ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವೊಂದಿರೆ...

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

17 ವರ್ಷಗಳ ಹಿಂದಿನ ಮಾತು. 18 ವರ್ಷ ವಯಸ್ಸಿನ ರೂಪಾ ಅವರಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗುಮ್ಮನಹಳ್ಳಿಯ ಜಗದೇವ್‌ ಅವರೊಂದಿಗೆ ಮದುವೆಯಾಯಿತು. ಮದುವೆಯಾದ ಕೆಲ ವರ್ಷಗಳಲ್ಲೇ ಜಗದೇವ್‌ ಅವರು ಮರಣಹೊಂದಿದರು.

ಎರಡು ಪುಟ್ಟ ಮಕ್ಕಳನ್ನು ಮಡಿಲಲ್ಲಿ ಇಟ್ಟುಕೊಂಡ ರೂಪಾ ಅವರಿಗೆ ಗಂಡನ ಈ ಅನಿರೀಕ್ಷಿತ ಸಾವಿನಿಂದ ದಿಕ್ಕು ತೋಚದ ಸ್ಥಿತಿ. ಆ ಚಿಕ್ಕ ಪ್ರಾಯದಲ್ಲಿಯೇ ಸಂಸಾರದ ಚುಕ್ಕಾಣಿ ಕೈಗೆತ್ತಿಕೊಂಡಾಗ ಮನಸ್ಸು ಗೊಂದಲದ ಗೂಡು. ತವರು ಮನೆಯ ತಂಪು ಜೊತೆಗಿದ್ದರೂ ಕಾಲ ಕೆಳಗಿನ ನೆಲವೇ ಕುಸಿವಂಥ ಸ್ಥಿತಿಯಾದ ರೂಪಾ ಅವರು ಮಾನಸಿಕ ಖಿನ್ನತೆಗೂ ಒಳಗಾದರು.

ಹಾಗೆಂದು ದುರದೃಷ್ಟವನ್ನು ನೆನೆಯುತ್ತಾ ಕುಳಿತರೆ ಸಂಸಾರ ಸಾಗುವುದಿಲ್ಲ ಎಂದುಕೊಂಡ ರೂಪಾ ಅವರು ಗಂಡನ ಮನೆಯಲ್ಲಿರುವ 60 ಎಕರೆ ತೋಟದ ಸಂಪೂರ್ಣ ಜವಾಬ್ದಾರಿ ಹೊತ್ತರು.

ಒಂದೆಡೆ ಮಕ್ಕಳ ಜವಾಬ್ದಾರಿ, ಇನ್ನೊಂದೆಡೆ ಕುಟುಂಬದ ನಿರ್ವಹಣೆ ಇವುಗಳ ನಡುವೆಯೇ ತೋಟವನ್ನೂ ನಿಭಾಯಿಸುವುದು ಸುಲಭ ಆಗಿರಲಿಲ್ಲ. ಹಾಗೆಂದು ಎದೆಗುಂದದ ಅವರು ಮುನ್ನುಗ್ಗಿದರು. 60 ಎಕರೆಯ ತೋಟದಲ್ಲಿ ಬೆಳೆಯುತ್ತಿದ್ದುದು ಅರೆಬಿಕ ಮತ್ತು ರೋಬಸ್ಟ್‌ ತಳಿಗಳ ಕಾಫಿ. ಜೊತೆಗೆ 15 ಎಕರೆಯಷ್ಟು ಗದ್ದೆ.

ಇವುಗಳನ್ನು ಏಕಾಂಗಿಯಾಗಿ ನಿರ್ವಹಿಸುವುದೇನು ಸಾಮಾನ್ಯ ಸಂಗತಿಯಾಗಿರಲಿಲ್ಲ. ಆದರೆ ಛಲಬಿಡದ ತ್ರಿಮಿಕ್ರಮನಂತೆ ಶ್ರಮವಹಿಸಿ ದುಡಿದರು. ಇವುಗಳ ಫಲವಾಗಿ ಇವರ ತೋಟ–ಗದ್ದೆಯಲ್ಲೀಗ ಕಿತ್ತಳೆ, ಕಾಳು ಮೆಣಸು, ಪ್ರಕಾಶ್ ತಳಿಯ ಭತ್ತ, ಅಡಿಕೆ, ಬಾಳೆ, ಶುಂಠಿ, ಆಲೂಗಡ್ಡೆ, ಜೋಳ ಎಲ್ಲವೂ ನಸುನಗು ಬೀರುತ್ತಿವೆ. ಅಗರ್‌ವುಡ್‌ ಸೇರಿದಂತೆ ಹಲವಾರು ಕಾಡು ಜಾತಿಯ ಮರಗಳನ್ನೂ ಅವರ ತೋಟದಲ್ಲಿ ಕಾಣಬಹುದು.

‘ಆರಂಭದ ದಿನಗಳನ್ನು ನೆನೆಸಿಕೊಂಡರೆ ಮೈ ಝುಂ ಎನ್ನುತ್ತದೆ. ಆದರೆ ಈಗ ಬಂದವರೆಲ್ಲಾ ನನ್ನ ತೋಟ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಹಾಡಿ ಹೊಗಳುತ್ತಾರೆ. ಇದನ್ನು ಕೇಳಿದಾಗ ನಾನು ಪಟ್ಟ ಶ್ರಮ ಸಾರ್ಥಕವಾಯಿತು ಎನಿಸುತ್ತದೆ’ ಎನ್ನುತ್ತಾರೆ ರೂಪಾ.

ಬೆಳಿಗ್ಗೆ 6 ಗಂಟೆಯಿಂದ ಶುರುವಾಗುವ ದಿನಚರಿ, ದಿನದ ಕೆಲಸದ ಡೈರಿ ಬರೆವುದರ ಜೊತೆ ಮುಗಿಯುವುದು ಸಂಜೆ 5.30ಕ್ಕೆ. ನಂತರವೂ ಒಂದಲ್ಲಾ ಒಂದು ಕಾರ್ಯದಲ್ಲಿ ತಲ್ಲೀನರಾಗಿರುತ್ತಾರೆ. ನೀರಿಗಾಗಿ ವಿಶಾಲ ಕೆರೆಯನ್ನು ತೆಗೆಸಿದ್ದಾರೆ. ಇವರ ಅದೃಷ್ಟಕ್ಕೆ ಬೋರ್ ಪಾಯಿಂಟ್‌ನಲ್ಲಿ ಏಳು ಇಂಚಿನಷ್ಟು ನೀರು ಸಿಕ್ಕಿದೆ. ಯಥೇಚ್ಛವಾಗಿ ನೀರಿರುವುದರಿಂದ ಸದಾಕಾಲವೂ ತೋಟ ನಳನಳಿಸುತ್ತಿರುತ್ತದೆ.

ಕಾರ್ಮಿಕರ ಕೊರತೆಗೆ ಪರಿಹಾರವಾಗಿ ಶೇ70ರಷ್ಟು ತೋಟಕ್ಕೆ ಅಂಡರ್‌ಗ್ರೌಂಡ್ ಪೈಪ್‌ಲೈನ್ ಹಾಕಿಸಿದ್ದಾರೆ. ಹಾಗಾಗಿ ಇವರ ನೀರು ಹಾಯಿಸುವ ಕೆಲಸ 20 ದಿನಗಳಿಂದ 8–10 ದಿನಕ್ಕೆ ತಗ್ಗಿದೆ. ಗನ್ ಸ್ಪ್ರೇಯಿಂದ ಹಿಡಿದು ಎಲ್ಲಾ ಆಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಂಡು ನಿಭಾಯಿಸುತ್ತಿದ್ದಾರೆ.

ಕೆಲವೊಮ್ಮೆ ಕಾರ್ಮಿಕರನ್ನು ಬೆಳ್ಳಂಬೆಳಿಗ್ಗೆ ಪಕ್ಕದ ಗ್ರಾಮಕ್ಕೆ ಖುದ್ದಾಗಿ ಹೋಗಿ ಕರೆದುಕೊಂಡು ಬರುತ್ತಾರೆ. ವಾಹನ ಓಡಿಸಲು ಬೇರೆಯವರನ್ನು ಅವಲಂಬಿಸಬಾರದು ಎಂದು ಖುದ್ದಾಗಿ ವಾಹನ ಓಡಿಸುವುದನ್ನು ಕಲಿತಿದ್ದಾರೆ. ‘ಕೃಷಿ ಕಾರ್ಮಿಕರಿಗೆ ಈಗ ಎಲ್ಲಿಲ್ಲದ ಡಿಮಾಂಡ್‌. ನಾನು ಹೋಗುವ ಗ್ರಾಮದಲ್ಲಿ ಹತ್ತಾರು ವಾಹನಗಳು ಬಂದು ನಿಲ್ಲುತ್ತವೆ. ಅಲ್ಲೂ ಪೈಪೋಟಿ. ನಮ್ಮ ತೋಟಕ್ಕೆ ಬನ್ನಿ, ನಮ್ಮ ಗದ್ದೆಗೆ ಬನ್ನಿ ಎಂದು ಕರೆಯುತ್ತಾರೆ.

ಇಂಥ ಪೈಪೋಟಿ ನಡುವೆ ಗೆದ್ದು ಬರುವುದು ಕೂಡ ತುಂಬಾ ಶ್ರಮದಾಯಕ ಕೆಲಸವೇ’ ಎಂದು ಅನುಭವ ಬಿಚ್ಚಿಡುತ್ತಾರೆ ರೂಪಾ. ವಾಹನಗಳಿಗೆ ಡೀಸೆಲ್‌ ತರುವುದರಿಂದ ಹಿಡಿದು ಎಂಜಿನ್ ರಿಪೇರಿಗೂ ಖುದ್ದು ಹೋಗುತ್ತಾರೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಖುದ್ದು ಸ್ಪ್ಯಾನರ್ ಹಿಡಿದು ರೆಡಿ!

35 ಕಾರ್ಮಿಕರನ್ನು ನಿಭಾಯಿಸುವುದಲ್ಲದೇ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ. ದಶಕಗಳಿಂದ ಕೆಲ ಕಾರ್ಮಿಕರನ್ನು ಮನೆಯವರಂತೆ ಹೊಂದಿಕೊಂಡಿದ್ದಾರೆ. 

‘ಕಾಳುಮೆಣಸಿಗೆ ಅನುಕ್ರಮವಾಗಿ ಎರಡು ಸಲ ಗೊಬ್ಬರ ನೀರು ಕೊಡುತ್ತೇನೆ. ಈ ಬಾರಿ 25ಲಕ್ಷ ರೂಪಾಯಿ ಬಂದಿದೆ. ಹೆಚ್ಚಾಗಿ ಕಾಂಪೋಸ್ಟ್‌ ಗೊಬ್ಬರ ಹಾಕುತ್ತಿದ್ದೇನೆ. ಕುರಿ ಗೊಬ್ಬರವನ್ನು ತರಿಸಿ ಕಾಂಪೋಸ್ಟ್ ಮಾಡಿ ಹಾಕುತ್ತೇನೆ’ ಎನ್ನುತ್ತಾರೆ ಅವರು.

17 ವರ್ಷಗಳಿಂದ 15 ಎಕರೆ ದೀಣೆಯನ್ನು ತೋಟವಾಗಿಸಿ, ಫಸಲು ಕೊಯ್ಯುತ್ತಿದ್ದಾರೆ. ಮೂರು ಎಕರೆಯಲ್ಲಿ ಭತ್ತ ಬೆಳೆದು ಉಳಿದ 12 ಎಕರೆಯನ್ನು ಅಡಿಕೆ ತೋಟವಾಗಿಸುವುದು ಇವರ ಮುಂದಿನ ಹೆಜ್ಜೆ. ಕಾಫಿ ಸರಾಸರಿ 600 ಚೀಲದಷ್ಟು ಪಾರ್ಚ್‌ಮೆಂಟ್  ಸಿಗುತ್ತಿದೆ.

ಸಮಾಜಮುಖಿಯಾಗಿ ಒಂದಿಷ್ಟು...
ಸಕಲೇಶಪುರದಲ್ಲಿರುವ, ‘ವುಮನ್ಸ್ ಕಾಫಿ ಪ್ರೊಮೋಷನ್ ಕೌನ್ಸಿಲ್’ನಲ್ಲಿ ಸುಮಾರು 10 ವರ್ಷಗಳಿಂದ ಕಾರ್ಯಕಾರಿ ಮಂಡಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕದ ಹತ್ತಾರು ಕಡೆ ಕಾಫಿ ಪ್ರೊಮೋಷನ್‌ಗಾಗಿ ಸ್ಟಾಲ್‌ಗಳನ್ನು ಹಾಕಿರುವುದಲ್ಲದೇ ಕಾಫಿಯಿಂದ ಮಾಡಬಹುದಾದ ತಿನಿಸುಗಳು, ಒಳ್ಳೆ ಕಾಫಿ ತಯಾರಿಸುವುದನ್ನು ಹಲವೆಡೆ ಪ್ರಾತ್ಯಕ್ಷಿಕೆಯ ಮುಖಾಂತರ ಕಲಿಸಿಕೊಡುತ್ತಿದ್ದಾರೆ.

ಕಾಫಿ ಮಂಡಳಿಯ ಕಪ್ ಟೇಸ್ಟರ್ ಪರಿಣಿತೆ ಸುನಾಲಿನಿ ಮೆನನ್‌ರೊಂದಿಗೆ ತರಬೇತಿ ಪಡೆದಿದ್ದಾರೆ. ಸಮಾನ ಮನಸ್ಕ ಮಹಿಳೆಯರೊಂದಿಗೆ ಸಕಲೇಶಪುರದಲ್ಲಿ ‘7ಟು7’ ಎಂಬ ಹೆಸರಲ್ಲಿ ಕಾಫಿ ಮೌಲ್ಯವರ್ಧನೆ ಮಾಡಿ ಪುಡಿಯನ್ನು ಹಾಸನದ ನೀಲಗಿರೀಸ್ ಮತ್ತು ಸ್ಥಳೀಯ ಮಾರುಕಟ್ಟೆಗೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT