ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿ ಕೆಟ್ಟವರಿಲ್ಲವೋ...

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಾರು, ಬಸ್ಸು, ರೈಲು, ವಿಮಾನ  – ಹೀಗೆ ಯಾವುದೇ ವಾಹನವಾಗಲಿ, ನಾವೆಲ್ಲರೂ ಹಲವು ಸಂದರ್ಭಗಳಲ್ಲಿ, ಈ ಯಾವುದಾದರೂ ಒಂದರಲ್ಲಿ ಸಂಚರಿಸಿಯೇ ಇರುತ್ತೇವೆ; ಹಾಗೂ ಆ ವಾಹನಗಳನ್ನು ಚಲಿಸಲು ಒಬ್ಬ ಚಾಲಕ ಇದ್ದೇ ಇರುವುದನ್ನು ಗಮನಿಸಿರುತ್ತೇವೆ ಕೂಡ. ಈಗ ಒಮ್ಮೆ ಯೋಚಿಸಿ. ನೀವು ತೀರಾ ಇತ್ತೀಚಿಗೆ ಪಯಣಿಸಿದ ವಾಹನದ ಚಾಲಕ ಯಾರೆಂದು ನಿಮಗೆ ನೆನಪಿದೆಯೇ? ಆತನ  ಮುಖಚರ್ಯೆ, ಹೆಸರು, ಊರು ಯಾವುದಾದರೂ ತಿಳಿದಿದೆಯೇ? ತಿಳಿಯುವ ಪ್ರಯತ್ನವನ್ನು ನಾವು ಮಾಡಿರುವ ಸಾಧ್ಯತೆಯೂ ಇಲ್ಲ. ಆದರೆ ನಮ್ಮ ಪ್ರಯಾಣದ ಸಮಯದಲ್ಲಿ, ನಾವು ಯಾವುದೇ ಎರಡನೆಯ ಯೋಚನೆ ಇಲ್ಲದೆ ನಮ್ಮ ಜೀವವನ್ನೇ ಅವನ ಕೈಯಲ್ಲಿ ಇಟ್ಟಿರುತ್ತೇವೆ. ಚಾಲಕ ಸ್ವಲ್ಪ ಏನಾದರೂ ಅಜಾಗರೂಕನಾದರೂ ನಮಗೆ ಅಪಾಯ ತಪ್ಪಿದ್ದಲ್ಲ. ಆದರೂ ಅಪರಿಚಿತ ಚಾಲಕನೊಂದಿಗೆ ನಮ್ಮ ಪಯಣ ಹಲವು ಬಾರಿ ಸುಖಕರವಾಗಿ ನಡೆದಿರುತ್ತದೆ. ಹೀಗೆ ಹಿಂದುಮುಂದು ತಿಳಿಯದ ಓರ್ವನ ಸಾರಥ್ಯದಲ್ಲಿ ನಾವು ಪ್ರಯಾಣ ನಡೆಸಲು ಸಾಧ್ಯವಾಗಲು ಕಾರಣ,  ನಾವು ಆ ಚಾಲಕನ ಮೇಲಿಟ್ಟಿರುವ ನಂಬಿಕೆ; ಅವನ ಚಾಲಕತ್ವದ ಬಗ್ಗೆ ಇರುವ ವಿಶ್ವಾಸ.

ಹೀಗೆ, ನಿತ್ಯಜೀವನದಲ್ಲಿ ನಾವು ಹಲವರ ಮೇಲೆ ಅಪಾರವಾದ ನಂಬಿಕೆ ಇಡುತ್ತೇವೆ. ನಮ್ಮ ತಂದೆ-ತಾಯಿ, ಸೋದರ–ಸೋದರಿಯರೂ, ಸ್ನೇಹಿತರು, ಗುರುಗಳು ಮುಂತಾದವರು ಜೀವನದಲ್ಲಿ ನಮಗೆ ಸರಿಯಾದ ದಾರಿಯನ್ನೇ ತೋರುತ್ತಾರೆ, ನಮ್ಮ ಕಷ್ಟಕಾಲದಲ್ಲಿ ಸಹಾಯವಾಗುತ್ತಾರೆ, ಸದಾ ನಮ್ಮ ಹಿತವನ್ನೇ ಬಯಸುತ್ತಾರೆ, ಅಪಾಯಕ್ಕೆ ಸಿಕ್ಕಿಸುವುದಿಲ್ಲ ಎಂಬ ನಂಬಿಕೆ. ವೈದ್ಯರು ನಮ್ಮ ಕಾಯಿಲೆಯನ್ನು ಗುಣಪಡಿಸುತ್ತಾರೆ ಎಂಬ ನಂಬಿಕೆ. ನ್ಯಾಯಾಧೀಶರು ನ್ಯಾಯವನ್ನೇ ನೀಡುತ್ತಾರೆ ಎಂಬ ನಂಬಿಕೆ. ವ್ಯಾಪಾರಿ ತನ್ನ ವ್ಯವಹಾರದಲ್ಲಿ ನ್ಯಾಯವಾಗಿರುತ್ತಾನೆ ಎಂಬ ನಂಬಿಕೆ. ಈ ನಂಬಿಕೆಯಿಂದಲೇ ನಾವು ಒಂದು ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಇತರರನ್ನು ನಂಬುವಷ್ಟು, ನಾವು ನಮ್ಮನ್ನು ನಂಬುತ್ತೇವೆಯೇ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಪ್ರಶ್ನೆಯನ್ನು ಹಾಕಿಕೊಂಡಾಗ ಕೆಲವು ಅಪ್ರಿಯವಾದ ಉತ್ತರಗಳು ಸಿಗಬಹುದು; ಅಥವಾ ಉತ್ತರಗಳೇ ಸಿಗದಂತೆ ಆಗಬಹುದು.

ಹಲವು ಸಂದರ್ಭಗಳಲ್ಲಿ ನಮ್ಮಲ್ಲಿರುವ ಕೀಳರಿಮೆ, ಇತರರು ಏನೆಂದು ಭಾವಿಸುವರೋ ಎಂಬ ಭಯ ನಮ್ಮಲ್ಲಿರುವ ನಂಬಿಕೆಯನ್ನು ಕುಗ್ಗಿಸಿಬಿಡುತ್ತದೆ. ಒಮ್ಮೆ, ಆನೆಗಳನ್ನು ಪಳಗಿಸಿ ತರಬೇತಿ ನೀಡುವ ಒಂದು ಶಿಬಿರಕ್ಕೆ ಹೋಗಿದ್ದೆ. ಅಲ್ಲಿ  ಸುಮಾರು  70–80  ತೀರಾ ಸಣ್ಣ ಮರಿಗಳಿಂದ ಹಿಡಿದು, ಬೃಹತ್ ಗಾತ್ರದ ಗಜಗಳನ್ನು ಕಟ್ಟಿ, ಅವುಗಳನ್ನು ಪಳಗಿಸುವುದು ಕಾಣುತ್ತಿತ್ತು. ಪ್ರಾಣಿಗಳನ್ನು ಪಳಗಿಸುವಾಗ ಅವುಗಳನ್ನು ಕಟ್ಟಿಹಾಕುವುದು ಅನಿವಾರ್ಯವಾಗಿ ಮಾಡಲೇಬೇಕು. ಪುಟ್ಟ ಮರಿಗಳು ಮತ್ತು ದೊಡ್ಡ ಆನೆಗಳನ್ನು ಒಂದೇ ರೀತಿಯ ಸರಪಳಿಗಳಲ್ಲಿ ಕಟ್ಟಿರುವುದನ್ನು ಗಮನಿಸಿ ನನಗೆ ಆಶ್ಚರ್ಯವಾಯಿತು. ನಾನು ಒಬ್ಬ ತರಬೇತುದಾರನ ಬಳಿ ಹೋಗಿ ಕೇಳಿದೆ – ‘ಸಣ್ಣ ಆನೆಗಳನ್ನೇನೋ ಈ ಸರಪಳಿಗಳು ಹಿಡಿದಿಡಬಹುದು, ಆದರೆ  ಮರಗಳನ್ನೇ ಉರುಳಿಸುವ, ಬೃಹತ್ ಗಾತ್ರದ ಆನೆಗಳಿಗೆ ಈ ಸರಪಳಿ ಯಾವ ಲೆಕ್ಕಕ್ಕೆ? ಅವು ಸುಲಭವಾಗಿ ಕಿತ್ತುಕೊಂಡು ಹೋಗಬಹುದಲ್ಲವೇ? ಅವೇಕೆ ಹಾಗೆ ಮಾಡುವುದಿಲ್ಲ?’ ಅವನು ಉತ್ತರಿಸಿದ; ‘ಹಾಗೆಲ್ಲ ಅವು ಹೋಗಲ್ಲ ಸಾರ್. ನಾವು ಟ್ರೈನಿಂಗ್ ಕೊಟ್ಟಿರ್ತೀವಿ! ‘ನನಗೆ ಅವನ ಮಾತು ಅರ್ಥವಾಗಲಿಲ್ಲ. ‘ಕಿತ್ತುಕೊಂಡು ಹೋಗದ ಹಾಗೆ ಟ್ರೈನಿಂಗ್ ಕೊಡ್ತೀರಾ ?’ ಅಂದೆ. ‘ಹೂಂ ಸರ್!’  ಅಂದ.

ಆದರೆ ನನ್ನಲ್ಲಿ ಈ ಪ್ರಶ್ನೆ  ಇನ್ನೂ ಕಾಡುತ್ತಿತ್ತು. ಮತ್ತೆ ಗಮನಿಸಿದಾಗ ತಿಳಿಯಿತು – ಮರಿಯಾನೆಗಳನ್ನು ಬಂಧಿಸಲು ಉಪಯೋಗಿಸುವ ಸರಪಳಿಗಳನ್ನು ಕಿತ್ತುಕೊಂಡು ಹೋಗುವಷ್ಟು ಶಕ್ತಿ ಅವುಗಳಿಗೆ ಇರುವುದಿಲ್ಲ. ಆದರೆ ಆನೆಗಳು ದೊಡ್ಡವಾದಂತೆ, ಅವುಗಳ ಶಕ್ತಿ ವೃದ್ಧಿಸುತ್ತದೆ. ಆಗ ಸುಲಭವಾಗಿ ಆ ಸರಪಳಿಯನ್ನು ಕಿತ್ತು ಬಿಸಾಡಬಹುದು. ಆದರೆ ಅವಕ್ಕೆ ತಾವು ಸಣ್ಣವಾಗಿದ್ದಾಗ ಸರಪಳಿಯನ್ನು ಕೀಳಲು ಪ್ರಯತ್ನಿಸಿ ವಿಫಲವಾದ ನೆನಪು ಇನ್ನೂ ಮನಸ್ಸಿನಲ್ಲಿ ಇರುತ್ತದೆ. ಹೀಗಾಗಿ ಅವು ಎಷ್ಟು ಬೃಹದಾಕಾರವಾಗಿ ಬೆಳೆದರೂ, ತಮ್ಮ ಶಕ್ತಿಯ ಅರಿವಿರುವುದಿಲ್ಲ. ತಾವು ಬಿಡಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಅಪನಂಬಿಕೆ ಅವಗಳಿಗೆ ಮೂಡಿರುತ್ತದೆ. ಹೀಗಾಗಿ ಅವು ಸರಪಳಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ.

ಈಗ ಯೋಚಿಸಿ, ನಮ್ಮ ಪರಿಸ್ಥಿತಿಯೂ ಈ ಆನೆಗಳ ಹಾಗೆಯೇ ಆಗಿರುತ್ತದೆ ಅಲ್ಲವೇ? ಬಾಲ್ಯದಲ್ಲಿ ಅಥವಾ ಹಿಂದೆ ಯಾವಾಗಲೋ ಒಮ್ಮೆ ನಾವು ಅನುಭವಿಸಿದ ಸೋಲು, ಆಘಾತ, ಅಪಮಾನ, ನಮ್ಮ ಮೇಲಿನ ನಂಬಿಕೆಯನ್ನೇ ಕುಗ್ಗುವಂತೆ ಮಾಡಿರುತ್ತದೆ. ಈ ಸೋಲು, ಹತಾಶೆಯಲ್ಲಿ ಬಂದಿಯಾಗಿ, ನಮ್ಮಲ್ಲಿರುವ ಶಕ್ತಿ, ಕೌಶಲದ ಬಗ್ಗೆ ವಿಶ್ವಾಸ ನಾಶವಾಗಿ, ನಮಗೇ ನಮ್ಮ ಬಗ್ಗೆ ಕೀಳರಿಮೆ ಮೂಡಿ, ವ್ಯಕ್ತಿತ್ವನ್ನು ಕಳೆದುಕೊಂಡು ಕುಬ್ಜರಾಗಿರುತ್ತೇವೆ.

ಎಂದರೆ, ನಮ್ಮ ಜೀವನದ ಯಶಸ್ಸಿಗೆ ಮತ್ತು ಸಾಧನೆಗೆ ಅಗತ್ಯವಾದದ್ದು ನಂಬಿಕೆ. ಅದೂ ಸಂಪೂರ್ಣವಾದ ನಂಬಿಕೆ. ನಮ್ಮ ಮೇಲಿನ ನಂಬಿಕೆ. ನಮ್ಮೊಳಗಿರುವ ಚೈತನ್ಯದ ಬಗ್ಗೆ ನಂಬಿಕೆ. ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ‘ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ | ನಂಬಿಯುಂ  ನಂಬದಿರುವಿಬ್ಬಂದಿ ನೀನು||’ ಮೊದಲಿಗೆ ನಾವು ಇಬ್ಬಂದಿತನವನ್ನು ಬಿಡಬೇಕು. ‘ನಡೆಯುವ ಕಾಲೇ ಎಡವುವುದು’ ಎಂಬ ಮಾತು ನಮ್ಮ ನೆನಪಿನಲ್ಲಿ ಸದಾ ಇರಬೇಕು. ಈ ರೀತಿಯಲ್ಲಿ ನಮ್ಮ ಬಗೆಗಿನ ನಂಬಿಕೆಯನ್ನು  ಸೃಷ್ಟಿಸಿಕೊಳ್ಳುವುದೂ ಉಳಿಸಿಕೊಳ್ಳುವುದೂ ಅಷ್ಟು ಸುಲಭದ ಮಾತಲ್ಲ. ಹಿಂದಿನ ಸೋಲುಗಳು ನಮ್ಮನ್ನು ಕಾಡದೇ ಬಿಡಲಾರದು. ಆಗ ನಮಗೆ ಅಗತ್ಯವಾಗುವುದು ‘willing suspension of disbelief’ ಎಂಬ ಸೂತ್ರ. ನಮ್ಮ ಅನುಭವ ನಾವು ಸೋಲಬಹುದು ಎಂಬ ಮಾತನ್ನು ಮತ್ತೆ ಮತ್ತೆ ನೆನಪಿಸಲು ಪ್ರಯತ್ನಿಸಿದರೂ, ನಾವು ಪ್ರಜ್ಞಾಪೂರ್ವಕವಾಗಿ ಅಪನಂಬಿಕೆಯನ್ನು ಸ್ವಲ್ಪ ಸಮಯ ಅಮಾನತ್ತಿನಲ್ಲಿಡಬೇಕು. ನಮ್ಮ ಗುರಿಯತ್ತ ಆತ್ಮವಿಶ್ವಾಸದಿಂದ ಹೆಜ್ಜೆಗಳನ್ನು ಇಡಬೇಕು. ಕ್ರಮೇಣ ನಮಗೇ ನಮ್ಮ ನಿಜಶಕ್ತಿಯ ಅರಿವಾಗುತ್ತದೆ. 

ಈ ನಂಬಿಕೆ ಎನ್ನುವುದು ನಮ್ಮ ಮಾತು–ಕೃತಿಗಳಲ್ಲಿ, ಆಚಾರ–ವಿಚಾರಗಳಲ್ಲಿ ಹಲವು ರೀತಿಯಲ್ಲಿ ವ್ಯಕ್ತವಾಗಬಹುದು. ಅಗೋಚರವಾದ ದೈವದ ಬಗ್ಗೆ ನಂಬಿಕೆ ಇಟ್ಟರೆ ಅದು ಭಕ್ತಿಯಾಗುತ್ತದೆ; ನಮ್ಮ ಆತ್ಮೀಯರ ಬಗೆಗಿನ ಇಂಥ ನಂಬಿಕೆಯೇ ಪ್ರೀತಿ ಎಂದು ಕರೆಸಿಕೊಳ್ಳುತ್ತದೆ; ಗುರು-ಹಿರಿಯರಲ್ಲಿ ತೋರುವ ನಂಬಿಕೆ ಗೌರವವಾಗುತ್ತದೆ. ಆದರೆ, ಇವೆಲ್ಲದರ ಜೊತೆಗೆ ನಾವು ಮುಖ್ಯವಾಗಿ ನಮ್ಮನ್ನೇ ನಂಬಿದರೆ, ಅದು ಆತ್ಮಸ್ಥೈರ್ಯವನ್ನು ವೃದ್ಧಿಸಿ, ನಮ್ಮ ಗುರಿಮುಟ್ಟುವಲ್ಲಿ ಸಹಕಾರಿಯಾಗುವ ದಾರಿದೀಪವಾಗುತ್ತದೆ. ಆಗ ಅದು ಅಂತರಂಗದ ಬೆಳಕು ಎಂದು ಕರೆಯಿಸಿಕೊಳ್ಳುತ್ತದೆ. ಹೀಗಾಗಿ ‘ನಂಬಿ ಕೆಟ್ಟವನಿಲ್ಲವೋ, ತನ್ನನ್ನು ತಾನು, ನಂಬಿ ಕೆಟ್ಟವನಿಲ್ಲವೋ!’ – ಎಂದು ಧೈರ್ಯವಾಗಿ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT