ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ–ಕಳಕೋಡು ರಸ್ತೆ ದುರಸ್ತಿಗೆ ಬದ್ಧತೆಯ ಕೊರತೆ

ರಸ್ತೆಯಲ್ಲೆಲ್ಲ ಗುಂಡಿಗಳು, ಮಣ್ಣು ತುಂಬಿಕೊಂಡ ಚರಂಡಿಗಳು
Last Updated 7 ಮಾರ್ಚ್ 2017, 10:03 IST
ಅಕ್ಷರ ಗಾತ್ರ
ಕಳಸ: ಈ ರಸ್ತೆಯನ್ನು  3ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಬಳಸುತ್ತಾರೆ. ಇದೇ ಗ್ರಾಮದಲ್ಲಿ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಇದ್ದಾರೆ. ಆದರೆ ಈ ರಸ್ತೆ ದುರಸ್ತಿಗೆ 10 ವರ್ಷಗಳಿಂದ ದುರಸ್ತಿ ಮಾಡಿಲ್ಲ.
 
– ಇದು 9 ಕಿ.ಮೀ ಉದ್ದದ ಕಳಸ–ಕಳಕೋಡು ರಸ್ತೆಯ ಕರುಣಾಜನಕ ಕಥೆ. ಕಳಸದ ಅರಳಿಕಟ್ಟೆಯಿಂದ ಆರಂಭವಾಗುವ ಈ ರಸ್ತೆಯನ್ನು ಅರಮನೆಮಕ್ಕಿ, ಕಳಸೇಶ್ವರ ನಗರ, ಮಕ್ಕಿಮನೆ, ಚಿಕ್ಕೊಡಿಗೆ, ಅಬ್ಬುಗುಡಿಗೆ, ಬಸವನ ತೋಟ, ಹೊಸೂರು, ಕೊಳಮಗೆ, ಆನಮಗೆ, ಚಿಪ್ಪಳಮಗೆ, ಕಳಕೋಡು, ಆಚೆ ಕಳಕೋಡು ಮತ್ತು ಕಾರ್ಲೆ ಗ್ರಾಮಸ್ಥರು ಬಳಸುತ್ತಾರೆ.
 
2004ರಲ್ಲಿ ನಿರ್ಮಾಣವಾದ ಈ ರಸ್ತೆಗೆ ಆನಂತರ ಮರು ಡಾಂಬರೀ ಕರಣದ ಭಾಗ್ಯವೇ ಒದಗಿಬಂದಿಲ್ಲ. ವರ್ಷಕ್ಕೆ ಸರಾಸರಿ 200 ಅಂಗುಲ ಮಳೆ ಬೀಳುವ ಈ ಪ್ರದೇಶದಲ್ಲಿ ಇದೀಗ ರಸ್ತೆಯಲ್ಲಿ ಡಾಂಬರು ಕಿತ್ತುಹೋಗಿ ರಸ್ತೆ ತುಂಬೆಲ್ಲ ಗುಂಡಿಗಳೇ ರಾರಾಜಿಸುತ್ತಿವೆ.

4 ತಿಂಗಳ ಹಿಂದೆ ರಸ್ತೆಯ ಗುಂಡಿ ಮುಚ್ಚಲು ಹಣ ಬಿಡುಗಡೆ ಆಗಿತ್ತು. ಆಗ ಗುಂಡಿಗಳಿಗೆ ತುಂಬಿದ್ದ ಜಲ್ಲಿ ಈಗ ಕಿತ್ತು ಬಂದಿದ್ದು, ಆ ಹಣವೂ ಪೋಲಾಗಿದೆ. ರಸ್ತೆ ಬದಿಯ ಚರಂಡಿಗಳೆಲ್ಲ 10 ವರ್ಷಗಳ ಮಳೆಗಾಲದ ಭೂಕುಸಿತದಿ ಂದಾಗಿ ಮಣ್ಣಿನಿಂದ ಮುಚ್ಚಿಕೊಂಡಿದೆ. ಮಳೆಗಾಲದಲ್ಲಿ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಿದ್ದು ರಸ್ತೆ ವರ್ಷ ಕಳೆದಂತೆ ಇನ್ನಷ್ಟು ಹದಗೆಡುತ್ತಿದೆ.
 
‘12 ವರ್ಷದಲ್ಲಿ ಒಂದೆರಡು ಸಲ ಗುಂಡಿ ಮುಚ್ಚಿದ್ದು ಬಿಟ್ಟರೆ ಈ ರಸ್ತೆ ದುರಸ್ತಿಗೆ ಪಂಚಾಯತ್‌ ರಾಜ್ ಇಲಾಖೆ ನೆರವು ನೀಡಿಲ್ಲ. ಈ ರಸ್ತೆಯ 8 ಕಿ.ಮೀ ಸಂಚಾರ ಮಾಡಲು ಮುಕ್ಕಾಲು ಗಂಟೆ ವ್ಯರ್ಥ ಆಗುತ್ತಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಇದೇ ಬುಧವಾರ ರಸ್ತೆ ತಡೆ ನಡೆಸಲಿದ್ದೇವೆ’ ಎಂದು ಕಳಕೋಡಿನ ಧರ್ಮಪಾಲಯ್ಯ ಅಸಮಾಧಾನದಿಂದ ಹೇಳುತ್ತಾರೆ. 

ಕಳಕೋಡು ಹರಿಜನ ಕಾಲೊನಿ ಮತ್ತು ಕಾರ್ಲೆಯ ಗಿರಿಜನ ಕಾಲೊನಿಗಳ ಸಂಪರ್ಕಕ್ಕೂ ಇದೇ ಏಕೈಕ ರಸ್ತೆ ಆಗಿದೆ. ಆದರೆ ಜಿಲ್ಲಾ ಪಂಚಾಯಿತಿ ಎಂಜಿನಿ ಯರ್‌ ಅವರನ್ನು ಈ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದಾಗ ಅವರು ‘ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ’ ಎಂದು ಹೇಳುತ್ತಾರೆ.
 
   ಅತ್ತ ಈ ರಸ್ತೆಯ ಗುಂಡಿಗಳಿಗೆ ಬೆದರಿ ಇಲ್ಲಿ ದಿನಕ್ಕೆ ಮೂರು ಬಾರಿ ಸಂಚರಿಸುತ್ತಿದ್ದ ಖಾಸಗಿ ಬಸ್‌ ತನ್ನ ಸಂಚಾರ ನಿಲ್ಲಿಸಿ 2 ವರ್ಷ ಕಳೆದಿದೆ. ಆರ್ಥಿಕ ಅನುಕೂಲ ಇರುವ ಶಾಲಾ ಮಕ್ಕಳು ಖಾಸಗಿ ವಾಹನಗಳಲ್ಲಿ ದೂರದ ಕಳಸದ ಶಾಲೆಗೆ ತಲುಪುತ್ತಾರೆ. ಆದರೆ ಬಡ ಮಕ್ಕಳು ಅನಿವಾರ್ಯವಾಗಿ ಪಾದಯಾತ್ರೆ ಮಾಡುತ್ತಾರೆ. ರಸ್ತೆ ದುರಸ್ತಿಯನ್ನು ಕಾದಿರುವ ಕೃಷಿಕರು ಮತ್ತು ರೋಗಿಗಳ ಪಡಿಪಾಟಲು ಹೇಳತೀರದಾಗಿದೆ.
 ರವಿ  ಕೆಳಂಗಡಿ   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT