೀತ ನಿಕಾಯದಲ್ಲಿ 30, ವಾದ್ಯ ಸಂಗೀತ ನಿಕಾಯದಲ್ಲಿ 7 ಹಾಗೂ ನೃತ್ಯ ನಿಕಾಯದಲ್ಲಿ 10 ವಿದ್ಯಾರ್ಥಿಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ಮೊದಲ ಬಾರಿಗೆ ರ್‌್ಯಾಂಕ್‌ ನೀಡಲು ಅವಕಾಶ ಲಭಿಸಿದೆ. ಕರ್ನಾಟಕ ಸಂಗೀತ (ಗಾಯನ), ಹಿಂದೂಸ್ತಾನಿ ಸಂಗೀತ (ಗಾಯನ) ಹಾಗೂ ಭರತನಾಟ್ಯ ನಿಕಾಯಗಳಲ್ಲಿ ತಲಾ ಮೂರು ಮಂದಿಗೆ ರ್‌್ಯಾಂಕ್‌ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು. 
 
‘ಇದೇ ಮೊದಲ ಬಾರಿ ಮೂವರಿಗೆ ಗೌರವ ಡಾಕ್ಟರೇಟ್‌ ನೀಡಲು ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಹಿಂದೆ ಕೇವಲ ಒಬ್ಬರಿಗೆ ಮಾತ್ರ ಒಪ್ಪಿಗೆ ಲಭಿಸುತ್ತಿತ್ತು’ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿ.ವಿ ಕುಲಸಚಿವ ಪ್ರೊ.ನಿರಂಜನ ವಾನಳ್ಳಿ ಇದ್ದರು.  
 
ಗೌರವ ಡಾಕ್ಟರೇಟ್‌ ಪುರಸ್ಕೃತರ  ಪರಿಚಯ
4 ರಂಗಕರ್ಮಿ ಏಣಗಿ ಬಾಳಪ್ಪ  (ರಂಗಭೂಮಿ–ನಾಟಕ)
ಶತಾಯುಷಿ ಏಣಗಿ ಬಾಳಪ್ಪ (103 ವರ್ಷ) ಕನ್ನಡ ವೃತ್ತಿರಂಗ ಭೂಮಿಯ ಅಗ್ರಗಣ್ಯ ಕಲಾವಿದರು. ‘ನಡೆದಾಡುವ ರಂಗಭೂಮಿಯ ವಿಶ್ವಕೋಶ’ ಎಂದೇ ಖ್ಯಾತರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಇವರು ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಅವರು ಬಾಲನಟಿಯಾಗಿ, ಸ್ತ್ರಿಪಾತ್ರಧಾರಿಯಾಗಿ, ನಟರಾಗಿ, ಗಾಯಕರಾಗಿ, ನಾಟಕ ಕಂಪನಿ ಮಾಲೀಕರಾಗಿ... ಹೀಗೆ ರಂಗಭೂಮಿಯನ್ನೇ ಉಸಿರಾಡಿದರು. 
 
‘ಕಲಾವೈಭವ ನಾಟ್ಯ ಸಂಘ’ ಎಂಬ ಸ್ವತಂತ್ರ ನಾಟಕ ಕಂಪನಿ ಮಾಲೀಕರಾಗಿ ದಶಕಗಟ್ಟಲೆ ನಡೆಸಿ, ಹೊಸ ಪ್ರಯೋಗಗಳಿಗೆ ಮುಂದಾದರು. ‘ಜಗಜ್ಯೋತಿ ಬಸವೇಶ್ವರ’ ನಾಟಕದ ಬಸವೇಶ್ವರರ ಪಾತ್ರದಿಂದ ಜನಪ್ರಿಯರಾದರು. ಅವರು ಕರ್ನಾಟಕ ರಾಜ್ಯೋತ್ಸವ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
4ಗಾಯಕಿ ಪ್ರೊ.ಗೌರಿ ಕುಪ್ಪುಸ್ವಾಮಿ (ಕರ್ನಾಟಕ ಸಂಗೀತ–ಗಾಯನ)
 
86 ವರ್ಷ ವಯಸ್ಸಿನ ಪ್ರೊ. ಗೌರಿ ಕುಪ್ಪುಸ್ವಾಮಿ ಮೂಲತಃ ತಮಿಳುನಾಡಿನ ಪುದುಕೋಟೆಯವರು. ವೀಣಾ ವಾದನದಲ್ಲಿ ಪರಿಣತಿ ಹೊಂದಿರುವ ಇವರು, 1967ರಲ್ಲಿ ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಸಂಗೀತ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿಕೊಂಡರು. 1992ರಲ್ಲಿ ನಿವೃತ್ತರಾದ ಇವರು ಅತ್ಯುತ್ತಮ ಬೋಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಇವರ ಮಾರ್ಗದರ್ಶನದಲ್ಲಿ 12 ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಎಂ.ಹರಿಹರನ್‌ ಜೊತೆಗೂಡಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ 45 ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಸಂಗೀತ ಕಲಾತುಂಗ, ಸಂಗೀತ ವಿದ್ಯಾನಿಧಿ, ಸಂಗೀತ ಕಲಾರತ್ನ, ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳು ಸಂದಿವೆ.
 
4ವಯಲಿನ್‌ ವಾದಕಿ ಎನ್‌.ರಾಜಂ (ಹಿಂದೂಸ್ತಾನಿ ಸಂಗೀತ–ವಾದ್ಯ)
ಎನ್‌.ರಾಜಂ (80 ವರ್ಷ) ಅವರು ವಯಲಿನ್‌ ವಾದನದ ಮೂಲಕ ಭಾರತದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿ ದ್ದಾರೆ. ಇವರ ತಂದೆ ಕರ್ನಾಟಕ ಸಂಗೀತ ವಿದ್ವಾಂಸ ಎ.ನಾರಾಯಣ ಅಯ್ಯರ್‌. ಕೇರಳದ ಎರ್ನಾಕುಲಂ ಮೂಲದ ರಾಜಂ 1959ರಲ್ಲಿ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಉಪನ್ಯಾಸಕಿಯಾಗಿ ಸೇರಿಕೊಂಡರು.

ಹಿಂದೂಸ್ತಾನಿ ವಾದ್ಯ ಕ್ಷೇತ್ರದ ಪ್ರಸಿದ್ಧ ಪಿಟೀಲು ವಾದಕಿಯಾಗಿ ವಿವಿಧ ದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಉಸ್ತಾದ್‌ ಬಿಸ್ಮಿಲ್ಲಾ ಖಾನ್‌, ಹರಿಪ್ರಸಾದ್‌ ಚೌರಾಸಿಯಾ ಜೊತೆ ಪಿಟೀಲು ಜುಗಲ್‌ಬಂದಿ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆ ಇವರದ್ದು. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ ಸಮ್ಮಾನ್‌, ಚೌಡಯ್ಯ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT