ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ವಿರೋಧಿ ನಿಲುವು ಕೈಬಿಡಿ

ಸ್ಲಂ ಜನರ ಮೇಲಿನ ತಾರತಮ್ಯ ವಿರೋಧಿಸಿ ಸಮಾವೇಶದಲ್ಲಿ ಸಂಚಾಲಕ ನರಸಿಂಹಮೂರ್ತಿ ಆಗ್ರಹ
Last Updated 6 ಮಾರ್ಚ್ 2017, 12:56 IST
ಅಕ್ಷರ ಗಾತ್ರ
ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡಜನರ ವಿರೋಧಿ ನಿಲುವನ್ನು ಕೈಬಿಡಬೇಕು. ಕೊಳೆಗೇರಿಗಳ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಇಲ್ಲಿ ಆಗ್ರಹಿಸಿದರು. 
 
ಸ್ಲಂ ಜನಾಂದೋಲನ ಕರ್ನಾಟಕ ಬೆಳಗಾವಿ ಘಟಕದ ವತಿಯಿಂದ ಸದಾಶಿವನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸ್ಲಂ ಜನರ ಮೇಲಿನ ತಾರತಮ್ಯ ವಿರೋಧಿಸಿ ಸಮಾವೇಶ’ದಲ್ಲಿ ಎ. ನರಸಿಂಹಮೂರ್ತಿ ಮಾತನಾಡಿದರು.
 
‘70 ವರ್ಷಗಳಿಂದ ದೇಶದ ಬಡವರ ಉದ್ದಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಎಲ್ಲ ಸರ್ಕಾರಗಳೂ, ಅಧಿಕಾರಕ್ಕೆ ಬಂದ ತಕ್ಷಣ ಭರವಸೆಗಳನ್ನು ಮರೆತಿವೆ. ಕೊಳಗೇರಿಗಳನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಬಡತನ ನಿರ್ಮೂಲನೆ ಹೆಸರಲ್ಲಿ ಕೊಳೆಗೇರಿಗಳನ್ನು ಎತ್ತಂಗಡಿ ಮಾಡುತ್ತಿವೆ. ದೇಶದ ಜನಸಖ್ಯೆಯಲ್ಲಿ ಶೇ 51ರಷ್ಟು ಜನರಿಗೆ ವಸತಿ ಸೌಲಭ್ಯವಿಲ್ಲ. ಈ ಬಗ್ಗೆ ಚಿಂತನೆ ಮಾಡಬೇಕಾದ ಸರ್ಕಾರಗಳು ಭೂ ಮಾಫಿಯಾಗಳ ಮತ್ತು ಖಾಸಗಿ ಕಂಪೆನಿಗಳಿಗೆ ಸ್ಲಂ ಭೂಮಿ ಮಾರಲು ಹುನ್ನಾರ ನಡೆಸಿವೆ. ಇಂಥ ಬಡಜನರ ವಿರೋಧಿ ನಿಲುವನ್ನು ಎಲ್ಲರೂ ಖಂಡಿಸಬೇಕು’ ಎಂದರು.
 
ಸೌಲಭ್ಯ ಒದಗಿಸುವಲ್ಲಿ ವಿಫಲ:‘ದೇಶದಲ್ಲಿ ಶೇ. 36ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ ಎಂದು ಸರ್ಕಾರಗಳು ವರದಿ ಮಾಡಿವೆ. ಆದರೆ, ಬಡ ಕುಟುಂಬಗಳಿಗೆ ಅಗತ್ಯಗೆ ತಕ್ಕಂತೆ ಆಹಾರ, ವಸತಿ, ಆರೋಗ್ಯ ಮೊದಲಾದ ಸೌಲಭ್ಯ ಒದಗಿಸುವಲ್ಲಿ  ವಿಫಲವಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
‘ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರುತ್ತಿರುವುದು ಖಂಡನೀಯ. ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬರುವ ಸರ್ಕಾರಗಳು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಮರೆತಿವೆ. ಭೂಮಿ ಹಕ್ಕು ನೀಡಲು, ನಮ್ಮ ಕೊಳೆಗೇರಿಗಳಿಗೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿವೆ. ಕೇಂದ್ರ ಈಚೆಗೆ ಜಾರಿಗೆ ತಂದಿರುವ ಹೌಸಿಂಗ್ ಫಾರ್ ಆಲ್ (ಎಲ್ಲರಿಗೊ ಮನೆ) ಯೋಜನೆಯಡಿ ದೇಶದಲ್ಲಿರುವ ಕೊಳೆಗೇರಿಗಳ ಭೂಮಿಯನ್ನು ಸಾರ್ವಜನಿಕ ಸಪನ್ಮೂಲ ಎಂದು ಘೋಷಿಸಲಾಗಿದೆ. 
 
ಹೋರಾಟ ಅಗತ್ಯ: ‘ಬಡವರಿಗೆ ಪ್ರತಿ ವರ್ಷ 4 ಲಕ್ಷ ಮನೆಗಳನ್ನು ಕಟ್ಟಿ ಕೊಡಲಾಗುವುದು ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈವರೆಗೆ ಕೇವಲ 32 ಸಾವಿರ ಮನೆಗಳನ್ನು ಮಾತ್ರ ನಿರ್ಮಿಸಿದೆ’ ಎಂದು ಟೀಕಿಸಿದರು.
 
ವಕೀಲ ಮಹೇಂದ್ರ ಮಹಾಂಕಾಳೆ, ವಕೀಲ ಅನಿಲ ಬೆನಕೆ ಮಾತನಾಡಿದರು. ಬೆಳಗಾವಿ ಸ್ಲಂ ಸಮಿತಿ ಉಪಾಧ್ಯಕ್ಷ ಗೋಪಿ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ. ವೆಂಕಟೇಶ, ಸ್ಲಂ ಬೋರ್ಡ್‌ ಅಧಿಕಾರಿ ವಿ.ಎಚ್. ಬೆಂಕಿ, ಬೆಳಗಾವಿ ಸ್ಲಂ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕೆ, ಸ್ಲಂ ಜನಾಂದೋಲನ ಕರ್ನಾಟಕ  ವಿಭಾಗೀಯ ಸಂಚಾಲಕ ಇಮ್ತಿಯಾಜ್‌ ಮಾನ್ವಿ, ಹುಬ್ಬಳ್ಳಿ ಸ್ಲಂ ಮಹಿಳಾ ಸಂಚಾಲಕಿ ಶೋಭಾ ಕಮತರ, ಬೆಳಗಾವಿ ಮಹಿಳಾ ಸಂಚಾಲಕಿ ರೇಣುಕಾ ಪತ್ತಾರ, ರಾಜು ನೇಸರಿಕರ, ಮಧು ಮೇದಾರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಫಕೀರಪ್ಪ ತಳವಾರ ನಿರೂಪಿಸಿದರು. ಸಂದೀಪ ಪಾರಿಸವಾಡ ವಂದಿಸಿದರು.
 
* ಯುನಿಟ್‌ ಪದ್ಧತಿ ಜಾರಿಗೆ ತಂದು ಕಡಿಮೆ ಪ್ರಮಾಣದ ಅಕ್ಕಿ ನೀಡಲಾಗುತ್ತಿದೆ. ಕೂಪನ್‌ ಪದ್ಧತಿ ಜಾರಿಗೊಳಿಸಿ ಬಡವರನ್ನು ಶೋಷಣೆ ಮಾಡಲಾಗುತ್ತಿದೆ
ಎ. ನರಸಿಂಹಮೂರ್ತಿ, ಸಂಚಾಲಕ, ಸ್ಲಂ ಜನಾಂದೋಲನ ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT