ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಟ್‌ಗೆ ₹1.48 ದರ ಹೆಚ್ಚಳಕ್ಕೆ ವಿರೋಧ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಅಹವಾಲು ಸ್ವೀಕಾರ
Last Updated 7 ಮಾರ್ಚ್ 2017, 5:56 IST
ಅಕ್ಷರ ಗಾತ್ರ
ಕಲಬುರ್ಗಿ: ‘ಪ್ರತಿ ಯೂನಿಟ್‌ ವಿದ್ಯುತ್‌ಗೆ ₹1.48 ದರ ಹೆಚ್ಚಳ ಮಾಡಬಾರದು. ಎಲ್ಲರಿಗೂ ಒಂದೇ ರೀತಿಯ ಬೆಲೆ ಏರಿಕೆ ಬೇಡ. ವಿದ್ಯುತ್ ವಿತರಣಾ ನಷ್ಟ ತಪ್ಪಿಸಬೇಕು. ವಿದ್ಯುತ್ ಖರೀದಿಯಲ್ಲಿನ ಮೋಸದ ವ್ಯವಹಾರ ತಡೆಗಟ್ಟಬೇಕು’
 
–ಇವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಗ್ರಾಹಕರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರಿಂದ ವ್ಯಕ್ತವಾದ ಅಭಿಪ್ರಾಯಗಳು.
 
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಮುನಿರಾಜು ಮಾತನಾಡಿ, ‘2018ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ ₹4,275.50 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವಿದ್ಯುತ್ ಖರೀದಿ, ಪ್ರಸರಣಾ ಶುಲ್ಕ ಮತ್ತು ವೆಚ್ಚಗಳು ಸೇರಿದಂತೆ ₹1,075.34 ಕೋಟಿ ಕೊರತೆ ಆಗಲಿದೆ. ಆದ್ದರಿಂದ ಇದನ್ನು ಸರಿದೂಗಿಸಲು ಬೆಲೆ ಹೆಚ್ಚಳ ಮಾಡಬೇಕಾಗಿದೆ’ ಎಂದು ತಿಳಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ದೀಪಕ್ ಗಾಲಾ, ‘ಯಾವ ಪ್ರದೇಶದಲ್ಲಿ ಹೆಚ್ಚು ವಿದ್ಯುತ್ ನಷ್ಟವಾಗುತ್ತಿದೆಯೋ ಅದಕ್ಕೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿಟಗುಪ್ಪ ಹಾಗೂ ಯಾದಗಿರಿಯಲ್ಲಿ ಅತಿ ಹೆಚ್ಚು ಅಂದರೆ ಶೇ 26ರಷ್ಟು ವಿದ್ಯುತ್ ನಷ್ಟವಾಗುತ್ತಿದ್ದು, ಆ ಹೊರೆಯನ್ನು ಗ್ರಾಹಕರ ಮೇಲೆ ಹೇರಲಾಗುತ್ತಿದೆ. ಐಪಿ ಸೆಟ್‌ನ ₹1,110 ಕೋಟಿ ಬಾಕಿ ಹಾಗೂ ಬಡ್ಡಿ ವಸೂಲಿಗೆ ಕ್ರಮ ಕೈಗೊಂಡರೆ ಶುಲ್ಕ ಹೆಚ್ಚಳವನ್ನು ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.
 
ರೈತ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, ‘ವಿದ್ಯುತ್ ಖರೀದಿಯಲ್ಲಿ ಒಂದೊಂದು ಎಸ್ಕಾಂಗಳು ಒಂದೊಂದು ರೀತಿಯ ದರ ತೋರಿಸುತ್ತಿವೆ. ಇದರಲ್ಲಿ ಮೋಸ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಗ್ರಾಮೀಣ ಪ್ರದೇಶಗಳಿಗೆ ಹಗಲು ಹೊತ್ತು ನಿರಂತರ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು. 72 ಗಂಟೆಗಳ ಒಳಗೆ ವಿದ್ಯುತ್ ಪರಿವರ್ತಕ ಬದಲಾಯಿಸಲು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
 
ರಾಮು ಪವಾರ್ ಮಾತನಾಡಿ, ‘ಗ್ರಾಹಕರಿಗೆ ಸಹಾಯವಾಣಿ ಆರಂಭಿಸಬೇಕು. ಯಾವುದೇ ಕಾರಣಕ್ಕೂ ₹1.48 ದರ ಹೆಚ್ಚಳ ಮಾಡಬಾರದು’ ಎಂದರು. ವಿರೂಪಾಕ್ಷಪ್ಪ ಜೋಳದರಾಶಿ ಅವರು, ‘ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು. ವಿದ್ಯುತ್ ಕಳ್ಳತನ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು. ಗುಣಮಟ್ಟದ ಮೀಟರ್ ಅಳವಡಿಸಬೇಕು’ ಎಂದು ಹೇಳಿದರು.
 
ಸಿದ್ದಯ್ಯ ಹಿರೇಮಠ, ಅನುರಾಧಾ, ಯೋಗೀಶರಾವ್, ದೀಪಕನಾಗ್ ಪುಣ್ಯಶೆಟ್ಟಿ, ಬಸವರಾಜ, ಡಾ. ರಾಜು ಕುಳಗೇರಿ, ಸುಭಾಷಚಂದ್ರ ಹಾಗೂ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಆಯೋಗದ ಮುಂದೆ ಮಂಡಿಸಿದರು. ಆಯೋಗದ ಸದಸ್ಯರಾದ ಎಚ್.ಡಿ. ಅರುಣಕುಮಾರ್, ಡಿ.ಬಿ. ಮಣಿವೇಲು ರಾಜು ಇದ್ದರು.
 
* 2017–18ರಲ್ಲಿ ಉತ್ಪಾದನೆಯಾಗಲಿರುವ 2 ಸಾವಿರ ಮೆಗಾ ವಾಟ್ ಸೌರಶಕ್ತಿ ವಿದ್ಯುತ್‌ ಅನ್ನು ರೈತರಿಗೆ ಹಗಲು ಹೊತ್ತಿನಲ್ಲೇ ನೀಡಲು ಆಯೋಗ ಚಿಂತನೆ ನಡೆಸಿದೆ
- ಎಂ.ಕೆ.ಶಂಕರಲಿಂಗೇಗೌಡ, ಅಧ್ಯಕ್ಷ , ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ
 
* 2018ರ ಆರ್ಥಿಕ ವರ್ಷದಲ್ಲಿ ಉಂಟಾಗುವ ₹1,075.34 ಕೋಟಿ ಕೊರತೆ ಸರಿದೂಗಿಸಲು ಎಲ್ಲಾ ಪ್ರವರ್ಗಗಳಲ್ಲಿ ಪ್ರತಿ ಯೂನಿಟ್‌ಗೆ ₹1.48 ದರ ಹೆಚ್ಚಳ ಮಾಡಬೇಕು
- ಎಂ.ಮುನಿರಾಜು, ವ್ಯವಸ್ಥಾಪಕ ನಿರ್ದೇಶಕ, ಜೆಸ್ಕಾಂ
 
‘31ರ ಬಳಿಕ ವಿದ್ಯುತ್ ದರ ಪರಿಷ್ಕರಣೆ’
ಕಲಬುರ್ಗಿ: ‘ರಾಜ್ಯದಲ್ಲಿರುವ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ದರ ಹೆಚ್ಚಳ ಕುರಿತು ಸಲ್ಲಿಸಿದ ಬೇಡಿಕೆಗಳನ್ನು ಸಮಗ್ರವಾಗಿ ಕ್ರೋಢಿಕರಿಸಿ, ವಿದ್ಯುತ್ ದರ ಪರಿಷ್ಕರಣೆಯ ಅಂತಿಮ ಶಿಫಾರಸಿನ ವರದಿಯನ್ನು ಮಾ.31ರ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಹೇಳಿದರು.

‘ಬೆಂಗಳೂರು ಹೊರತುಪಡಿಸಿ ಎಲ್ಲ ಎಸ್ಕಾಂಗಳು ವಿದ್ಯುತ್ ದರವನ್ನು 148 ಪೈಸೆ (₹1.48)ಯಷ್ಟು ಹೆಚ್ಚಿಸಿ ಪರಿಷ್ಕರಿಸುವಂತೆ ಪ್ರಸ್ತಾವ ಸಲ್ಲಿಸಿವೆ’ ಎಂದು ತಿಳಿಸಿದರು.
‘ಎಲ್ಲ ಎಸ್ಕಾಂಗಳು ಹಳೆಯ ವಿದ್ಯುತ್ ಕಂಡಕ್ಟರ್, ಪರಿವರ್ತಕಗಳನ್ನು ಬದಲಾಯಿಸಬೇಕು. ವಿದ್ಯುತ್ ಸೋರಿಕೆ ತಡೆಗಟ್ಟಲು ಸುಧಾರಣಾ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ನೀಡಲಾಗುವ ಸಬ್ಸಿಡಿ ತಡೆ ಹಿಡಿಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಭಾಗ್ಯಜ್ಯೋತಿ, ಗಂಗಾಕಲ್ಯಾಣ ಮುಂತಾದ ಯೋಜನೆಗಳಡಿ ಒದಗಿಸಲಾದ ನಿಗದಿತ ವಿದ್ಯುತ್ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರ ಹಾಗೂ ನಿಯಮಿತ ವಿದ್ಯುತ್ ಸರಬರಾಜು ತಡೆಯುವ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು’ ಎಂದರು.

‘ಜೆಸ್ಕಾಂ ವಿಶೇಷ ತನಿಖಾ ಜಾಗೃತ ದಳದಿಂದ ಪ್ರತಿ 3 ತಿಂಗಳಿಗೊಮ್ಮೆ ಎಲ್ಲ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಹಗಲು ಹೊತ್ತಿನಲ್ಲಿ ಉರಿಯುವ ಬೀದಿ ದೀಪಗಳ ತಪಾಸಣೆ ಮಾಡಿಸಬೇಕು. ವಿದ್ಯುತ್ ಮೀಟರ್ ಇಲ್ಲದ ಸಮುದಾಯ ಭವನಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT