ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಬೆಲೆ ಏರಿಕೆ:ಖಂಡನೆ

ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ
Last Updated 7 ಮಾರ್ಚ್ 2017, 9:29 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹ 86 ಏರಿಕೆ ಮಾಡಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. 
 
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಲಿಂಡರ್‌ನೊಂದಿಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಸಿಲಿಂಡರ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಘಟಕದ ಸಂಚಾಲಕ ಮೋಹನ್ ದಾಸರಿ, ‘ದೇಶದ ಜನರಿಗೆ ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಾ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ಆರೋಪಿಸಿದರು. 
 
‘ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮನಸ್ಸಿಗೆ ಬಂದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಡಿಸೇಲ್, ಪೆಟ್ರೋಲ್‌ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ. ಜನರನ್ನು ಸರ್ಕಾರವೇ ಹಗಲು ದರೋಡೆ ಮಾಡುತ್ತಿದೆ. ಎರಡು ತಿಂಗಳಿನಲ್ಲಿ ಎರಡು ಬಾರಿ ಅಡುಗೆ ಅನಿಲ ಸಿಲಿಂಡರ್ ಬೆಲೆ  ₹ 155ಕ್ಕೆ ಏರಿಕೆ ಮಾಡಲಾಗಿದೆ’ ಎಂದರು. 
 
‘ಜನರ ಜೀವನಮಟ್ಟ  ಉತ್ತಮಗೊಳಿಸುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಿದೆ. ಈವರೆಗೆ ಯಾರ ಜೀವನಮಟ್ಟವೂ ಸುಧಾರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗರಿಷ್ಠ ಮುಖ ಬೆಲೆಯ ನೋಟು ಬದಲಾವಣೆ ಸಂದರ್ಭದಲ್ಲಿ ಮೋದಿ ಅವರು 50 ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದಿದ್ದರು. ಆದರೆ ಮೂರು ತಿಂಗಳು ಕಳೆದರೂ ಜನರಿಗೆ ತೊಂದರೆ ತಪ್ಪಿಲ್ಲ’ಎಂದು ತಿಳಿಸಿದರು. 
 
‘ಒಬ್ಬ ವ್ಯಕ್ತಿ ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣ ಪಡೆಯಬಹುದು. ನಾಲ್ಕು ಸಲದ ನಂತರ ಹಣ ತೆಗೆದರೆ ಪ್ರತಿ ಬಾರಿಗೆ ₹150 ಶುಲ್ಕ ಪಾವತಿಸಬೇಕು ಎಂದು ರಿಸರ್ವ್ ಬ್ಯಾಂಕ್‌ ಸುತ್ತೋಲೆ ಹೊರಡಿಸಿದೆ. ಇದು ಜನಸಾಮಾನ್ಯರ ಹಣವನ್ನು ಬಹಿರಂಗವಾಗಿಯೇ ಕಿತ್ತುಕೊಳ್ಳುವ ಕೆಲಸ’ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
‘ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು, ಅಸ್ಪೃಶ್ಯತೆ, ಬಡತನದ ಕುರಿತು ತಲೆ ಕೆಡಿಸಿಕೊಳ್ಳದ ಸರ್ಕಾರ ಕೇವಲ ಸಾಮಾನ್ಯರಿಂದ ಹೇಗೆ ಹಣ ಲೂಟಿ ಮಾಡಬೇಕು ಎಂಬುದನ್ನಷ್ಟೇ ಯೋಚಿಸುತ್ತಿದೆ. ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 73 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ಇವೆಲ್ಲವನ್ನು ನೋಡಿದರೆ ನಮ್ಮನ್ನಾಳುವ ಸರ್ಕಾರಗಳಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯಿಲ್ಲ. ರಾಜ್ಯದಲ್ಲಿರುವ ಬರಪರಿಸ್ಥಿತಿಯನ್ನು ರಾಜಕೀಯ ಬದಿಗಿಟ್ಟು ಎದುರಿಸುವ ಕೆಲಸಗಳು ನಡೆಯಬೇಕು’ಎಂದರು. ಎಎಪಿ ನಗರ ಘಟಕದ ಅಧ್ಯಕ್ಷ ಶಂಶುದ್ದಿನ್, ಅಭಿ, ಪ್ರವೀಣ್, ತ್ಯಾಗರಾಜ್, ವಿಜಯ್, ಹೇಮಂತ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT