ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ದಾಖಲಿಸಲು ನಗರಸಭೆ ಸದಸ್ಯರ ಒತ್ತಾಯ

ಮಹಿಳಾ ಸಮಾಜ ಕಡತ ನಾಪತ್ತೆ ಪ್ರಕರಣ; ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಭೇಟಿ
Last Updated 7 ಮಾರ್ಚ್ 2017, 8:34 IST
ಅಕ್ಷರ ಗಾತ್ರ
ಕೋಲಾರ: ‘ನಗರಸಭೆಗೆ ಸೇರಿದ ಜಾಗವನ್ನು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಗೆ ನಿಯಮಬಾಹಿರವಾಗಿ ನೆಲಬಾಡಿಗೆಗೆ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ಕಡತ ಕಾಣೆಯಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು’ ಎಂದು ನಗರಸಭೆಯ ಕೆಲ ಸದಸ್ಯರು ಆಯುಕ್ತರಿಗೆ ಆಗ್ರಹಿಸಿದರು.
 
ನಗರದಲ್ಲಿ ಸೋಮವಾರ ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಅವರನ್ನು ಭೇಟಿಯಾದ ನಗರಸಭಾ ಸದಸ್ಯ ಎಸ್‌.ಆರ್‌.ಮುರಳೀಗೌಡ ನೇತೃತ್ವದ ನಿಯೋಗವು, ಮಹಿಳಾ ಸಮಾಜಕ್ಕೆ ನಗರಸಭೆ ಜಾಗವನ್ನು ಕಾನೂನುಬಾಹಿರವಾಗಿ ನೆಲಬಾಡಿಗೆಗೆ ನೀಡಿರುವ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದೆವು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ವಾದ ನಡೆಸಿದರು.
 
‘ನಗರಸಭೆಯ ಹಿಂದಿನ ಅಧ್ಯಕ್ಷ ಬಿ.ಎಂ.ಮುಬಾರಕ್‌ ಅವರು ಸಾಮಾನ್ಯ ಸಭೆಯಲ್ಲಿ ನಿಯಮಬಾಹಿರವಾಗಿ ನಿರ್ಣಯ ಕೈಗೊಂಡು ನಗರಸಭೆಗೆ ಸೇರಿದ ಕೋಟ್ಯಂತರ ರೂಪಾಯಿ ಜಾಗವನ್ನು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಗೆ 12 ವರ್ಷಗಳ ಅವಧಿಗೆ ನೆಲಬಾಡಿಗೆಗೆ ಕೊಟ್ಟಿದ್ದಾರೆ. 
 
ಇದಕ್ಕೆ ಪ್ರತಿಯಾಗಿ ಸಂಸ್ಥೆಯು ಪಾವತಿಸಿರುವ ₹ 36.08 ಲಕ್ಷ ಮೊತ್ತವು ನಗರಸಭೆಯ ಬೊಕ್ಕಸ ಸೇರಿಲ್ಲ’ ಎಂದು ಮುರಳೀಗೌಡ ಆರೋಪಿಸಿದರು. ನಗರಸಭಾ ಸದಸ್ಯ ರಾಧಾಕೃಷ್ಣ ಅವರ ಪತ್ನಿ ಕಮಲಾ ಅವರು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. 
 
ಪುರಸಭೆ ಕಾಯ್ದೆ 1964ರ ಪ್ರಕಾರ ಲಾಭದಾಯಕ ಹುದ್ದೆಯಲ್ಲಿರುವ ನಗರಸಭಾ ಸದಸ್ಯರು ಅಥವಾ ಅವರು ಕುಟುಂಬ ವರ್ಗದವರನ್ನು ಒಳಗೊಂಡ ಸಂಘ ಸಂಸ್ಥೆಗಳಿಗೆ ಯಾವುದೇ ಉದ್ದೇಶಕ್ಕೆ ನಗರಸಭೆ ಆಸ್ತಿಯನ್ನು ಕೊಡುವಂತಿಲ್ಲ. ಆದರೂ ನಿಯಮಬಾಹಿರವಾಗಿ ಮಹಿಳಾ ಸಮಾಜಕ್ಕೆ ನಗರಸಭೆ ಜಾಗವನ್ನು ನೆಲಬಾಡಿಗೆಗೆ ಕೊಡಲಾಗಿದೆ ಎಂದು ದೂರಿದರು.
 
ಸ್ಥಳೀಯ ಸಂಸ್ಥೆಗಳ ಜಾಗವನ್ನು ಯಾವುದೇ ಸಂಘ ಸಂಸ್ಥೆಗಳಿಗೆ ಕೊಡುವಾಗ ನಿಯಮದ ಪ್ರಕಾರ ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ನಿರ್ದೇಶನಾಲಯದ ಅನುಮತಿ ಪಡೆಯಬೇಕು. ಆದರೆ, ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಪ್ರಕರಣದಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ನಿರ್ದೇಶನಾಲಯದ ಗಮನಕ್ಕೆ ತರದೆ ಜಾಗವನ್ನು ನೆಲಬಾಡಿಗೆಗೆ ಕೊಡಲಾಗಿದೆ ಎಂದು ಹೇಳಿದರು.
 
ಮಾಹಿತಿ ಇಲ್ಲ: ‘ನಗರಸಭೆ ವರ್ಗಾವಣೆಯಾಗಿ ಬಂದು ಐದು ತಿಂಗಳಾಗಿದೆ. ಮಹಿಳಾ ಸಮಾಜ ಸಂಸ್ಥೆಗೆ ನಗರಸಭೆ ಜಾಗವನ್ನು ನೆಲಬಾಡಿಗೆಗೆ ಕೊಟ್ಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಲ್ಲದೇ, ಕಂದಾಯ ವಿಭಾಗದ ಸಿಬ್ಬಂದಿ ಬಳಿಯೂ ಸರಿಯಾದ ಮಾಹಿತಿ ಇಲ್ಲ’ ಎಂದು ನಗರಸಭೆ ಆಯುಕ್ತ ರಾಮ್‌ಪ್ರಕಾಶ್‌ ತಿಳಿಸಿದರು.
 
ಇದರಿಂದ ಕೋಪಗೊಂಡ ಸದಸ್ಯ ಮುರಳೀಗೌಡ, ‘ನಗರಸಭೆಯಲ್ಲಿನ ಕಡತಗಳು ನಾಪತ್ತೆಯಾಗಿರುವುದಕ್ಕೆ ಯಾರು ಜವಾಬ್ದಾರಿ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ವಹಿಸಿಕೊಂಡು 5 ತಿಂಗಳು ಕಳೆದರೂ ಈ ಬಗ್ಗೆ ಯಾಕೆ ಪರಿಶೀಲನೆ ಮಾಡಿಲ್ಲ. ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸದಂತೆ ರಾಜಕೀಯ ಒತ್ತಡವಿದೆಯೇ’ ಎಂದು ಹರಿಹಾಯ್ದರು.
 
ಬಳಿಕ ಆಯುಕ್ತರು, ‘ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಂದಾಯ ವಿಭಾಗದ ಸಿಬ್ಬಂದಿಗೆ ಸೂಚಿಸಿದ್ದೇನೆ. ಸಿಬ್ಬಂದಿ ಸದ್ಯದಲ್ಲೇ ವರದಿ ನೀಡಲಿದ್ದಾರೆ.  ವರದಿ ಪರಿಶೀಲಿಸಿ ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ನೋಟಿಸ್‌ ನೀಡಬೇಕೆ ಅಥವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕೆ ಎಂಬ ಬಗ್ಗೆ 8 ದಿನದೊಳಗೆ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ನಗರಸಭಾ ಸದಸ್ಯರಾದ ಸೋಮಶೇಖರ್‌, ಮಂಜುನಾಥ್‌, ನಾಮನಿರ್ದೇಶಿತ ಸದಸ್ಯರಾದ ಎಚ್‌.ಎಸ್‌.ಶ್ರೀಧರ್‌, ಬಿ.ಪಿ.ನಾಗರಾಜ್‌ ನಿಯೋಗದಲ್ಲಿದ್ದರು. 
 
ನೆಲಬಾಡಿಗೆ ವಿಚಾರ ಗಮನಕ್ಕೆ ತಂದಿಲ್ಲ
‘ಮಹಿಳಾ ಸಮಾಜಕ್ಕೆ ಕೊಟ್ಟಿರುವ ಜಾಗವು ನನ್ನ ವಾರ್ಡ್‌ನ ವ್ಯಾಪ್ತಿಯಲ್ಲಿದೆ. ಹಿಂದಿನ ಅಧ್ಯಕ್ಷರು ಆ ಜಾಗವನ್ನು ಮಹಿಳಾ ಸಮಾಜಕ್ಕೆ ನೆಲಬಾಡಿಗೆಗೆ ಕೊಡುವ ಸಂಗತಿಯನ್ನು ನನ್ನ ಗಮನಕ್ಕೆ ತಂದಿಲ್ಲ. ನನಗೆ ತಿಳಿಯದಂತೆ ಜಾಗ ಕೊಟ್ಟು ಅಕ್ರಮ ಎಸಗಿದ್ದಾರೆ’ ಎಂದು ನಗರಸಭಾ ಸದಸ್ಯ ರವೀಂದ್ರ ಕಿಡಿಕಾಡಿದರು.

‘ಈ ಅಕ್ರಮಕ್ಕೆ ಸಂಬಂಧಪಟ್ಟ ಕಡತ ನಾಪತ್ತೆಯಾಗಿರುವ ಸಂಗತಿಯನ್ನು ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದೆವು. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆಯೂ ಒತ್ತಾಯಿಸಿದ್ದೆವು. ಆದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT