ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಸೇವೆಯಿಂದ ಬ್ಯಾಂಕ್‌ ಅಭಿವೃದ್ಧಿ’

ಶಿವಮೊಗ್ಗ: ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧಿಕಾರಿಗಳಿಗಾಗಿ ವಿಚಾರಸಂಕಿರಣ
Last Updated 7 ಮಾರ್ಚ್ 2017, 5:27 IST
ಅಕ್ಷರ ಗಾತ್ರ
ಶಿವಮೊಗ್ಗ: ಯಾವುದೇ ಬ್ಯಾಂಕ್, ಸೊಸೈಟಿ ಹಾಗೂ ಸಹಕಾರ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದಲ್ಲಿ ಮಾತ್ರ ಯಶಸ್ವಿ ಸ್ಥಾನಕ್ಕೆ ಏರುತ್ತವೆ ಎಂದು ಸಹಕಾರ ಸಂಘಗಳ ನಿವೃತ್ತ ನಿಬಂಧಕ ಬಿ.ಎ.ಮಹದೇವಪ್ಪ ಹೇಳಿದರು. 
 
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
 
‘ಗ್ರಾಹಕರು ಬ್ಯಾಂಕ್‌ ಹಾಗೂ ಸೊಸೈಟಿಯೆಡೆಗೆ ಹೊಸತನದ ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆ. ಅವರಿಗೆ ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿದಲ್ಲಿ ಬ್ಯಾಂಕ್‌ನ ಗುಣಮಟ್ಟ ಹಾಗೂ ದಕ್ಷತೆ ಹೆಚ್ಚುತ್ತದೆ. ವಿಳಂಬಕ್ಕೆ ಆಸ್ಪದವಾಗದಂತೆ ಗ್ರಾಹಕರ ಗೊಂದಲ ನಿವಾರಿಸುವಲ್ಲಿ ಸಹಕಾರ ಸಂಘಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.
 
ಗಾಂಧೀಜಿಯವರೂ ಗ್ರಾಹಕರ ಮಹತ್ವವನ್ನು ಸಾರಿ ಹೇಳಿದ್ದಾರೆ. ಯಾವುದೇ ಒಂದು ಉದ್ಯಮ ಯಶಸ್ವಿಯಾಗಬೇಕಾದರೆ, ಗ್ರಾಹಕನ ಸಂತೋಷ ಅತಿ ಮುಖ್ಯ. ಹಾಗಾಗಿ, ಗ್ರಾಹಕರಿಗೆ ನಗುಮೊಗದ ಸೇವೆ ನೀಡಿದಲ್ಲಿ, ಬ್ಯಾಂಕ್‌ನ ಬೆಳವಣಿಗೆಯೂ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
 
ಈಚೆಗೆ ಬ್ಯಾಂಕ್ ಖಾತೆದಾರರಿಗೆ ಮೊಬೈಲ್‌ನಲ್ಲಿಯೇ ಸಕಲ ಮಾಹಿತಿಯೂ ಲಭ್ಯವಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ಡಿಜಿಟಲ್‌ ತಂತ್ರಜ್ಞಾನದತ್ತ ಸಾಗಿದೆ. ಇದರಿಂದ ಹಲವು ಉಪಯೋಗಗಳೂ ಇವೆ. ಈ ಸೌಲಭ್ಯಗಳ ಕುರಿತು ಗ್ರಾಹಕರಿಗೆ ತಿಳಿಸುವಂತಹ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
 
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕ ಎಸ್.ಪಿ. ಶೇಷಾದ್ರಿ, ಸಹಕಾರ ಬ್ಯಾಂಕ್‌ಗಳು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಸಾಮಾಜಿಕ ಕಳಕಳಿಯನ್ನೂ ಹೊಂದಿವೆ. ಈ ನಿಟ್ಟಿನಲ್ಲಿ ಸಹಕಾರ ಬ್ಯಾಂಕ್‌ಗಳು ಸಾಮಾಜಿಕ ಬದ್ಧತೆ ಮೂಲಕ ಬಡವರ ಧ್ವನಿಯಾಗಬೇಕು ಎಂದರು.
 
ಬ್ಯಾಂಕ್‌ಗಳ ಏಳಿಗೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಇಲ್ಲದಿದ್ದರೆ ಬ್ಯಾಂಕ್‌ಗಳ ಉಳಿವು ಕಷ್ಟಸಾಧ್ಯ. ಪಟ್ಟಣ ಬ್ಯಾಂಕ್‌ಗಳು ಹಲವು ವಹಿವಾಟು ಗಳಿಂದ ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದಷ್ಟು ಬ್ಯಾಂಕ್‌ಗಳು ಸದೃಢವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
 
ಬ್ಯಾಂಕ್‌ಗಳಲ್ಲಿನ ನ್ಯೂನತೆ ಹಾಗೂ ಕೆಲವು ಸಮಸ್ಯೆಗಳನ್ನು ಬ್ಯಾಂಕ್‌ ಆಡಳಿತವೇ ಸರಿಪಡಿಸಿಕೊಳ್ಳಬೇಕಿದೆ. ನಂಬಿಕೆ, ವಿಶ್ವಾಸ, ಗುಣಮಟ್ಟದ ಸೇವೆ ಹಾಗೂ ಪ್ರಾಮಾಣಿಕತೆಯಿಂದ ಮಾತ್ರ ಬ್ಯಾಂಕ್‌ಗಳು ಅಸ್ತಿತ್ವ ಉಳಿಸಿಕೊಳ್ಳುತ್ತವೆ. ಅಧಿಕಾರಿಗಳು ನಿಯಮದಡಿ ಕೆಲಸ ಮಾಡುವುದರ ಜತೆಗೆ ಮಾನವೀಯತೆ ಬೆಳೆಸಿಕೊಳ್ಳಬೇಕು. ಬಡವರ, ಶ್ರಮಿಕರ ಹಾಗೂ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಹೊಂದಿರಬೇಕು ಎಂದರು.
 
ಸಹ್ಯಾದ್ರಿ ಮಹಿಳಾ ಪಟ್ಟಣ ಬ್ಯಾಂಕ್‌ನ ಅಧ್ಯಕ್ಷ ವೀರಮ್ಮ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ತರಬೇತಿಗಳು ಅವಶ್ಯಕ. ಸಹಕಾರ ಕ್ಷೇತ್ರದಲ್ಲಿ ಮಹಿಳೆ ಉನ್ನತ ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ. ಸಹಕಾರ ಕ್ಷೇತ್ರ ಉಳಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನೆರವಿನ ಅಗತ್ಯವಿದೆ ಎಂದರು.
 
ಪಟ್ಟಣ ಸಹಕಾರ ಸಂಘಗಳ ಸಿಇಒ ಪುಂಡಲೀಕ ಕೆರೊರೆ, ಪ್ರಮುಖರಾದ ಪ್ರಕಾಶ್, ರಾಜಶೇಖರ ಪಾಟೀಲ್, ಸುಭಾಷ್ ಇತರರು ಉಪಸ್ಥಿತರಿದ್ದರು. ಮರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT