ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ ಹಾಳು ಮಾಡುವವರ ಹೊರಹಾಕಲೂ ಸಿದ್ಧ

ವಿರೋಧ ಪಕ್ಷ, ಆಡಳಿತ ಪಕ್ಷ ಸದಸ್ಯರಿಗೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಎಚ್ಚರಿಕೆ
Last Updated 7 ಮಾರ್ಚ್ 2017, 6:53 IST
ಅಕ್ಷರ ಗಾತ್ರ
ಕೊಪ್ಪಳ:  ಡೈರಿ, ಸಿಡಿ ಎಂದು ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ– ಪ್ರತ್ಯಾರೋಪ ಮಾಡುತ್ತಾ ವಿಧಾನಸಭಾ ಅಧಿವೇಶನ ಹಾಳು ಮಾಡಿದರೆ ಅಂಥವರನ್ನು ಹೊರಹಾಕಲೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಎಚ್ಚರಿಸಿದರು. 
 
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ತೀವ್ರ ಬರಗಾಲ ಎದುರಿಸುವ ಸಂದರ್ಭದಲ್ಲಿ ಒಬ್ಬರು ಡೈರಿ ಎನ್ನುತ್ತಾರೆ. ಇನ್ನೊಬ್ಬರು ಸಿಡಿ ಅನ್ನುತ್ತಾರೆ. ಈ ಎಲ್ಲ ಚರ್ಚೆಗಳಿಗೆ ಇದು ಸಂದರ್ಭ ಅಲ್ಲ. ಆದ್ದರಿಂದ ಬರ ಪರಿಸ್ಥಿತಿ ಎದುರಿಸುವ ಕುರಿತು ಉಭಯ ಪಕ್ಷಗಳು ಚರ್ಚೆ ನಡೆಸಿ ಪರಿಹಾರ ಸೂತ್ರ ಕಂಡುಕೊಳ್ಳಬೇಕು ಎಂದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗ ಇದ್ದ ಸ್ವಾತಂತ್ರ್ಯ, ನಿರ್ಧಾರ ಕೈಗೊಳ್ಳುವ ಶಕ್ತಿ ಅವರಿಗೆ ಕಾಂಗ್ರೆಸ್‌ನಲ್ಲಿ ಇಲ್ಲ. ಮೂಲ ಕಾಂಗ್ರೆಸಿಗರು– ವಲಸೆ ಕಾಂಗ್ರೆಸಿಗರು ಎಂಬ ಬೇಧ ಇನ್ನೂ ಇದೆ ಎಂದು ಅವರೇ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನಾವಿಬ್ಬರೂ ಆತ್ಮೀಯರು.  ಹೀಗೆ ಬಹಿರಂಗವಾಗಿ ಹೇಳಲಾಗದ ಎಷ್ಟೋ ವಿಷಯಗಳನ್ನೂ ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು. 
 
ಎಡವಿದ ಸರ್ಕಾರ: ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಹಾಗೂ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ– ಈ ಎರಡು ವಿಚಾರಗಳಲ್ಲಿ ಸರ್ಕಾರ ಎಡವಿದೆ. ಸಿದ್ದರಾಮಯ್ಯ ಅವರು  ಒಲ್ಲದ ಮನಸ್ಸಿನಿಂದ ಆ ಕಡತಗಳಿಗೆ ಸಹಿ ಹಾಕಿದ್ದಾರೆ. ಉಕ್ಕಿನ ಸೇತುವೆ ನಿರ್ಧಾರವನ್ನು ಬಳಿಕ ಹಿಂತೆಗೆದುಕೊಂಡರು. ಅದು ಬೇರೆ ವಿಚಾರ. ಆದರೆ, ಈ ವಿಚಾರಗಳಲ್ಲಿ ಮುಖ್ಯಮಂತ್ರಿಗೆ ತೀವ್ರ ಒತ್ತಡ ಇತ್ತು ಎಂದರು.
 
ಮಹಾದಾಯಿ ವಿಚಾರದಲ್ಲಿ ಬಿಜೆಪಿ ಶೇ 100ರಷ್ಟು ರಾಜಕೀಯ ಮಾಡಿದೆ. ನಮ್ಮ ವಕೀಲರೂ ಸರಿಯಾದ ಮಾಹಿತಿ ಇದ್ದು ವಾದ ಮಂಡಿಸಬೇಕಿತ್ತು. ಇದೇ ರೀತಿ ಕೇಂದ್ರ ಸರ್ಕಾರಕ್ಕೆ ವ್ಯಾಪಾರಿಗಳ ಮೇಲಿರುವಷ್ಟು ಕಾಳಜಿ ರೈತರ ಮೇಲೆ ಇಲ್ಲ. ಚುನಾವಣೆ ಮುಂದಿಟ್ಟುಕೊಂಡು ಸ್ವಲ್ಪ ಸಾಲ ಮನ್ನಾ ಮಾಡಬಹುದೇನೋ ಎಂದು ಅಭಿಪ್ರಾಯಪಟ್ಟರು. 
 
ಜೆಡಿಎಸ್‌ ಸಂಘಟನೆ: ನಮ್ಮಲ್ಲೂ ಸ್ವಲ್ಪ ಅಭಿಪ್ರಾಯ ಬೇಧಗಳಿವೆ. ಕೆಲವರು ಪಕ್ಷ ಬಿಟ್ಟು ಹೊರ ಹೋಗುತ್ತಿದ್ದಾರೆ. ಕೆಲವರು ಬರುತ್ತಿದ್ದಾರೆ. ಈ ವರ್ಷ ಡಿ. 31ರವರೆಗೆ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ನಂತರ ಅಸಾಧ್ಯ. ಜೆಡಿಎಸ್‌ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದೆ ಎಂದರು.  ಮಧು ಬಂಗಾರಪ್ಪ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮಧು ಬಂಗಾರಪ್ಪ ಯಾವತ್ತೂ ಜೆಡಿಎಸ್‌ ತೊರೆಯುವುದಿಲ್ಲ. ಈಗ ಬಂದಿರುವುದು ಕಾಗೋಡು ತಿಮ್ಮಪ್ಪ ಅವರ ಮಾತಿಗೆ ಮಧು ಅವರು ನೀಡಿದ ಪ್ರತಿಕ್ರಿಯೆ ಅಷ್ಟೆ ಎಂದರು. 
 
ಕುಮಾರಸ್ವಾಮಿ ಅವರ ಹುಬ್ಬಳ್ಳಿ ವಾಸ್ತವ್ಯ ಮಂಕಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರಿಗೂ ಪ್ರತಿಸ್ಪರ್ಧಿ ಅಲ್ಲ. ನನ್ನದೇನಿದ್ದರೂ 2ನೇ ಸ್ಥಾನ. ಅದು ಕಾಯಂ ಆಗಿಯೇ ಉಳಿಯುತ್ತದೆ. ಕುಮಾರಸ್ವಾಮಿ ಅವರ ಅನಾರೋಗ್ಯ, ಒತ್ತಡದ ಕಾರಣದಿಂದ ಅವರು ಬೆಂಗಳೂರಿನಲ್ಲಿಯೇ ಉಳಿದು ಮುಖಂಡರನ್ನು ಕರೆಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದರು. 
 
ಅನ್ಸಾರಿಗೆ ಜೆಡಿಎಸ್‌ ಟೀಕಿಸುವ ನೈತಿಕತೆ ಇಲ್ಲ
ಗಂಗಾವತಿ:
  ಗಂಗಾವತಿಯಲ್ಲಿ  ತಾನಿದ್ದರೆ ಮಾತ್ರ ಪಕ್ಷ, ಇಲ್ಲವಾದಲ್ಲಿ ಜೆಡಿಎಸ್ ನಾಮಾವಶೇಷ ಎಂದು ಶಾಸಕ  ಇಕ್ಬಾಲ್‌ ಅನ್ಸಾರಿ ಬೀಗುತ್ತಿರುವ ಮಾಹಿತಿ ಕಾರ್ಯಕರ್ತರಿಂದ ಗಮನಕ್ಕೆ ಬಂದಿದೆ.  ಕಾಂಗ್ರೆಸ್, ಜೆಡಿಎಸ್ ಹೀಗೆ ಪಕ್ಷದಿಂದ ಪಕ್ಷಕ್ಕೆ ನೆಗೆಯುವ  ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕಿಸಲು ನೈತಿಕತೆ ಇಲ್ಲ ಜೆಡಿಎಸ್‌ನ ಹಿರಿಯ ಮುಖಂಡ ಶಾಸಕ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷ ಕರೆದು ಅಧಿಕಾರ ಕೊಟ್ಟಾಗ ಎಚ್.ಡಿ. ಕುಮಾರಸ್ವಾಮಿ ಹೆಸರಲ್ಲಿ ಪ್ರಮಾಣವಚನ ಮಾಡಿದ್ದ ಅನ್ಸಾರಿಗೆ ಪಕ್ಷದ ಯಾವ ನೈತಿಕ ತತ್ವ, ಸಿದ್ಧಾಂತಗಳಿವೆ? ಈ ಬಾರಿ ಅನ್ಸಾರಿ ಹೊರತು ಪಡಿಸಿಯೂ ಗಂಗಾವತಿಯಲ್ಲಿ ಪಕ್ಷಕ್ಕೆ  ಎಷ್ಟು ಶಕ್ತಿ ಇದೆ ಎಂಬುವುದನ್ನು ತೋರಿಸುತ್ತೇವೆ ಎಂದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ  ನಿರೀಕ್ಷೆಯ ವಾತಾವರಣವಿದೆ. ಮಾರ್ಚ್‌ 15ರಂದು ಬೆಂಗಳೂರಿನಲ್ಲಿ ಪಕ್ಷದ ಕಚೇರಿ ಉದ್ಘಾಟಿಸಲಿದ್ದು, ಅಂದೇ ರಾಜ್ಯದ 105 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಸರ್ಕಾರ ವಿಫಲ:  163 ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಜನ–ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಸರ್ಕಾರ ಬರ ಎದುರಿಸಲು ವಿಫಲವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಚುರುಕುಮುಟ್ಟಿಸಬೇಕಾದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ ಎಂದರು. ಪ್ರಮುಖರಾದ ಪ್ರದೀಪ್ ರೆಡ್ಡಿ, ಬಸವರಾಜ ಕೊರವಿ, ಪುಷ್ಪಾಗವಿಸಿದ್ದಪ್ಪ, ವೀರೇಶ ಮಹಾಂತಯ್ಯನ ಮಠ, ವಿರುಪಾಕ್ಷಗೌಡ ಹೇರೂರು, ಸಿ.ಎಂ. ಹಿರೇಮಠ, ಕೆ. ಬಾಲಪ್ಪ, ಆರ್.ಪಿ. ರೆಡ್ಡಿ, ಬುಲ್ಲೆಟ್ ಗೌಡ, ಬಸವರೆಡ್ಡಿ ಹೇರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT