ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ

ಹಣ ದುಪ್ಪಟ್ಟು ಮಾಡಿಕೊಡುವ ಆಸೆ ಹುಟ್ಟಿಸಿದ ಏಜೆಂಟರು
Last Updated 7 ಮಾರ್ಚ್ 2017, 10:01 IST
ಅಕ್ಷರ ಗಾತ್ರ
ಅಜ್ಜಂಪುರ: ‘ಹಣ ಕಟ್ಟಿ, ಮುಂದೆ ಅನುಕೂಲ ಆಗುತ್ತೆ, ನಾಲ್ಕೇ ವರ್ಷಗಳಲ್ಲಿ ನಿಮ್ಮ ಹಣ ದುಪ್ಪಟ್ಟಾಗುತ್ತದೆ’ ಎಂಬ ಖಾಸಗಿ ಕಂಪೆನಿಯ ಏಜೆಂಟರ ಮಾತು ನಂಬಿ, ಹೆಚ್ಚಿನ ಹಣದ ಆಸೆಗೆ ಮೋಹ ಗೊಂಡು ಮಹಿಳೆಯರು ಲಕ್ಷಾಂತರ ರೂಪಾಯಿ ಹಣ ಕಳೆದು ಕೊಂಡಿರುವ ಪ್ರಕರಣ ಹೋಬಳಿಯ ನಾಗರಕಲ್ಲು ಎಂಬಲ್ಲಿ ಬೆಳಕಿಗೆ ಬಂದಿದೆ.
 
 ನೆರೆ ಹೊರೆಯವರೊಂದಿಗೆ ಬಾಜಿಗೆ ಬಿದ್ದವರಂತೆ, ಪ್ರತಿ ಕುಟುಂಬ 3 ರಿಂದ 6 ಪಾಲಿಸಿ ಮಾಡಿಸಿ, ನಿಗದಿತ 4 ವರ್ಷದವರೆಗೆ ಹಣವನ್ನೂ ಪಾವತಿಸಿದ ನಾಗರಕಲ್ಲು ರಸ್ತೆ ಮಹಿಳೆಯರು,  ಭರವಸೆ ನೀಡಿದಷ್ಟು ಹಣವಿರಲಿ, ಕಟ್ಟಿದ ಹಣವೇ ಕೈಸೇರದೇ  ಪರಿತಪಿಸುತ್ತಿದ್ದಾರೆ.
 
‘Hindustan Infraction (India) Limited, OWN A LAND, NISKA Vividhodesha Souharda Co-Operative Limited bengalure’ ಎಂಬ ಖಾಸಗಿ ಕಂಪನಿ ಗಳಿಗೆ ಹೊಟ್ಟೆ-ಬಟ್ಟೆ ಕಟ್ಟಿ ಪಾವತಿಸಿದ ಹಣ ಬಾರದಿರುವುದರಿಂದ ಬೇಸತ್ತ ಪಟ್ಟಣದ ನಾಗರಕಲ್ಲು ರಸ್ತೆಯ ಮಹಿಳೆ ಯರು, ಕಂತು ಪಾವತಿಸಿ ಕೊಳ್ಳುತ್ತಿದ್ದ ಕಂಪನಿ ಏಜೆಂಟರೊಬ್ಬರನ್ನು ಸೋಮ ವಾರ ಹಿಡಿದುಕೊಂಡು, ಹಣ ಕೊಟ್ಟು ಹೋಗುವಂತೆ ಘೇರಾವ್‌ ಹಾಕಿದರು.
 
ಹಿಂದುಳಿದ ಕೊರಚ, ಉಪ್ಪಾರ, ಕುರುಬ ಜಾತಿಗೆ ಸೇರಿದ, ಬುಟ್ಟಿ ಎಣಿದು, ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಇಲ್ಲಿನ ನೂರಾರು ಅನಕ್ಷರಸ್ಥ ಮಹಿಳೆಯರು, ಬರುವ ಹಣದಲ್ಲಿ ಮಗಳ ಮದುವೆ, ಮನೆ, ಕಟ್ಟಡ ಕಾಮಗಾರಿ ನಡೆಸೋಣ ಎಂಬ ಆಶಯ ಹೊಂದಿ, ವಿಮಾ ಕಂಪೆನಿಗಳಿಗೆ ಹಣ ಪಾವತಿಸಿದ್ದಾರೆ. ಆದರೆ ಬಾಂಡ್‌  ನಲ್ಲಿದ್ದ ಮುಕ್ತಾಯ ದಿನಾಂಕ ಮುಗಿದು ವರ್ಷಗಳೇ ಕಳೆದರೂ, ಹಣ ಬಾರದಿರು ವುದರಿಂದ, ಏಜೆಂಟ್ ಹಾಗೂ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
‘ನಾವು, ಕಳೆ ಕೀಳೋದು, ಕಡಲೆ ಕೀಳೋದು, ಈರುಳ್ಳಿ ಕೆಲಸ ಹೀಗೆ ಹೊಲಗಳಲ್ಲಿ ಬಿಸಿಲು-ಮಳೆ ಎನ್ನದೇ ದುಡಿಯುತ್ತೇವೆ. ಬಳಿಕ ಮನೆ-ಮಕ್ಕಳ ನಿರ್ವಹಣೆಯನ್ನೂ ಮಾಡುತ್ತೇವೆ. ದುಡಿದುದರಲ್ಲಿ ಬಟ್ಟೆ-ಮನೆಗೆ ಸಾಮಾನು- ಸರಂಜಾಮು ಕೊಳ್ಳುವು ದಿರಲಿ, ಸಣ್ಣ ಮಗುವಿಗೊಂದು ಚಾಕಲೇಟ್‌ ಅನ್ನು ಕೊಡಿಸದೇ ಉಳಿಸಿ, ಒಂದು ತಿಂಗಳೂ ಬಾಕಿ ಇಲ್ಲದಂತೆ ಕಂತು ಕಟ್ಟಿದ್ದೆವು. ಆದರೆ ನಮಗೆ ಯಾವ ಹಣವೂ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
 
‘ನಾವು ಅನಕ್ಷರಸ್ಥರು. ಹಣ ಉಳಿತಾಯ ಮಾಡಬೇಕು ಎಂದು ಹಣ ಕಟ್ಟಿದೆವು. ಮುಕ್ತಾಯ ದಿನ ಕಳೆದು 2 ವರ್ಷಗಳೇ ಕಳೆದಿವೆ. ಆಗ ಹಣ ಕೈಸೇರದಿದ್ದರಿಂದ, ಏಜೆಂಟ್ ಮೇಲೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವು. ಯಾರನ್ನ ಕೇಳಿ ಹಣ ಕಟ್ಟಿದ್ದೀರಿ? ಬಾಂಡ್, ಹಣ ಪಾವತಿ ರಶೀದಿ ಹಿಡಿದು ಏನೂ ಮಾಡಾಕಾಗಲ್ಲ? ಹೋಗಿ-ಹೋಗಿ ಎಂದು ಕಳುಹಿಸಿದ್ದರು’ ಎನ್ನುತ್ತಾರೆ ಮಹಿಳೆಯರು.
 
ನಮ್ಮ ಬಳಿ ಹಣ ಕಟ್ಟಿದ ರಶೀದಿ ಗಳಿವೆ. ಇನ್ನು ಹಣ ಕೊಡಿಸುವುದಾಗಿ ಏಜೆಂಟರು ಮುಕ್ತಾಯ ಆಗಿರುವ ಬಾಂಡ್‌ಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈವರೆಗೂ ಹಣ ಮಾತ್ರ ಕೈಸೇರಿಲ್ಲ. ಅಕ್ಷರ ಜ್ಞಾನ ಇಲ್ಲದ ನಮಗೆ ಮೋಸ ಆಗಿದೆ. ಜಿಲ್ಲಾಧಿಕಾರಿಗಳಾಗಲೀ, ಹಿರಿಯ ಪೊಲೀಸ್ ಅಧಿಕಾರಿಗಳಾಗಲೀ, ಮಹಿಳಾ ಮತ್ತು ಮಕ್ಕಳ ಇಲಾಖೆ ಯಾಗಲೀ, ಹಿಂದುಳಿದ ವರ್ಗಗಳ ಇಲಾಖೆಯಾಗಲೀ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹಣ ಕಳೆದುಕೊಂಡ ಮಹಿಳೆಯರು ಅಂಗಲಾಚುತ್ತಾರೆ.
 
‘ನಾನು ಮಹಿಳೆಯರು ಕಟ್ಟಿದ ಹಣವನ್ನು ಕಂಪನಿಗೆ ಕಟ್ಟಿದ್ದೇನೆ. ಆದರೆ ಕಂಪನಿಯವರು ಮುಕ್ತಾಯ ಆದವರಿಗೆ ಹಣ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊಡಿಸುವುದಾಗಿ ತಿಳಿಸಿದ್ದಾರೆ’ ಎನ್ನು ತ್ತಾರೆ ಏಜೆಂಟ್ ಕರುಣಾಕರ ಆರಾಧ್ಯ. ಈ ಬಗ್ಗೆ ಸಂಭಂಧಪಟ್ಟವರು, ಹಣ ಪಡೆದಿರುವ ಖಾಸಗಿ ಕಂಪನಿಗಳೊಂದಿಗೆ ಮಾತೂಕತೆ ನಡೆಸಿ, ಹಣ ಪಾವತಿಸಿರುವ ಬಡ, ಅನಕ್ಷರಸ್ಥ, ಬಡ ಮಹಿಳೆಯರ ನೆರವಿಗೆ ಧಾವಿಸಿ, ನ್ಯಾಯ ಕೊಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.                                 
 
 
ಸ್ಥಳೀಯ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದರೆ ಅವರು ನಮ್ಮ ಹಣ ಕೊಡಿಸೋ ಭರವಸೆ ನಮಗಿಲ್ಲ. ಕೋರ್ಟ್-ಕೇಸು ಅಂತ  ಹೋಗಲು, ನಮ್ಮ ಬಳಿ ಹಣವೂ ಇಲ್ಲ
ರಾಧಮ್ಮ
ಹಣ ಕಳೆದುಕೊಂಡ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT