ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗೆ ‘ಕಾಯಕಲ್ಪ ಪ್ರಶಸ್ತಿ’ ಗರಿ...

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸದಾ ಒಂದಿಲ್ಲೊಂದು ಸಾಧನೆ ಮಾಡುತ್ತಾ, ‘ಸ್ವಚ್ಛತೆಯೇ ಆರೋಗ್ಯ’ ಎನ್ನುವ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಸತತವಾಗಿ ಎರಡನೇ ಬಾರಿ ಕೇಂದ್ರ ಸರ್ಕಾರದ ‘ಕಾಯಕಲ್ಪ ಪ್ರಶಸ್ತಿ’ಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಈ ಮೂಲಕ ರಾಜ್ಯದ ಅತ್ಯುತ್ತಮ ಜಿಲ್ಲಾಸ್ಪತ್ರೆ ಎಂಬ ಸ್ಥಾನ ಗಿಟ್ಟಿಸಿಕೊಂಡಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನದಡಿ ಕೊಡುವ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯೊಂದಿಗೆ 50 ಲಕ್ಷ ರೂಪಾಯಿ ಈ ಆಸ್ಪತ್ರೆಗೆ ಸಿಕ್ಕಿದೆ. ಈ ಮೊತ್ತದಲ್ಲಿ ಶೇ 25ರಷ್ಟು ಹಣವನ್ನು ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಗೆ ಹಂಚಲಾಗುವುದು. ಉಳಿದ ಹಣವನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲಾಗುವುದು ಎನ್ನುತ್ತಾರೆ ಆಸ್ಪತ್ರೆ ಅಧಿಕಾರಿಗಳು.

ಆಯ್ಕೆ ಹೇಗೆ?: ತ್ಯಾಜ್ಯಗಳ ವಿಲೇವಾರಿ, ಮರುಬಳಕೆ, ಒಳ ರೋಗಿಗಳ ವಾರ್ಡ್‌ ಸ್ವಚ್ಛತೆ, ಶೌಚಾಲಯ, ಪರಿಸರ,  ಸಿಬ್ಬಂದಿ ಲಭ್ಯತೆ  ಸೇರಿದಂತೆ ಪ್ರಮುಖ ಅಂಶಗಳ ಆಧಾರದ ಮೇಲೆ ಕೇಂದ್ರ 500 ಅಂಕಗಳನ್ನು ನಿಗದಿಪಡಿಸಿರುತ್ತದೆ. ಅದರಂತೆ ವಿಜಯಪುರ ಜಿಲ್ಲೆ ಕಳೆದ ಬಾರಿ 417 ಹಾಗೂ ಈ ವರ್ಷ 487 ಅಂಕ ಪಡೆದಿದೆ.

1920ರಲ್ಲಿ, 146 ಎಕರೆ ಜಾಗದಲ್ಲಿ ಈ ಆಸ್ಪತ್ರೆಯನ್ನು ಕಟ್ಟಲಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 400 ಹಾಸಿಗೆಗಳಿವೆ. ಇಲ್ಲಿ 44 ಕಾಯಂ ಸಿಬ್ಬಂದಿ ಇದ್ದು, 34 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತೆ ಕಾಪಾಡಲು ನಿಯೋಜಿಸಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಎಲ್ಲ ಯೋಜನೆಗಳು ಹೊರ ಹಾಗೂ ಒಳರೋಗಿಗಳಿಗೆ ಸಂಬಂಧಿಸಿದಂಥ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಲಭ್ಯವಿದೆ. ಅಲ್ಲದೇ ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ, ಮಡಿಲು ಕಿಟ್, ಜನನಿ ಸುರಕ್ಷಾ ಯೋಜನೆಗಳು ಲಭ್ಯವಿವೆ. ಪ್ರತಿನಿತ್ಯ ಬಂದು ಹೋಗುವ ಸಾವಿರಾರು ರೋಗಿಗಳಿಗೆ ನೀರು, ಹಾಸಿಗೆ, ಕೆಲವು ಬಡ ರೋಗಿಗಳಿಗೆ ಊಟದ ವ್ಯವಸ್ಥೆ ಹೀಗೆ ಹತ್ತು ಹಲವು ಕಾರಣಗಳಿಂದ ಈ ಆಸ್ಪತ್ರೆ ಜನಸ್ನೇಹಿಯಾಗಿದೆ.

ಇಲ್ಲಿ ಒಂದು ಪ್ರಕೃತಿ ಚಿಕಿತ್ಸಾ ಕೇಂದ್ರ, ಕಿರಿಯ ಆರೋಗ್ಯ ತರಬೇತಿ ಕೇಂದ್ರ, ಶುಶ್ರೂಷಕಿಯರ ತರಬೇತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಅಪೌಷ್ಟಿಕತೆ ನಿವಾರಣಾ ಕೇಂದ್ರವೂ ಇದೆ. 10 ಡಯಾಲಿಸಿಸ್ ಯಂತ್ರಗಳನ್ನು ಹೊಂದಿದ ಸುಸಜ್ಜಿತ ವಿಭಾಗ, 12 ಯಂತ್ರಗಳನ್ನು ಒಳಪಟ್ಟ ಮಕ್ಕಳ ತೀವ್ರನಿಗಾ ಘಟಕ, 6 ವಯಸ್ಕ ರೋಗಿಗಳ ತೀವ್ರನಿಗಾ ಘಟಕ, 5 ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ, ಮಹಿಳಾ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಆಸ್ಪತ್ರೆ ಹೊಂದಿದೆ.

ಹುಟ್ಟಿದ ತಕ್ಷಣವೇ ಕೆಲವು ಮಕ್ಕಳಿಗೆ ಉಸಿರಾಟದ ತೊಂದರೆ, ಸೋಂಕು, ಕಡಿಮೆ ತೂಕ... ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳಿಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ತೀವ್ರ ನಿಗಾ ಘಟಕವಿದೆ. ಈ ಆಸ್ಪತ್ರೆಗೆ ನಿತ್ಯವೂ ಸುಮಾರು ಒಂದು ಸಾವಿರ ರೋಗಿಗಳು ಒಳರೋಗಿಗಳಾಗಿ ಬರುತ್ತಾರೆ. ಅದಕ್ಕಿಂತ ಹೆಚ್ಚು ಹೊರರೋಗಿಗಳೂ ಇದ್ದಾರೆ.

ಉಚಿತ ಸೇವೆ: ಮಗುವಿನೊಂದಿಗೆ ತಾಯಂದಿರನ್ನೂ ದಾಖಲಾತಿ ಮಾಡಿಕೊಳ್ಳುವ ವೈದ್ಯರು ಅದಕ್ಕಾಗಿ ಒಟ್ಟಿಗೆ ಆರು ಹಾಸಿಗೆಗಳನ್ನು ತಯಾರಿಯಲ್ಲಿಟ್ಟಿರುತ್ತಾರೆ. ಒಟ್ಟಿಗೆ ಆರು ಜನ ತಾಯಂದಿರಿಗೆ ಅಲ್ಲಿ ಸೂಕ್ತ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಯಾಗಿರುವ ಕಾರಣ, ಇಲ್ಲಿ ಎಲ್ಲವೂ ಉಚಿತ. ಜೊತೆಗೆ, ತಾಯಿಗೆ ಎರಡು ಹೊತ್ತಿನ ಊಟ, ಹಾಸಿಗೆ, ಔಷಧೋಪಚಾರ ಎಲ್ಲವನ್ನೂ ಉಚಿತವಾಗಿ ನಿರ್ವಹಿಸಲಾಗುತ್ತಿದೆ.

‘ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ನೀಡಲು ಹೆಚ್ಚುವರಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ವೈದ್ಯಕೀಯ ಸೇವೆಯಲ್ಲಿ ಮತ್ತಷ್ಟು ಗುಣಮಟ್ಟ ಕಾಪಾಡಲು ಹೆಚ್ಚುವರಿ ವೈದ್ಯರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದರಿಂದ ವೈದ್ಯರ ಕೊರತೆ ಕಡಿಮೆಯಾಗಲಿದೆ’ ಎನ್ನುತ್ತಾರೆ ಜಿಲ್ಲಾಸ್ಪತ್ರೆ ಸರ್ಜನ್ ಎ.ಎನ್ ದೇಸಾಯಿ.

‘ಈ ಪ್ರಶಸ್ತಿಯಿಂದ ನಮ್ಮ ಸಿಬ್ಬಂದಿ ವರ್ಗದವರ ಸಂತೋಷ ಇಮ್ಮಡಿಯಾಗಿದೆ. ಮುಂಬರುವ ವರ್ಷಗಳಲ್ಲೂ ಇನ್ನಷ್ಟು ಶ್ರಮವಹಿಸಿ ಸೇವೆ ಸಲ್ಲಿಸುವ ಗುರಿ ನಮ್ಮದು.  ಕೇವಲ ಪ್ರಶಸ್ತಿಗೆ ಅಪೇಕ್ಷೆ ಪಡದೇ ಬಡ ರೋಗಿಗಳ ಸೇವೆಯಲ್ಲಿಯೂ ನಾವು ತೊಡಗಿಕೊಳ್ಳುತ್ತೇವೆ’ ಎನ್ನುತ್ತಾರೆ ಆಸ್ಪತ್ರೆಯ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT