ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕೊಟ್ಟ ಕಾಯಂ ಸಿಎಂ ಪಟ್ಟ!

ರಂಗತೋರಣ–ರಾಜ್ಯಮಟ್ಟದ 12ನೇ ವಿದ್ಯಾರ್ಥಿ ನಾಟಕೋತ್ಸವ ಸಮಾರೋಪದಲ್ಲಿ ‘ಮುಖ್ಯಮಂತ್ರಿ’ ಚಂದ್ರು
Last Updated 6 ಮಾರ್ಚ್ 2017, 11:49 IST
ಅಕ್ಷರ ಗಾತ್ರ
ಬಳ್ಳಾರಿ: ‘ರಂಗಭೂಮಿಯೇ ನನಗೆ ಕಾಯಂ ಸಿ.ಎಂ ಪಟ್ಟ ಕೊಟ್ಟಿದೆ. ನಾನು ಮಾಜಿ ಆಗದಿರುವುದು ಎಷ್ಟು ಸತ್ಯವೋ ರಂಗಭೂಮಿಯೂ ಅಷ್ಟೇ ಸತ್ಯ’ ಎಂದು ‘ಮುಖ್ಯಮಂತ್ರಿ’ ಚಂದ್ರು ಅಭಿಪ್ರಾಯಪಟ್ಟರು.
 
ನಗರದ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಭಾನುವಾರ ಮುಕ್ತಾಯವಾದ ರಂಗತೋರಣ–ರಾಜ್ಯ ಮಟ್ಟದ 12ನೇ ವಿದ್ಯಾರ್ಥಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅವಿಶ್ವಾಸ ಎದುರಾಗದೇ ಇರುವ ಏಕೈಕ ಕಾಯಂ ಮುಖ್ಯಮಂತ್ರಿ ನಾನು. 64ನೇ ವಯಸ್ಸಿನಲ್ಲಿ ‘ಮುಖ್ಯಮಂತ್ರಿ’ ನಾಟಕದ 610ನೇ ಪ್ರದರ್ಶನಕ್ಕೆ ಸಜ್ಜಾಗುವ ಸಂದರ್ಭದಲ್ಲೂ ಭಯದಿಂದಲೇ ವೇದಿಕೆಗೆ ಹೋಗುತ್ತೇನೆ. ಅಂಥ ಅಳುಕು ಇದ್ದವರಿಗೆ ಮಾತ್ರ ರಂಗಭೂಮಿ ಒಲಿಯುತ್ತದೆ’ ಎಂದರು.
 
ರಾಯಚೂರು ಪ್ರಥಮ: ನಾಟಕ ಸ್ಪರ್ಧೆಯಲ್ಲಿ ಕೃಷಿ ವಿಶ್ವವಿದ್ಯಾಲಯ ತಂಡ ಅಭಿನಯಿಸಿದ ‘ಸೂತ್ರದ ಗೊಂಬೆ’ ನಾಟಕ ಪ್ರಥಮ ಉತ್ತಮ ನಾಟಕವಾಗಿ ₹ 20 ಸಾವಿರ ನಗದು ಬಹುಮಾನ ಗಳಿಸಿತು. ದಾವಣಗೆರೆಯ ದೃಶ್ಯ ಕಲಾ ಕಾಲೇಜಿನ ತಂಡ ಅಭಿನಯಿಸಿದ ‘ಪುಷ್ಪರಾಣಿ’ ಎರಡನೇ ಉತ್ತಮ ನಾಟಕ ಬಹುಮಾನ ಪಡೆದು ₹  15 ಸಾವಿರವನ್ನು ತನ್ನದಾಗಿಸಿಕೊಂಡಿತು. ಮೈಸೂರಿನ ಗೋಪಾಲಸ್ವಾಮಿ ಪದವಿ ಕಾಲೇಜಿನ ತಂಡ ಅಭಿನಯಿಸಿದ ‘ಚಾಮುಂಡಿ ಸಿರಿ ಚಾಮುಂಡಿ’ ಮೂರನೇ ಉತ್ತಮ ನಾಟಕವಾಗಿ ₹  10 ಸಾವಿರ ನಗದು ಬಹುಮಾನ ಗಳಿಸಿತು.
 
ಪುರಸ್ಕೃತರು: ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಂದೇಶ ’ಉತ್ತಮ ನಟ’, ಚಿಕ್ಕಮಗಳೂರಿನ ಎಂಐಎಂಎಸ್‌ ಕಾಲೇಜಿನ ಚೈತ್ರಾ ‘ಉತ್ತಮ ನಟಿ’ ಹಾಗೂ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕೀರ್ತಿಕುಮಾರ ‘ಉತ್ತಮ ನಿರ್ದೇಶಕ’, ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಂಜಯ ಮತ್ತು ಶ್ರೀವತ್ಸ ‘ಉತ್ತಮ ರಂಗಸಜ್ಜಿಕೆ’, ಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ಕಾಲೇಜಿನ ಡಾ.ಜ್ಯೋತಿ, ಲಕ್ಷ್ಮಿ ಮತ್ತು ಸುಮತಿ ‘ಉತ್ತಮ ಸಂಗೀತ’, ಭದ್ರಾವತಿಯ ಸರ್‌ ಎಂ.ವಿ.ವಿ. ಕಾಲೇಜಿನ ಕೆ.ಶಂಕರ್‌ ‘ಉತ್ತಮ ಪ್ರಸಾದನ’ ಹಾಗೂ ತುಮಕೂರಿನ ಸಿದ್ಧಾರ್ಥ ಕಾಲೇಜಿನ ಬಿ.ರಂಜಿತ್‌ಕುಮಾರ್‌ ‘ಉತ್ತಮ ವೇಷ–ಭೂಷಣ’ ಪುರಸ್ಕಾರ ಪಡೆದರು.
 
ರಂಗವೈಭವ ಯಾತ್ರೆಯಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ತಂಡ ಪ್ರಥಮ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ತಂಡ ದ್ವಿತೀಯ ಹಾಗೂ ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ತೃತೀಯ ಉತ್ತಮ ತಂಡಗಳಾಗಿ ಹೊರಹೊಮ್ಮಿದವು.
 
ರಂಗತೋರಣ: ಸಂಭ್ರಮದ ತೆರೆ
ರಂಗಭೂಮಿಯಲ್ಲಿ ವಿನ್ಯಾಸ ಎಂಬುದು ಪೂರಕ ಅಂಶ ಮಾತ್ರ. ಅಲ್ಲಿ ನಟರು ಹಾಗೂ ನಿರ್ದೇಶಕರೇ ಮುಖ್ಯ ಎಂದು ರಂಗವಿನ್ಯಾಸ ಕಲಾವಿದ ಹಾಗೂ ರಂಗತೋರಣ ಸಂಸ್ಥೆಯ 12ನೇ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವದ ಸರ್ವಾಧ್ಯಕ್ಷ ಶಶಿಧರ ಅಡಪ ಅಭಿಪ್ರಾಯಪಟ್ಟರು.
 
ನಗರದ ಜೋಳದರಾಶಿ ದೊಡ್ಡನ ಗೌಡರ ರಂಗಮಂದಿರದಲ್ಲಿ ಉತ್ಸವದ ಕೊನೆಯ ದಿನವಾದ ಭಾನುವಾರ ರಂಗ ಚಾವಡಿ ಸಂವಾದದಲ್ಲಿ ಮಾತನಾಡಿದ ಅವರು, ನಟರು, ನಿರ್ದೇಶಕರಿಲ್ಲದಿದ್ದರೆ ರಂಗವಿನ್ಯಾಸದ ಉದ್ದೇಶ ಈಡೇರು ವುದಿಲ್ಲ ಎಂದರು.
 
ರಂಗ ವಿನ್ಯಾಸ ಹಾಗೂ ಸಾಂಸ್ಕೃತಿಕ ಉತ್ಸವಗಳ ವಿನ್ಯಾಸ ಮಾಡುವುದು ಒಂದು ಮಹತ್ತರ ಸಾಮಾಜಿಕ ಜವಾಬ್ದಾರಿ ಎಂಬುದನ್ನು ವಿನ್ಯಾಸಕರು ಅರಿಯಬೇಕು. ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿಹಿಡಿಯುವ ಕೆಲಸ ಅದು ಎಂದು ಪ್ರತಿಪಾದಿಸಿದರು. 
 
ಅವರ ವಿದ್ಯಾರ್ಥಿ ಜೀವನ, ಪ್ರೇಮ ವಿವಾಹ, ನಿಲುವುಗಳ ಕುರಿತ ನೆನಪುಗಳನ್ನು ಮೀಟುವ ರೀತಿಯಲ್ಲಿ ರಂಗಕರ್ಮಿ ಸಂದೀಪ ಪೈ ಅವರು ಸಂವಾದಕರಾಗಿ ಗಮನ ಸೆಳೆದರು. 
 
ಅಡಪ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತಮ್ಮ ತಾಯಿ ತಯಾರಿಸಿದ ಚಟ್ನಿಪುಡಿ ಹಾಗೂ ಅನ್ನದ ಬುತ್ತಿಯನ್ನು ಸಹಪಾಠಿಗಳೊಂದಿಗೆ ಹಂಚಿ ತಿನ್ನುತ್ತಿದ್ದುದು, ಕಲೆಯ ಕ್ಷೇತ್ರಕ್ಕೆ ಬರುವ ಮುನ್ನ ವಿಜ್ಞಾನ ಪ್ರಯೋಗಾಲಯ ಶಿಕ್ಷಕರಾಗಿದ್ದುದು, ಗೊಂಬೆಗಳನ್ನು ತಯಾರಿಸಿ ಪ್ರದರ್ಶನ ನೀಡಿದ್ದ ಸಂದರ್ಭಗಳನ್ನು ಸ್ಮರಿಸಿದರು.
 
‘ಯಾವುದೇ ಪ್ರಶ್ನೆಗೆ ನನ್ನ ಬಳಿ ಸಿದ್ಧ ಹಾಗೂ ಸರಳ ಉತ್ತರಗಳಿಲ್ಲ’ ಎಂದು ಮೊದಲೇ ಸ್ಪಷ್ಟಪಡಿಸಿದ್ದ ಅವರು, ನಿಮ್ಮ ಆದರ್ಶದ ವ್ಯಕ್ತಿ ಯಾರು? ಎಂಬ ಪ್ರಶ್ನೆಗೆ, ‘ಹಳ್ಳಿಗಾಡಿನ ಜನರೇ ನನ್ನ ಆದರ್ಶ’ ಎಂದು ಉತ್ತರಿಸಿದರು.  ಎಸ್ಪಿ ಚೇತನ್‌, ಮಂಡ್ಯ ರಮೇಶ್‌ ಸಂವಾದ: ಪ್ರತಿ ನಾಟಕ ಪ್ರದರ್ಶನದ ಬಳಿಕ ನಡೆಯುವ ಚರ್ಚೆಯಲ್ಲಿ ನಟ ಮಂಡ್ಯ ರಮೇಶ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಪಾಲ್ಗೊಂಡಿದ್ದು ಗಮನ ಸೆಳೆಯಿತು. 
 
ವಾದ್ಯವೈಭವ: ಸಂಜೆ ನಡೆದ ’ವಾದ್ಯ ವೈಭವ’ ಕಾರ್ಯಕ್ರಮದಲ್ಲಿ ಹಾರ್ಮೋ ನಿಯಂ– ಮದಿರೆ ಮರಿಸ್ವಾಮಿ. ಗಿಟಾರ್: ವೆಂಕನಗೌಡ. ತಬಲಾ– ತಿರುಮಲ ಅವರ ಜುಗಲ್‌ಬಂದಿ ಪ್ರೇಕ್ಷಕರ ಮನಸೂರೆಗೊಂಡಿತು.
 
ಹುದ್ದೆಗಾಗಿ ವಿಶ್ವವಿದ್ಯಾಲಯ: ವಿಷಾದ
ಇಂದು ಹುದ್ದೆಗಾಗಿ ವಿಶ್ವವಿದ್ಯಾಲಗಳಿವೆಯೇ ಹೊರತು ವಿದ್ಯೆಗಲ್ಲ ಎಂಬ ಪರಿಸ್ಥಿತಿ ಇದೆ ಎಂದು ಲೇಖಕ ಡಾ.ರಾಜಪ್ಪ ದಳವಾಯಿ ವಿಷಾದಿಸಿದರು,
ಉತ್ಸವದ ಪ್ರಯುಕ್ತ ಶನಿವಾರ ರಾತ್ರಿ ‘ರಂಗಭೂಮಿ ಮತ್ತು ಸಮಾಜ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ರಂಗಭೂಮಿಯೂ ಒಂದು ವಿಶ್ವವಿದ್ಯಾಲಯದಂತೆ. ಆದರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚು ಪಾಠಗಳನ್ನು ಕಲಿಸುತ್ತದೆ. ಬದುಕಿನ ಕುರಿತ ದರ್ಶನವನ್ನೂ ಒದಗಿಸುತ್ತದೆ ಎಂದರು.

ಇಂದಿನ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿಗಳ ಸಾಮರ್ಥ್ಯದ ಬಗ್ಗೆ ಅನುಮಾನಪಡುತ್ತಿದೆ. ಆದರೆ ಅವರ ಪ್ರತಿಭೆಗೆ ಸರಿಯಾದ ಅವಕಾಶಗಳು ಲಭಿಸುತ್ತಿಲ್ಲ ಎಂದರು. ಇಡೀ ರಾಷ್ಟ್ರ ಅರಾಜಕೀಯದಲ್ಲಿ ಕಳೆದುಹೋಗಿರುವಾಗ ರಂಗಭೂಮಿ ಹೊಸ ನಿರೀಕ್ಷೆಯಲ್ಲಿದೆ. ರಂಗಭೂಮಿಯೇ ಒಂದು ರಾಜಕೀಯ. ಇಲ್ಲಿ ಹೊಸ ರಾಜಕೀಯಕ್ಕೆ ಬೆಲೆಯಿಲ್ಲ. ವಿದ್ಯೆಗೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಆದರೆ ಶೈಕ್ಷಣಿಕ ವ್ಯವಸ್ಥೆ ತನ್ನದೇ ಲೋಕದಲ್ಲಿ ಕಳೆದುಹೋಗಿದೆ ಎಂದರು.
 
‘ಕೆಡುಕಿನ ರಕ್ತಕ್ಕೆ ರಂಗಭೂಮಿ ನಾಲಿಗೆಯಾಗಲಿ’
ಕೆಡುಕಿನ ರಕ್ತ ನೆಲಕ್ಕೆ ಬೀಳದಂತೆ ರಂಗಭೂಮಿ ತನ್ನ ನಾಲಿಗೆಯನ್ನು ಚಾಚಬೇಕು ಎಂದು ರಂಗತೋರಣ 12ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವದ ಸರ್ವಾಧ್ಯಕ್ಷ ಶಶಿಧರ ಅಡಪ ಕರೆ ನೀಡಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ರಾತ್ರಿ ಉತ್ಸವದ ಸಮಾರೋಪ ಕಾರ್ಯಕ್ರಮದ ಆಶಯ ನುಡಿ ಆಡಿದ ಅವರು, ಎಲ್ಲ ಕೆಡುಕುಗಳನ್ನು ನುಂಗಿ, ಸಮಾಜಕ್ಕೆ ಒಳಿತನ್ನು ನೀಡಬೇಕಾದ ಜವಾಬ್ದಾರಿ ರಂಗಭೂಮಿಯ ಮೇಲಿದೆ ಎಂದರು.

ನಂತರ ಸಮಾರೋಪ ನುಡಿಗಳನ್ನು ಆಡಿದ ಕಲಾವಿದ ಮಂಡ್ಯ ರಮೇಶ್‌, ವಿಶ್ವದಲ್ಲಿ ಸಂಭವಿಸುವ ಎಲ್ಲ ಕೆಡುಕುಗಳನ್ನು ತಡೆಯುವ ದೊಡ್ಡ ಗೋಡೆಯಾಗಿ, ವಾಗ್ಝರಿಯಾಗಿ ರಂಗಭೂಮಿಯು ಶಕ್ತಿ ಪ್ರದರ್ಶಿಸಬೇಕಾಗಿದೆ. ಧರ್ಮನಿರಪೇಕ್ಷ ಮತ್ತು ಜಾತ್ಯತೀತ ಮಾಧ್ಯಮ ರಂಗಭೂಮಿ ಮಾತ್ರ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಂಗನಿರ್ದೇಶಕ ಬಿ.ವಿ.ರಾಜಾರಾಂ, ಕತ್ತಲ ದಾರಿಯಲ್ಲಿ ನಡೆಯಬಹುದೇ ಹೊರತು, ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಯುವ ಕಲಾವಿದರು ಕನಸುಗಳ ಬೆನ್ನೇರಬೇಕು ಎಂದು ಹೇಳಿದರು.

ಪುರಸ್ಕಾರ:
ತರಬೇತುದಾರರಾದ ಬಿ.ಎಂ.ರಾಮಚಂದ್ರ, ಸಂಸ್ಥೆಯ ಅಧ್ಯಕ್ಷ ಆರ್‌.ಭೀಮಸೇನ, ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಮಲ್ಲೇಶಕುಮಾರ್‌, ಉದ್ಯಮಿಗಳಾದ ವೈ.ಸತೀಶ್‌, ಅನಿಲ್‌ಬಾಬು, ಆನಂದರಾವ್‌ ವೇದಿಕೆಯಲ್ಲಿದ್ದರು. ಪ್ರೇಮದಾಸ ಅಡ್ಯಾಂತಾಯ, ಮಾ.ಭ.ಸೋಮಣ್ಣ ಮತ್ತು ದೀಪಾ ರವಿಶಂಕರ್‌ ಅವರು ನಾಟಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT