ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಪಾವತಿಗೆ ​ ಭಾರತ್ ಕ್ಯೂಆರ್‌ ಕೋಡ್‌​

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

​ಭಾರತ್‌ ಕ್ಯೂಆರ್‌ ಕೋಡ್‌ನಿಂದಾಗಿ ಚಿಲ್ಲರೆ ವಿದ್ಯುನ್ಮಾನ  (ಡಿಜಿಟಲ್‌) ಪಾವತಿ ವ್ಯವಸ್ಥೆ ಸೀಮಾತೀತವಾಗಿ ವಿಸ್ತರಣೆಗೊಳ್ಳಲಿದೆ. ಕಾರ್ಡ್‌ ಸ್ವೈಪಿಂಗ್‌ ಯಂತ್ರಗಳ ಅಗತ್ಯ ಇಲ್ಲದೆಯೇ ಡಿಜಿಟಲ್‌ ಪಾವತಿಗೆ ಇದು ಅನುವು ಮಾಡಿಕೊಡಲಿದೆ.

​ಭಾರತ್‌ ಕ್ಯೂಆರ್‌ನಿಂದಾಗಿ ಪಾವತಿ ಮಾಡಬೇಕಾದಾಗ ವರ್ತಕನ ಗುರುತು ಅಥವಾ ಫೋನ್‌ ನಂಬರ್‌ ಅನ್ನು ನಮೂದಿಸುವುದು ತಪ್ಪುತ್ತದೆ. ಕ್ಯೂಆರ್ ಕೋಡ್‌ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಗ್ರಾಹಕ ವಹಿವಾಟಿಗೆ ಅಗತ್ಯವಾದ ಹಣವನ್ನು ವರ್ಗಾವಣೆ ಮಾಡಬಹುದು. ಈ ಸೌಲಭ್ಯವನ್ನು ಇಲ್ಲಿ ವಿವರಿಸಲಾಗಿದೆ.

*ಕ್ಯೂಆರ್‌ ಕೋಡ್‌ ಎಂದರೇನು?
ಬಿಳಿಯ ಹಿನ್ನೆಲೆಯಲ್ಲಿ ಕಪ್ಪು ಚೌಕಾಕಾರ ಒಳಗೊಂಡ ಎರಡು ಆಯಾಮದ ರಚನೆಯೇ ತ್ವರಿತವಾಗಿ ಸ್ಪಂದಿಸುವ ಸಂಕೇತ ಅಥವಾ ಕ್ವಿಕ್‌ ರೆಸ್ಪಾನ್ಸ್‌ ಕೋಡ್‌ (ಕ್ಯೂಆರ್‌ ಕೋಡ್‌). ಯಂತ್ರ ಓದಬಹುದಾದ ಆಪ್ಟಿಕಲ್‌ ಲೇಬಲ್‌ ಒಳಗೊಂಡ ಒಂದು ವಸ್ತುವಿನ ಬಗೆಗಿನ ಮಾಹಿತಿ ಅದರಲ್ಲಿ ಅಡಕವಾಗಿರುತ್ತದೆ.

*ಕ್ಯೂಆರ್‌ ಕೋಡ್‌ ಹೊಂದುವುದರ ಮಹತ್ವ ಏನು?
ಹಣ ಪಾವತಿ ಮಾಡುವಾಗ ವ್ಯಾಪಾರಿಯ ಗುರುತು ಅಥವಾ ಫೋನ್‌ ನಂಬರ್‌ ಅನ್ನು ನಮೂದಿಸುವುದುನ್ನು ಇದು ನಿವಾರಿಸುತ್ತದೆ. ಗ್ರಾಹಕರು ಕೇವಲ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ, ವ್ಯವಹಾರದ ಮೊತ್ತವನ್ನು ನಮೂದಿಸಿ ಪಾವತಿ ಮಾಡಬಹುದು. ಸ್ವೈಪಿಂಗ್‌ ಯಂತ್ರದ ಅಗತ್ಯ ಇಲ್ಲದೆ ನೇರವಾಗಿ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆಗೊಳ್ಳುತ್ತದೆ.

*ಈಗ ಇರುವ ಪದ್ಧತಿ ಏನು?
ಇಂದು ದೇಶದಲ್ಲಿರುವ ಕ್ಯೂಆರ್ ಕೋಡ್‌ ಆಧಾರಿತ ಹಣ ಸ್ವೀಕಾರ ವ್ಯವಸ್ಥೆ ಒಂದು ಸೀಮಿತ ವ್ಯವಸ್ಥೆಯಾಗಿದೆ. ಹೆಚ್ಚಿನ ಬ್ಯಾಂಕ್‌ಗಳು ವೀಸಾ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಕ್ಯೂಆರ್‌ ಕೋಡ್‌ ಆಧಾರಿತ ಎಂ ವೀಸಾ ಪಾವತಿಗೆ ಅವಕಾಶ ನೀಡುತ್ತಿವೆ, 2016ರ ನವೆಂಬರ್‌ನಲ್ಲಿ ಮಾಸ್ಟರ್‌ಕಾರ್ಡ್‌ ಮಾಸ್ಟರ್‌ಪಾಸ್‌ ಕ್ಯೂಆರ್‌ ಅನ್ನು ಆರಂಭಿಸಿತ್ತು. ಆರ್‌ಬಿಎಲ್‌ ಬ್ಯಾಂಕ್‌ಗೆ ಮಾತ್ರ ಇದುವರೆಗೆ ಮುಖಾಮುಖಿ ಪಾವತಿಗೆ ಅವಕಾಶ ಇದ್ದ ಸಮಗ್ರ ಮಾಸ್ಟರ್‌ಪಾಸ್‌ ಕ್ಯೂಆರ್‌ ವ್ಯವಸ್ಥೆ ಇತ್ತು. ಪೇಟಿಎಂನಂತಹ ಇ–ವಾಲೆಟ್‌ಗಳೂ ಕ್ಯೂಆರ್‌ ಕೋಡ್‌ ಮೂಲಕ ಹಣ ವರ್ಗಾವಣೆಗೆ ಅವಕಾಶ ಕೊಟ್ಟಿವೆ. ಆದರೆ ಇಲ್ಲಿ ಎರಡೂ ಕಡೆಯವರು ಪೇಟಿಎಂ ಖಾತೆ ಹೊಂದಿರಬೇಕಾಗುತ್ತದೆ.

*ಮಂಡಳಿಯಲ್ಲಿ ಯಾರಿರುತ್ತಾರೆ?
ಸದ್ಯ ಭಾರತ್‌ ಕ್ಯೂಆರ್‌ ಕೋಡ್‌ ಅನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕೇವಲ 15 ಬ್ಯಾಂಕ್‌ಗಳು ಮಾತ್ರ ಮಂಡಳಿಯಲ್ಲಿವೆ. ಆ ಬ್ಯಾಂಕ್‌ಗಳೆಂದರೆ ಆಕ್ಸಿಸ್ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡ, ಬ್ಯಾಂಕ್‌ ಆಫ್‌ ಇಂಡಿಯಾ, ಸಿಟಿ ಯೂನಿಯನ್‌ ಬ್ಯಾಂಕ್‌, ಡಿಸಿಬಿ ಬ್ಯಾಂಕ್‌, ಕರೂರು ವೈಶ್ಯಾ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಆರ್‌ಬಿಎಲ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ವಿಜಯಾ ಬ್ಯಾಂಕ್‌ ಮತ್ತು ಯೆಸ್‌ ಬ್ಯಾಂಕ್‌. ಇಲ್ಲಿ ವೀಸಾ ಮಾಸ್ಟರ್‌ಕಾರ್ಡ್‌ ಮತ್ತು ರೂಪೆ ಕಾರ್ಡ್‌ದಾರರನ್ನು ಸೇರಿಸಲಾಗಿದೆ. ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ ಕೂಡ ಈ ವ್ಯವಸ್ಥೆಗೆ ಬರುವ ಹಂತದಲ್ಲಿದೆ.

​​​*ಭಾರತ್‌ ಕ್ಯೂಆರ್‌ ಕೋಡ್‌ ಹೇಗೆ ಭಿನ್ನ?
ಆರ್‌ಬಿಐ ಸೂಚನೆಯಂತೆ ನಾಲ್ಕು ಪ್ರಮುಖ ಕಾರ್ಡ್‌ ಪಾವತಿ ಕಂಪೆನಿಗಳಾದ ನ್ಯಾಷನಲ್‌ ಪೇಮೆಂಟ್‌್ಸ ಕಾರ್ಪೊರೇಷನ್‌ ಆಫ್‌ ಇಂಡಿಯಾ (ರೂಪೆ  ಕಾರ್ಡ್‌ ನಿರ್ವಹಿಸುವ ಸಂಸ್ಥೆ), ಮಾಸ್ಟರ್‌ಕಾರ್ಡ್‌, ವೀಸಾ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಾಮಾನ್ಯ ಕ್ಯೂಆರ್‌ ಕೋಡ್‌ ಇದು.

‘ವೀಸಾ/ ಮಾಸ್ಟರ್‌ಕಾರ್ಡ್‌/ ರೂಪೆ ಕಾರ್ಡ್‌ಗಳ ತಳಹದಿಯಲ್ಲಿ ಮಾತ್ರವಲ್ಲ, ಆಧಾರ್‌, ಯುಪಿಐ (ಯುನೈಟೆಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಇದು ಉಪಯುಕ್ತ. ಯಾರೇ ಆಗಲಿ ಅವರ ಬಳಿ ಸ್ಕ್ಯಾನಿಂಗ್‌/ರೀಡಿಂಗ್‌ ಮಾಡುವ ಆ್ಯಪ್‌ ಇದೆ ಎಂದಾದಲ್ಲಿ ಅದು ಯುಪಿಐ ಅಧಾರಿತವಾಗಿರಲಿ, ಆಧಾರ್‌ ಆಧಾರಿತವಾಗಿರಲಿ, ಪಾವತಿ ಸಾಧ್ಯವಾಗುತ್ತದೆ. ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್) ಅಳವಡಿಸುವುದಕ್ಕೆ ತಗುಲುವ ವೆಚ್ಚವನ್ನು ಇದು ಇಲ್ಲವಾಗಿಸುತ್ತದೆ’ ಎಂದು ಹೇಳುತ್ತಾರೆ ಪಾವತಿ ಸೇವೆ ಒದಗಿಸುವ ಆಟಂ ಟೆಕ್ನಾಲಜೀಸ್‌ ಲಿ.ನ ಸಿಇಒ ದೇವಾಂಗ ನೆರೆಲ್ಲಾ.

*ಸರ್ಕಾರ ಭಾರತ್‌ ಕ್ಯೂಆರ್‌ ಅನ್ನು ಏಕೆ ಉತ್ತೇಜಿಸುತ್ತಿದೆ?
ಭಾರತ್‌ ಇಂಟರ್‌ಫೇಸ್‌ ಫಾರ್‌ ಮನಿ ಅಥವಾ ‘ಭೀಮ್‌’ ಆ್ಯಪ್‌ನ ಯಶಸ್ಸಿನ ಬಳಿಕ ಇನ್ನೊಂದು ದೊಡ್ಡ ಮಟ್ಟಿನ ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿ ಭಾರತ್‌ ಕ್ಯೂಆರ್‌ ಅನ್ನು ಜನಪ್ರಿಯಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಕಳೆದ ವರ್ಷದ ನವೆಂಬರ್‌ 8ರಂದು ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿದ ಬಳಿಕ ನಗದು ರಹಿತ ವಹಿವಾಟಿಗೆ ಹೆಚ್ಚಿನ ಗಮನ ಹರಿಸಿದೆ. ಸದ್ಯ ಕರೆನ್ಸಿ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದ್ದರೂ, ನರೇಂದ್ರ ಮೋದಿ ಸರ್ಕಾರ ಅಗ್ಗದ ದರದಲ್ಲಿ ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡುತ್ತಿದೆ. ಈ  ಕಾರಣಕ್ಕೆ ಭಾರತ್‌ ಕ್ಯೂಆರ್‌ಗೆ ಸರ್ಕಾರದಿಂದ ಉತ್ತಮ ಬೆಂಬಲ ದೊರೆತಿದೆ.

*ಇದನ್ನು ಯಾರು ಬಳಸಬಹುದು?
ಗ್ರಾಹಕರಾಗಿರುವ ನೀವು ಸ್ಮಾರ್ಟ್‌ಫೋನ್‌ ಹೊಂದಿರಲೇಬೇಕು ಮತ್ತು ಭಾರತ್‌ ಕ್ಯೂಆರ್ ಕೋಡ್‌ ಅನ್ನು ಅಳವಡಿಸಿಕೊಂಡ ಬ್ಯಾಂಕ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಸದ್ಯ ಭಾರತ್‌ ಕ್ಯೂಆರ್‌ ಕೋಡ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ ಮತ್ತು ವಿಂಡೋಸ್‌ನಲ್ಲಿ ಅಲ್ಲ. ಸ್ಮಾರ್ಟ್‌ಫೋನ್‌ ರಹಿತ ಗ್ರಾಹಕರಿಗಾಗಿ ಯುಎಸ್‌ಎಸ್‌ಡಿ ಮೂಲಕ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ನಡೆದಿದೆ. ಬ್ಯಾಂಕ್‌ಗಳಲ್ಲಿ ಡೆಬಿಟ್‌, ಕ್ರೆಡಿಟ್‌ ಮತ್ತು ಪ್ರಿಪೇಯ್ಡ್‌ ಕಾರ್ಡ್‌ಗಳನ್ನು ಹೊಂದಿರುವವರು ಮಾತ್ರ ಸದ್ಯ ಇದನ್ನು ಬಳಸಬಹುದು. ಯುಪಿಐನಲ್ಲಿ ಸದ್ಯ ಈ ಸೇವೆ ಇಲ್ಲ.

​*ಇದರ ಬಳಕೆ ಹೇಗೆ?
ಭಾರತ್‌ ಕ್ಯೂಆರ್‌ ಕೋಡ್‌ನಲ್ಲಿ ಎರಡು ಬಗೆ. ಅವುಗಳೆಂದರೆ ಸ್ಟಾಟಿಕ್‌ ಮತ್ತು ಡೈನಾಮಿಕ್‌. ಸ್ಟಾಟಿಕ್‌ ಕ್ಯೂಆರ್‌ ಕೋಡ್‌ನಲ್ಲಿ ಮೊದಲು ನೀವು
ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೊತ್ತವನ್ನು ನಮೂದಿಸಿ, ಪಿನ್‌ ಹಾಕುವ ಮೂಲಕ ಅದನ್ನು ದೃಢಪಡಿಸಬೇಕು. ಬಳಿಕವಷ್ಟೇ ಹಣ ಬ್ಯಾಂಕ್‌ ಖಾತೆಯಿಂದ ವರ್ಗಾವಣೆಗೊಳ್ಳುತ್ತದೆ. ಡೈನಾಮಿಕ್ ಕ್ಯೂಆರ್‌ ಕೋಡ್‌ನಲ್ಲಿ ಪ್ರತಿ ವಹಿವಾಟಿಗೂ ವ್ಯಾಪಾರಿ ಹೊಸ ಕ್ಯೂಆರ್‌ ಕೋಡ್‌ ಸೃಷ್ಟಿಸುತ್ತಾನೆ. ಇಲ್ಲಿ ನೀವು ಮೊತ್ತವನ್ನು ನಮೂದಿಸುವ ಅಗತ್ಯ ಇಲ್ಲ. ನೀವು ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪಿನ್‌ ಹಾಕಿದರಾಯಿತು. ನಿಗದಿತ ಹಣ ವರ್ಗಾವಣೆಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT