ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮವಾಹಿನಿ ಯೋಜನೆಗೆ ₹300 ಕೋಟಿ

ಮುದರಂಗಡಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ಶಾಸಕ ವಿನಯಕುಮಾರ್ ಸೊರಕೆ
Last Updated 7 ಮಾರ್ಚ್ 2017, 9:48 IST
ಅಕ್ಷರ ಗಾತ್ರ
ಪಡುಬಿದ್ರಿ: ರಾಜ್ಯ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ₹ 300 ಕೋಟಿ ಮೀಸಲಿರಿಸಲಾಗುತ್ತದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ ಮುದರಂಗಡಿಯಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
 
ಶಾಂಭವಿ ನದಿಯಿಂದ 10 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ₹ 58 ಕೋಟಿಯ ಯೋಜನೆಗೆ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಟೆಂಡರ್‌ ಹಂತದಲ್ಲಿದೆ. ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ಮೂಲಕ ಶಿರ್ವ- ಮುದರಂಗಡಿ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಮುದರಂಗಡಿ- ನಂದಿಕೂರು ರಸ್ತೆಯನ್ನು ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
 
ಶಿರ್ವ- ಪಿಲಾರು ರಸ್ತೆಯನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಕೇಂದ್ರಿಯ ರಸ್ತೆ ನಿಧಿಯಿಂದ ₹ 50 ಕೋಟಿ ಮಂಜೂರಾಗಿದೆ. ಎರಡನೇ ಹಂತದಲ್ಲಿಯೂ ಹಲವು ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಧ ಯೋಜನೆಗಳ ಮೂಲಕ ಸುಮಾರು ₹ 400 ಕೋಟಿ ಅನುದಾನವನ್ನು ಕಾಪು ಕ್ಷೇತ್ರಕ್ಕೆ ವಿನಿಯೋಗಿಸಲಾಗುವುದು ಎಂದು ಮಾಹಿತಿ ನೀಡಿದರು.   
 
ಗ್ರಾಮೀಣ ಪ್ರದೇಶಗಳಲ್ಲಿ ಮನೆ- ಶಾಲೆ ಇದ್ದಂತೆ ಆಸ್ಪತ್ರೆಗಳೂ ಅಗತ್ಯವಾಗಿದೆ. ವೈದ್ಯ ವೃತ್ತಿ ಪವಿತ್ರವಾಗಿದ್ದು, ವೃತ್ತಿಯನ್ನು ದುರುಪಯೋಗ ಮಾಡದೆ ರೋಗಿಗಳ ಕಷ್ಟ ಸುಖಗಳಲ್ಲಿ ಸ್ಪಂದಿಸಿ ಉತ್ತಮ ಸೇವೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ  ಉಪಾಧ್ಯಕ್ಷೆ ಶೀಲಾ ಶೆಟ್ಟಿ ವೈದ್ಯರಿಗೆ ಸಲಹೆ ನೀಡಿದರು.
 
ಕಟ್ಟಡ ನಿರ್ಮಾಣದ ಗುತ್ತಿಗೆದಾರ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಶಿಲ್ಪಾ ಸುವರ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ದಿನೇಶ್ ಕೋಟ್ಯಾನ್, ಕೇಶವ ಮೊಯಿಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡೇವಿಡ್ ಡಿಸೋಜ, ಜಿತೇಂದ್ರ ಪುಟಾರ್ಡೊ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಸಹಾಯಕ ಎಂಜಿನಿಯರ್ ರಘುಚಂದ್ರ ಹೆಬ್ಬಾರ್, ಡಿಎಚ್ಒ ಡಾ. ರೋಹಿಣಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರತ್ನ, ಮುದರಂಗಡಿ ಪಿಎಚ್ಸಿ ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಭು ಇದ್ದರು.
 
ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ ಸಲ್ಲಿಕೆ
ಕಾಪು ಕ್ಷೇತ್ರದ ಪಾದೂರಿನಲ್ಲಿ ಐಎಸ್‌ಪಿಆರ್ಎಲ್, ಎಲ್ಲೂರಿನಲ್ಲಿ ಯುಪಿಸಿಎಲ್ ಮತ್ತು ಪಡುಬಿದ್ರಿಯಲ್ಲಿ ಸುಜ್ಲಾನ್ ಯೋಜನೆಗಳು ಕಾರ್ಯಗತವಾಗಿ, ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಬೃಹತ್ ಉದ್ದಿಮೆಗಳು ಜನರ ಆರೋಗ್ಯ ಕೆಡಿಸಿ, ನಂತರ ಆರೋಗ್ಯ ವಿಮೆ ಮಾಡುವುದರ ಮೊದಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಶಾಸಕ ವಿನಯಕುಮಾರ್‌ ಸೊಕರೆ ಹೇಳಿದರು.

ಯುಪಿಸಿಎಲ್‌ನ 1200 ಮೆ.ವಾ. ಯೋಜನೆಯಿಂದ ಈಗಾಗಲೇ ಬಿಸಿಲ ತಾಪ ಹೆಚ್ಚಾಗಿದೆ. ಇನ್ನೂ 3,800 ಮೆ.ವಾ. ಯೋಜನೆ ನಿರ್ಮಾಣವಾದಲ್ಲಿ ಈ ಭಾಗದಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗಲಿದೆ. ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಗೆ ಒಪ್ಪಿಗೆ ಸೂಚಿಸಲು ಮುಂದಾಗಿರುವುದರಿಂದ ಆ ಭಾಗದ ಜನರು ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಾಮಾಜಿಕ ಅರಣ್ಯ ಹಾಗೂ 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಯುಪಿಸಿಎಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT