ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಜನಸಾಮಾನ್ಯರಲ್ಲಿ ಸಂದಿಗ್ಧ

‘ನೋಟು ರದ್ದತಿ–ಅದರ ಪರಿಣಾಮಗಳು’ ವಿಚಾರ ಸಂಕಿರಣದಲ್ಲಿ ಪ್ರೊ.ಮುರಳೀಧರ್ ಅಭಿಮತ
Last Updated 7 ಮಾರ್ಚ್ 2017, 5:15 IST
ಅಕ್ಷರ ಗಾತ್ರ
ಸಾಗರ: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಹಲವು ಅಸ್ಪಷ್ಟ ಸಂದೇಶಗಳು ಹೊರ ಬರುತ್ತಿರುವುದು ಗೊಂದಲಗಳಿಗೆ ಕಾರಣವಾಗಿದೆ ಎಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಮುರಳೀಧರ್ ಹೇಳಿದರು.
 
ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್‌ ಕಾಲೇಜಿನ ಆವರಣದಲ್ಲಿರುವ ದೇವರಾಜು ಅರಸು ಕಲಾಕ್ಷೇತ್ರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಕೆ.ಎಚ್‌.ಶ್ರೀನಿವಾಸ್‌ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ‘ನೋಟು ರದ್ದತಿ–ಅದರ ಪರಿಣಾಮಗಳು’ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
 
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಕ್ರಮದ ನಂತರ ಎಟಿಎಂಗಳಲ್ಲಿ, ಬ್ಯಾಂಕ್‌ ಖಾತೆಗಳಲ್ಲಿ ಪಡೆಯುವ ಹಣದ ಮೇಲೆ ಮಿತಿ, ಈಚೆಗೆ ಘೋಷಣೆ ಆಗಿರುವ ಕನಿಷ್ಠ ಠೇವಣಿ ಮೊತ್ತದ ಮೇಲೆ ದಂಡ ವಿಧಿಸುವಿಕೆ ಸೇರಿದಂತೆ ಹಲವು ರೀತಿಯ ಹೊಸ ಕ್ರಮಗಳು ಜನಸಾಮಾನ್ಯರಿಗೆ ಸಂದಿಗ್ಧತೆ ಮೂಡಿಸಿವೆ ಎಂದು ಅಭಿಪ್ರಾಯಪಟ್ಟರು.
 
ದೇಶದ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದ ಮೇಲೆ ನೋಟು ರದ್ದತಿ ಯಾವ ರೀತಿಯ ಪರಿಣಾಮ ಉಂಟಾಗಿದೆ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರಕುತ್ತಿಲ್ಲ. ಈ ಕ್ರಮದ ಕುರಿತು ಪರ ವಿರೋಧದ ಚರ್ಚೆಗಳನ್ನು ರಾಜಕೀಯ ದೃಷ್ಟಿಕೋನವನ್ನು ಬಿಟ್ಟು ಆರ್ಥಿಕ, ಸಾಮಾಜಿಕ ಚೌಕಟ್ಟಿನಲ್ಲಿ ನೋಡುವ ಅಗತ್ಯವಿದೆ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್‌ ಎಂ.ಭಂಡಾರಿ ಮಾತನಾಡಿ, ಆರ್ಥಿಕ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ಆಗುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಕ್ಷೇತ್ರದ ಬದಲಾವಣೆಗೂ ಒತ್ತು ನೀಡಬೇಕಿದೆ. ಶೈಕ್ಷಣಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಇಂತಹ ಬದಲಾವಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
 
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಸಿ.ಎಸ್‌.ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ್‌ ಎಂ. ಹಾಜರಿದ್ದರು. ಜೋಶಿ ಸಂಗಡಿಗರು ಪ್ರಾರ್ಥಿಸಿದರು. ಡಾ.ಎ.ಎಸ್‌.ಲಕ್ಷ್ಮೀಶ್‌ ಸ್ವಾಗತಿಸಿದರು. ಡಾ.ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT