ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಮೌನ ಕ್ರಾಂತಿಯ ಹರಿಕಾರ

ವಿಚಾರ ಸಂಕಿರಣದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ಸುದರ್ಶನ್ ಬಣ್ಣನೆ
Last Updated 7 ಮಾರ್ಚ್ 2017, 8:52 IST
ಅಕ್ಷರ ಗಾತ್ರ
ಕೋಲಾರ: ‘ದೇವರಾಜ ಅರಸು ಎಂದರೆ ಸಾಮಾಜಿಕ ಸುಧಾರಣೆಯ ಹರಿಕಾರರಷ್ಟೇ ಅಲ್ಲ. ಅವರು ಮೌನ ಕ್ರಾಂತಿಯ ಹರಿಕಾರರು ಸಹ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಬಣ್ಣಿಸಿದರು.
 
ದೇವರಾಜ ಅರಸು ಸಂಶೋಧನಾ ಸಂಸ್ಥೆಯು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ದೇವರಾಜ ಅರಸು ಆಡಳಿತ ಕಾಲದ ಸುಧಾರಣೆಗಳು ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಎಷ್ಟೇ ಮೌನವಾಗಿದ್ದರೂ ದೊಡ್ಡ ಕಾಂತ್ರಿಯನ್ನೇ ಸೃಷ್ಟಿಸಿದರು ಎಂದು ಅಭಿಪ್ರಾಯಪಟ್ಟರು.
 
ದೇವರಾಜ ಅರಸು 1972ರಿಂದ 1979ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಅನುಷ್ಠಾನಗೊಂಡ ಜನಪರ ಕಾರ್ಯಕ್ರಮಗಳು ಚಾರಿತ್ರಿಕ ದಾಖಲೆಗಳಾಗಿ ಉಳಿದಿವೆ. ಅಲ್ಲದೇ, ಇತಿಹಾಸದ ಪುಟಗಳನ್ನು ಸೇರಿವೆ. ಅರಸು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅವರಿಗೆ ಸರಿಸಮನಾಗಿ ಆಡಳಿತ ನೀಡುವಲ್ಲಿ ವಿಫಲವಾಗಿವೆ ಎಂದರು.
 
ಅರಸು ಕೇವಲ ಬಡವರ ಬಗ್ಗೆಯಷ್ಟೇ ಆಲೋಚಿಸದೆ ರಾಜ್ಯದ ಅಭಿವೃದ್ಧಿ ಕಡೆಯೂ ಗಮನ ಹರಿಸಿದರು. ಬಡವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ದೃಷ್ಟಿಯಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಡವರಿಗೆ ಭೂಮಾಲೀಕತ್ವದ ಅಧಿಕಾರ ದೊರಕಿಸಿ ಕೊಡಬೇಕೆಂಬ ದೃಷ್ಟಿಯಿಂದ ಉಳುವವನೆ  ಒಡೆಯ ಕಾನೂನು ಜಾರಿಗೆ ತಂದರು. ಭೂರಹಿತರಿಗೆ ಭೂಮಿ ಕಲ್ಪಿಸಿಕೊಟ್ಟು ದಾರಿ ದೀಪವಾದರು ಎಂದು ತಿಳಿಸಿದರು.
 
ಸುಖಿ ರಾಜ್ಯ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಮಾತನಾಡಿ, ‘ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ, ಶ್ರದ್ಧೆ ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅರಸು ಜಾರಿಗೆ ತಂದ ಸುಧಾರಣಾ ಕಾರ್ಯಕ್ರಮಗಳು ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿವೆ. ಜನಪ್ರತಿನಿಧಿಗಳು ಅರಸು ದಾರಿಯಲ್ಲಿ ಸಾಗಿದರೆ ಸುಖಿ ರಾಜ್ಯ ನಿರ್ಮಾಣವಾಗುತ್ತದೆ’ ಎಂದರು.  
 
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೈಗೊಂಡ ಕ್ರಮಗಳಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ. ಮತ್ತೊಂದೆಡೆ ಆಡಳಿತ ಸುಧಾರಣೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬ ವಿವೇಚನೆಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.
 
ಸಾರ್ವತ್ರಿಕ ಚುನಾವಣೆಯಲ್ಲೇ ಜನತೆ ಯೋಗ್ಯರನ್ನು ಆಯ್ಕೆ ಮಾಡಬೇಕು. ಹಣ, ಹೆಂಡಕ್ಕೆ ಆಸೆ ಬೀಳದೆ ಜನಪರ ವ್ಯಕ್ತಿಗಳನ್ನು ಚುನಾಯಿಸಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಕೇಂದ್ರ ಸರ್ಕಾರ ಈ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.
 
ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಮಾದೇಗೌಡ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ, ಸದಸ್ಯ ನಂದೀಶ್, ಸಂಶೋಧನಾಧಿಕಾರಿ ವಿ.ರಾಮಸ್ವಾಮಿ, ಪ್ರಾಧ್ಯಾಪಕ ಆರ್.ಶಂಕರಪ್ಪ, ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಂಜುನಾಥ್ ಇದ್ದರು.
 
ಆಡಳಿತದಲ್ಲಿ ಅಜಗಜಾಂತರ ವ್ಯತ್ಯಾಸ
ಅರಸು ಕಾಲದ ಆಡಳಿತ ಹಾಗೂ ಈಗಿನ ಸರ್ಕಾರಗಳ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಸರ್ಕಾರಗಳು ಅರಸು ಕಾಲದಲ್ಲಿ ಆದ ಅಭಿವೃದ್ಧಿಯ ಬಗ್ಗೆ ಆಲೋಚಿಸಬೇಕು. ಅರಸು ಸಾಧನೆ ಕುರಿತು ವರದಿ ಅಥವಾ ವಾದ ಮಂಡಿಸಿದರೆ ಸಾಲದು. ಬದಲಿಗೆ ಅವರ ಸಾಧನೆ ಬಗ್ಗೆ ವಿದ್ಯಾರ್ಥಿಗಳು, ಚಿಂತಕರು ಅಧ್ಯಯನ ನಡೆಸಿ ಸಮಾಜಕ್ಕೆ ತಿಳಿಸಿ ಕೊಡಬೇಕು ಎಂದು ಕಿವಿಮಾತು ಹೇಳಿದರು.

ವೀರೇಂದ್ರ ಪಾಟೀಲ್, ದೇವರಾಜ ಅರಸು, ಕೆ.ಸಿ.ರೆಡ್ಡಿ, ದೇವೇಗೌಡ ಈ ರಾಜ್ಯವನ್ನು ಆಳಿದ ಶಕ್ತಿವಂತ ನಾಯಕರು. ಈ ಮಹಾನ್‌ ವ್ಯಕ್ತಿಗಳಿಗೆ ಸಮನಾಗಿ ಅಧಿಕಾರ ನಡೆಸುವಂತಹ ವ್ಯಕ್ತಿಗಳನ್ನು ಭವಿಷ್ಯದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT