ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ಸಿಲ್ವೇನಿಯಾದಲ್ಲೊಂದು ಪುಟ್ಟ ತರಕಾರಿ ತೋಟ

Last Updated 12 ಮಾರ್ಚ್ 2017, 5:09 IST
ಅಕ್ಷರ ಗಾತ್ರ

*ನಿಮ್ಮ ಕೃಷಿಯ ಹಿನ್ನೆಲೆ...?
ಕಳೆದ ವರ್ಷ ಸ್ವಲ್ಪ ಭೂಮಿಯನ್ನು ಬಾಡಿಗೆ ತೆಗೆದುಕೊಂಡು ಕೃಷಿ ಶುರು ಮಾಡಿದ್ದೇನೆ. ಈ ವರ್ಷ ಒಟ್ಟು ಮೂರು ಕಡೆ ಚಿಕ್ಕ ಖಾಲಿ ಜಾಗಗಳನ್ನು ಬಾಡಿಗೆ ಪಡೆದಿದ್ದೇನೆ. ಎಲ್ಲಾ ಸೇರಿ ಸುಮಾರು ಎರಡು ಎಕರೆ ಆಗಬಹುದೇನೋ.

* ನಿಮ್ಮ ಆಸಕ್ತಿಯ ಬೆಳೆಗಳಾವುವು?
ತರಕಾರಿ ಹಾಗೂ ಗಿಡಮೂಲಿಕೆಗಳಿಗೆ ಪ್ರಾಮುಖ್ಯ ಕೊಡುತ್ತಿದ್ದೇನೆ. ಸಾವಯವ ಕೃಷಿ ಪದ್ಧತಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಇಂಥದ್ದೇ ತರಕಾರಿ ಬೆಳೆಯಬೇಕೆಂದು ಪೂರ್ತಿಯಾಗಿ ನಿರ್ಧರಿಸಿಲ್ಲ. ಪ್ರತೀ ಬಾರಿಯೂ ಹೊಸ ಹೊಸ ತರಕಾರಿಗಳನ್ನು ಬೆಳೆಸಿ ಈ ಮಣ್ಣಿಗೆ ಯಾವ ಬೆಳೆ ಅತ್ಯುತ್ತಮವೆಂದು ನಿರ್ಧರಿಸುತ್ತಿದ್ದೇನೆ. ಸದ್ಯ, ಟೊಮೆಟೊ, ಲೆಟ್ಯೂಸ್, ಪಾಲಾಕ್ ಸೊಪ್ಪು, ಬದನೆಕಾಯಿ, ಬೀಟ್‌ರೂಟ್, ಬೀನ್ಸ್,  ವಿಧ ವಿಧ ಬೆಸಿಲ್, ಬೆಂಡೆಕಾಯಿ, ಮುಂತಾದುವನ್ನು ಬೆಳೆಯುತ್ತಿದ್ದೇನೆ.

* ಸಾವಯವ ಪದ್ಧತಿಯತ್ತ ವಾಲಲು ಕಾರಣ?
ನನ್ನ ಆಹಾರ ಖುದ್ದಾಗಿ ಬೆಳೆಯಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ತುಂಬಾ ಚಿಕ್ಕವನಿದ್ದಾಗಲೇ ತಂದೆ ತಾಯಿ ಕ್ಯಾನ್ಸರ್ ಪೀಡಿತರಾದರು. ಆ ನೋವಿನ ದಿನಗಳು ಮರೆಯಲಾಗದ್ದು. ನನ್ನ ನೆರೆಹೊರೆಯ ಅನೇಕ ಮಂದಿ ಇಂಥದ್ದೇ ಮಾರಣಾಂತಿಕ ರೋಗಗಳಿಗೆ ಪೀಡಿತರಾದರು. ಈ ರೀತಿ ಏಕೆ ಆಗುತ್ತಿದೆ ಎಂದು ನನ್ನಲ್ಲಿ ಪ್ರಶ್ನೆ ಉದ್ಭವಿಸಿತು. ಆ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದೆ, ಈಗಲೂ ಮಾಡುತ್ತಿದ್ದೇನೆ. ನಾವು ತಿನ್ನುವ ಆಹಾರ ನಿಧಾನವಾಗಿ ನಮ್ಮ ದೇಹಸ್ಥಿತಿಯನ್ನು ನಿರ್ಧರಿಸುತ್ತದೆ ಎಂಬ ಸತ್ಯವನ್ನು ಅಧ್ಯಯನದಿಂದ ಕಂಡುಕೊಂಡೆ.

ಆ ಅಧ್ಯಯನಕ್ಕೂ, ನಾನು ಹುಟ್ಟಿದಾಗಿನಿಂದ ತಿನ್ನುತ್ತಾ ಬಂದ ಆಹಾರ ಪದಾರ್ಥಗಳಿಗೂ ತಾಳೆ ಹಾಕಿದಾಗ ಇಲ್ಲಿಯವರೆಗೆ ನಾನು ತಿಂದ ಆಹಾರ ನನ್ನನ್ನು ರೋಗದ ಕೂಪಕ್ಕೆ ತಳ್ಳುವುದು ಖಚಿತವಾಗಿತ್ತು. ಇದರಿಂದ ಯಾವ ರೀತಿಯಲ್ಲಿ ಬೆಳೆ ಬೆಳೆಯಬೇಕೆಂದು ಯೋಚಿಸುವುದು ಅನಿವಾರ್ಯವಾಯಿತು. ಅದಕ್ಕಾಗಿ ಸಾವಯವದ ಮೊರೆ ಹೋದೆ. ನಮ್ಮ ಆಹಾರದ ಬಗ್ಗೆ ಚಿಂತಿಸುವುದು ಇಡೀ ಮನುಕುಲಕ್ಕೆ ಅನಿವಾರ್ಯವಾಗಿದೆ.

* ಗ್ರಾಫಿಕ್ಸ್ ಡಿಸೈನರ್‌ ಆದ ನೀವು ಕೃಷಿಗೆ ಹೇಗೆ ಸಮಯ ವಿನಿಯೋಗ ಮಾಡುತ್ತಿದ್ದೀರಿ?
ನನ್ನದು ಹವ್ಯಾಸಿ ಕೃಷಿ. ದಿನದ ನಾಲ್ಕು ತಾಸು ತೋಟಕ್ಕೆ ಮೀಸಲು. ವಾರಾಂತ್ಯಗಳನ್ನು ಸಾಮಾನ್ಯವಾಗಿ ತೋಟದಲ್ಲಿಯೇ ಕಳೆಯುತ್ತೇನೆ.  ಮುಂದೊಮ್ಮೆ ಸಾವಯವ ಪದ್ಧತಿಯ ದೊಡ್ಡ ತೋಟ ಮಾಡುವಾಸೆಯಿದ್ದು, ತಯಾರಿ ನಡೆಸಿದ್ದೇನೆ. ಈಗ ಸಣ್ಣ ಪ್ರಮಾಣದಲ್ಲಿ ಜೇನು ಸಾಕಣೆ ಮಾಡುತ್ತಿದ್ದೇನೆ. ಮೂರು ಹೋಟೆಲ್‌ಗಳಿಗೆ ದಿನ ನಿತ್ಯ ತರಕಾರಿ ಹಾಗೂ ಸೊಪ್ಪುಗಳನ್ನು ಒದಗಿಸುತ್ತೇನೆ.

*ಭೂಮಿ ಫಲವತ್ತೆಗೆ ಅನುಸರಿಸುತ್ತಿರುವ ಮಾರ್ಗ?
ಪೊದೆ, ಗಿಡಗಂಟಿಗಳನ್ನು ಪೂರ್ತಿ ಸ್ವಚ್ಛವಾಗಿರಿಸದೇ ಹಾಗೆಯೇ ಬಿಟ್ಟಿದ್ದೇನೆ. ನಾನು ಹೋದ ವರ್ಷ ಈ ಭೂಮಿಯನ್ನು ಬಾಡಿಗೆ ಪಡೆದಾಗ ದಟ್ಟವಾಗಿ ಹಬ್ಬಿದ್ದ ಪೊದೆಗಳಿಂದಾಗಿ ಮಣ್ಣಿಗೆ ಸೂರ್ಯನ ಕಿರಣವಾಗಲೀ, ಆಮ್ಲಜನಕವಾಗಲೀ ದೊರಕದೇ ಇಲ್ಲಿ ಏನನ್ನೂ ಬೆಳೆಯಲಾಗುತ್ತಿರಲಿಲ್ಲ. ಆಗ ಅಲ್ಲಲ್ಲಿ ಗಿಡಗಂಟಿಗಳನ್ನು ಸವರಿ, ಸ್ವಲ್ಪ ಸಮತಟ್ಟು ಮಾಡಿ, ಗೊಬ್ಬರ ಉತ್ಪಾದಿಸಲು ಪ್ರಾರಂಭಿಸಿದೆ.

ನೆಲದಿಂದ ಎರಡು ಅಡಿ ಎತ್ತರಕ್ಕೆ ಆಯತಾಕಾರದಲ್ಲಿ ಮರದ ಹಲಗೆಗಳನ್ನು ಹೂತಿದ್ದೇನೆ. ಹೋಟೆಲ್‌ಗಳಿಂದ, ಕಾಫಿ ಡೇಗಳಿಂದ ಮತ್ತು ಬ್ರಿವರಿಗಳಿಂದ ಸಿಗುವ ತ್ಯಾಜ್ಯಗಳನ್ನು ಇದರಲ್ಲಿ ಶೇಖರಿಸುತ್ತೇನೆ. ಅದು ಸಾರಜನಕಯುಕ್ತ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಅದನ್ನೇ ಬೆಳೆಗಳಿಗೆ ಉಪಯೋಗಿಸುತ್ತೇನೆ .

(ಒಂದು ಹೂವಿನ ಕಾಡು ಗಿಡವನ್ನು ತೋರಿಸಿ) ಇದು ಇತ್ತೀಚೆಗಷ್ಟೇ ಬೆಳೆಯತೊಡಗಿದೆ. ಇದರಲ್ಲಿ ಬಿಡುವ ಹೂವುಗಳಿಗೆ ಆಕರ್ಷಿತವಾಗಿ ಬರುವ ಕೆಲವು ಕ್ರಿಮಿಕೀಟಗಳು ನನ್ನ ಗಿಡಗಳಿಗೆ ಹಾನಿ ಮಾಡುವ ಹುಳುಗಳನ್ನು ತಿಂದು ನೈಸರ್ಗಿಕ ಕೀಟನಾಶಕದಂತೆ ಕೆಲಸ ಮಾಡುತ್ತಿವೆ. ಇನ್ನು ಕೆಲವು ಗಿಡಗಳು ಸಾರಜನಕಯುಕ್ತವಾಗಿದ್ದು ಮಣ್ಣಿನ ಫಲವತ್ತತೆಯನ್ನು ತನ್ನಿಂತಾನೇ ಹೆಚ್ಚಿಸಿ ಬೆಳೆಗಳಿಗೆ ಸಹಾಯಕವಾಗಿವೆ. ಇವೆಲ್ಲಾ ಪ್ರಯೋಗಗಳಿಂದ ಮಣ್ಣಿನ ಗುಣಮಟ್ಟ ನಿಧಾನವಾಗಿ ಸುಧಾರಿಸಿದೆ.

*ಕೀಟಗಳ ನಿಯಂತ್ರಣ ಹೇಗೆ?
ಸಾವಯವ ‘ಫಿಶ್ ಮೋಶನ್ ಫರ್ಟಿಲೈಸರ್‌’ ಬಳಸುತ್ತೇನೆ. ಅಮೆರಿಕದ ಬುಡಕಟ್ಟು ಜನಾಂಗದವರು ಮೂರು ಸಿಸ್ಟೆರ್ ಗಾರ್ಡನ್ ಎಂಬ ಕೃಷಿ ಪದ್ಧತಿಯನ್ನು ಬಳಸುತ್ತಿದ್ದರು. ಜೋಳ, ಬೀನ್ಸ್ ಮತ್ತು ಸ್ಕ್ವಾಷ್ ಬೆಳೆಗಳನ್ನು ಒಟ್ಟಿಗೇ ಬೆಳೆಯುವ ಪದ್ಧತಿಯಿದು. ಈ ಬೆಳೆಗಳ ಸಂಯೋಜನೆ ಒಂದಕ್ಕೊಂದು ಪೂರಕವಾಗಿದೆಯಲ್ಲದೆ ಮಣ್ಣಿನ ಪೋಷಣೆಗೆ ಸಹಕಾರಿ.

ಜೋಳ ಕಾರ್ಬೋಹೈಡ್ರೇಟ್‌ಯುಕ್ತವಾಗಿದ್ದರೆ, ಬೀನ್ಸ್ ಪ್ರೊಟೀನ್‌ಯುಕ್ತವಾಗಿದ್ದು ಜೋಳದಲ್ಲಿ ಸಾಮಾನ್ಯವಾಗಿ ಅಮೈನೊ ಆ್ಯಸಿಡ್‌ ಕೊರತೆ ನೀಗಿಸುತ್ತದೆ. ಜೋಳದ ಕಾಂಡಗಳು ಬೀನ್ಸ್ ಬಳ್ಳಿಗಳು ಹರಡಲು ಪೂರಕವಾಗಿವೆ ಮತ್ತು ಬೀನ್ಸ್‌ನ ಬೇರುಗಳಿಂದ ಸಾರಜನಕವನ್ನು ತಾನೇ ತಾನಾಗಿ ಪಡೆಯುತ್ತವೆ. ಸ್ಕ್ವಾಷ್ ಬಳ್ಳಿಗಳು ಹಲವು ಕಳೆ ಗಿಡಗಳು ಬೆಳೆಯುವುದನ್ನು ನಿಯಂತ್ರಿಸುವುದಲ್ಲದೆ ಮಣ್ಣಿನಲ್ಲಿರುವ ತೇವಾಂಶ ಬೇಗ ಆವಿಯಾಗುವುದನ್ನು ನಿಯಂತ್ರಿಸಿ ಬೆಳೆಗಳಿಗೆ ಪೂರಕವಾಗಿವೆ.

ಮೂರು ಸಿಸ್ಟರ್ ಗಾರ್ಡನ್‌ಗೆ ಬುಡಕಟ್ಟು ಜನರು ನೈಸರ್ಗಿಕ ಗೊಬ್ಬರವಾಗಿ ಮೀನನ್ನು ಬಳಸುತ್ತಿದ್ದರು. ಸತ್ತಾಗ ದುರ್ಗಂಧ ಬೀರುವ ಮೀನುಗಳನ್ನು ಬೆಳೆಗಳ ಮಧ್ಯೆ ಮಣ್ಣಿನಲ್ಲಿ ಹೂತರೆ ಹಾನಿಕಾರಕ ಕೀಟಗಳು ಬೆಳೆಗಳ ಹತ್ತಿರ ಸುಳಿಯುವುದಿಲ್ಲ. ಹಾಗೆಯೇ ಆ ದುರ್ವಾಸನೆಯನ್ನು ತಡೆದುಕೊಳ್ಳಲು ನಾವೂ ತಯಾರಿರಬೇಕಷ್ಟೆ. ಮೀನನ್ನು ಹೂಳುವ ಈ ಪದ್ಧತಿಯ ಸುಧಾರಿತ ಆವೃತ್ತಿ ಫಿಶ್ ಮೋಷನ್ ಫರ್ಟಿಲೈಸರ್.

*ಸಾವಯವ ಕೃಷಿಗಾಗಿಯೇ ಸಾಲ ನೀಡುವ ಸಂಸ್ಥೆಗಳಿವೆಯೇ?
‘ಕಿವ’ ಎಂಬ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ, ಸಣ್ಣ ಕೈಗಾರಿಕೆ, ವಿದ್ಯಾಭ್ಯಾಸ ಮುಂತಾದವುಗಳಿಗೆ ಸಾಲ ನೀಡುತ್ತಿದೆ. ಇದು ಸಮುದಾಯದತ್ತ ಸೇವೆಯಿದ್ದಂತೆ. ಸಾಲ ನೀಡಬಯಸುವವರು ಕನಿಷ್ಠ 25 ಡಾಲರಿನಿಂದ  (ಸುಮಾರು 1,700 ರೂಪಾಯಿ) ಹಿಡಿದು ತಮ್ಮ ಕೈಲಾದಷ್ಟು ಹಣವನ್ನು ಈ ಸಂಸ್ಥೆಯ ಮೂಲಕ ನೀಡಬಹುದು. ಸಾಲಗಾರ ಅದನ್ನು ಮರುಪಾವತಿಸಿದ ನಂತರ ಹಣವನ್ನು ಹಿಂಪಡೆಯಬಹುದು ಅಥವಾ ಅದೇ ಹಣವನ್ನು ಮತ್ತೆ ಸಾಲ ನೀಡಲು ಹೂಡಿಕೆ ಮಾಡಬಹುದು. ಸಾಲ ಬೇಕಾದವರು ಯಾವುದಾದರೂ ಸಂಸ್ಥೆಯ ಮೂಲಕವೋ ಅಥವಾ ನೇರವಾಗಿ ಕಿವ ಅಂತರ್ಜಾಲ ಕೊಂಡಿಯ ಮೂಲಕ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿ ಅರ್ಜಿ ಸಲ್ಲಿಸಬಹುದು.

*ಅಮೆರಿಕದ ಕೃಷಿಕ್ಷೇತ್ರ ಪೂರ್ತಿಯಾಗಿ ವ್ಯಾಪಾರೀಕರಣವಾಗಿರುವ ಬಗ್ಗೆ ಅಭಿಪ್ರಾಯವೇನು? ‘ಸೀಡ್ ಫ್ರೀಡಂ’ ಬಗ್ಗೆ ನಿಮ್ಮ ಅನಿಸಿಕೆ?
ನಾನು ಇತ್ತೀಚೆಗಷ್ಟೆ ಅಯೊವ ಪ್ರಾಂತ್ಯಕ್ಕೆ ಹೋಗಿದ್ದೆ. ಜೋಳಗಳನ್ನು ಉತ್ಪಾದಿಸುವಲ್ಲಿ ಅಯೊವ ರಾಜ್ಯದ ಕೊಡುಗೆ ಅಪಾರ. ನಾವು ದಿನನಿತ್ಯ ತಿನ್ನುವ ಕಾರ್ನ್ ಬ್ರೆಡ್, ಕಾರ್ನ್ ಫ್ಲೋರ್ ಇಂಥ ಜೋಳದಿಂದ ತಯಾರಿಸಲಾಗುತ್ತದೆ. ಎಥನಲ್ ಕಂಪೆನಿ ಕೃಷಿ ಉಪಕರಣಗಳನ್ನು ಬಾಡಿಗೆ ಕೊಟ್ಟು, ಬೀಜಗಳನ್ನು, ಕೀಟನಾಶಕಗಳನ್ನು ಮಾರಾಟ ಮಾಡಿ, ಬೆಳೆದ ಜೋಳಗಳನ್ನು ಖರೀದಿಸುವ ಒಪ್ಪಂದಕ್ಕೆ ರುಜುಮಾಡಿದೆ.

ಮೇಲ್ನೋಟಕ್ಕೆ ಇದು ರೈತರಿಗೆ, ಆಹಾರೋದ್ಯಮಕ್ಕೆ ಸಹಕಾರಿಯಾಗಿ ಕಂಡುಬಂದರೂ ಎಥನಾಲ್‌ನ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರ, ಕೀಟ ನಾಶಕ, ತಳೀಯವಾಗಿ ಪರಿವರ್ತಿಸಿದ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ಅವಲಂಬಿಯಾಗಿಸಿ ರೈತರ ಸ್ವಾತಂತ್ರವನ್ನು ಮೊಟಕುಗೊಳಿಸಿವೆಯಷ್ಟೆ.

ಜೈವಿಕವಾಗಿ, ನೈಸರ್ಗಿಕವಾಗಿ ಸೀಡ್ ಫ್ರೀಡಂ ಬಹಳ ಮುಖ್ಯವಾಗುತ್ತದೆ. ಬಂಡವಾಳಶಾಹಿ ನೀತಿಯನ್ನು ಎತ್ತಿ ಹಿಡಿಯುವುದಕ್ಕಾಗಿ, ಹಣ ಹೂಡಿಕೆಗಳಿಗಾಗಿ ತಳೀಯವಾಗಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಬಳಸಬೇಕೆಂಬ ನಿಯಮ ಹೇರುತ್ತಿದ್ದರೂ, ಎಥನಲ್‌ನಂಥ ಕಂಪೆನಿಗಳು ದುಬಾರಿ ಯಂತ್ರಗಳನ್ನು ಬಾಡಿಗೆಗೆ ಕೊಟ್ಟು, ರೈತರು ಮುಗಿಬಿದ್ದು ನಾನಾ ಆಸೆಗೆ ಬಲಿಯಾದರೂ, ಆಹಾರ ಸರಪಳಿಯಲ್ಲಿ ನಾವು ದಿನನಿತ್ಯ ತಿನ್ನುವ ಆಹಾರ ಬಹುಮುಖ್ಯವಾಗಿದ್ದು.

ಸ್ವಚ್ಛ, ಸಮೃದ್ಧ ಆಹಾರಕ್ಕಾಗಿ ಮುಂದೊಮ್ಮೆ ಇವೆಲ್ಲ ಗೋಜಲುಗಳಿಂದ ಹೊರಬರುವ ದಾರಿ ಹುಡುಕುವುದು ಅಸಾಧ್ಯವಾದೀತು. ಹಾಗಾಗಿ ಬೆಳೆಯುವ ರೈತರಿಗೆ ಬೀಜ ಸಂರಕ್ಷಣೆ ಹಾಗೂ ಅವುಗಳನ್ನು ಬಿತ್ತನೆಗೆ ಮರುಬಳಕೆ ಮಾಡುವ ಸ್ವಾತಂತ್ರ ಅತಿ ಅವಶ್ಯಕ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT