ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಮನೆಯಿಂದ ಪರಿಮಳದ ಬೆನ್ನಟ್ಟಿ

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಪಿಯುಸಿ ಪಾಸಾಗಿದ್ದೆ. ಆಸ್ಟ್ರಾಜಿನಿಕಾದಲ್ಲಿ ನನ್ನಕ್ಕ ವಿಜ್ಞಾನಿಆಗಿದ್ದರು. ನಾನಲ್ಲಿ ಫ್ರಂಟ್‌ ಆಫೀಸಿನಲ್ಲಿ ಕೆಲಸಕ್ಕೆಂದು ಸೇರಿದೆ. ಕೆಲಸ ಮಾಡುತ್ತಲೇ ಓದು ಮುಂದುವರಿಸಿದೆ. ಬಿಕಾಂ ನಂತರ ಎಂ.ಕಾಂ ಮುಗಿಸಿದೆ. ನನ್ನ ಓದು ಮುಂದುವರಿದಂತೆ ವೃತ್ತಿಯಲ್ಲಿಯೂ ಮೇಲೇರುತ್ತಿದ್ದೆ. ಅಕೌಂಟ್ಸ್‌ ಸೆಕ್ಷನ್‌ಗೆ ಸೇರಿದೆ. ಅಲ್ಲಿಂದ ಎಂ.ಬಿ.ಎ ಮಾಡಿದೆ. ಮುಂದೆ ಐ.ಬಿ.ಎಂಗೆ ಕೆಲಸಕ್ಕೆಂದು ಸೇರಿದೆ. ವೃತ್ತಿಯಲ್ಲಿ ಯಶಸ್ಸು ಸಿಗುತ್ತಲೇ ಇತ್ತು. ನಂತರ ಫಾರ್ಮಾಲೀಫ್‌ಗೆ ಸೇರಿದೆ. ಈ ಎಲ್ಲ ವೃತ್ತಿರಂಗದ ಅನುಭವಗಳನ್ನು ಬಳಸಿ ನಾವೇ ಯಾಕೆ ಒಂದು ಉದ್ಯಮ ಸ್ಥಾಪಿಸಬಾರದು  ಎನ್ನುವ ಆಲೋಚನೆ ಆಗಾಗ ಮನದಲ್ಲಿ ಸುಳಿಯುತ್ತಿತ್ತು. ನಿಧಾನಕ್ಕೆ ಸುಳಿಸುಳಿದು ಹೋಗುವ ಈ ಯೋಚನೆ ಕ್ರಮೇಣ ಕನಸಾಗಿ ಆವರಿಸಿಕೊಂಡಿತು.

‘ಮನೆಯಲ್ಲಿ ಚರ್ಚಿಸಿದಾಗಲೂ ಸಹಕಾರ, ಬೆಂಬಲ ವ್ಯಕ್ತವಾಯಿತು. ನನ್ನ ಸಹೋದರಿಯ ಪತಿ ಶ್ರೀಧರ್ ರಾವ್‌ ಸುಗಂಧ ದ್ರವ್ಯಗಳ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವರು. ಮಾನವ ಸಂಪನ್ಮೂಲ ನಮ್ಮೊಟ್ಟಿಗೆ ಇತ್ತು.  ಇನ್ನು ಆ ಕನಸನ್ನು ನನಸಾಗಿಸಲು ನಿದ್ದೆಬಿಟ್ಟು ದುಡಿಯಬೇಕಾಯಿತು. ಮೊದಮೊದಲು ಕಷ್ಟವಾಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಒಂದೆರಡು ವರ್ಷಗಳ ಕಾಲ ನಾವು ಅಧ್ಯಯನಕ್ಕೆಂದೇ ಇರಿಸಿಕೊಂಡಿದ್ದೆವು. ನಂತರ ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ.

‘ಯಾವ ಉದ್ಯಮ ಕೈಗೊಳ್ಳಬೇಕು ಎಂಬ ಪ್ರಶ್ನೆ ಬಂದಾಗ ಸೋಪು ಮತ್ತು ಶಾಂಪುಗಳ ತಯಾರಿಕೆಯನ್ನು ಆಯ್ಕೆ ಮಾಡಿಕೊಂಡೆವು. ಇದಕ್ಕೂ ಒಂದು ಕಾರಣವಿದೆ. ಧಾವಂತದ ಈ ಬದುಕಿನಲ್ಲಿ ಎಲ್ಲರಿಗೂ ಆಹ್ಲಾದಕರ ಅನುಭವ ನೀಡುವುದು ಸ್ನಾನ. ಈ ಸ್ನಾನ ಆ ಇಡೀ ದಿನದ ಕೆಲಸಗಳಿಂದ ಆರಾಮದಾಯಕ ಅನುಭವವೂ ನೀಡುತ್ತದೆ. ಜೊತೆಗೆ ಮುಗಿಸಬೇಕಾದ ಕೆಲಸಗಳಿಗೆ ಸ್ಫೂರ್ತಿಯೂ ನೀಡುತ್ತದೆ. ಆದರೆ, ಅದಕ್ಕಾಗಿ ಪರಿಶುದ್ಧ ಪರಿಮಳಯುಕ್ತ ಸೋಪುಗಳನ್ನು ತಯಾರಿಸುವ ಯೋಚನೆ ಮಾಡಿದೆವು. ಈಗಾಗಲೇ ಹಲವಾರು ಉದ್ದಿಮೆಗಳಲ್ಲಿ ದುಡಿದ ಅನುಭವ ನಮ್ಮೊಟ್ಟಿಗೆ ಇರುವುದರಿಂದ, ಹೆಚ್ಚಿನ ಲಾಭದಾಸೆ ಇಲ್ಲದೆಯೇ ಅತಿ ಹೆಚ್ಚು ಜನರಿಗೆ ನೈಸರ್ಗಿಕ ಪರಿಮಳ ದ್ರವ್ಯ ಇರುವ ಸೋಪುಗಳನ್ನು ನೀಡುವುದೆಂದು ನಿರ್ಧಾರವಾಯಿತು.

‘ಪರಿಶುದ್ಧ ಮನಸು, ಪರಿಶುದ್ಧ ಸ್ನಾನ ಇದಕ್ಕಾಗಿ ಪಾರದರ್ಶಕ ಸೋಪುಗಳನ್ನು ತಯಾರಿಸುವುದೇ ನಮ್ಮ  ಮೊದಲ ಆಯ್ಕೆ ಆಯಿತು.  5 ಲಕ್ಷ ಬಂಡವಾಳ ಇರಿಸಿಕೊಂಡೆವು. ಕನೌಜ್‌ನಿಂದ ಸುಗಂಧದ್ರವ್ಯಗಳನ್ನು ತರುವುದಾಯಿತು.

‘ಅಡುಗೆ ಮನೆಯಲ್ಲಿಯೇ ಒಂಚೂರು ಜಾಗ ಮಾಡಿಕೊಂಡು ಮೊದಲ ಸ್ಯಾಂಪಲ್‌ ಸೋಪುಗಳನ್ನು ತಯಾರಿಸಿದೆವು. ಮೊದಲ ಆರು ತಿಂಗಳು ಯಾವ ಪ್ರತಿಫಲಾಪೇಕ್ಷೆ ಇಲ್ಲದೆಯೇ ಸ್ಯಾಂಪಲ್‌ಗಳನ್ನು ಹಂಚತೊಡಗಿದೆವು. ಮೊದಲ ಎರಡು ವರ್ಷಗಳನ್ನಂತೂ ಸಂಘರ್ಷದ ವರ್ಷಗಳೆಂದೇ ನಿರ್ಧರಿಸಲಾಗಿತ್ತು. ಹಾಗಾಗಿ ಯಾವುದೇ ಕಷ್ಟ ಬಂದರೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದೆವು.

‘ಹೆಸರು ‘ಕಾಸ್ಮೈರಾ’ ಎಂದು ಆಯ್ಕೆ ಮಾಡಿದೆವು.  ಹೆಸರು ನೋಂದಣಿ ಮಾಡಿಸುವುದು, ಅಗತ್ಯದ ಪ್ರಮಾಣ ಪತ್ರಗಳನ್ನು ಪಡೆಯುವುದು, ಪರವಾನಗಿ ಪಡೆಯುವುದು, ಲ್ಯಾಬ್‌ಗಳಲ್ಲಿ ಪರೀಕ್ಷೆಗೆ ಒಳಪಡಿಸುವುದು ಇದೆಲ್ಲವನ್ನೂ ಮಾಡಿಕೊಳ್ಳುವಲ್ಲಿ ಇನ್ನಾರು ತಿಂಗಳು ಕಳೆದವು. ‘ಕೋವೆ’ ಸಂಘಟನೆಯು ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿತು.

‘ಉತ್ತಮ ಗುಣಮಟ್ಟ, ಕಡಿಮೆ ಬೆಲೆ ಅದಿಷ್ಟಾದರೆ ಖಂಡಿತವಾಗಿಯೂ ಸಾಕಾಗದು ಎಂದು ಗೊತ್ತಾಗಿದ್ದು, ಪ್ಯಾಕೆಜಿಂಗ್‌ ಮಹತ್ವ ಅರಿತಾಗ. ವರ್ಣವಿನ್ಯಾಸ, ಅಕ್ಷರಗಳು, ಏನೆಲ್ಲ ಬರೆದಿರಬೇಕು ಎಂಬುದ್ದನ್ನೆಲ್ಲ ನಿರ್ಣಯಿಸಿ ಅಂತಿಮ ರೂಪಕ್ಕೆ ತಂದಾಗ ಉತ್ಪನ್ನಗಳು ಸಿದ್ಧವಾಗಿದ್ದವು. ಅವುಗಳ ಪಯಣವೂ ಅಡುಗೆ ಮನೆಯಿಂದ ಎರಡು ರೂಮುಗಳಿರುವ ತಯಾರಿಕಾ ಘಟಕಕ್ಕೆ ಬೆಳೆದು ಬಂದು ನಿಂತಿತ್ತು. ಅಷ್ಟರವರೆಗೆ ಉಚಿತ ಸ್ಯಾಂಪಲ್‌ ನೀಡಿದ್ದೆಲ್ಲವೂ ಆರ್ಡರ್‌ಗಳಾಗಿ ಬದಲಾಗಿ ಬರತೊಡಗಿದ್ದವು.

‘ಆ ಬೇಡಿಕೆಯನ್ನು ಪೂರೈಸಲು ಆರಂಭಿಸಿದೆವು. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಮಳಿಗೆ ಖರೀದಿಸಿ, ಮೊದಲ ಸಲ ಮಾರುಕಟ್ಟೆಗೆ ನೇರವಾಗಿ ಕಾಲಿಟ್ಟೆವು. ನಾವಂದುಕೊಂಡದ್ದಕ್ಕಿಂತ ಯಶಸ್ವಿಯಾಗಿ ನಮ್ಮ ಉತ್ಪನ್ನಗಳು ಮಾರಾಟ ಆದವು. ಅದಕ್ಕೂ ಹೆಚ್ಚಿನ ಸಂತೋಷ ಆಗಿದ್ದು, ಆ ಗಲಾಟೆಯಲ್ಲಿ ಖರೀದಿಸಿದ್ದ ಗ್ರಾಹಕರು, ಪ್ಯಾಕಿಂಗ್  ಮೇಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಮತ್ತೆ ಮತ್ತೆ ಇದೇ ಉತ್ಪನ್ನಗಳಿಗೆ ಬೇಡಿಕೆಯನ್ನಿತ್ತರು. ಹೊರರಾಜ್ಯಗಳಿಂದಲೂ ಸಾಕಷ್ಟು ಬೇಡಿಕೆ ಇದೆ. ಮಹಾರಾಷ್ಟ್ರ, ಕೇರಳ, ಗುಜರಾತ್‌ಗಳಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ವಿಶೇಷವೆಂದರೆ ಒಮ್ಮೆ ಖರೀದಿಸಿದ ಗ್ರಾಹಕರು ಕಾಯಂ ಗ್ರಾಹಕರಾಗಿ ಬದಲಾಗುತ್ತಿದ್ದಾರೆ. ಯಾವುದೇ ಜಾಹೀರಾತುಗಳ ಹಂಗಿಲ್ಲದೆ ಉದ್ಯಮ ಬೆಳೆಯುತ್ತಿದೆ. ಪ್ರತಿ ತಿಂಗಳೂ 5ರಿಂದ 7500 ಸಾವಿರಗಳಷ್ಟು ಸೋಪು, ಶಾಂಪುಗಳನ್ನು ಮಾರಾಟ ಮಾಡುತ್ತಿದ್ದೇವೆ. ತಯಾರಿಕೆಯ ಪ್ರಮಾಣ ಹೆಚ್ಚಿಸುವ ಯೋಜನೆಯೂ ಇದೆ. ಇ –ಕಾಮರ್ಸ್‌ನ ಸಂಸ್ಥೆಗಳೂ ಪೈಪೋಟಿಗೆ ಬಿದ್ದಂತೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿವೆ. ನಾವೇ ನಿಧಾನವಾಗಿಯಾದರೂ ಪರವಾ ಇಲ್ಲ ದೃಢವಾಗಿ ಹೆಜ್ಜೆ ಇಡುವ ಸಂಕಲ್ಪ ಮಾಡಿದ್ದೇವೆ.

ಉಡುಗೊರೆಗೆ ಸೋಪು, ಶಾಂಪು
‘ಬೆಂಗಳೂರಿನ ಧಾವಂತದ ಬದುಕಿನಲ್ಲಿ ನಮ್ಮನ್ನು ನಾವೇ ಅಕ್ಕರೆಯಿಂದ ಕಾಣಬೇಕಾದರೆ ಅದು ಸ್ನಾನದ ಮೂಲಕ ಮಾತ್ರ. ಒಮ್ಮೆ ಘಮವೆನಿಸುವಂತೆ ಮೈತೊಳೆದುಕೊಂಡರೆ ಮೈಮನ ಎರಡೂ ಹಗುರವಾಗುತ್ತವೆ. ಇದೇ ಕಾರಣದಿಂದಾಗಿಯೇ ಇಂದು ಸೋಪಿನ ಮಾರುಕಟ್ಟೆ ಹಿಂದೆಂದಿಗಿಂತಲೂ ವಿಸ್ತಾರವಾಗಿದೆ. ಈ ಗುಣವನ್ನೇ ಮೂಲ ಬಂಡವಾಳ ಮಾಡಿಕೊಂಡು ಪುಟ್ಟ ಪುಟ್ಟ ಉಡುಗೊರೆಗಳನ್ನು ಸಿದ್ಧ ಪಡಿಸಿದೆ. ಪುಟ್ಟ ಸೋಪು, ಶಾಂಪು, ಫೇಸ್‌ವಾಷ್‌, ರೋಸ್‌ ವಾಟರ್‌, ಲಿಪ್‌ಬಾಮ್‌, ಲೋಷನ್ಸ್‌ಗಳಿರುವ ಪುಟ್ಟ ಉಡುಗೊರೆಗಳನ್ನು ಸಿದ್ಧ ಪಡಿಸಿದೆ. ಮದುವೆಯ ಸೀಸನ್‌ನಲ್ಲಿ, ಕುಟುಂಬದ ಕಾರ್ಯಕ್ರಮಗಳಲ್ಲಿ ಇವನ್ನು ಹಂಚುವುದು ಸಾಮಾನ್ಯವಾಯಿತು. ಈ ಉಡುಗೊರೆಗಳ ಸೆಟ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಕನಿಷ್ಠ 250 ರೂಪಾಯಿಗಳಿಂದ ಆರಂಭವಾದರೆ ಸಾವಿರ ರೂಪಾಯಿಗಳವರೆಗೂ ಉಡುಗೊರೆಗಳನ್ನು ಸಿದ್ಧ ಪಡಿಸಿಕೊಡುತ್ತೇವೆ.

‘ಕೆಲವು ರಿಸಾರ್ಟ್‌ಗಳು, ಹೋಟೆಲ್‌ಗಳು ಸಣ್ಣ ಪ್ರಮಾಣದ ಸೆಟ್‌ಗಳನ್ನು ಬಹುಸಂಖ್ಯೆಯಲ್ಲಿ ಕೇಳುತ್ತವೆ. ಅವನ್ನೂ ಪೂರ್ಣಗೊಳಿಸುತ್ತಿದ್ದೇವೆ. ನಮ್ಮ ಉದ್ಯಮದ ಪರಿಮಳ ನಿಧಾನವಾಗಿ ಮಾರುಕಟ್ಟೆಯಲ್ಲಿ ಹಬ್ಬುತ್ತಿದೆ. ಇದಕ್ಕೆ ಕಾರಣ ಕುಟುಂಬದ ಬೆಂಬಲ, ಛಲ, ಪ್ರಯತ್ನಗಳೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ?

* ಪ್ರತಿಯೊಬ್ಬರ ಬದುಕಿಗೂ ಒಂದು ಉದ್ದೇಶವಿರುತ್ತದೆ. ಅದಕ್ಕೆ ತಕ್ಕಂತೆಯೇ ನಮ್ಮ ಕನಸುಗಳೂ. ಅವುಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ನಿರತರಾಗಬೇಕು. ಗುರಿ ಸಾಧನೆ ತಾನೇ ಆಗುತ್ತದೆ. ಹಿಂಜರಿಯುವ ಅಥವಾ ಅಸಾಧ್ಯವೆಂದು ಕೈಕಟ್ಟಿ ಕೂರಬಾರದು.
–ಗೀತಾ ಚಿನಿವಾಲರ್

ಮಾಹಿತಿಗೆ: 99801 43373 / www.cosmyra.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT