ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಮಖಂಡಿ ಜಿಲ್ಲೆ ರಚನೆ ಬೇಡಿಕೆ ಈಡೇರಲಿ’

ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಲಿ: ಹುನ್ನೂರಿನಲ್ಲಿ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒತ್ತಾಯ
Last Updated 6 ಮಾರ್ಚ್ 2017, 11:55 IST
ಅಕ್ಷರ ಗಾತ್ರ
ಜಮಖಂಡಿ:  ಜಮಖಂಡಿ ಜಿಲ್ಲೆ ರಚಿಸಲು ಹಾಗೂ ಬಾಗಲಕೋಟೆ–ಕುಡಚಿ ರೈಲ್ವೆ ಮಾರ್ಗ ನಿರ್ಮಿಸಲು ಸಂಸ್ಥಾನಿಕರ ಕಾಲದಿಂದಲೂ ಮಂಡಿಸುತ್ತ ಬರಲಾಗಿರುವ ಬೇಡಿಕೆಗಳು ಕೂಡಲೇ ಈಡೇರಬೇಕು ಎಂದು ಸಾಹಿತಿ ಬಿ.ಸಿ. ಯಡಹಳ್ಳಿ ಒತ್ತಾಯಿಸಿದರು.
 
ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಭಾನುವಾರ ಜರುಗಿದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನದಿಂದ ಅವರು ಮಾತನಾಡಿದರು. ಜಮಖಂಡಿ ನಗರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಬೇಕು. ಬಾಲಕರ ಸರ್ಕಾರಿ ಪದವಿ ಕಾಲೇಜು ತೆರೆಯಬೇಕು ಎಂದು ಒತ್ತಾಯಿಸಿದರು.
 
ಶಾಸಕ ಸಿದ್ದು ನ್ಯಾಮಗೌಡ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ,  ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳು ಕನ್ನಡ ನಾಡಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದಾರೆ. ಹಾಗೆಯೇ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಕನ್ನಡಿಗರು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ ಎಂದರು.
 
ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸರ್ವಾಧ್ಯಕ್ಷ ಸಿದ್ಧರಾಜ ಪೂಜಾರಿ ಮಾತನಾಡಿ,  ವೈಚಾರಿಕ ತಾಕಲಾಟಗಳು, ಭಿನ್ನಾಭಿಪ್ರಾಯ ದ್ವೇಷ ಅಸೂಹೆಗಳಿಗೆ ಕಾರಣವಾಗಬಾರದು ಂದರು.
 
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಮಾತನಾಡಿ, ನಮ್ಮನ್ನು ಪಾಲನೆ ಪೋಷಣೆ ಮಾಡುವ ಹಾಗೂ ನಮಗೆ ಅನ್ನ ನೀರು ಕೊಡುವ ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು. ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು ಎಂದರು.
 
ಓಲೆಮಠದ ಡಾ.ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳು ಎಂಬ ಸಿದ್ಧಾಂತವನ್ನು ಕನ್ನಡದ ವಚನಕಾರರು ಪ್ರಪಂಚದ ದಾರ್ಶನಿಕ ಸಿದ್ಧಾಂತಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು.
 
ಮಕ್ಕಳ ಸಾಹಿತಿ ಜಯವಂತ ಕಾಡದೇವರ ಆಶಯ ಭಾಷಣ ಮಾಡಿದರು. ಡಾ.ವೈ.ವೈ. ಕೊಕ್ಕನವರ, ಬಾಹುಬಲಿ ಬಿರಾದಾರ ಹಾಗೂ ಬಸವರಾಜ ವಾಣಿ ರಚಿಸಿದ ಕೃತಿಗಳನ್ನು ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಉದ್ದಿಮೆದಾರ ಜಗದೀಶ ಗುಡಗುಂಟಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್‌ ಪಿ.ಎಸ್‌. ಚನಗೊಂಡ, ಬಿಇಒ ಎನ್‌.ವೈ. ಕುಂದರಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಸಸಲಾದಿ, ಸಾಹಿತಿ ಎಂ.ಎಸ್‌. ಸಿಂಧೂರ, ಕಾಡು ಮಾಳಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ಬಿ.ಎಸ್‌. ಸಿಂಧೂರ, ಡಾ.ಉಮೇಶ ಮಹಾಬಳಶೆಟ್ಟಿ ಇದ್ದರು.

ಜಯಶ್ರೀ ಪಾಲಬಾವಿ, ಪೂರ್ಣಿಮಾ ಬನ್ನೂರ ನಾಡಗೀತೆ ಹಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್‌.ಝಳಕಿ ಸ್ವಾಗತಿಸಿದರು. ಡಿಇ.ವಿ. ಹಿರೇಮಠ ನಿರೂಪಿಸಿದರು. ಬಿ.ಎಸ್‌. ಕಡಕೋಳ ವಂದಿಸಿದರು.   ಮೆರವಣಿಗೆಯಲ್ಲಿ ಶರಣ ಡಾ.ಈಸ್ವರ ಮಂಟೂರ, ಮಲ್ಲಿಕಾರ್ಜುನ ಹುಲಗಬಾಳಿ, ಡಾ.ಸಂಗಮೇಶ ಬಿರಾದಾರ, ಎಂ.ಸಿ. ಗೊಂದಿ, ಚಿತ್ತರಂಜನ ನಾಂದ್ರೇಕರ, ಶೇಖರ ಸಾವಳಗಿ  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT