ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿ ತಿಳಿಯಿರಿ!

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ಡಾ. ಕೆ.ಎಸ್. ಶುಭ್ರತಾ, (ಮನೋವೈದ್ಯೆ)

ಲಲಿತಾ ಐವತ್ತು ವರ್ಷದ ವಿವಾಹಿತೆ. ಕಳೆದ ನಾಲ್ಕು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದಾಳೆ. ಮನೋವೈದ್ಯರ ಬಳಿ ತೋರಿಸಿ, ಚಿಕಿತ್ಸೆ ಪ್ರಾರಂಭವಾಗಿ ಇಪ್ಪತ್ತು ದಿನಗಳಾಗಿವೆ. ಈ ಇಪ್ಪತ್ತು ದಿನಗಳ ಅವಧಿಯಲ್ಲಿ ಎರಡು ಬಾರಿ ವೈದ್ಯರನ್ನು ಬದಲಾಯಿಸಿದ್ದಾಳೆ. ಈಗ ಮೂರನೆಯ ವೈದ್ಯರನ್ನು ನೋಡಲು ಕಾರಣ, ‘ಕಾಯಿಲೆ ಇನ್ನೂ ವಾಸಿಯಾಗಿಲ್ಲ’ ಎಂಬುದು. 

ಮಾನಸಿಕ ಸಮಸ್ಯೆಗಳು ದೈಹಿಕ ಸಮಸ್ಯೆಗಳಂತಲ್ಲ. ವಿಭಿನ್ನವಾದ ಲಕ್ಷಣಗಳು ಮತ್ತು ವಿಭಿನ್ನವಾದ ಕಾರಣಗಳಿಂದ ಕೂಡಿದ್ದು. ತೀವ್ರತರದ ಕಾಯಿಲೆ ಇರುವ ಕೆಲವೇ ಕೆಲವರನ್ನು ಬಿಟ್ಟರೆ, ಬಹಳಷ್ಟು ಬಾರಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ನೋಡುಗರ ಕಣ್ಣಿಗೆ ಚೆನ್ನಾಗಿಯೇ ಕಾಣುತ್ತಾನೆ. ರಕ್ತದ ಪರೀಕ್ಷೆಗಳು, ದೈಹಿಕ ತಪಾಸಣೆ ಎಲ್ಲದರ ರಿಪೋರ್ಟ್ ನಾರ್ಮಲ್ / ಸಹಜ ಎಂದೇ ಬರುತ್ತದೆ. ಮನೆಯವರು, ಸಂಬಂಧಿಕರು ಎಲ್ಲರೂ ‘ನೀನೇ ಟೆನ್ಷನ್ ಕಡಿಮೆ ಮಾಡಿಕೋ’ ಎಂದು ಹೇಳುವವರೇ. ಹತ್ತಿರದಲ್ಲಿನ ಕುಟುಂಬ ವೈದ್ಯರಲ್ಲಿ ಬಳಿ ಹೋದರೆ ಅವರೂ ಕೂಡ ‘ರಿಲ್ಯಾಕ್ಸ್ ಮಾಡಿ. ದೇಹದಲ್ಲಿ ಏನೂ ತೊಂದರೆ ಇಲ್ಲ. ಎಲ್ಲಾ ನಿಮ್ಮ ಮನಸ್ಸಿನಲ್ಲಿದೆಯಷ್ಟೇ! ತುಂಬಾ ಜಾಸ್ತಿ ಆದರೆ ಮತ್ತೆ ಸೈಕಿಯಾಟ್ರಿಸ್ಟ್ ಹತ್ತಿರ ಹೋಗಬೇಕಾದೀತು ಜೋಕೆ!’ ಎಂದು ಎಚ್ಚರಿಸುತ್ತಾರೆ. ಇನ್ನು ಕೆಲವು ತಜ್ಞವೈದ್ಯರು ‘ಮನೋವೈದ್ಯರ ಬಳಿ ಹೋಗಿ ಕೌನ್ಸಿಲಿಂಗ್ ಮಾಡಿಸಿಕೊಂಡು ಬನ್ನಿ, ಎಲ್ಲಾ ಸರಿಹೋಗುತ್ತೆ’ ಎನ್ನುತ್ತಾರೆ. ಹೀಗೆ ತಲೆಗೊಬ್ಬರು ಒಂದೊಂದು ಮಾತು ಹೇಳಿದಾಗ ಪಾಪ, ರೋಗಿ ಮತ್ತು ಆತನ ಕುಟುಂಬದವರು, ದ್ವಂದ್ವದಲ್ಲಿ ಸಿಲುಕಿ ನಾನಾ ತರಹದ ಪಡಬಾರದ ಕಷ್ಟಗಳನ್ನು ಪಡುತ್ತಾರೆ. ಸಮಸ್ಯೆ ಉಲ್ಬಣವಾದಾಗ, ಮನೋವೈದ್ಯರಲ್ಲಿ ಬರುತ್ತಾರೆ. ಜ್ವರದ ಆ್ಯಂಟಿಬಯೊಟಿಕ್ ಮಾತ್ರೆಯಂತೆ ಎಂಟು-ಹತ್ತು ದಿನ ತೆಗೆದುಕೊಂಡು ಬಿಟ್ಟು ಬಿಡುತ್ತಾರೆ. ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ಮಾನಸಿಕ ಸಮಸ್ಯೆಗಳ ಬಗ್ಗೆ ತಿಳಿಯಿರಿ: ಮಾನಸಿಕ ಸಮಸ್ಯೆಗಳಲ್ಲಿ ಹಲವಾರು ಪ್ರಬೇಧಗಳಿವೆ. ಸ್ಕಿಜೋಫ್ರೀನಿಯಾ, ಉನ್ಮಾದದಂತಹ ಕಾಯಿಲೆಗಳಲ್ಲಿ ‘ಅರಿವಿನ ಒಳನೋಟ’ (Insight) ಇರುವುದಿಲ್ಲ. ಅಂದರೆ ರೋಗಿ ‘ತಾನು ಚೆನ್ನಾಗೇ ಇದ್ದೇನೆ, ತನಗೇನೂ ಸಮಸ್ಯೆಯಿಲ್ಲ’ ಎಂದೇ ದೃಢವಾಗಿ ನಂಬುತ್ತಾನೆ. ಖಿನ್ನತೆ, ಆತಂಕದಂತಹ ಕಾಯಿಲೆಗಳಲ್ಲಿ ‘ಅರಿವಿನ ಒಳನೋಟ’ ಚೆನ್ನಾಗೇ ಇರುತ್ತದೆ. ಉದಾಹರಣೆಗೆ, ಆತಂಕವಿರುವ ರೋಗಿ ‘ನನಗೆ ತುಂಬಾ ಭಯ ಆಗುತ್ತಿದೆ, ಎದೆ ಢವಢವ ಹೊಡೆದುಕೊಳ್ಳುತ್ತದೆ’ ಎಂದು ತಾನೇ ವೈದ್ಯರ ಬಳಿ ಸಹಾಯ ಕೋರಿ ಬರುತ್ತಾನೆ. ಅರಿವಿನ ಒಳನೋಟ ಇಲ್ಲದ ವ್ಯಕ್ತಿಯನ್ನು ಅವನ ಕುಟುಂಬದವರು ಮನೋವೈದ್ಯರ ಬಳಿ ಕರೆತರಬೇಕಾಗುತ್ತದೆ.

ರಕ್ತಪರೀಕ್ಷೆಗಳು, ದೈಹಿಕ ಪರೀಕ್ಷೆಗಳು ಸಹಜವಾಗಿದ್ದ ಮಾತ್ರಕ್ಕೆ, ರೋಗಿ ತಾನೇ ಮಾನಸಿಕ ಕಾಯಿಲೆ ತಂದುಕೊಂಡ ಎಂದರೆ ತಪ್ಪು. ವ್ಯಕ್ತಿಯ ಸೂಕ್ಷ್ಮ ಸ್ವಭಾವ, ಒತ್ತಡ, ಸುತ್ತಲಿನ ಪರಿಸರ, ಮಾನಸಿಕ ಸಮಸ್ಯೆಗಳು ಹೆಚ್ಚು ಮಾಡುವಲ್ಲಿ ಕಿರಿದಾದ ಪಾತ್ರ ವಹಿಸಿದರೂ ಮೆದುಳಿನಲ್ಲಿರುವ ನರವಾಹಕಗಳ ಏರುಪೇರಿನಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತದೆ ಎಂಬುದು ಸಾಬೀತಾಗಿದೆ.

ಮನೋವೈದ್ಯರೆಂದರೆ ಯಾರು?
ಮನೋವೈದ್ಯರು ಕೇವಲ ಕೌನ್ಸಲಿಂಗ್ ಅಥವಾ ಆಪ್ತಸಮಾಲೋಚನೆ ಮಾಡುವವರಲ್ಲ. ಮನೋವೈದ್ಯರೂ ಕೂಡ ಇತರ ವೈದ್ಯರಂತೆ ಎಂ.ಬಿ.ಬಿ.ಎಸ್. ಪದವಿ ಪಡೆದು ಮನೋವೈದ್ಯಕೀಯದಲ್ಲಿ ಎಂ.ಡಿ. ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಬೇರೆ ದೈಹಿಕ ರೋಗಗಳಿಗೆ ನೀಡುವ ಚಿಕಿತ್ಸೆಯಂತೆ ಮನೋರೋಗಗಳಿಗೂ ಔಷಧಗಳನ್ನು ನೀಡುವ ಮತ್ತು ಬೇಕಾದಲ್ಲಿ ಆಪ್ತಸಮಾಲೋಚನೆ ಮಾಡುವ ಪರಿಣತಿ ಹೊಂದಿರುತ್ತಾರೆ.

ಮನೋರೋಗಗಳ ಚಿಕಿತ್ಸೆ ಏನು?
ಮನೋರೋಗಗಳ ಚಿಕಿತ್ಸೆಯ ವಿಧಾನ ಮನೋವೈದ್ಯರು ನಿರ್ಧರಿಸುವಂಥದ್ದು. ಸೌಮ್ಯ ತರಹದ ಖಿನ್ನತೆಗೆ ಆಪ್ತ ಸಮಾಲೋಚನೆಯೇ ಸಾಕು. ಅದೇ ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಮಾತ್ರೆಗಳೇ ಬೇಕು. ಇನ್ನೂ ಹಲವಾರು ಬಾರಿ ಮಾತ್ರೆಗಳ ಜೊತೆಗೆ ವಿಶೇಷ ತರಹದ ಆಪ್ತಸಮಾಲೋಚನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತೀವ್ರ ತರಹದ ಖಿನ್ನತೆಯಿಂದಾಗಿ, ಆತ್ಮಹತ್ಯೆಯ ಯೋಚನೆಗಳು ಕಾಡುತ್ತಿದ್ದರೆ, ಆಸ್ಪತ್ರೆ ಯಲ್ಲಿ ಅಡ್ಮಿಟ್ ಮಾಡಿಯೇ ಚಿಕಿತ್ಸೆ ನೀಡಬೇಕಾಗುವುದು.

ಪ್ರತಿಯೊಬ್ಬ ವೈದ್ಯರೂ ತಮ್ಮ ರೋಗಿಗೆ, ರೋಗಿಯ ಮನೆಯವರಿಗೆ ಕಾಯಿಲೆಯ ಬಗ್ಗೆ ತಿಳಿಸಿ ಹೇಳಲೇಬೇಕು. ಅದರಲ್ಲೂ ಮನೋವೈದ್ಯರ ಬಳಿ ಬರುವ ಪ್ರತಿಯೊಬ್ಬ ರೋಗಿ, ರೋಗಿಯ ಮನೆಯವರು, ನೊಂದು ಬಂದಿರುತ್ತಾರೆ. ಅವರ ಮನದ ತುಂಬಾ ತಪ್ಪು ಕಲ್ಪನೆಗಳೇ ತುಂಬಿರುತ್ತದೆ. ಆದ್ದರಿಂದ ಆ ವ್ಯಕ್ತಿ ಬಳಲುತ್ತಿರುವ ಮನೋರೋಗದ ಬಗ್ಗೆ ಅವರಿಗೆ ತಿಳಿವಳಿಕೆ ನೀಡುವುದು ಅವಶ್ಯಕ. ಹಾಗೆಯೇ ಮಾತ್ರೆಗಳು ಯಾವಾಗ ಕೆಲಸ ಮಾಡಲು ಪ್ರಾರಂಭಿಸುತ್ತದೆ, ಎಷ್ಟು ದಿನ ತೆಗೆದುಕೊಳ್ಳಬೇಕು ಎಂಬುದನ್ನೂ ರೋಗಿಗಗಳು ಮತ್ತು ಕುಟುಂಬದವರು ಅರಿಯಬೇಕು. 

ಮುಂದಿನ ಬಾರಿ ನಿಮ್ಮ ಮನೋವೈದ್ಯರನ್ನು ಭೇಟಿಯಾದಾಗ, ಅವರು ಹೇಳದಿದ್ದರೂ, ಈ ಎಲ್ಲ ಪ್ರಶ್ನೆಗಳನ್ನು ನೀವೇ ಹಾಕಿ ಉತ್ತರ ತಿಳಿಯುತ್ತೀರಿ ತಾನೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT