ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಗುಡದೂರು: ಕುಡಿವ ನೀರಿಗೆ ಕೃತಕ ಬರ

ನೀರಿನ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
Last Updated 7 ಮಾರ್ಚ್ 2017, 6:47 IST
ಅಕ್ಷರ ಗಾತ್ರ
ಕುಷ್ಟಗಿ: ಎಂ.ಗುಡದೂರು ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಇಲ್ಲಿಯ ದೊಡ್ಡಬಸವೇಶ್ವರ ಸ್ವಾಮಿ ಮಠ ಸುತ್ತಲಿನ ಜಿಲ್ಲೆಗಳಲ್ಲಿಯೂ ಸಾಕಷ್ಟು ಸಂಖ್ಯೆ ಭಕ್ತರನ್ನು ಹೊಂದಿದೆ. ವರ್ಷದ ಬಹುತೇಕ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ದೊಡ್ಡಪ್ರಮಾಣದಲ್ಲಿ ಜಾತ್ರೆ ನಡೆಯುವುದರಿಂದ ಸಹಸ್ರ ಸಂಖ್ಯೆ ಭಕ್ತರು, ಪ್ರಮುಖರು ಬಂದುಹೋಗುವ ಗ್ರಾಮ. ಆದರೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಜನರಿಗೆ ತೊಂದರೆ ತಪ್ಪಿಲ್ಲ.
 
ಕುಡಿಯುವ ಮತ್ತು ಬಳಕೆ ನೀರಿನ ತೀವ್ರ ಸಮಸ್ಯೆ ಇಲ್ಲಿದೆ, ಈ ಬಾರಿ ಮಳೆ ಇಲ್ಲ. ಸಮೀಪದಲ್ಲಿ ಎಲ್ಲಿಯೇ ಕೊಳವೆಬಾವಿ ಕೊರೆದರೂ ಹನಿ ನೀರು ಬರುವುದಿಲ್ಲ. ದೂರದಿಂದ ಕೊಳವೆಬಾವಿ ಕೊರೆಯಿಸಿ ನೀರು ತರಬೇಕು. ಆದರೆ ಈ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಜನ ನೀರಿಗಾಗಿ ಪರಿತಪಿಸುವಂತಾಗಿದೆ.
 
ಸುಮಾರು ಎರಡು ಮೂರು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಹಿರೇಮನ್ನಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗುಮಗೇರಿ ಗ್ರಾಮ ಪಂಚಾಯಿತಿಗೆ ಸೇರಿದೆ. ಸರ್ಕಾರದ ನೀರು, ನೈರ್ಮಲ್ಯ, ಸ್ವಚ್ಛಭಾರತ, ನರೇಗಾ, ವಸತಿ ಹೀಗೆ ಯಾವುದೇ ಯೋಜನೆಗಳಲ್ಲಿ ಈ ಗ್ರಾಮಕ್ಕೆ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗುತ್ತಿಲ್ಲ.  ಚುನಾವಣೆ ಇದ್ದಾಗ ಮಾತ್ರ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎಂಬ ಅಸಮಾಧಾನ ಗ್ರಾಮಸ್ಥರದು.
 
ಟೆಂಗುಂಟಿ ರಸ್ತೆಯಲ್ಲಿನ ಕೊಳವೆಬಾವಿಯಿಂದ ನೀರು ಸರಬರಾಜಾಗುತ್ತದೆ. ಅಂತರ್ಜಲ ಕಡಿಮೆ ಇರುವುದರಿಂದ ಅಗತ್ಯಕ್ಕೆ ತಕ್ಕಷ್ಟು ನೀರು ಬರುವುದಿಲ್ಲ. ನೀರಿಗಾಗಿ ಜನರು ನಿತ್ಯ ಕಾದಾಡುವಂತಾಗಿದೆ. ಕೊಡಗಳನ್ನು ಹಿಡಿದುಕೊಂಡು ದುಡಿಮೆ ಬಿಟ್ಟು ತಾಸುಗಟ್ಟಲೇ ಕೊಳಾಯಿಗಳ ಮುಂದೆ ನಿಲ್ಲುವಂತಾಗಿದೆ ಎಂದು ಗ್ರಾಮದ ಹನುಮಗೌಡ, ದೊಡ್ಡಬಸಪ್ಪ ಹೇಳಿದರು.
 
‘ನೋಡ್ರಿ ಇತರೆ ಯಾವುದೇ ಯೋಜನೆ, ಕೆಲಸ ಕಾಮಗಾರಿಗಳು ಹೇಗೇ ನಡೆಯಲಿ ಅದರ ಬಗ್ಗೆ ನಾವು ಏನೂ ಮಾತನಾಡುವುದಿಲ್ಲ, ಕೇವಲ ಸಮರ್ಪಕ ರೀತಿಯಲ್ಲಿ ನೀರು ಕೊಟ್ಟರೆ ಸಾಕು ಬೇರೆನೂ ಬೇಕಾಗಿಲ್ಲ’. ಆದ್ರ ಒಬ್ಬ ಚುನಾಯಿತ ಪ್ರತಿನಿಧಿಯೂ ನಮ್ಮ ಊರಿಗೆ ಬಂದು ಗೋಳು ಕೇಳಿಲ್ಲ’ ಎಂದು ಗ್ರಾಮಸ್ಥರಾದ ಬಸವರಾಜ ಮಾಲಿಪಾಟೀಲ ಅತೃಪ್ತಿ ಹೊರಹಾಕಿದರು. 
 
ವಿದ್ಯುತ್‌ ಸಮಸ್ಯೆ ಪ್ರಮುಖವಾಗಿದೆ, ಹಗಲಿನಲ್ಲಿ ಮೂರು ತಾಸು ಕೂಡ ವಿದ್ಯುತ್‌ ಇರುವುದಿಲ್ಲ, ಹಾಗಾಗಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಈ ಬಗ್ಗೆ ಜೆಸ್ಕಾಂ ಎಂಜಿನಿಯರ್‌ಗಳಿಗೆ ಈ ಬಗ್ಗೆ ಹೇಳಿದರೆ ನಿರ್ಲಕ್ಷ್ಯ ವಹಿಸುತ್ತಾರೆ. ಹಾಗಾಗಿ ಜನ ಜಾನುವಾರುಗಳ ಸ್ಥಿತಿ ದೇವರಿಗೆ ಪ್ರೀತಿ ಎಂದು ಜನ ವಿವರಿಸಿದರು.
 
ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿರ್ಮಿಸಿರುವ ಶುದ್ಧಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಿದೆ. ತಾಂತ್ರಿಕ ಸಮಸ್ಯೆ ಮತ್ತು ನಿರ್ವಹಣೆ ವಿಷಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ನಿಗಮದ ನಡುವೆ ಸಮನ್ವಯ ಕೊರತೆಯಿಂದ ಜನರಿಗೆ ಶುದ್ಧ ನೀರು ದೊರೆಯುತ್ತಿಲ್ಲ ಎನ್ನಲಾಗಿದೆ. ಈ ಕುರಿತು ವಿವರಿಸಿದ ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಶೇಖದಾದೂ ಕಿಡದೂರು, ಯಂತ್ರಗಳು ದುರಸ್ತಿಯಲ್ಲಿರುವುದು ತಿಳಿದಿದೆ, ಈ ಬಗ್ಗೆ ಸಂಬಂಧಿಸಿದ ಏಜೆನ್ಸಿಯವರನ್ನು ಸಂಪರ್ಕಿಸುವುದಾಗಿ ಹೇಳಿದರು.
 
ಈ ಬಾರಿ ಬರ ಪರಿಸ್ಥಿತಿ ಭೀಕರವಾಗಿದೆ, ಜನರ ಕೈಗೆ ಕೆಲಸವಿಲ್ಲ, ಉದ್ಯೋಗ ಖಾತರಿ ಯೋಜನೆ ಕೆಲಸ ಕಾಮಗಾರಿಗಳು ನಡೆಯದಕಾರ ಜನರು ದೂರದ ನಗರಗಳಿಗೆ ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕೊರತೆ ಎದುರಾಗಿದೆ, ಸ್ವಚ್ಛಭಾರತ ಅಭಿಯಾನದಲ್ಲಿ ದಾಖಲೆಯಲ್ಲಿ ಮಾತ್ರ ಶೌಚಾಲಯಗಳಿದ್ದು ಬಯಲು ಬಹಿರ್ದೆಸೆ ಪದ್ಧತಿ ಯಥಾರೀತಿ ಮುಂದುವರೆದಿದೆ. ಈ ಯೋಜನೆಯಲ್ಲಿ ಹಣ ಸದ್ಬಳಕೆಯಾಗಿಲ್ಲ ಎಂಬ ಆರೋಪಗಳು ಕೇಳಿಬಂದವು. 
 
* ನೀರಿನ ಕೊರತೆ ನೀಗಿಸಲು ₹ 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕೊಳವೆಬಾವಿ ತೋಡಿ ಪೈಪ್‌ಮಾರ್ಗ ಅಳವಡಿಸಿ ಸಮಸ್ಯೆಗೆ ಪರಿಹಾರ ರೂಪಿಸುತ್ತೇವೆ.
ಕೆ.ಮಹೇಶ್‌, ಹಿರೇಮನ್ನಾಪುರ ಜಿ.ಪಂ ಸದಸ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT