ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಿರಿಜನ ಉತ್ಸವ’ ನೃತ್ಯಗಳ ಸೊಬಗು, ಸಂಭ್ರಮ

ದೇಸಿ ಕಲೆಗಳಿಗೆ ಪ್ರೋತ್ಸಾಹ ಉತ್ತೇಜನ:  ಜಿಲ್ಲಾಧಿಕಾರಿ ಬಿ.ಆರ್‌. ಮಮತಾ ಪ್ರತಿಪಾದನೆ
Last Updated 7 ಮಾರ್ಚ್ 2017, 10:32 IST
ಅಕ್ಷರ ಗಾತ್ರ
ರಾಮನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಲೋಕದಲ್ಲಿ ಸೋಮವಾರ ನಡೆದ ಗಿರಿಜನ ಉತ್ಸವದಲ್ಲಿ ಕಲಾವಿದರು ಕಲಾ ಪ್ರದರ್ಶನಗಳ ಮೂಲಕ ಗಮನ ಸೆಳೆದರು. ಸೋಬಾನೆ ಪದ, ಬೀಸು ಪದ, ತತ್ವಪದ, ರಂಗಗೀತೆ, ತಂಬೂರಿಪದ, ಖಣಿವಾದನ, ಜನಪದ ಗೀತ ಗಾಯನ, ಸಮೂಹ ನೃತ್ಯಗಳು ಪ್ರೇಕ್ಷಕರ ಮನ ರಂಜಿಸಿದವು.
 
ರಾಮನಗರ ಜಿಲ್ಲೆಯ ಕಲಾವಿದರು ತಮಟೆ ವಾದನ, ಬೀಸು ಕಂಸಾಳೆ, ಕೋಲಾಟ, ಸೋಮನ ಕುಣಿತ, ಅರೆವಾದ್ಯ, ಕೊಡಗು ಜಿಲ್ಲೆಯ ಕಲಾವಿದರು ಪುರುಟ್ಟಿ ಕುಟ್ಟಂ ಆಟಿ, ದಾಂಡೇಲಿಯ ಕಲಾವಿದರು ಡಮಾಮಿ ನೃತ್ಯ, ಉತ್ತರ ಕನ್ನಡ ಜಿಲ್ಲೆಯ ಪುಗಡಿ ನೃತ್ಯವನ್ನು ಪ್ರಸ್ತುತ ಪಡಿಸಿದರು. 
 
ದೇಸಿ ಕಲೆಗಳಿಗೆ ಉತ್ತೇಜನ: ‘ದೇಸಿ ಕಲೆಗಳಿಗೆ ಪ್ರೋತ್ಸಾಹ ನೀಡಲು ಗಿರಿಜನ ಉತ್ಸವದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಬಿ.ಆರ್‌. ಮಮತಾ ಹೇಳಿದರು. ಗಿರಿಜನ ಉತ್ಸವದಲ್ಲಿ ಮಾತನಾಡಿದ ಅವರು ‘ಅನಕ್ಷರಸ್ಥರ ಬಾಯಿಪದವಾಗಿ ಹರಡಿ ಹೊಳೆಯಾದ ಜಾನಪದ ಯಾವ ಶಿಷ್ಟ ಸಾಹಿತ್ಯಕ್ಕೂ ಕಡಿಮೆಯಿಲ್ಲ. ಆಡು ಮಾತನ್ನೇ ಬಳಸಿ ತಮ್ಮ ಮುಗ್ಧತೆಯ ಭಾವದಲ್ಲೇ ಜನಪದವು ಅಧ್ಯಾತ್ಮ ಪರಿಕಲ್ಪನೆಗಳನ್ನೂ ಸರಳವಾಗಿ ಪದವಾಗಿಸಿ ಜನರ ಮನಸಿಗೆ ನಾಟುವಂತೆ ಮಾಡುತ್ತದೆ. 
 
ಶಿಷ್ಟ ಭಾಷೆಯ ಹಾಡುಗಳಿಗಿಂತ ಜನಪದವೇ ಹೆಚ್ಚು ಆಪ್ತವೆನಿಸುತ್ತದೆ ಎಂದರು. ‘ಗಿರಿಜನರಿಗೆ ತಮಟೆಗೆ ತಕ್ಕ ಹೆಜ್ಜೆ ಹಾಕೋದು, ಅದ್ಭುತವಾಗಿ ಹಾಡೋದು ರಕ್ತಗತವಾಗಿ ಬಂದಿರುತ್ತದೆ.  ಲೆಕ್ಕವಿಲ್ಲದಷ್ಟು ಹಾಡುಗಳು ಯಾವ ಬರಹಗಳಲ್ಲೂ ದಾಖಲಾಗದೆ ಬಾಯಿಂದ ಬಾಯಿಗೆ ಹಬ್ಬುತ್ತಾ ತಲೆಮಾರುಗಳಿಂದ ಜೀವಂತವಾಗಿವೆ’ ಎಂದು ತಿಳಿಸಿದರು.
 
ಉತ್ಸವಕ್ಕೆ ಚಾಲನೆ ನೀಡಿದ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೆ.ಎಂ. ಮಾಯಿಗೇಗೌಡ ಮಾತನಾಡಿ, ‘ಪ್ರದೇಶದಿಂದ ಪ್ರದೇಶಕ್ಕೆ ಆಚಾರ, ವಿಚಾರ, ಸಂಸ್ಕೃತಿಗಳ ಆಚರಣೆ ಭಿನ್ನವಾಗಿರುತ್ತವೆ. ಎಷ್ಟೊಂದು ಹಾಡುಗಳಲ್ಲಿ, ಮಾತುಗಳಲ್ಲಿ ಭಾವ ಒಂದೇ ಭಾಷೆ ಬೇರೆಯಾಗಿ ಕಾಣುತ್ತದೆ’ ಎಂದು ತಿಳಿಸಿದರು.
‘ಗಿರಿಜನ ಕಲಾವಿದರಿಗೆ ತಮ್ಮಲ್ಲಿರುವ ಕಲೆಯನ್ನು ಅನಾವರಣಗೊಳಿಸಲು ಸೂಕ್ತವಾದ ವೇದಿಕೆ ಬೇಕು. ಅವರಿಗೆ ಬೇರೆ ಸಾಹಿತ್ಯ ಪ್ರಕಾರದಂತೆ ಪೂರ್ವ ತರಬೇತಿ ಅಗತ್ಯವಿಲ್ಲ. ಪ್ರಕೃತಿದತ್ತವಾಗಿಯೇ ಕಲೆ ಬೆಳೆದು ಬಂದಿರುತ್ತದೆ’ ಎಂದು ತಿಳಿಸಿದರು. 
 
ಡಮಾಮಿ ನೃತ್ಯ ಕಲಾವಿದೆ ಜೂಲಿಯಾನ ಫರ್ನಾಂಡೀಸ್ ಮಾತನಾಡಿ, ‘ಗಿರಿಜನರ ಜೀವನ ಶೈಲಿ, ಆಹಾರ, ಸಂತೋಷ, ದುಃಖವನ್ನು ಅಭಿವ್ಯಕ್ತಿ ಪಡಿಸಲು ಇರುವ ಮಾರ್ಗವೇ ಡಮಾಮಿ ನೃತ್ಯ. ಕಾಡಂಚಿನಲ್ಲಿರುವ ಬುಡಕಟ್ಟು ಸಮುದಾಯಗಳ ಜನರಲ್ಲಿ ಕಲೆ ಅಡಗಿದೆ. ಅದು ಅನಾವರಣಗೊಳ್ಳಲು ಗಿರಿಜನ ಉತ್ಸವದಂತಹ ವೇದಿಕೆ ಕಲ್ಪಿಸುತ್ತಿರುವ ಸರ್ಕಾರದ ಕಾರ್ಯ ಸಂತೋಷ ತಂದಿದೆ’ ಎಂದು ತಿಳಿಸಿದರು.
 
ಸಿಇಒ ಸಿ.ಪಿ. ಶೈಲಜಾ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ್, ಕಾಂಗ್ರೆಸ್ ಮುಖಂಡ ಶಾಂತಕುಮಾರ್ , ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಇತರರು ಇದ್ದರು. ಗಾಯಕ ಶ್ರೀನಿವಾಸ್‌ ನಾಡಗೀತೆ ಹಾಡಿದರು. 
 
* ಗಿರಿಜನರು ಹೆಜ್ಜೆ ಹಾಕಿದರೆ ಕುಣಿತ, ಪದ ಹೇಳಿದರೆ ಹಾಡಾಗುತ್ತದೆ. ಜನರನ್ನು ಕೈಬೀಸಿ ಕರೆದು ಮುದ ನೀಡುವ ಜಾನಪದ ಕಲೆ ಅಪ್ಪಟ ಸಾಹಿತ್ಯ ಪ್ರಕಾರವಾಗಿದೆ
ಕೆ.ಎಂ. ಮಾಯಿಗೇಗೌಡ, ಪ್ರಾಚಾರ್ಯ, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT