ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಗೆ ಸಾಣೆ ಹಿಡಿಯುವ ತರಬೇತಿ

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಅಭಿಷೇಕ್‌, ಬ್ರೆಜಿಲ್‌ನಲ್ಲಿ 2015ರಲ್ಲಿ ನಡೆದ ವಿಶ್ವ ಕೌಶಲ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದರೆ, ಬೆಂಗಳೂರು ಹೊರವಲಯದ ನಾಗೇನಹಳ್ಳಿಯ ಆನಂದ್‌ ಕುಮಾರ್‌ ಅವರು ಈ ಬಾರಿ ಅಬುಧಾಬಿಯಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅರ್ಹತಾ ಸುತ್ತು ಪ್ರವೇಶಿಸಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುವ ಮಟ್ಟಕ್ಕೆ ಬೆಳೆದಿರುವಲ್ಲಿ ಈ ತರಬೇತಿ ಕೇಂದ್ರ ಮಹತ್ವದ ಪಾತ್ರ ನಿರ್ವಹಿಸಿದೆ.

ಹಳ್ಳಿಯಿಂದ ಬಂದ ಈ ಇಬ್ಬರು ಯುವಕರು ಈ ಮಟ್ಟಿಗಿನ ಸಾಧನೆ ಮಾಡುವಲ್ಲಿ   ಬಿಡದಿಯಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ ಮೋಟಾರ್‌  (ಟಿಕೆಎಂ) ಸಂಸ್ಥೆ ನಿರ್ವಹಿಸುತ್ತಿರುವ ತರಬೇತಿ ಕೇಂದ್ರದ  ಕೊಡುಗೆ ಮುಖ್ಯವಾಗಿದೆ. ಇದಕ್ಕೆ ಇಲ್ಲಿ ತರಬೇತಿ ನೀಡುವವರ ಅಪಾರ ಪರಿಶ್ರಮವೂ ಇದೆ. ಕಟ್ಟುನಿಟ್ಟಿನ ತರಬೇತಿ ಪಡೆದು ಶಿಸ್ತು ಮತ್ತು  ಶ್ರದ್ಧೆಯಿಂದ ಕಲಿಯುವವರ ಆಸಕ್ತಿಯ ಪ್ರತೀಕವೂ ಇದಾಗಿದೆ.

ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಮೂರು ವರ್ಷಗಳ ವ್ಯವಸ್ಥಿತ ತರಬೇತಿ ನೀಡಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸಿ ಅವರ ಕೌಶಲ್ಯಕ್ಕೆ ಸಾಣೆ ಹಿಡಿದಿದ್ದರಿಂದಲೇ ಈ ಸಾಧನೆ ಸಾಧ್ಯವಾಗಿದೆ.

‘ಯಾವಾಗಲೂ ಉತ್ತಮ ಕಾರುಗಳನ್ನೇ ತಯಾರಿಸಿ’ ಮತ್ತು ಗ್ರಾಹಕರ ನಿರೀಕ್ಷೆ ಮೀರಿದ ಸೇವೆ ನೀಡಿ ಅವರ ಮೊಗದಲ್ಲಿ ಮುಗುಳ್ನಗೆ ಮೂಡಿಸಿ’ ಎನ್ನುವ ಸಂಸ್ಥೆಯ ಧ್ಯೇಯಕ್ಕೆ ಅನುಗುಣವಾಗಿಯೇ  ಕಾರ್ಯನಿರ್ವಹಿಸುತ್ತಿರುವ ಈ ತರಬೇತಿ ಕೇಂದ್ರವೂ, ತರಬೇತಿ ಪಡೆಯುವವರಿಗೂ ಇದೇ ನಿಯಮ ಅನ್ವಯಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಂಸ್ಥೆಯು, ಕಾರ್ಪೊರೇಟ್‌ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌), ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಆಯ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವುದು ಈ ತರಬೇತಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ.

ಎಸ್ಎಸ್‌ಎಲ್‌ಸಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದು ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗುವವರು ಈ ತರಬೇತಿಗೆ ಅರ್ಹರು.  ವಯೋಮಿತಿ 15ರಿಂದ 17 ಇರಬೇಕು. ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ರಾಜ್ಯದ ಎಂಟು ಕೇಂದ್ರಗಳಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶಿಸಿ ಆಯ್ಕೆ ಮಾಡಲಾಗುವುದು. ಪ್ರತಿ ವರ್ಷ 64 ಮಂದಿಯನ್ನು ಆಯ್ಕೆಗೆ ಪರಿಗಣಿಸಲಾಗುವುದು. ಜೋಡಣೆ, ವೆಲ್ಡಿಂಗ್‌, ಪೇಂಟಿಂಗ್‌ ಮತ್ತು ಮೆಕಾಟ್ರೋನಿಕ್ಸ್‌– ಹೀಗೆ ನಾಲ್ಕು  ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ.

‘ಇಲ್ಲಿ ತರಬೇತಿ ಪೂರ್ಣಗೊಳಿಸಿದವರು ಟೊಯೊಟಾದಲ್ಲಿಯೇ ಕೆಲಸ ಮುಂದುವರೆಸಬಹುದು ಇಲ್ಲವೇ  ಟೊಯೊಟಾದ ಬಿಡಿಭಾಗ ಪಾಲುದಾರ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಬಹುದು. ಸಂಸ್ಥೆಯಲ್ಲಿಯೇ ಇರಬೇಕೆಂಬ ಯಾವುದೇ ನಿಬಂಧನೆ ಇಲ್ಲ. ಕೆಲವರು ಆಸ್ಟ್ರೇಲಿಯಾದಲ್ಲಿಯೂ ಉದ್ಯೋಗ ಕಂಡುಕೊಂಡಿದ್ದಾರೆ’ ಎಂದು ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಶೈಲೇಶ್‌ ಶೆಟ್ಟಿ ಹೇಳುತ್ತಾರೆ.

‘ಆಯ್ಕೆ ಪ್ರಕ್ರಿಯೆ ತುಂಬ ಕಟ್ಟುನಿಟ್ಟಾಗಿ ನಡೆಯುತ್ತದೆ. ಕುಟುಂಬದ ವಾರ್ಷಿಕ ವರಮಾನ ₹  1ಲಕ್ಷಕ್ಕಿಂತ ಕಡಿಮೆ ಇರಬೇಕು. ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ ಅದನ್ನು ಬೇರೆ, ಬೇರೆ ವಿಧಾನ ಮತ್ತು ಮೂಲಗಳಿಂದ ತಿಳಿದುಕೊಂಡು  ಬಡ ಕುಟುಂಬಗಳ ಅಭ್ಯರ್ಥಗಳನ್ನಷ್ಟೇ ಆಯ್ಕೆಗೆ ಪರಿಗಣಿಸಲಾಗುವುದು’ ಎಂದೂ ಅವರು ವಿವರಣೆ ನೀಡುತ್ತಾರೆ. ‘ಬರೀ ತರಬೇತಿ ನೀಡಬೇಕೆಂಬ ಅನಿವಾರ್ಯತೆ ಈ ಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ. ಸಮಾಜಕ್ಕೆ ಪ್ರತಿಯಾಗಿ ಏನಾದರೂ ಕೊಡಬೇಕೆಂಬ ಬದ್ಧತೆಯಿಂದ ಈ ತರಬೇತಿ ನೀಡಲಾಗುತ್ತಿದೆ‘ ಎಂದೂ ಅವರು ಹೇಳುತ್ತಾರೆ.

‘ಕೌಶಲ್ಯ ಭಾರತ’ ಯೋಜನೆಗೆ ಉತ್ತೇಜನ ನೀಡಲು ಜಪಾನ್ ಸರ್ಕಾರದಿಂದ ‘ತಯಾರಿಕೆ ಕೌಶಲ ವರ್ಗಾವಣೆ ಉತ್ತೇಜನಾ ಕಾರ್ಯಕ್ರಮ’ದಡಿ ಆಯ್ಕೆಯಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಕಲಿಕಾರ್ಥಿಗಳ ನಡವಳಿಕೆ, ಜೀವನಶೈಲಿ, ವ್ಯಕ್ತಿತ್ವ ಬದಲಾವಣೆಯ ದೃಷ್ಟಿಯಿಂದಲೂ ತರಬೇತಿ ಅವಧಿಯಲ್ಲಿ ಗಮನ ನೀಡುವುದು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.  ‘ಉತ್ತಮ ನಡತೆ ಮತ್ತು ಶಿಸ್ತು  ಇಲ್ಲಿ ಮುಖ್ಯವಾಗಿದೆ. ಇತರ ಸಂಸ್ಥೆಗಳಿಗೆ ಮಾದರಿಯೂ ಆಗಿದೆ. ಟೊಯೊಟಾ ತಾಂತ್ರಿಕ ಕೌಶಲ ಅಕಾಡೆಮಿಯ ಆಶಯಕ್ಕೆ ಅನುಗುಣವಾಗಿ ಈ ತರಬೇತಿ ಕೇಂದ್ರ 2007ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಗ್ರಾಮೀಣ ಪ್ರದೇಶದಿಂದ ಬಂದವರ ಜೀವನ ಮಟ್ಟ ಸುಧಾರಣೆ ಮತ್ತು ಉದ್ಯೋಗ ಅವಕಾಶ ಕಲ್ಪಿಸಿಕೊಡುವಲ್ಲಿ ಈ ಕೇಂದ್ರ ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ಕೇಂದ್ರದ ಡೆಪ್ಯುಟಿ ಮ್ಯಾನೇಜರ್‌ ಭಾಸ್ಕರ್‌ ಪೈ ಹೇಳುತ್ತಾರೆ.

ಪರಿಪೂರ್ಣ ತರಬೇತಿ

‘ಇಲ್ಲಿ ತರಬೇತಿ ಪಡೆದವರು ಕೆಲಸ ಮಾಡಲು ಕಾರು ತಯಾರಿಕಾ ಘಟಕಕ್ಕೆ ಹೋದಾಗ ಅಲ್ಲಿ ಹೊಸದೇನೂ ಅನಿಸುವುದಿಲ್ಲ. ಅಲ್ಲಿ ಮಾಡಬೇಕಾದ ಕೆಲಸವನ್ನೆಲ್ಲ ತರಬೇತಿ ಕೇಂದ್ರವು ಪರಿಪೂರ್ಣವಾಗಿ ಮನದಟ್ಟು ಮಾಡಿಕೊಟ್ಟಿರುತ್ತದೆ. ತರಬೇತಿ ಸ್ವರೂಪ , ಸೌಲಭ್ಯಗಳೆಲ್ಲ ಅತ್ಯುತ್ತಮ ಮಟ್ಟದಲ್ಲಿ ಇವೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಕಲಿಯುವ ವಿಶಿಷ್ಟ ಪರಿಸರವೂ ಇಲ್ಲಿ ಇದೆ. ಅನುಭವಿ ತರಬೇತಿದಾರ ನೆರವಿನಿಂದ ಕಲಿಕೆ ತುಂಬ ಸುಲಭವಾಗುತ್ತದೆ’ ಎಂದು ಆನಂದ ಕುಮಾರ್ ಹೇಳುತ್ತಾರೆ.

₹ 4.98 ಕೋಟಿ
2015–16ರಲ್ಲಿ ‘ಸಿಎಸ್‌ಆರ್‌’ ಕಾರ್ಯಕ್ರಮದಡಿ ಮಾಡಿರುವ ವೆಚ್ಚ

ಮಾಹಿತಿಗೆ: 080: 6629 2546 / 97409 00174 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT