ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಸಮೃದ್ಧಿಗೆ ಹಣ್ಣು ತರಕಾರಿ ತ್ಯಾಜ್ಯ

ಅಕ್ಷರ ಗಾತ್ರ

ಉತ್ತರ ಕನ್ನಡದ ಶಿರಸಿಯ ಗಣಪತಿ ದೀಕ್ಷಿತ ಅವರು ದಿನವೂ ತರಕಾರಿ ಮಾರುಕಟ್ಟೆಗೆ ಹೋಗಿ ಅಲ್ಲಿ ವ್ಯರ್ಥವಾಗುವ ಕ್ಯಾಬೇಜು, ಕಾಲಿ ಫ್ಲವರ್, ಮತ್ತಿತರ ತರಕಾರಿ ಸಿಪ್ಪೆಯನ್ನು ಚೀಲದಲ್ಲಿ ತುಂಬಿ ತರುತ್ತಾರೆ. ಈ ಸಿಪ್ಪೆಯೇ ಅವರ ಮಿಶ್ರತಳಿ ಹಸುಗಳಿಗೆ ಅಂದಿನ ಆಹಾರ. ಇದರಿಂದ ಅವರ ಪಶು ಆಹಾರದ ಹಣದಲ್ಲಿ ಅರ್ಧಕ್ಕೆ ಅರ್ಧ ಉಳಿತಾಯವಾಗಿದ್ದು, ರಾಸುಗಳು ಕೂಡ ಸಮೃದ್ಧವಾಗಿ ಬೆಳೆಯುತ್ತಿವೆ.

ಹೀಗೆ ಸುಮಾರು15 ವರ್ಷಗಳಿಂದ ಗಣಪತಿ ಅವರು ಇದೇ ರೀತಿ ಹಸುಗಳಿಗೆ ಆಹಾರ ನೀಡುತ್ತಿದ್ದಾರೆ. ‘ದಿನಕ್ಕೆ 3–4 ಕೆ.ಜಿಯಷ್ಟು ಆಹಾರ ಸಿಗುತ್ತದೆ. ಅವತ್ತು ತಂದ ತರಕಾರಿ–ಸೊಪ್ಪು ಅವತ್ತೇ ನೀಡುತ್ತೇನೆ. ಹಸಿರು ಮೇವಿಗಿಂತಲೂ ಹೆಚ್ಚು ಪ್ರೀತಿಯಿಂದ ಈ ತರಕಾರಿಗಳನ್ನು ಹಸುಗಳು ತಿನ್ನುತ್ತವೆ. ಇದರಿಂದ ಅವುಗಳ ಆರೋಗ್ಯವೂ ಉತ್ತಮವಾಗಿದೆ’ ಎನ್ನುವುದು ಅವರ ಮಾತು.

ಹೈನುಗಾರಿಕೆಯಲ್ಲಿ ರೈತ ಯಶಸ್ಸು ಕಾಣಬೇಕೆಂದರೆ ಅವುಗಳಿಗೆ ಉತ್ತಮ ಆಹಾರ ಅಗತ್ಯ. ಜಾನುವಾರುಗಳಿಗೆ ನೀಡುವ ಮೇವು ಕೇವಲ ಹೊಟ್ಟೆ ತುಂಬಿಸಲಷ್ಟೇ ಅಲ್ಲ, ಎಲ್ಲ ಪೌಷ್ಟಿಕ ಅಂಶಗಳನ್ನು ಹೊಂದಿದ್ದು ಸಮತೋಲಿತವಾಗಿರಬೇಕು. ಇಂತಹ ಆಹಾರ ಹೆಚ್ಚು ವೆಚ್ಚದಾಯಕ ಮತ್ತು ದುರ್ಲಭವೂ ಹೌದು.

ಒಂದು ಲೆಕ್ಕಾಚಾರದ ಪ್ರಕಾರ ನಮ್ಮ ದೇಶದಲ್ಲಿ ಶೇ32ರಷ್ಟು ಸಾಂದ್ರೀಕೃತ ಪಶುಆಹಾರ, ಶೇ20ರಷ್ಟು ಹಸಿರುಮೇವು ಮತ್ತು ಶೇ25ರಷ್ಟು ಒಣಮೇವಿನ ಕೊರತೆ ಇದೆ. ಈ ಕೊರತೆಯನ್ನು ಸರಿದೂಗಿಸಲು ರೈತರು ಸಾಂಪ್ರದಾಯಿಕವಲ್ಲದ ಪಶು ಆಹಾರದ ಕಡೆ ಗಮನ ಹರಿಸಿದರೆ ಹೆಚ್ಚು ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಹಣ್ಣುಗಳ ಮತ್ತು ತರಕಾರಿ ತ್ಯಾಜ್ಯಗಳು ಬಹುಮುಖ್ಯ ಪಶುಆಹಾರವಾಗಬಲ್ಲವು.

ಇದಕ್ಕೆ ಗಣಪತಿ ಅವರ ಈ ಮಾದರಿಯೇ ಸಾಕ್ಷಿ. ಇತ್ತೀಚೆಗೆ ನಮ್ಮ ದೇಶದಲ್ಲಿ ರೈತರು ಸಾಂಪ್ರದಾಯಿಕ ಧಾನ್ಯಗಳ ಬದಲಿಗೆ ಹೆಚ್ಚು ಆದಾಯ ತರಬಲ್ಲ ಹಣ್ಣು ಮತ್ತು ತರಕಾರಿ ಬೇಸಾಯದತ್ತ ಆಕರ್ಷಿತರಾಗುತ್ತಿದ್ದಾರೆ. ಸೇಬು, ಬಾಳೆ, ಕಿತ್ತಳೆ ಮೂಸಂಬಿಯಂತಹ ಸಿಟ್ರಸ್ ಹಣ್ಣುಗಳು, ಪೇರಲ, ಮಾವು, ಪೈನಾಪಲ್, ಎಲೆ ಕೋಸು, ಹೂಕೋಸು, ಕ್ಯಾರೆಟ್, ಟೊಮೆಟೊ, ಆಲೂಗಡ್ಡೆಯಂತಹ ತರಕಾರಿ ಮತ್ತು ಹಣ್ಣುಗಳ ಉತ್ಪಾದನೆಯಲ್ಲಿ ನಮ್ಮ ದೇಶವು ಪ್ರಪಂಚದಲ್ಲಿಯೇ ಮೊದಲ ಐದು ಸ್ಥಾನಗಳಲ್ಲಿದೆ.

ಪರಿಣಾಮವಾಗಿ ನಮ್ಮಲ್ಲಿ ವಾರ್ಷಿಕವಾಗಿ 20ಲಕ್ಷ ಟನ್ನುಗಳಿಗಿಂತಲೂ ಹೆಚ್ಚು ಹಣ್ಣು ಮತ್ತು ತರಕಾರಿಗಳ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ತ್ಯಾಜ್ಯದ ಅಲ್ಪ ಭಾಗವನ್ನು ಕಾಂಪೋಸ್ಟ್ ಗೊಬ್ಬರ ಮತ್ತು ಬಯೋಗ್ಯಾಸ್ ಉತ್ಪಾದನೆಗೆ ಅಲ್ಲಲ್ಲಿ ಬಳಸಲಾಗುತ್ತಿದ್ದರೂ ಬಹುಪಾಲು ಭಾಗವನ್ನು ಸುಮ್ಮನೇ ಎಸೆಯಲಾಗುತ್ತದೆ.

ಹಳ್ಳಕೊಳ್ಳಗಳಂತಹ ತಗ್ಗಾದ ಜಾಗದಲ್ಲಿ ಸುರಿಯಲಾಗುತ್ತದೆ. ಇದು ಕೊಳೆತು ವಾತಾವರಣದ ನೈರ್ಮಲ್ಯಕ್ಕೂ ಕುಂದು ತರುತ್ತದೆ. ಇಂತಹ ತರಕಾರಿ ಮತ್ತು ಹಣ್ಣುಗಳ ತ್ಯಾಜ್ಯವನ್ನು ಪಶುಗಳಿಗೆ ತಿನ್ನಿಸುವುದರ ಮೂಲಕ ಸದುಪಯೋಗಪಡಿಸಿಕೊಳ್ಳಬಹುದು. ಇದರಿಂದ ಜಾನುವಾರುಗಳಿಗೆ ಉತ್ತಮ ಮೇವು ದೊರೆಯುವುದರ ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆದಂತಾಯಿತು ಮತ್ತು ಕೊಳೆತು ನಾರುವಂತಹ ತ್ಯಾಜ್ಯವು ಉತ್ಕೃಷ್ಟ ಸೆಗಣಿಯಾಗಿ ಮಾರ್ಪಟ್ಟು ಜೈವಿಕ ಗೊಬ್ಬರವೂ ತಯಾರಾದಂತಾಗುತ್ತದೆ.

ಎಚ್ಚರಿಕೆ: ಈ ರೀತಿಯಾಗಿ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳನ್ನು ನಿಮ್ಮ ಜಾನುವಾರುಗಳಿಗೆ ತಿನ್ನಿಸಲು ಆರಂಭಿಸುವ ಮುನ್ನ ಕೆಲವು ಅಂಶಗಳನ್ನು ಗಮನಿಸಬೇಕು. ಅವುಗಳೆಂದರೆ ತರಕಾರಿ–ಸೊಪ್ಪು ತ್ಯಾಜ್ಯ ತಾಜಾ ಇರಬೇಕು. ಕೊಳೆತದ್ದು, ರೋಗಪೀಡಿತವಾದ್ದು ಅಥವಾ ಹುಳ ಹಿಡಿದದ್ದು ಇರಕೂಡದು. ಇಂಥ ತ್ಯಾಜ್ಯ ನೀಡಲು ಶುರು ಮಾಡಿದಾಗ ಆರಂಭದಲ್ಲಿ ಕೊಂಚಕೊಂಚವಾಗಿ ತಿನ್ನಿಸಿ ರೂಢಿಮಾಡಬೇಕೇ ವಿನಾ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಕೊಡಬಾರದು.   

ನಮ್ಮಲ್ಲಿ ಸುಲಭವಾಗಿ ದೊರೆಯುವ ತ್ಯಾಜ್ಯಗಳೆಂದರೆ ಟೊಮೆಟೊ, ಸೋರೆಕಾಯಿ, ಕ್ಯಾರೆಟ್, ಕಾಲಿಫ್ಲವರ್‌, ಕ್ಯಾಬೇಜು, ಬಾಳೆಹಣ್ಣು,  ಬೇಬಿ ಕಾರ್ನ್ ದಿಂಡು, ಪೈನಾಪಲ್‌ನಂತಹ ಯಾವುದೇ ಹಣ್ಣು ಮತ್ತು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಎಲೆಗಳು ಮತ್ತು ಬಾಳೆಕಾಯಿ ಸಿಪ್ಪೆಯಂಥವುಗಳು. ಇವುಗಳನ್ನು ತಾಜಾ ಆಗಿ ದನಗಳಿಗೆ ಹಾಕುವುದು ಸಾಮಾನ್ಯವಾಗಿ ಅನುಸರಿಸಬಹುದಾದ ಸುಲಭ ಪದ್ಧತಿ.

ಶಿರಸಿ ಸಮೀಪದ ಶ್ರೀಧರ ಹೆಗಡೆ ಗೃಹೋದ್ಯಮವಾಗಿ ಬಾಳೆಕಾಯಿಯ ಚಿಪ್ಸ್ ತಯಾರಿಕಾ ಘಟಕ ಹೊಂದಿದ್ದಾರೆ. ಇದರಿಂದ ಅಪಾರ ಪ್ರಮಾಣದಲ್ಲಿ ದೊರೆಯುವ ಬಾಳೆಕಾಯಿಯ ಬೆಂದ ಸಿಪ್ಪೆಯನ್ನು ತಮ್ಮ ಮೂರು ರಾಸುಗಳಿಗೂ ಹಾಕುತ್ತಾರೆ. ದಿನದ ಪಡಿತರ ಹತ್ತು ಕಿಲೋ ಮೀರುತ್ತದೆ.

‘ನನ್ನ ಎಲ್ಲ ಹಸುಗಳು ಆರೋಗ್ಯದಿಂದಿವೆ. ಚೆನ್ನಾಗಿ ಹಾಲನ್ನೂ ನೀಡುತ್ತಿವೆ’ ಎನ್ನುತ್ತಾರೆ ಅವರು. ಅನುಕೂಲವಿದ್ದವರು ಈ ತ್ಯಾಜ್ಯಗಳನ್ನು ಒಣಗಿಸಿ ಅಥವಾ ರಸಮೇವನ್ನಾಗಿ (ಸೈಲೇಜ್) ಪರಿವರ್ತಿಸಿ ಕೂಡ ಸಂಗ್ರಹಿಸಿಕೊಂಡು ಕೊಡಬಹುದು. ಇದಕ್ಕಾಗಿ ಶೇ70ರಷ್ಟು ತ್ಯಾಜ್ಯ ಮತ್ತು ಉಳಿದ ಭಾಗ ಜೋಳ, ರಾಗಿ, ಗೋಧಿ ಅಥವಾ ಭತ್ತದ ದಂಟನ್ನು ಬಳಸಬಹುದು.
-ಲೇಖಕರು ಪ್ರಾದೇಶಿಕ ಸಂಶೋಧನಾಧಿಕಾರಿ,
ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT