ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರ ಗಮನ ಸೆಳೆವ ವಿ.ವಿ.ಡಿ ಶಾಲೆ

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬೆಟಗೇರಿ, ಹಳ್ಳಿಯಾದರೂ ಇಂದು ಸುತ್ತಲಿನ ಹತ್ತೂರಿನ ವ್ಯಾಪಾರ ವಹಿವಾಟಿನ ಕೇಂದ್ರ ಸ್ಥಳವಾಗಿ ಪ್ರಗತಿಯ ಹೆಜ್ಜೆಯನ್ನಿಟ್ಟಿದೆ. ಕಲೆ-ಸಾಹಿತ್ಯ-ಸಂಸ್ಕೃತಿಗೆ ಬಹುದೊಡ್ಡ ಹೆಸರಾದ ಹಳ್ಳಿ. ಆನಂದ ಕಂದ ಕಾವ್ಯನಾಮದಿಂದ ಖ್ಯಾತರಾದ ಬೆಟಗೇರಿ ಕೃಷ್ಣಶರ್ಮರ ಜನ್ಮಸ್ಥಳವೂ ಇದು.

ಇಂಥ ಇತಿಹಾಸವುಳ್ಳ ಗ್ರಾಮದಲ್ಲಿ ಇರುವ ವಿ.ವಿ.ಡಿ. ಸರ್ಕಾರಿ ಪ್ರೌಢಶಾಲೆ ತನ್ನ ವಿಶಿಷ್ಟ ರೀತಿಯ ಕಾರ್ಯಚಟುವಟಿಕೆಯಿಂದ 2006ರಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆ ಪ್ರಶಸ್ತಿ ಪಡೆದು ಮಕ್ಕಳಿಗೆ ವಿಶೇಷ ಆಟೋಟ ಚಟುವಟಿಕೆಗಳಲ್ಲಿ ನಿರತವಾಗಿದೆ. ಶಿಕ್ಷಕರ ನಿಸ್ವಾರ್ಥ ಸೇವೆ, ಶಿಕ್ಷಣ  ಪ್ರೇಮ, ಊರವರ ಸಹಾಯ-ಸಹಕಾರ ಸೇರಿದರೆ ಸರ್ಕಾರಿ ಶಾಲೆಯೊಂದು ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬುದಕ್ಕೆ ಉತ್ತರವಾಗಿ ನಿಲ್ಲುತ್ತದೆ.

ಸುಂದರ, ಭವ್ಯವಾದ ಕೊಠಡಿ, ಶಾಲೆಯ ಪ್ರಾಂಗಣದಲ್ಲಿ ಅರಳಿನಿಂತ ವೈವಿಧ್ಯಮಯ ಬಣ್ಣ ಬಣ್ಣದ ಹೂಗಳು, ತೋಟದ ರಕ್ಷಣೆಗಾಗಿ ನಿರ್ಮಿಸಲಾದ ಹೂಬಳ್ಳಿಯ ಬೇಲಿ, ಉದ್ಯಾನದಲ್ಲಿ ಸಿಮೆಂಟ್‌ನಿಂದ ತಯಾರಾದ ಜಿಂಕೆ, ಮೊಲ, ನವಿಲು, ಉಡಾವಣೆಗೆ ಸಜ್ಜಾಗಿರುವ ರಾಕೆಟ್... ಸ್ತಂಭ ಗಡಿಯಾರ, ಸಾಹಿತಿಗಳ ಕಲಾಕೃತಿಗಳು, ವಿಶಾಲವಾದ ಆಟದ ಮೈದಾನ, ಶಾಲೆಯ ಆವರಣದ ಸುತ್ತ ಹಚ್ಚಹಸಿರಿನಿಂದ ಕಂಗೊಳಿಸುವ ಸುಮಾರು 500 ಗಿಡಗಳು.

ಆ ಗಿಡಗಳಿಗೆ ನೇತು ಹಾಕಿದ, ಶಾಲಾ ಮುಂಭಾಗದ ಕಟ್ಟಡಕ್ಕೆ ಬರೆಯಲಾದ ವಿವಿಧ ಮಾಹಿತಿ ಫಲಕಗಳು, ಮಧ್ಯದಲ್ಲಿ ಸುಂದರ ರಂಗಸಜ್ಜಿಕೆ... ಹೀಗೆ ಶಾಲೆಯ ಸುತ್ತಲಿನ ನೋಟ, ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವ ನೀಡುತ್ತದೆ. ಕೈತೋಟಕ್ಕೆ ‘ಸರ್ ಜಗದೀಶಚಂದ್ರ ಬೋಸ್ ಕೈತೋಟ’ ಎಂದು ಹೆಸರು ಇಟ್ಟಿದ್ದರೆ, ಉದ್ಯಾನಕ್ಕೆ ‘ಡಾ. ಅಬ್ದುಲ್ ಕಲಾಂ ಉದ್ಯಾನ’ ಎಂದು ಹೆಸರಿಸಲಾಗಿದೆ.

ಸದ್ಯ ಇಲ್ಲಿ 660 ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳಿಗಾಗಿ ವಿಶೇಷವಾಗಿ ನ್ಯೂಟನ್ ವಿಜ್ಞಾನ ಕೇಂದ್ರ ಹಾಗೂ ವೃತ್ತಿ ಮಾರ್ಗದರ್ಶನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮಕ್ಕಳ ಅಭ್ಯಾಸದ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ ಉತ್ತಮ ಗ್ರಂಥಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಅರಬಾವಿ ಕ್ಷೇತ್ರದ ಸರ್ ಸಿ.ವಿ. ರಾಮನ್ ವಿಜ್ಞಾನ ಕೇಂದ್ರವನ್ನೂ ಈ ಪ್ರೌಢಶಾಲೆ ಹೊಂದಿದೆ.

ಸರ್ಕಾರಿ ಶಾಲೆಗಳಲ್ಲಿ ಬೋಧನಾ ಗುಣಮಟ್ಟ ಕೂಡ ಕಡಿಮೆ ಎಂಬ ವೃಥಾ ಆರೋಪಗಳಿವೆ. ಆದರೆ ಪೋಷಕರು ಇಂಥದ್ದೊಂದು ಇಲ್ಲಸಲ್ಲದ ಮಾತುಗಳಿಂದ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕಬಾರದು ಎನ್ನುವ ಉದ್ದೇಶದಿಂದ ಬೇರೆ ಬೇರೆ ಶಾಲೆಗಳಿಂದ ನುರಿತ ಅಧ್ಯಾಪಕರನ್ನು ಕರೆಸಿ, ಅವರಿಂದ ವಿಶೇಷ ಪಾಠ ಹೇಳಿಸುವ ಪರಿಪಾಠ ಇಲ್ಲಿದೆ. ಪಠ್ಯಕ್ರಮಕ್ಕಷ್ಟೇ ಇಲ್ಲಿನ ಮಕ್ಕಳು ಸೀಮಿತವಾಗಿಲ್ಲ. ಬದಲಾಗಿ ಅವರಿಗೆ ಸಾಹಿತ್ಯ-ಸಂಗೀತ-ಚಿತ್ರಕಲೆ, ಕ್ರೀಡೆ... ಹೀಗೆ ಪಠ್ಯೇತರ ಚಟುವಟಿಕೆಗಳಲ್ಲೂ ತರಬೇತಿ ನೀಡಲಾಗುತ್ತದೆ.

ರಾಜ್ಯದ ಅತ್ಯುತ್ತಮ ಸರ್ಕಾರಿ ಶಾಲೆಯ ಪಟ್ಟ ಪಡೆದುಕೊಂಡಿರುವ ವಿ.ವಿ.ಡಿ ಶಾಲೆ, ‘ಮಾಹಿತಿ ಯೋಜನೆ’ ಅಡಿಯಲ್ಲಿ ಗಣಕ ಯಂತ್ರದ ಬೋಧನಾ ಸೌಲಭ್ಯ ಪಡೆದ ಜಿಲ್ಲೆಯ ಗ್ರಾಮೀಣ ವಲಯದ ಮೊದಲ ಸರ್ಕಾರಿ ಪ್ರೌಢಶಾಲೆ ಎನಿಸಿಕೊಂಡಿದೆ. ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸತತ ಎರಡು ಬಾರಿ ಅಭಿನಂದನಾ ಪತ್ರ ಪಡೆದುಕೊಂಡಿದೆ.

ಶಾಲೆಯ ಹಿನ್ನೆಲೆ
ಈ ಪುಟ್ಟ ಗ್ರಾಮ ಬೆಟಗೇರಿಯಲ್ಲಿ 35 ವರ್ಷಗಳ ಹಿಂದೆ ಪ್ರಾಥಮಿಕ ಶಿಕ್ಷಣ ಬಿಟ್ಟರೆ ಬೇರೆ ಶೈಕ್ಷಣಿಕ ಸೌಲಭ್ಯ ಇರಲಿಲ್ಲ. ಗ್ರಾಮಸ್ಥರ ಹಾಗೂ ಶಿಕ್ಷಣ ಪ್ರೇಮಿಗಳ ಅವಿರತ ಪ್ರಯತ್ನದ ಫಲವಾಗಿ 1977ರಲ್ಲಿ ಆರಂಭವಾಗಿದ್ದು ಈ ಸರ್ಕಾರಿ ಪ್ರೌಢಶಾಲೆ.

ಆರಂಭದಲ್ಲಿ ಹಲವಾರು ಏಳುಬೀಳುಗಳನ್ನು ಕಾಣುತ್ತ, ಕುಂಟುತ್ತಲೇ ಹೆಜ್ಜೆ ಹಾಕಿದ ಈ ಶಾಲೆ, 1994ರಲ್ಲಿ ಶ್ರೀಶೈಲ ಕರಿಕಟ್ಟಿ ಅವರು ಮುಖ್ಯೋಧ್ಯಾಪಕರಾಗಿ ಬಂದಾಗ ಸುಧಾರಣೆಯ ಮುಖ ಕಂಡಿತು. ಸುತ್ತ ಹತ್ತೂರಿನ ಗಮನ ಸೆಳೆಯಿತು. 1999ರಲ್ಲಿ ಈ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದ ಕೆಇಎಸ್ ಪದವೀಧರ ಜಿ.ಬಿ. ಬಳಿಗಾರ ಅವರ ದಕ್ಷ ಆಡಳಿತ, ಊರವರ ಸಹಕಾರ ಇವತ್ತು ಶಾಲೆಯನ್ನು ರಾಜ್ಯಮಟ್ಟದಲ್ಲಿ ಮೊದಲು ನಿಲ್ಲಿಸುವಂತೆ ಮಾಡಿದೆ.

ದಾನಿಗಳಾದ ದೇಯನ್ನವರ ಬಂಧುಗಳು ಹಾಗೂ ಬಳಿಗಾರ ಅವರು ಕೊಟ್ಟ ಸುಮಾರು ಹನ್ನೊಂದು ಎಕರೆ ಭೂಮಿಯಿಂದ ಇವತ್ತು ಶಾಲೆಯ ಸುತ್ತ ನಂದನವನ ಸೃಷ್ಟಿಸಲು ಸಾಧ್ಯವಾಗಿದೆ.

‘ಈ ಶಾಲೆ ರಾಜ್ಯಮಟ್ಟದ ಪ್ರಶಸ್ತಿ ಪಡೆದು, ಮಾದರಿ ಸರಕಾರಿ ಪ್ರೌಢ ಶಾಲೆಯಾಗುವಲ್ಲಿ ಸ್ಥಳೀಯ ಶಿಕ್ಷಣ ಪ್ರೇಮಿಗಳ, ಗ್ರಾಮಸ್ಥರ ಹಾಗೂ ಶಾಲೆಯ ಶಿಕ್ಷಕ-ಸಿಬ್ಬಂದಿ ವರ್ಗದವರ ಸಹಾಯ-ಸಹಕಾರ ನೀಡಿದ್ದು ಅವಿಸ್ಮರಣೀಯವಾಗಿದೆ’ ಎನ್ನುತ್ತಾರೆ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ ಬಳಿಗಾರ.

‘ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಲು ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನೀಡಲು ಪ್ರಯತ್ನಿಸುತ್ತೇನೆ’ ಎಂಬ ಮಾತುಗಳನ್ನಾಡಿದ್ದಾರೆ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ  ಅಜೀತ್ ಮೆನ್ನಿಕೇರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT