ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿಯ ವ್ಯಾಪಾರಕ್ಕೆ ನಿಯಮಾವಳಿ

ಟೌನ್ ವೆಂಡಿಂಗ್ ಕಮಿಟಿ ರಚನೆ; ಎಲ್ಲೆಂದರಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಕುಳಿತರೆ ಕ್ರಮ
Last Updated 6 ಮಾರ್ಚ್ 2017, 12:06 IST
ಅಕ್ಷರ ಗಾತ್ರ
ಶಿರಸಿ: ಇನ್ನು ಮುಂದೆ ಬೀದಿ ಬದಿಯ ವ್ಯಾಪಾರಸ್ಥರು ಎಲ್ಲಿ ಬೇಕೆಂದರಲ್ಲಿ ಕುಳಿತು ವ್ಯಾಪಾರ ಮಾಡುವಂತಿಲ್ಲ. ರಸ್ತೆ ಬದಿಯ ವ್ಯಾಪಾರಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಗುರುತಿನ ಚೀಟಿ ಹೊಂದಿರುವ ವ್ಯಾಪಾರಸ್ಥರು ಮಾತ್ರ ಹಣ್ಣು, ತರಕಾರಿ, ಸಾಮಗ್ರಿಗಳನ್ನು ಮಾರಾಟಕ್ಕೆ ಇಟ್ಟುಕೊಳ್ಳಬಹುದಾಗಿದೆ. 
 
ಈ ರೀತಿಯ ವ್ಯಾಪಾರಸ್ಥರಿಗೆ ಸೂಕ್ತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರಡು ನಿಯಮಾವಳಿ ರೂಪಿಸಿದೆ. ಈ ಕಾರಣ ನಗರಸಭೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಸಮೀಕ್ಷೆ ಪ್ರಾರಂಭಿಸಿದೆ. 
 
‘ರಸ್ತೆ ಅಂಚಿನ ವ್ಯಾಪಾರಸ್ಥರಿಗೆ ಅವರ ಹಕ್ಕು ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರತ್ಯೇಕ ನಿಯಮಾವಳಿ ರೂಪಿಸಿತ್ತು. ಈ ನಿಯಮವನ್ನು ಕರ್ನಾಟಕದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ 2013ರಲ್ಲಿ ಬೀದಿ ಬದಿಯ ವ್ಯಾಪಾರಸ್ಥರ ಸಮೀಕ್ಷೆ ನಡೆಸಲಾಯಿತು. ಅದೇ ವೇಳೆಗೆ ಶಿರಸಿ ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 122 ಜನರನ್ನು ಗುರುತಿಸಲಾಗಿತ್ತು. ಇವರೆಲ್ಲ ಕೌಟುಂಬಿಕ ವಿವರ, ವೃತ್ತಿ ವಿವರ ಒಳಗೊಂಡ ಮಾಹಿತಿಯನ್ನು ಆನ್‌ಲೈನ್‌ ಅಪಲೋಡ್ ಮಾಡಲಾಗಿತ್ತು. ಇನ್ನೂ ಕೆಲವರ ಹೆಸರು ಬಿಟ್ಟು ಹೋಗಿದೆಯೆಂಬ ಕಾರಣಕ್ಕಾಗಿ ಪುನಃ ಸಮೀಕ್ಷೆ ನಡೆಸಲಾಗುತ್ತಿದೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಮಹೇಂದ್ರಕುಮಾರ್.
 
‘ಈಗಾಗಲೇ 45 ಹೊಸ ಅರ್ಜಿಗಳು ಬಂದಿವೆ. ಅವರಲ್ಲಿ ಕೆಲವರು ಈ ವೃತ್ತಿಗೆ ಇತ್ತೀಚೆಗೆ ಸೇರಿಕೊಂಡವರಿದ್ದಾರೆ. 2013ರಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಮಾತ್ರ ಪರಿಗಣಿಸಲು ಅವಕಾಶವಿದೆ. ಈಗಾಗಲೇ ಈ ವೃತ್ತಿಯಲ್ಲಿದ್ದು ಯಾದಿಯಿಂದ ಬಿಟ್ಟು ಹೋಗಿರುವವರು ಅರ್ಜಿ ನೀಡಬೇಕು. ಬರುವ ದಿನಗಳಲ್ಲಿ ಅವರಿಗೆ ಗುರುತಿನ ಚೀಟಿ ನೀಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಅವರು ಹೇಳಿದರು.
 
ಹೊಸ ನಿಯಮದ ಪ್ರಕಾರ ನಗರ ವ್ಯಾಪ್ತಿಯಲ್ಲಿ ಟೌನ್ ವೆಂಡಿಂಗ್ ಕಮಿಟಿ ರಚಿಸಲಾಗಿದೆ. ನಗರಸಭೆ ಪೌರಾ ಯುಕ್ತರು ಅದಕ್ಕೆ ಅಧ್ಯಕ್ಷರಾಗಿದ್ದಾರೆ. ಆರೋಗ್ಯ ಇಲಾಖೆ, ಲೋಕೋಪ ಯೋಗಿ, ಪೊಲೀಸ್ ಇಲಾಖೆ ಅಧಿಕಾರಿ ಗಳು, ಸಾರ್ವಜನಿಕ ಪ್ರತಿನಿಧಿಗಳು, ವ್ಯಾಪಾರಸ್ಥರ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ. ಈ ಸಮಿತಿಯು ಬರುವ ದಿನಗಳಲ್ಲಿ ನಗರದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಸೂಕ್ತವಿರುವ ಸ್ಥಳಗಳನ್ನು ಗುರುತಿಸಲಿದೆ.

ಇಂತಹ ಸ್ಥಳಗಳಲ್ಲಿ ಮಾತ್ರ ಅವರು ವ್ಯಾಪಾರ ವಹಿವಾಟು ನಡೆಸಬಹುದು. ಅನುಮತಿ ನೀಡಿರುವ ಸ್ಥಳದಲ್ಲಿ ವ್ಯಾಪಾರಕ್ಕೆ ಪೊಲೀಸರು ಸಹ ಅಡ್ಡಿಪಡಿಸುವಂತಿಲ್ಲ. ಆದರೆ ರಸ್ತೆ ಬದಿಯ ವ್ಯಾಪಾರಕ್ಕೆ ನಿಷೇಧವಿರುವ ಪ್ರದೇಶದಲ್ಲಿ ಕಡ್ಡಾಯವಾಗಿ ಮಾರಾಟಕ್ಕೆ ಕುಳಿತುಕೊಳ್ಳುವಂತಿಲ್ಲ. ಹೀಗೆ ಕುಳಿತರೆ ಕ್ರಮ ಕೈಗೊಳ್ಳಲು ಸಮಿತಿಗೆ ಅಧಿಕಾರ ವಿದೆ ಎಂದು ಅವರು ವಿವರಿಸಿದರು. 
 
ಏನೇನು ದಾಖಲೆ? 
ಬೀದಿ ಬದಿಯ ವ್ಯಾಪಾರಕ್ಕೆ ರಸ್ತೆಯ ಅಗಲ 40 ಅಡಿ ಇರಬೇಕು. ಸಮಿತಿ ಇಂತಹ ಸ್ಥಳಗಳನ್ನು ಮಾತ್ರ ಗುರುತಿಸ ಬೇಕು. ಈ ರೀತಿಯ ವ್ಯಾಪಾರಸ್ಥರು ಯಾವುದೇ ಶಾಶ್ವತ ನಿರ್ಮಾಣಗಳನ್ನು ಅಲ್ಲಿ ಇಡಬಾರದು. ಬಣ್ಣದ ಕೊಡೆಗಳನ್ನು ಹಾಕಿಕೊಂಡು ಬೆಳಗಿನಿಂದ ಸಂಜೆಯ ತನಕ ಮಾತ್ರ ಕುಳಿತು ವ್ಯಾಪಾರ ಮಾಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ಆಧಾರ ಸಂಖ್ಯೆ, ಬ್ಯಾಂಕ್ ವಿವರ, ವೃತ್ತಿನಿರತವಾಗಿರುವ ಭಾವಚಿತ್ರ, ಕುಟುಂಬದ ಭಾವಚಿತ್ರ ನೀಡಬೇಕು ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 
 
ಗುರುತಿನ ಚೀಟಿಗೆ ಪೈಪೋಟಿ 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮೃದ್ಧಿ ಯೋಜನೆಯಲ್ಲಿ ಬೀದಿ ಬದಿಯ ಮಹಿಳಾ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಲಭ್ಯವಾಗುತ್ತಿದೆ. ಈ ಯೋಜನೆಯ ಬಂದ ನಂತರದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ನಿಖರ ಮಾಹಿತಿ ಇಲ್ಲದ ಸುಳ್ಳು ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಮಹೇಂದ್ರಕುಮಾರ್ ಹೇಳಿದರು. 
 
* ಸರ್ಕಾರ ಅಂತಿಮ ನಿಯಮಾವಳಿ ರೂಪಿಸಿದ ನಂತರ ನಗರದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು ಸೂಕ್ತವಿರುವ ಸ್ಥಳವನ್ನು ಗುರುತಿಸಲಾಗುವುದು.
–ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT