ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಕ್ಕಾಗಿ ಕಾದವರು

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬರಕ್ಕಾಗಿ ಈ ಹಳ್ಳಿಗರು ಸತತ ಒಂಬತ್ತು ವರ್ಷಗಳಿಂದ ಕಾಯುತ್ತಿದ್ದರು! ಕೊನೆಗೂ 2016ರಲ್ಲಿ ಬರ ತನ್ನ ಕರಿನೆರಳ ಛಾಯೆಯನ್ನು ಮಲೆನಾಡಿನ ಮೇಲೆ ಹರಿಯಬಿಟ್ಟಿತು. ಆ ವರ್ಷ ಕಪ್ಪೆಗಳ ಜೋಗುಳ ಕಿವಿಗೆ ಬೀಳುವ ಮುನ್ನವೇ ಮುಂಗಾರು ಮಳೆ ಮಾಯವಾಗಿತ್ತು.

ಡಿಸೆಂಬರ್ ತಿಂಗಳ ಹೊತ್ತಿಗೆ ಶುರುವಾದ ನೀರಿನ ಹಾಹಾಕಾರ ಮೇ ವೇಳೆಗೆ ಪರಾಕಾಷ್ಠೆ ತಲುಪಿತು. ಬೊಗಸೆ ನೀರು ಸಿಕ್ಕರೆ ಅಮೃತ ಕಂಡಷ್ಟು ಸಂಭ್ರಮಿಸುವ ದಿನಗಳು ಎದುರಾದವು.

ಆಗ ಈ ಹಳ್ಳಿಗರು ಮನೆಯ ಹಿಂದಿನ ಬಾವಿಗಳನ್ನು ಅಳೆಯಲು ಶುರು ಮಾಡಿದರು. ಎಲ್ಲ ಬಾವಿಗಳಲ್ಲೂ 6 ಅಡಿಗೆ ಕಮ್ಮಿಯಿಲ್ಲದಷ್ಟು ಜಲ ಸಮೃದ್ಧಿಯಿದೆ. ಊರಿನ ತೋಟ, ಬೆಟ್ಟಗಳೆಲ್ಲ ಬಿರು ಬೇಸಿಗೆಯಲ್ಲೂ ಹಸಿರಾಗಿವೆ. ನಿರಂತರ ಐದು ವರ್ಷಗಳ ಶ್ರಮದ ಸಾರ್ಥಕ ಕ್ಷಣಗಳನ್ನು ಅನುಭವಿಸಿದರು ಅವರು.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಪುಟ್ಟ ಹಳ್ಳಿ ಹುಲೇಮಳಗಿ ಅದಕ್ಕೆ ಹೊಂದಿಕೊಂಡಿರುವ ಇನ್ನೊಂದು ಹಳ್ಳಿ ಓಣಿಕೇರಿ. ಮಲೆನಾಡಿನ ಗಡಿಯಲ್ಲಿರುವ ಅರೆಬಯಲು ಸೀಮೆಯ ವಾತಾವರಣದ ಹಳ್ಳಿಗಳು ಇವು. ಹೀಗಾಗಿ ಇಲ್ಲಿ ಮಲೆನಾಡು ಭಾಗಕ್ಕಿಂತ ಶೇ40 ರಷ್ಟು ಮಳೆ ಕಡಿಮೆ.

ಈ ಅರಿವು ಹೊಂದಿರುವ ಹಳ್ಳಿಗರು ಊರಿನ ಬೆಟ್ಟದ ನೂರಾರು ಎಕರೆ ಪ್ರದೇಶದಲ್ಲಿ ಇಂಗುಗುಂಡಿ ನಿರ್ಮಿಸಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿ ಜಲಮೂಲ ಶ್ರೀಮಂತಗೊಳಿಸಿದ್ದಾರೆ. ಇದರ ವೈಜ್ಞಾನಿಕ ಸತ್ಯ ಕಂಡುಕೊಳ್ಳಲು, ನೆಲಮೂಲದ ಜ್ಞಾನ ದೃಢಪಡಿಸಿಕೊಳ್ಳಲು ಅವರು ಬರಕ್ಕಾಗಿ ಕಾಯುತ್ತಿದ್ದರೇ ವಿನಾ ಸಂತೋಷಪಡುವ ಹಂಬಲದಿಂದಲ್ಲ.

ಮಲೆನಾಡಿನ ಮಳೆಗಾಲವೆಂದರೆ ಸಡಗರ ತಂದೊಡ್ಡುವ ಸಂಕಟಗಳ ಸರಮಾಲೆಯಿದ್ದಂತೆ. ಧೋ ಎಂದು ಸುರಿಯುವ ಮಳೆಗೆ ಕೆರೆ– ಕಟ್ಟೆಗಳು ಸೊಕ್ಕಿ ಹರಿದು ಸೃಷ್ಟಿಸುವ ಅನಾಹುತಗಳು, ಗಾಳಿ, ಮಳೆಯ ಆರ್ಭಟಕ್ಕೆ ರಸ್ತೆಯ ಮೇಲೆ ಮುರಿದು ಬೀಳುವ ಮರಗಳು ಒಂದೆರಡು ತಾಪತ್ರಯಗಳೇ ಅಲ್ಲ. ಇಂಥ ಅಬ್ಬರದ ಮಳೆಗಾಲ ಕಂಡಿದ್ದ ಮಲೆನಾಡಿನ ಜನರಿಗೆ 2001ರಲ್ಲಿ ಬರಗಾಲದ ಅನುಭವ ಉಂಟಾಯಿತು.

ಇನ್ನು ಅರೆಬಯಲು ಸೀಮೆಯ ಹುಲೇಮಳಗಿಯಲ್ಲಿ ಇದರ ಪರಿಣಾಮ ಢಾಳಾಗಿ ಕಂಡಿತು. ಇದೇ ಹೊತ್ತಿಗೆ ಜಲ ಪತ್ರಕರ್ತ ಶ್ರೀಪಡ್ರೆಯವರ ಜಲಸಂರಕ್ಷಣೆಯ ಲೇಖನವೊಂದನ್ನು ಓದಿದ್ದ ಊರಿನ ಹಿರಿಯರೊಬ್ಬರು ಬೆಳಿಗ್ಗೆ ಹಾಲು ಡೇರಿಗೆ ಬಂದಾಗ ಇದನ್ನು ಪ್ರಸ್ತಾಪಿಸಿದರು. ಹಾಲು ಡೇರಿಯ ಕಟ್ಟೆಯ ಮೇಲೆ ಕುಳಿತು ಚರ್ಚಿಸಿದ ರಾಘವ ಹೆಗಡೆ, ಯದುನಂದನ ಹೆಗಡೆ ಇತರರು ಪಡ್ರೆಯವರ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿರ್ಧಾರ ತಳೆದರು.

‘ಯಾರು ಬೇಕಾದರೂ ಬನ್ನಿ, ವಾರದಲ್ಲಿ ಒಂದು ದಿನ ಒಂದು ಒಪ್ಪತ್ತು (ಅರ್ಧ ದಿನ) ಬೆಟ್ಟದಲ್ಲಿ ಇಂಗುಗುಂಡಿ ರಚಿಸಲು ಶುರು ಮಾಡೋಣ ಎಂದೆವು. 2002ರ ಅಕ್ಟೋಬರ್‌ನಲ್ಲಿ ಆರಂಭಿಸಿದಾಗ ಮೊದಲ ಒಂದು ತಿಂಗಳು 2–3 ಜನರು ಮಾತ್ರ ಬಂದರು. ನಂತರ ಉತ್ಸಾಹಿಗಳ ಸಂಖ್ಯೆ ದ್ವಿಗುಣಿಸಿತು.

ಪ್ರತಿ ಶನಿವಾರ ಅಥವಾ ಭಾನುವಾರ 15ಕ್ಕೂ ಹೆಚ್ಚು ಮಂದಿ ಸ್ವಯಂ ಸ್ಫೂರ್ತಿಯಿಂದ ಬಂದು ಶ್ರಮದಾನದ ಮೂಲಕ ಇಂಗುಗುಂಡಿ ತೆಗೆಯುವ ಕಾಯಕ ನಡೆಸಿದರು. ಎರಡು ತಿಂಗಳವರೆಗೆ ತಪ್ಪದೇ ಈ ಕೆಲಸ ನಡೆಯಿತು. ಇದೇ ರೀತಿ 2006ರವರೆಗೆ ನಮ್ಮ ಕರ್ತವ್ಯವೆಂಬಂತೆ ಪ್ರತಿ ವರ್ಷವೂ ಬೆಟ್ಟದಲ್ಲಿ ಜಲಪಾತ್ರೆ ನಿರ್ಮಾಣ ಮಾಡಿದೆವು’ ಎನ್ನುತ್ತಾರೆ ಹುಲೇಮಳಗಿಯ ಆನಂದ ಪ್ರಾತಃಕಾಲ.

‘ಕೃಷಿಕರ ಬೆಟ್ಟ, ಬೇಣ ಸೇರಿ 300 ಎಕರೆ ಪ್ರದೇಶದಲ್ಲಿ ಇಂಗುಗುಂಡಿ ರಚಿಸಿ ಹನಿ ನೀರೂ ಹರಿದು ಹೋಗದಂತೆ ತಡೆಯೊಡ್ಡಿದೆವು. 2006ರ ಬೇಸಿಗೆಯಲ್ಲಿ ಹಿಂದಿನ ವರ್ಷಗಳಿಗಿಂತ 4–5 ಅಡಿ ಮೇಲ್ಮಟ್ಟದಲ್ಲಿ ಬಾವಿಯಲ್ಲಿ ಜಲ ಸಂಗ್ರಹ ಇರುವುದನ್ನು ಗುರುತಿಸಿದೆವು. ಇನ್ನು ಇಂಗುಗುಂಡಿ ಸಾಕೆಂದು ನಿರ್ಣಯಿಸಿ ಅಲ್ಲಿಂದ ಮುಂದೆ ಏನಿದ್ದರೂ ಇರುವ ರಚನೆಗಳ ಹೂಳು ತೆಗೆಯುವ, ತರಗೆಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶ್ರಮದಾನ ಸೀಮಿತಗೊಂಡಿತು.

ನಂತರದ ವರ್ಷಗಳಲ್ಲಿ ಸತತ ಮಳೆಯಾಗುತ್ತಿದ್ದರಿಂದ ಜಲ ಆಪತ್ತು ಅರಿವಿಗೆ ಬರಲಿಲ್ಲ. ಅದರೊಟ್ಟಿಗೆ ನೀರಿಂಗಿಸುವಿಕೆಯ ವೈಜ್ಞಾನಿಕ ಸತ್ಯ ತಿಳಿದುಕೊಳ್ಳುವ ಕುತೂಹಲವೂ ತಣಿದಿರಲಿಲ್ಲ. ಹೀಗಿದ್ದಾಗ 2016ರಲ್ಲಿ ಭೀಕರ ಜಲಕ್ಷಾಮ ಧುತ್ತನೆ ಬಂದೆರಗಿತು. ಎಲ್ಲೆಲ್ಲೂ ನೀರಿನದೇ ಮಾತುಕತೆ. ಆದರೆ ನಮ್ಮೂರಿನ ಬಾವಿಗಳು ಕೃಷಿಕರಿಗೆ ನೀರ ನೆಮ್ಮದಿ ಉಳಿಸಿದ್ದವು. ಉರಿಬಿಸಿಲ ತಾಪಕ್ಕೆ ನಮ್ಮೂರಿನ ತೋಟಗಳು, ಬೆಟ್ಟದ ಗಿಡ–ಮರಗಳು ಸಡ್ಡುಹೊಡೆದು ನಿಂತಿದ್ದವು’ ಎಂದು ಅವರು ಕತೆ ಹೇಳುತ್ತ ಹೋದರು.

‘ಮಣ್ಣಿನ ತೇವಾಂಶ ಅಡಿಕೆ, ತೆಂಗಿನ ತೋಟಗಳನ್ನು ಹಸಿರಾಗಿಟ್ಟಿತ್ತು. ಓಡುವ ನೀರನ್ನು ತಂಗುವಂತೆ ಮಾಡಿದ ಶ್ರಮ ನೈಸರ್ಗಿಕ ಅರಣ್ಯಕ್ಕೆ ಆಸರೆಯಾಗಿತ್ತು. ಮೇ ತಿಂಗಳ ಕೊನೆಗೆ ಊರಿನಲ್ಲಿದ್ದ 40ರಷ್ಟು ತೆರೆದ ಬಾವಿಗಳ ನೀರಿನ ಪ್ರಮಾಣ ಅಳತೆ ಮಾಡಿದೆವು. ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ.

ಬೆಟ್ಟದಲ್ಲಿ ಜಲ ಕಡಾಯಿ ಬಾಯ್ದೆರೆಯುವ ಮುನ್ನ ಬತ್ತಿ ಹೋಗುತ್ತಿದ್ದ ಎಲ್ಲ ಬಾವಿಗಳು ಜಲಕರಡೆಯಂತಿದ್ದವು’ ಎನ್ನುತ್ತ ಅವರ ಬೆಟ್ಟದೆಡೆಗೆ ಹೆಜ್ಜೆ ಹಾಕಿದರು. ಅವರ ಹಿಂದೆ ಇನ್ನೂ ನಾಲ್ಕಾರು ಜನರು, ಜೊತೆಯಾಗಿ ನಾನೂ ಹೆಜ್ಜೆ ಹಾಕಿದೆ.

ಸಣ್ಣ– ದೊಡ್ಡ ಕಡಾಯಿಗಳು
ಒಟ್ಟು 600 ಎಕರೆ ಪ್ರದೇಶದಲ್ಲಿ 300 ಎಕರೆಯಲ್ಲಿ ಸುಮಾರು 1200ರಷ್ಟು ಸಣ್ಣ, ದೊಡ್ಡ ಕಡಾಯಿಗಳು ರಚನೆಯಾಗಿವೆ. ಇವೆಲ್ಲಕ್ಕೂ ಊರವರ ಬೆವರ ಹನಿಗಳೇ ಸಾಕ್ಷಿ. ಒಂದು ವರ್ಷ ಮಾತ್ರ ಗ್ರಾಮ ಪಂಚಾಯ್ತಿ ಅಲ್ಪ ನೆರವು ನೀಡಿತ್ತು. ದಶಕದ ನಂತರ ಮತ್ತೆ ಈ ವರ್ಷ 100 ಎಕರೆಯಲ್ಲಿ ನೀರು ಹಿಡಿಯುವ ರಚನೆಗಳನ್ನು ನಿರ್ಮಿಸಲಾಗುತ್ತಿದೆ.

ಗ್ರಾಮ ಪಂಚಾಯ್ತಿಯ ಉದ್ಯೋಗ ಖಾತ್ರಿ ಯೋಜನೆ, ಊರವರ ದೇಣಿಗೆಯಲ್ಲಿ ಕೆಲಸ ನಡೆಯುತ್ತಿದೆ. ಒಮ್ಮೆ 2.5 ಸೆ.ಮೀನಷ್ಟು ಬಿರುಸಾದ ಮಳೆಯಾದರೆ ಸ್ವಲ್ಪವೂ ನೀರು ಹಳ್ಳ ಸೇರಿ ನಷ್ಟವಾಗುವುದಿಲ್ಲ. ಅಷ್ಟು ಸಾಮರ್ಥ್ಯದ ಜಲಾಗಾರಗಳು ಜೀವಜಲವನ್ನು ಹಿಡಿದಿಟ್ಟು ನಿಧಾನವಾಗಿ ಭೂಮಿಯೊಳಗೆ ಇಂಗಿಸುತ್ತವೆ ಎಂದು ಸುಹಾಸ್ ಹೆಗಡೆ ಹೇಳಿದರು.

ಓಣಿಕೇರಿಯ ಜಿ.ಡಿ. ಹೆಗಡೆ ಅವರು 1984ರಿಂದ ಊರಿನ ಮಳೆಯ ಪ್ರಮಾಣ ದಾಖಲೀಕರಣ ಮಾಡಿಕೊಂಡು ಬರುತ್ತಿರುವವರು. ಹುಲೇಮಳಗಿಯಲ್ಲಿ ಮಳೆ ನೀರು ಮರುಪೂರಣಕ್ಕೆ ಪ್ರೇರಣೆ ನೀಡಿದ್ದು ಈ ದಾಖಲೆ. ಅವರು ಹೇಳುವಂತೆ ಕಳೆದ ನವೆಂಬರ್‌ನಲ್ಲಿ ಎರಡು ದಿನ (17.6 ಮಿ.ಮೀ, 9.2 ಮಿ.ಮೀ) ಮಳೆಯಾದಾಗ ಮೂರು ಅಡಿ ನೀರು ಇಂಗುಗುಂಡಿಗಳಲ್ಲಿ ಸಂಗ್ರಹವಾಗಿತ್ತು. ಅಷ್ಟೂ ನೀರನ್ನು ಇದೇ ನೆಲ ಹಿಡಿದಿಟ್ಟಿದೆ.

2015ರಲ್ಲಿ ಆಗಿದ್ದು ಕೇವಲ 85 ಸೆ.ಮೀ ಮಳೆಯಷ್ಟೇ. ಈ ವರ್ಷ ಇಲ್ಲಿಯ ತನಕ 82 ಸೆ.ಮೀ ಮಳೆ ದಾಖಲಾಗಿದೆ. 2016ರ ಬರಗಾಲಕ್ಕೆ ನಮ್ಮೂರು ಹೆದರಲಿಲ್ಲ. ಆದರೆ ಸತತ ಎರಡನೇ ಬಾರಿ ಮುಂಗಾರು ಕೈಕೊಟ್ಟಿದೆ. ಈ ವರ್ಷದ ತಾಪಕ್ಕೆ ತೋಟಗಳು ನಲುಗಿವೆ. ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿ ತೋಟ ಉಳಿಸಿಕೊಳ್ಳಬೇಕಾಗಿದೆ. ಕಳೆದ ವರ್ಷ ಮೇ ತಿಂಗಳ ಕೊನೆಯಲ್ಲಿ ಇದ್ದಷ್ಟು ನೀರು ಮಾರ್ಚ್ ತಿಂಗಳ ಮೊದಲ ವಾರದಲ್ಲಿದೆ ಎನ್ನುವಾಗ ಅವರ ಮಾತಿನಲ್ಲಿ ವಿಷಾದವಿತ್ತು.

ಜಲ ಸಂರಕ್ಷಣೆಯ ಎಲ್ಲ ಮನುಷ್ಯ ಪ್ರಯತ್ನಗಳು ನಡೆದಿವೆ. ಇದರ ಫಲವಾಗಿ ಉಳಿದ ಹಳ್ಳಿಗಳಂತೆ ನಮ್ಮೂರಿನ ಜಲಪಾತ್ರೆಗಳು ಬರಿದಾಗಿಲ್ಲ. ಇನ್ನು ಮಳೆಯ ಕೃಪೆ ದೇವರಿಗೆ ಬಿಟ್ಟಿದ್ದು ಎಂದು ಆಗಸದತ್ತ ಅವರು ಮುಖ ಮಾಡಿದ ಸನ್ನಿವೇಶವು ಬೇಂದ್ರೆಯವರ ‘ಗಂಗಾವತರಣ’ದ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ... ಪದ್ಯ ನೆನಪಿಸುವಂತಿತ್ತು.  

ನೀರು ಮರೀಚಿಕೆ
ಹುಲೇಮಳಗಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೆಯಲ್ಲಿ ಬೇಸಿಗೆಯಲ್ಲಿ ಜಲಕ್ಷಾಮ ತಪ್ಪಿದ್ದಲ್ಲ. ಅಡಿಕೆ ಮರಗಳ ಗರಿ ಒಣಗಿವೆ. ಕೊಳವೆಬಾವಿಗಳನ್ನು ಕೊರೆದಿರುವ ಯಂತ್ರಗಳು ಭೂಮಿಯ ಮೈತುಂಬ ರಂಧ್ರ ಸೃಷ್ಟಿಸಿವೆ. ಆದರೆ ನೀರು ಮಾತ್ರ ಮರೀಚಿಕೆಯಾಗಿದೆ. ಹಾಗೆ ನೋಡಿದರೆ ಜಾರುವ ನೀರಿಗೆ ತಡೆಯೊಡ್ಡಿದ ನಾವೇ ಅದೃಷ್ಟವಂತರು ಎನ್ನುತ್ತಾರೆ ರಾಘವೇಂದ್ರ ಹೆಗಡೆ.

ಉತ್ತಮ ಇಳುವರಿ
ಕಳೆದ ವರ್ಷ ಎಲ್ಲೆಡೆ ನೀರಿಲ್ಲದೇ ಅಡಿಕೆ ತೋಟಗಳು ಒಣಗಿ ಅರ್ಧದಷ್ಟು ಬೆಳೆ ರೈತರ ಕೈಗೆ ಸಿಕ್ಕಿಲ್ಲ. ಹುಲೇಮಳಗಿ, ಓಣಿಕೇರಿಯ ಒಟ್ಟು 90 ಎಕರೆ ಅಡಿಕೆ ತೋಟದಲ್ಲಿ ಮಾತ್ರ ಇಳುವರಿ ಕಡಿಮೆಯಾಗಲಿಲ್ಲ. ನೀರಿಂಗಿಸಿದ ಫಲವನ್ನು ತೋಟದಲ್ಲಿ ಕಂಡೆವು ಎನ್ನುತ್ತಾರೆ ಜಿ.ಡಿ. ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT