ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಜಲಕ್ಕೆ ಹಾಹಾಕಾರ: ಬಸವಳಿದ ಜನ

ಹಾವೇರಿಯ ಶಿವಾಜಿ ನಗರ ಬಡಾವಣೆಯ 3ನೇ ಕ್ರಾಸ್‌ನಲ್ಲಿ ಕುಡಿಯುವ ನೀರಿನ ಅಭಾವ
Last Updated 6 ಮಾರ್ಚ್ 2017, 12:45 IST
ಅಕ್ಷರ ಗಾತ್ರ
ಪ್ರವೀಣ ಸಿ. ಪೂಜಾರ
ಹಾವೇರಿ: ಬರದ ಪರಿಣಾಮ ಎಲ್ಲೆಡೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ಸರ್ಕಾರದ ಆದೇಶವೂ ಇದೆ. ಆದರೆ, ಇಲ್ಲಿನ ಶಿವಾಜಿ ನಗರದ 3ನೇ ಕ್ರಾಸ್‌ನ ನಿವಾಸಿಗಳ ‘ಬರ’ ಮಾತ್ರವಲ್ಲ, ಕಳೆದ ಆರೇಳು ವರ್ಷಗಳಿಂದಲೇ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ.
 
‘ಕಳೆದ 6–7ವರ್ಷಗಳಿಂದ ಅಕ್ಕ ಪಕ್ಕದ ಮನೆಗಳ ಕೊಳವೆಬಾವಿ ಗಳಿಂದ ನೀರು ತರುತ್ತಿದ್ದೇವೆ. ಆದರೆ,  ಕಳೆದೆರಡು ವರ್ಷಗಳ ಸತತ ಬರಗಾಲದಿಂದ ಅವರ ಕೊಳವೆಬಾವಿಗಳೂ ಬತ್ತುತ್ತಿವೆ. ಇದರಿಂದಾಗಿ ನಮಗೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಭೀಮಪ್ಪ ಕಡಕೋಳ ತಿಳಿಸಿದರು. 
 
‘ಶಿವಾಜಿ ನಗರದ 3ನೇ ಕ್ರಾಸ್‌ಗೆ ಇಲ್ಲಿರುವ ಏಕೈಕ ಕೊಳವೆಬಾವಿವೇ ಆಸರೆ ಆಗಬೇಕಿತ್ತು. ಆದರೆ, ಅದರ ಪಂಪ್‌ ಅನ್ನೂ ಯಾರೋ ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ  ಕೊಳವೆಬಾವಿಯಲ್ಲಿ ನೀರು, ಪೈಪ್ ಹಾಗೂ ವಿದ್ಯುತ್ ಸಂಪರ್ಕ ಇದ್ದರೂ, ಮೋಟರು ಪಂಪ್ ಅಳವಡಿಸಿಲ್ಲ. 
 
ಈ ಸಮಸ್ಯೆಗೆ ನಗರಸಭೆಯೇ  ನೇರ ಕಾರಣ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ಗಣೇಶ ಬ್ಯಾಡಗಿ ಹೇಳುತ್ತಾರೆ. 
 
ಕಚ್ಚಾ ಗಟಾರವೂ ಇಲ್ಲ:  ‘ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಇಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ನಿಂತ ಕೊಳಚೆ ನೀರು, ಅದರಲ್ಲೇ ಹೊರಳಾಡುವ ಹಂದಿಗಳು. ಎಷ್ಟೋ ವರ್ಷಗಳಿಂದ ಕಚ್ಚಾ ಗಟಾರಗಳೇ ಇಲ್ಲದಾಗಿದೆ. ಇದರಿಂದಾಗಿ ಕೊಳಚೆ ನೀರು ನಿಂತು, ಸೊಳ್ಳೆಗಳು ವಿಪರೀತವಾಗಿವೆ. ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆಯೇ ಸೊಳ್ಳೆಗಳು ಮನೆಗಳಿಗ ಲಗ್ಗೆ ಇಡುತ್ತವೆ. ರಾತ್ರಿ ಇಡೀ ಸೊಳ್ಳೆಗಳ ಕಡಿತ. ಅಲ್ಲದೇ ರೋಗಳ ಭೀತಿಯೂ ಹೆಚ್ಚಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಚಂದ ್ರಕಲಾ ಸಂಕಮ್ಮನವರ ತಿಳಿಸುತ್ತಾರೆ.
 
ಕುಡಿಯುವ ನೀರಿನ ಸಮಸ್ಯೆ:‘ಪಕ್ಕದ ಕ್ರಾಸ್‌ನ್‌ ನಳದ ಮುಂದೆ ಗಂಟಗಟ್ಟಲೇ ಸರದಿಯಲ್ಲಿ ನಿಂತು ನೀರು ತರಬೇಕು. ಅಲ್ಲಿಯೂ ನೀರು ಬಿಡದೇ 
ತಿಂಗಳು ಕಳೆದಿದೆ. ಇನ್ನೂ ಬಳಕೆಯ ನೀರನ್ನು ಪಕ್ಕದ ಖಾಸಗಿ ಶಾಲೆಗಳ ಕೊಳವೆಬಾವಿಗಳಿಂದ ತರಬೇಕು. ಬೇಸಿಗೆಯ ಕಾರಣ ಶಾಲೆಯವರಿಗೇ ಕೊಳವೆಬಾವಿ ನೀರು ಸಾಕಾಗುತ್ತಿಲ್ಲ. ಇದರಿಂದ ಬಳಕೆಯ ನೀರಿಗೂ ತುಂಬ ತೊಂದರೆಯಾಗುತ್ತಿದೆ’ ಎಂದು ಭೀಮಪ್ಪ ಕಡಕೋಳ ತಿಳಿಸಿದರು. 
 
ಡಾಂಬರ್ ಕಾಣದ ರಸ್ತೆಗಳು:‘ನಾವು ಇಲ್ಲಿಗೆ ಬಂದು ಎಷ್ಟೋ ವರ್ಷಗಳಾಗಿವೆ.ಈವರೆಗೂ ರಸ್ತೆಗೆ  ಮಾಡಿಲ್ಲ. ಇದರಿಂದ ರಸ್ತೆಯ ಬದಿಯಲ್ಲಿ ಮುಳ್ಳು ಗಂಟಿಗಳು ಬೆಳೆದಿವೆ. ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ದಾಟಿ ಹೋಗುವುದೇ ಸಾಹಸ’ ಎಂಬುದು ಸ್ಥಳೀಯರು ದೂರು.
 
ಕಸದ ತೊಟ್ಟಿಗಳಿಲ್ಲ: ನಗರದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜನನಿಬಿಡ ಪ್ರದೇಶಗಳಲ್ಲಿ ಕಸದ ತೊಟ್ಟಿ ಇಡುತ್ತಾರೆ. ಆದರೆ, ಇಲ್ಲಿ ಒಂದೇ ಒಂದು ಕಸದ ತೊಟ್ಟಿ ಇಟ್ಟಿಲ್ಲ. ಇದರಿಂದ ಜನರೂ ಕಂಡ ಕಂಡಲ್ಲಿ ಕಸ ಹಾಕುತ್ತಿದ್ದಾರೆ. ಹೀಗಾಗಿ ಸೊಳ್ಳೆ ನಿಯಂತ್ರಣವೇ ಇಲ್ಲದಾಗಿದೆ ಎನ್ನುವುದು ಸ್ಥಳೀಯರ ಕೊರಗು. 
 
ಕ್ರಿಯಾ ಯೋಜನೆ ಇಲ್ಲ: ‘ಶಿವಾಜಿ ನಗರದ 3ನೇ ಕ್ರಾಸ್‌ನಲ್ಲಿರುವ ಕೊಳವೆ ಬಾವಿಯ ಮೋಟಾರು ಪಂಪ್, ಈ ಹಿಂದಿನ ನಗರಸಭೆಯ  ಅವಧಿಯ ಲ್ಲಿಯೇ ಕಳವಾಗಿದೆ. ಈ ಬಗ್ಗೆ ನಗರಸಭೆ ಯಲ್ಲೂ ಮಾಹಿತಿ ಇಲ್ಲ. ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ನಗರಸಭೆ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಆದರೆ, ಈ ವರೆಗೂ ಯಾವುದೇ ಕ್ರಿಯಾಯೋಜನೆಯನ್ನು ತಯಾರಿಸಿಲ್ಲ’ ಎಂದು ನಗರಸಭೆ ಸದಸ್ಯ ಶಿವಬಸ ವನ್ನಳ್ಳಿ ತಿಳಿಸಿದರು. 
 
* ಇಲ್ಲಿನ ಮನೆಗಳಿಗೆ ನೀರೇ ಇಲ್ಲ. ಕುಡಿಯಲು, ನಿತ್ಯದ ಬಳಕೆಗಾಗಿ ಪಕ್ಕದ ಕ್ರಾಸ್‌ನ ಕೊಳವೆ ಬಾವಿಗಳ ಬಳಿ ಗಂಟೆಗಟ್ಟಲೆ ಬಿಸಿಲಿ ನಲ್ಲಿ ನಿಂತು ನೀರು ತರಬೇಕಾಗಿದೆ
-ಚಂದ್ರಕಲಾ ಸಂಕಮ್ಮನವರ, ಸ್ಥಳೀಯ ನಿವಾಸಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT