ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆಯಲ್ಲಿ ಅಧಿಕಾರಿಗಳು ಜೀತದಾಳು

ಶಾಸಕ ವರ್ತೂರು ವಿರುದ್ಧ ಶ್ರೀನಿವಾಸಗೌಡ ವಾಗ್ದಾಳಿ, ವೈದ್ಯಕೀಯ ಚಿಕಿತ್ಸೆಗಾಗಿ ₹6 ಲಕ್ಷ ಆರ್ಥಿಕ ನೆರವು ವಿತರಣೆ
Last Updated 7 ಮಾರ್ಚ್ 2017, 8:45 IST
ಅಕ್ಷರ ಗಾತ್ರ
ಕೋಲಾರ: ‘ಅಧಿಕಾರಿಗಳನ್ನು ಮನೆಯ ಜೀತದಾಳುಗಳಾಗಿ ಮಾಡಿಕೊಂಡಿರುವ ಕ್ಷೇತ್ರದ ಶಾಸಕರು ಸರ್ಕಾರದ ಸವಲತ್ತುಗಳನ್ನು ತಮ್ಮ ಮನೆ ಬಳಿ ವಿತರಣೆ ಮಾಡುತ್ತಿದ್ದಾರೆ. ಇದು ನ್ಯಾಯಸಮ್ಮತವಲ್ಲ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ವಾಗ್ದಾಳಿ ನಡೆಸಿದರು.
 
ನಗರದಲ್ಲಿ ಸೋಮವಾರ ಇಫ್ಕೊ ಟೋಕಿಯೊ ಸಂಸ್ಥೆ ವತಿಯಿಂದ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ₹ 6 ಲಕ್ಷ ಆರ್ಥಿಕ ನೆರವಿನ ಚೆಕ್‌ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಿಸಬೇಕು. ಆದರೆ, ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಮನೆಯ ಬಳಿ ಸವಲತ್ತು ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
 
ಗಂಗಾ ಕಲ್ಯಾಣ ಯೋಜನೆಯ ಪರಿಕರಗಳನ್ನು ಶಾಸಕರ ಮನೆಯ ಬಳಿ ವಿತರಿಸುತ್ತಿರುವುದರಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಧಿಕಾರಿಗಳು ಈ ವಿಷಯದಲ್ಲಿ ತಟಸ್ಥ ಧೋರಣೆ ತಳೆದಿರುವುದು ಆಶ್ಚರ್ಯಕರ. ಅಧಿಕಾರಿಗಳಿಗೆ ಶಾಸಕರು ಸಂಬಳ ಕೊಡುತ್ತಿದ್ದಾರೊ ಅಥವಾ ಸರ್ಕಾರ ಸಂಬಳ ಕೊಡುತ್ತಿದೆಯೊ ಎಂದು ಪ್ರಶ್ನಿಸಿದರು.
 
‘ವರ್ತೂರು ಪ್ರಕಾಶ್‌ ಕೆಳ ಮಟ್ಟಕ್ಕಿಳಿದು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಶಾಸಕ ಸ್ಥಾನಕ್ಕೆ ಶೋಭೆಯಲ್ಲ. ಇಫ್ಕೊ ಟೋಕಿಯೊ ಸಂಸ್ಥೆಯ ಕಚೇರಿಗಳು ದೆಹಲಿ ಮತ್ತು ಬೆಂಗಳೂರಿನಲ್ಲಿ ಇರುವುದರಿಂದ ಜಿಲ್ಲೆಯ ಫಲಾನುಭವಿಗಳನ್ನು ಅಲ್ಲಿಗೆ ಕರೆದೊಯ್ದು ಸರ್ಕಾರದ ಸವಲತ್ತುಗಳನ್ನು ನೀಡುವುದು ಕಷ್ಟ. ಹೀಗಾಗಿ ನಗರದ ನನ್ನ ನಿವಾಸದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಿದ್ದೇನೆ’ ಎಂದರು.
 
ಶಾಸಕರು ಕಾನೂನುಬದ್ಧವಾಗಿ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತು ಹಂಚಿಕೆ ಮಾಡಬೇಕು. ಅದನ್ನು ಬಿಟ್ಟು ಮನೆ ಬಳಿ ತಮಗೆ ಬೇಕಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರಿ ಸವಲತ್ತು ಹಂಚುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. 
 
ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಹೆಚ್ಚಿನ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು. ಕುಡಿಯುವ ನೀರು ಇಲ್ಲದೆ ಸಾರ್ವಜನಿಕರು, ಜಾನುವಾರುಗಳು ಪರಿತಪಿಸುವಂತಾಗಿದೆ. ಹೀಗಾಗಿ ಸಮರ್ಪಕ ನೀರು ಪೂರೈಕೆಗೆ ಪ್ರಥಮ ಆದ್ಯತೆ ಕೊಡಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
 
ಗೆಲ್ಲುವ ವಿಶ್ವಾಸ: ತಾನು ಮೂರು ಬಾರಿ ಶಾಸಕನಾಗಿ, ಸಚಿವನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ತಂತ್ರಗಾರಿಕೆಯಿಂದ ಸೋತೆ. ಆದರೆ, ಈ ಬಾರಿ ಅಂತಹ ವಾತಾವರಣವಿಲ್ಲ. ಮತಗಳು ಹಂಚಿ ಹೋಗಲು ಕಾರಣರಾದವರೇ ಈ ಬಾರಿ ತನ್ನನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮುಖಂಡರು ತನ್ನ ಜತೆ ಕೈಜೋಡಿಸಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸ ಬಯಸಬಹುದು. ಆದರೆ, ಅಂತಿಮವಾಗಿ ಪಕ್ಷವು ಯಾರನ್ನು ಚುನಾವಣಾ ಕಣಕ್ಕಿಳಿಸಬೇಕೆಂದು ನಿರ್ಧಾರ ಮಾಡುತ್ತದೆ. ಜೆಡಿಎಸ್‌ನ ಮೂವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಕೆಲ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕ್ಷೇತ್ರದ ಕಡೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಕೋಚಿಮುಲ್‌ ಮಾಜಿ ನಿರ್ದೇಶಕ ರಾಮೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಧ್ಯಕ್ಷ ಸೋಮಣ್ಣ, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಉಪಸ್ಥಿತರಿದ್ದರು.
 
ಪುಕ್ಕಟೆ ಪ್ರಚಾರ
ತಾನು ಯಾವುದೇ ಕೊಳವೆ ಬಾವಿಗೆ ಚಾಲನೆ ನೀಡಿಲ್ಲ. ಮನೆಯಿಂದ ಹೋಗುತ್ತಿರುವಾಗ ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವುದನ್ನು ಕಂಡು ನೀರು ಸಿಕ್ಕಿದೆಯೊ ಅಥವಾ ಇಲ್ಲವೊ ಎಂಬ ಕುತೂಹಲದಿಂದ ಹತ್ತಿರ ಹೋಗಿ ಪರಿಶೀಲಿಸಿದ್ದೆ. ಅದನ್ನು ಯಾರೂ ಫೋಟೊ ತೆಗೆದು ಅಪಪ್ರಚಾರ ಮಾಡಿದ್ದಾರೆ. ಪಟಾಕಿ ಹೊಡೆಸಿ ಪುಕ್ಕಟೆ ಪ್ರಚಾರ ಗಿಟ್ಟಿಸುವ ಸಂಸ್ಕೃತಿ ತನ್ನದಲ್ಲ.
–ಕೆ.ಶ್ರೀನಿವಾಸಗೌಡ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT