ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೆಸರು: ಅಕ್ಷಯ. ಎಸ್. ಮೈಸೂರು
*ನನ್ನ ವಯಸ್ಸು 24. ಬಿಇ (ಸಿವಿಲ್) ಓದಿದ್ದೇನೆ. ಮೈಸೂರಿನಲ್ಲಿ 30X40, 40X60 ನಿವೇಶನಕೊಂಡು ಮನೆ ಕಟ್ಟಿಸಿ ಮಾರಾಟ ಮಾಡಬೇಕೆಂದಿದ್ದೇನೆ. ನಮ್ಮ ಪ್ರಧಾನ ಮಂತ್ರಿಯವರು ತಿಳಿಸಿದಂತೆ ಬ್ಯಾಂಕಿನಲ್ಲಿ ನನಗೆ ಸಾಲ ಸಿಗಬಹದೇ? ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ನೀವು ಸಿವಿಲ್ ಎಂಜಿನಿಯರ್ ಆಗಿ ಸ್ವಂತ ಉದ್ಯೋಗ ಮಾಡುವ ಮನಸ್ಸು ಮಾಡಿರುವುದು ನನಗೆ ತುಂಬಾ ಸಂತಸ ತಂದಿದೆ. ನಿಮಗೆ 24 ವರ್ಷ. ಸ್ವಲ್ಪ ಪರಿಣತಿ ಪಡೆದು ಈ ದಾರಿ ಹಿಡಿಯುವುದು ಉತ್ತಮ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದೆರಡು ವರ್ಷ ಒಂದು ಉತ್ತಮವಾದ ಸಿವಿಲ್ ಕನ್ಸ್‌ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದರೆ, ಮುಂದೆ ನೀವು ಸ್ವಂತ ಕಟ್ಟಡ ಕಟ್ಟುವಾಗ ಬಹಳ ಸುಲಭವಾಗುತ್ತದೆ. ಒಟ್ಟಿನಲ್ಲಿ ನೀವು ಉದ್ಯೋಗದಲ್ಲಿ ಮುಂದುವರಿಯುವ ಅವಶ್ಯವಿಲ್ಲ. ನಿಮ್ಮಂತಹ ಉತ್ಸಾಹಿ ಯುವಕ ಎಂಜಿನಿಯರ್‌ಗಳು  ಸ್ವಂತ ಉದ್ಯೋಗ ಮಾಡುವಲ್ಲಿ, ಎಲ್ಲಾ ಬ್ಯಾಂಕುಗಳು ನಿಮಗೆ ಕೈಬೀಸಿ ಕರೆಯುತ್ತವೆ. ನಿಮಗೊಂದು ಕಿವಿ ಮಾತು. ಯಾವುದೇ ಸಾಹಸ ಮಾಡುವಾಗ ಕ್ರಮವಾಗಿ ಮಾಡಬೇಕು. ದುಡುಕಬಾರದು. ಪ್ರತೀ ವ್ಯವಹಾರದಲ್ಲಿ ಲಾಭ ಗಳಿಸಬೇಕು. ಆರಂಭದಲ್ಲಿ ಸ್ವಲ್ಪ ಮಟ್ಟಿನ ತ್ಯಾಗಮಯ ಜೀವನ ಮಾಡಬೇಕಾಗುತ್ತದೆ. ನೀವು ಇಡುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜಾಗ್ರತೆ ಇರಲಿ. ಸಾಲ ಪಡೆದ ನಂತರ, ಸಾಲದ ಕಂತು ಬಡ್ಡಿ ಕಾಲ ಕಾಲಕ್ಕೆ ಬ್ಯಾಂಕಿಗೆ ಸಲ್ಲಿಸಿ, ಇನ್ನೂ ಹೆಚ್ಚಿನ ಸಾಲ ಪಡೆದು, ಮುಂದೆ ದೊಡ್ಡ ವ್ಯವಹಾರ ಮಾಡಬಹುದು. ನಿಮ್ಮ ಸಾಹಸ ಯಶಸ್ಸು ಕಾಣಲಿ. ನಾನು ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ಗುರುಪ್ರಸಾದ್‌, ಊರುಬೇಡ
*ನನ್ನ ತಾಯಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸುಮಾರು 15 ವರ್ಷಗಳ ಹಿಂದೆ ನನ್ನ ತಾಯಿ ಹಾಗೂ ಅವರೊಂದಿಗೆ ಕೆಲಸ ಮಾಡುವ ಓರ್ವ ನೌಕರ, ಇಬ್ಬರೂ ಬ್ಯಾಂಕ್‌ ಸಾಲ ಪಡೆದಿದ್ದರು. ಈ ಸಾಲಕ್ಕೆ ಒಬ್ಬರಿಗೊಬ್ಬರು ಜಾಮೀನು ಹಾಕಿದ್ದಾರೆ. 2011 ರಲ್ಲಿ ನನ್ನ ತಾಯಿ ಜಾಮೀನು ಹಾಕಿದ ವ್ಯಕ್ತಿ ಮರಣ ಹೊಂದಿದರು. ಈಗ ಬ್ಯಾಂಕಿನಿಂದ ಸಾಲ ತೀರಿಸಲು ನನ್ನ ತಾಯಿಗೆ ನೋಟೀಸ್‌ ಬಂದಿದೆ. ನನ್ನ ತಾಯಿ, ಅವರ ಸಹ ನೌಕರರು ಸಾಲ ಮರುಪಾವತಿಸಿದ್ದರೆಂದು ತಿಳಿಸಿದ್ದಾರೆ.  ಈಗ ನಮ್ಮ ಪರಿಸ್ಥಿತಿ ಏನು, ದಯಮಾಡಿ ತಿಳಿಸಿ.

ಉತ್ತರ: ಸಾಲ ಪಡೆದ ವ್ಯಕ್ತಿ ಸಾಲ ಮರುಪಾವತಿಸದಿರುವಲ್ಲಿ ಅಥವಾ ನಿಧನರಾದರೆ, ಜಾಮೀನುದಾರರೇ ಸಾಲ ತೀರಿಸಲು ಬಾಧ್ಯರಾಗುತ್ತಾರೆ. ಬ್ಯಾಂಕುಗಳಲ್ಲಿ ಜಾಮೀನು ಪಡೆಯುವುದೇ ಇದೇ ಉದ್ದೇಶದಿಂದ. ಸಾಲ ಪಡೆದ ವ್ಯಕ್ತಿಯ ಸ್ಥಿರ ಆಸ್ತಿ ಅಥವಾ ಇನ್ನಿತರ ಭದ್ರತೆಗಳಿದ್ದರೆ, ಅವುಗಳನ್ನು ಬ್ಯಾಂಕಿಗೆ ಒದಗಿಸಿ, ಅಂತಹ ಭದ್ರತೆಯಿಂದ ಸಾಲ ವಸೂಲು ಮಾಡಲು ಮನವಿ ಪತ್ರ ಕಳಿಸಿರಿ. ಯಾವುದೇ ರೀತಿಯಲ್ಲಿ ಸಾಲ ವಸೂಲಾಗದ ಸಂದರ್ಭ ಖಚಿತವಾದಲ್ಲಿ, ಜಾಮೀನುದಾರರೇ ಹಣ ತುಂಬಬೇಕಾಗುತ್ತದೆ. ಸಾಲ ಹಾಗೂ ಬಡ್ಡಿಯಲ್ಲಿ ಏನಾದರೂ ರಿಯಾಯತಿ ಕೇಳಿ ಒಮ್ಮೆಲೇ ಹಣ ಭರಿಸಲು (one time sett*ement) ಪ್ರಯತ್ನಿಸಿರಿ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ
ಸಿಕ್ಕಿದಂತಾಗಿದೆ. ಮುಂದಾದರೂ ಜಾಗ್ರತೆ ವಹಿಸಿ.

ಶ್ರೀನಿವಾಸ ಗಡ್‌, ಧಾರವಾಡ
*ನಾನು 2013 ರಲ್ಲಿ ಕೆನರಾ ಬ್ಯಾಂಕಿನಲ್ಲಿ ₹ 3.40 ಲಕ್ಷ ವಿದ್ಯಾಸಾಗರ ಯೋಜನೆಯಡಿ ಯಲ್ಲಿ ಸಾಲ ಪಡೆದಿದ್ದೆ. ನನ್ನ ವಾರ್ಷಿಕ ಆದಾಯ ₹ 2.04 ಲಕ್ಷ. ಎಂಬಿಎ ಓದಲು  ಸಾಲ ಪಡೆದಿದ್ದೇನೆ. ನಾನು ವಾರ್ಷಿಕ ಆದಾಯದ ಪುರಾವೆ ಬ್ಯಾಂಕಿಗೆ ಸಲ್ಲಿಸಿ, ಅನುದಾನಿತ ಬಡ್ಡಿ ಸೌಲತ್ತು ಪಡೆಯಬಹುದೇ?

ಉತ್ತರ: ವಿದ್ಯಾರ್ಥಿ ಓದುವ ಸಮಯದಲ್ಲಿ, ಆ ಕುಟುಂಬದ ವಾರ್ಷಿಕ ಒಟ್ಟು ಆದಾಯ ₹ 4.50 ಲಕ್ಷ ದೊಳಗಿದ್ದು, ವೃತ್ತಿ ಪರ ಶಿಕ್ಷಣಕ್ಕೆ, ಶಿಕ್ಷಣ ಸಾಲ ಪಡೆದಲ್ಲಿ, ಬಡ್ಡಿ ಅನುದಾನಿತ ಸೌಲತ್ತು ದೊರೆಯುತ್ತದೆ. ನಿಮ್ಮ ಇಂದಿನ ಆದಾಯ ₹ 2.04 ಲಕ್ಷ ಎಂದು ತಿಳಿಯುತ್ತೇನೆ. ಇದರಿಂದ ಅನುದಾನಿತ ಬಡ್ಡಿ 4 ವರ್ಷಗಳ ಹಿಂದೆ ಪಡೆದ ಸಾಲಕ್ಕೆ ಅನ್ವಯಿಸುವುದಿಲ್ಲ. ಶಿಕ್ಷಣದ ಅವಧಿಯಲ್ಲಿ ಕುಟುಂಬದ ಆದಾಯ ಮುಖ್ಯವಾಗುತ್ತದೆ, ಜೊತೆಗೆ ಸಾಲ ಪಡೆಯುವಾಗಲೇ ಎಲ್ಲಾ ಪುರಾವೆಗಳನ್ನು ಬ್ಯಾಂಕಿಗೆ ಒದಗಿಸಬೇಕಾಗುತ್ತದೆ. ಶಿಕ್ಷಣ ಮುಗಿದು ಸಾಲ ಮರು ಪಾವತಿಸುವ ಸಮಯದಲ್ಲಿ ಬಡ್ಡಿಯಲ್ಲಿ ರಿಯಾಯತಿ (Subsidy)  ಪಡೆಯಲು ಸಾಧ್ಯವಿಲ್ಲ.

ನಾಗಪ್ಪ ರಾಮಪ್ಪ ಸಂಗ, ಧಾರವಾಡ
*2010 ರಲ್ಲಿ ₹ 7.5 ಲಕ್ಷ ಕೊಟ್ಟು ಮನೆ ಖರೀದಿ ಮಾಡಿ 2016 ರಲ್ಲಿ ಅದೇಮನೆ ₹ 15.5 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಕ್ಯಾಪಿಟಲ್‌ ಗೇನ್‌ ಟ್ಯಾಕ್‌್ಸ ಬರುತ್ತಿದೆಯೇ? ಹೆಚ್ಚುವರಿ ₹ 6 ಲಕ್ಷಕ್ಕೆ ತೆರಿಗೆ ಸಲ್ಲಿಸಬೇಕೇ ಅಥವಾ ₹ 15.5 ಲಕ್ಷಕ್ಕೆ ತೆರಿಗೆ ಸಲ್ಲಿಸಬೇಕೇ ತಿಳಿಸಿರಿ. ಆಸ್ತಿ ಮಾರಾಟ ಮಾಡಿದ ಎಷ್ಟು ದಿವಸಗಳೊಳಗೆ ತೆರಿಗೆ ಸಲ್ಲಿಸಬೇಕು. ಆಸ್ತಿ ಮಾರಾಟ ಮಾಡಿ ಬಂದ ಹಣ ತಂದೆ, ತಾಯಿ, ಹೆಂಡತಿ ಮಕ್ಕಳಿಗೆ ಹಂಚಬಹುದೇ ತಿಳಿಸಿ.

ಉತ್ತರ: ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಆಸ್ತಿ ಮಾರಾಟ ಮಾಡಿ ಬಂದ ಲಾಭಕ್ಕೆ ಮಾತ್ರ ಅನ್ವಯಿಸುತ್ತದೆ. ನಿಮ್ಮ ವಿಚಾರದಲ್ಲಿ ₹ 8 ಲಕ್ಷಕ್ಕೆ ಮಾತ್ರ ಅನ್ವಯಿಸುತ್ತದೆ. ಕ್ಯಾಪಿಟಲ್‌ ಗೇನ್‌ ಟ್ಯಾಕ್‌್ಸ, ಬಂದ ಲಾಭದ ಶೇ 20 ರಷ್ಟು ಬರುತ್ತದೆ.

ಮಾರಾಟ ಮಾಡಿ ಬಂದ ಲಾಭವನ್ನು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಇಲೆಕ್ಟಿಫಿಕೇಶನ್‌ ಕಾರ್ಪೊರೇಷನ್‌ನಲ್ಲಿ, ಮಾರಾಟ ಮಾಡಿದ 6 ತಿಂಗಳೊಳಗೆ 3 ವರ್ಷಗಳ ಅವಧಿಗೆ ಇಟ್ಟು ತೆರಿಗೆಯಿಂದ ಸಂಪೂರ್ಣ ಮುಕ್ತರಾಗಿ. 

ಮೂರು ವರ್ಷಗಳ ನಂತರ ಹಣ ಹಿಂದಕ್ಕೆ ಪಡೆದು ಕುಟುಂಬದ ಸದಸ್ಯರ ಹೆಸರಿನಲ್ಲಿ ವಿಂಗಡಿಸಿ ಠೇವಣಿ ಇರಿಸಿ ಅಥವಾ ಸ್ವಂ ಉದ್ಯೋಗಕ್ಕಾಗಿ ಬಳಸಿ.

ಆತ್ಮಿಕಾ ಎಂ.ಆರ್‌., ಮೈಸೂರು
*ಶಿಕ್ಷಣ ಸಾಲ ಪಡೆದು, ಸಾಲ ತೀರಿಸುವ ಮುನ್ನ, ಸಂಬಳದ ಆಧಾರದ ಮೇಲೆ ಗೃಹಸಾಲ ಪಡೆಯಬಹುದೇ?

ಉತ್ತರ: ಯಾವುದೇ ವ್ಯಕ್ತಿಗೆ ಶಿಕ್ಷಣ ಸಾಲವಿದ್ದು, ಆ ಸಾಲದ ಕಂತು ಬಡ್ಡಿ ಸರಿಯಾಗಿ ಪಾವತಿಸುತ್ತಿರುವಲ್ಲಿ, ಸಂಬಳದ ಆಧಾರದ ಮೇಲೆ ಗೃಹ ಸಾಲ ಪಡೆಯಬಹುದು. ಬ್ಯಾಂಕುಗಳು ಸಾಲ ನೀಡುವ ಮುನ್ನ ಸಾಲ ಮರು ಪಾವತಿಸುವ ಸಾಮರ್ಥ್ಯ ಹಾಗೂ ಸಾಲಕ್ಕೆ ಕೊಡುವ ಆಧಾರ (Security) ಪರೀಕ್ಷಿಸುತ್ತವೆ. ಗೃಹಸಾಲ ಪಡೆಯುವಾಗ ಸ್ಥಿರ ಆಸ್ತಿ ಅಡಮಾನ ಮಾಡುವುದರರಿಂದಲೂ, ನಿಮಗೆ ಸಾಲ ತೀರಿಸುವ ಸಾಮರ್ಥ್ಯ ಇರುವುದರಿಂದಲೂ, ಶಿಕ್ಷಣ ಸಾಲ ತೀರಿಸುವ ಮುನ್ನವೇ ಗೃಹ ಸಾಲ ಪಡೆಯಬಹುದು. ಶಿಕ್ಷಣ ಸಾಲದ ಮೇಲಿನ ಬಡ್ಡಿ ಸೆಕ್ಷನ್‌ 80ಇ ಆಧಾರದ ಮೇಲೆ, ಗೃಹಸಾಲ ಪಡೆದರೆ, ಸಾಲದ ಕಂತು ಬಡ್ಡಿ ಸೆಕ್ಷನ್‌ 80ಸಿ ಹಾಗೂ 24(ಬಿ) ಆಧಾರದ ಮೇಲೆ ಆದಾಯ ತೆರಿಗೆ ವಿನಾಯತಿ ಪಡೆಯಬಹುದು. ಗೃಹಸಾಲ ಪಡೆಯಲು ಇದು ಪರ್ವಕಾಲ ಸಾಲದ ಬಡ್ಡಿ ದರ ಶೇ 8.50 ಇದ್ದು, ಇಎಂಐ ತುಂಬಾ ಕಡಿಮೆಯಾಗುತ್ತದೆ.

ಹೆಸರು: ಕಲಂದರ್, ಚನ್ನಗಿರಿ
*ನನ್ನ ತಾಯಿ ಖಾಸಗಿ ಶಾಲೆಯಲ್ಲಿ ಶಾಲಾ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಅವರ ಹೆಸರಿನಲ್ಲಿ ಅಂಚೆ ವಿಮೆ ಬಯಸಿದ್ದೇವೆ. ಈ ವಿಚಾರದಲ್ಲಿ ಮಾಹಿತಿ ನೀಡಿ.

ಉತ್ತರ: ಅಂಚೆ ವಿಮೆ, ಉಳಿದ ವಿಮೆಯ ಮಾದರಿಯಲ್ಲಿಯೇ ಇರುತ್ತದೆ. ಗ್ರಾಮೀಣ ಭಾಗದವರಿಗೆ ಪ್ರತ್ಯೇಕವಾಗಿ ಅಂಚೆ ವಿಮೆ ಇಳಿಸುವ ಸೌಲಭ್ಯವಿರುತ್ತದೆ. ಪಾಲಿಸಿ ಮಾಡಿಸುವಾಗ, ಕಾಲ ಕಾಲಕ್ಕೆ ಹಣ ವಾಪಸು ಪಡೆಯುವ ಪಾಲಿಸಿಯನ್ನೇ ಮಾಡಿ. ಇದರಿಂದ ಅವಧಿಗೆ ಮುನ್ನ ಹಣ ಪಡೆಯಬಹುದು, ಜೊತೆಗೆ ಪ್ರಾರಂಭದಲ್ಲಿ ಇಳಿಸಿದ ಮೊತ್ತದ ಸಂಪೂರ್ಣ ರಕ್ಷೆ ಕೂಡಾ ಇರುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ. ಅಂಚೆ ವಿಮೆ ಕಂತು ಕೂಡಾ ಕಡಿಮೆ ಹಳ್ಳಿಯವರಿಗೆ ಆರ್.ಪಿಎಲ್.ಐ. ಸೌಲತ್ತು ಇದೆ.

ಹೆಸರು: ಶಿವರಾಮ್, ಬೆಂಗಳೂರು
*ನನ್ನ ಮಾವನವರು ಪಿತ್ರಾರ್ಜಿತ ಜಮೀನನ್ನು ಭೂಪರಿವರ್ತನೆ ಮಾಡಿ, ನಿವೇಶನ ಮಾಡಿ, ಮಾರಾಟ ಮಾಡಿರುತ್ತಾರೆ. ಮಾರಾಟ ಮಾಡಿ ಬಂದ ಹಣದಿಂದ ಸಾಲ ತೀರಿಸಿ ₹3.5 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಅವರೊಡನೆ ಪ್ಯಾನ್‌ಕಾರ್ಡು ಇರಲಿಲ್ಲ. ₹10,000 ಕ್ಕಿಂತ ಹೆಚ್ಚು ಬಡ್ಡಿ ಬಂದರೆ ತೆರಿಗೆ ಕಟ್ಟಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ. ನನ್ನ ಪ್ರಶ್ನೆಗಳು: 1) ಪ್ಯಾನ್‌ಕಾರ್ಡು ಇದ್ದರೆ  ತೆರಿಗೆ ಬರುವುದಿಲ್ಲವೇ? 2. ತೆರಿಗೆ ಬಾರದಿರಲು ಮಾಡುವ ಹೂಡಿಕೆ ಯಾವುದು? 3. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಇದೆಯೇ?

ಉತ್ತರ: ಪ್ಯಾನ್‌ಕಾರ್ಡಿಗೂ ತೆರಿಗೆಗೂ ಯಾವ ರೀತಿಯ ಸಂಬಂಧ ಇರುವುದಿಲ್ಲ. ಆದರೆ   ಪ್ಯಾನ್‌ಕಾರ್ಡು ಕೊಡದೇ  ಹೋದರೆ ಸೆಕ್ಷನ್ 194. ಎ. ಆಧಾರದ ಮೇಲೆ ಬಡ್ಡಿಯ ಶೇಕಡ 20 ಮುರಿಯುತ್ತಾರೆ. (ಪ್ಯಾನ್‌ಕಾರ್ಡು ಕೊಟ್ಟಲ್ಲಿ ಶೇ 10 ಮಾತ್ರ ಮುರಿಯುತ್ತಾರೆ) ಇದು ಕೂಡಾ ವಾರ್ಷಿಕ ಬಡ್ಡಿ ₹10,000 ದಾಟಿದಲ್ಲಿ ಮಾತ್ರ. ತೆರಿಗೆ ಬಾರದಿರಲು ಪಿ.ಪಿ.ಎಫ್. ಹೂಡಿಕೆ ಮಾಡಿರಿ. ಇಲ್ಲಿ ಠೇವಣಿಯ ಮೇಲೆ ಸೆಕ್ಷನ್ 10 (11) ಆಧಾರದ ಮೇಲೆ ಬಡ್ಡಿ ಸಂಪೂರ್ಣ ವಿನಾಯಿತಿ, ಪಿ.ಪಿ.ಎಫ್. ಹೊರತುಪಡಿಸಿ ಬೇರಾವ ಠೇವಣಿ ಮೇಲೂ ಇರುವುದಿಲ್ಲ.

ಹೆಸರು, ಊರು ಬೇಡ
* ನನ್ನ ವಯಸ್ಸು 29. ನನ್ನದು ಒಂದು ಪುಟ್ಟ ಅಂಗಡಿ. ಇದರಿಂದ ಪ್ರತಿ ದಿವಸ ₹ 1000–1500 ಆದಾಯ ಇರುತ್ತದೆ. ಮನೆ ಹಾಗೂ ಎಲ್ಲಾ ಖರ್ಚು ಕಳೆದು ತಿಂಗಳಿಗೆ ₹ 5000–6000 ಉಳಿಯುತ್ತದೆ. ಆ ಹಣ ನನ್ನ 50ನೇ ವರ್ಷಕ್ಕೆ ದೊಡ್ಡ ಮೊತ್ತವಾಗಿ ಉಪಯೋಗವಾಗಬೇಕು. ದಯವಿಟ್ಟು ಸಲಹೆ ನೀಡಿ.

ಉತ್ತರ: ವಾರ್ಷಿಕವಾಗಿ ₹ 6 ಸಾವಿರ (ತಿಂಗಳಿಗೆ ₹ 500) ಕಂತು ತುಂಬುವಂತಹ, ಎಲ್‌.ಐ.ಸಿ.ಯವರ ಜೀವನ ಆನಂದ ಪಾಲಿಸಿ ಮಾಡಿ. ಪ್ರತಿಯೊಬ್ಬರಿಗೂ ಕನಿಷ್ಠ ಉಳಿತಾಯದ ಶೇ10 ಜೀವ ವಿಮೆಯ ಅವಶ್ಯವಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ, ಕಷ್ಟಕಾಲದಲ್ಲಿ ಇಂತಹ ಯೋಜನೆ ಸಹಾಯವಾಗುತ್ತದೆ. ಉಳಿಯುವ ಹಣದಲ್ಲಿ ಕನಿಷ್ಠ ₹ 3 ಸಾವಿರ. ಈ ಕೆಳಗಿನಂತೆ ಬ್ಯಾಂಕ್‌ ಠೇವಣಿ 20 ವರ್ಷಗಳ ಅವಧಿಗೆ ಮಾಡಿ.
ವಿಮೆ ಹಾಗೂ ಮಾಸಿಕ ₹ 3000 ಉಳಿಸುವುದರ ಹೊರತಾಗಿ ತಿಂಗಳಿಗೆ ಒಂದೆರಡು ಸಾವಿರ ಉಳಿಸಿ, ವಾರ್ಷಿಕವಾಗಿ 5–10 ಗ್ರಾಮ್‌ ಬಂಗಾರದ ನಾಣ್ಯ ಕೊಂಡುಕೊಳ್ಳಿ. ಸಣ್ಣ ಉಳಿತಾಯದಲ್ಲಿ ದೊಡ್ಡ ಕನಸು ಕಾಣಲು ದೇವರು ನಿಮಗೆ ಶಕ್ತಿ ಕೊಡಲಿ ಎಂದು ಆಶಿಸುತ್ತೇನೆ.
ವಿ.ಸೂ.: ಆರ್‌.ಡಿ.=ರೆಕರಿಂಗ್‌ ಡಿಪಾಸಿಟ್‌ (ತಿಂಗಳು ತುಂಬುವ ಠೇವಣಿ). ಐ.ಆರ್‌.ಡಿ.=ದಿ ಇನ್ವೆಸ್‌್ಟಮೆಂಟ್‌ ಡಿಪಾಸಿಟ್‌ (ಬಡ್ಡಿ ಒಮ್ಮೆಲೇ ಪಡೆಯುವ ಠೇವಣಿ). ಇವೆರಡೂ ಉಳಿತಾಯದ ಸುರಕ್ಷಿತ ಗೂಡುಗಳು.

ಕೆ. ಮೂರ್ತಿ, ಬೆಂಗಳೂರು
* ನನಗೆ 63 ವರ್ಷ, ಪತ್ನಿಗೆ 50 ವರ್ಷ, ಮೊದಲ ಮಗನಿಗೆ 29 ವರ್ಷ, ಎರಡನೆ ಮಗನಿಗೆ 26 ವರ್ಷ. ನಾವು 4 ಜನರಿಗೆ ₹ 4 ಲಕ್ಷ ಸಿಂಡ್‌ ಆರೋಗ್ಯ ವಿಮೆ ಇಳಿಸಬಹುದೇ? ಹಾಗೆ ಇಳಿಸಲು ಸಾಧ್ಯವಾದಲ್ಲಿ ವಾರ್ಷಿಕ ಪ್ರೀಮಿಯಂ ಎಷ್ಟು ಕಟ್ಟಬೇಕಾಗುತ್ತದೆ? ಅಥವಾ ನಾನು ನನ್ನ ಪತ್ನಿ ಇಬ್ಬರ ಹೆಸರಿನಲ್ಲಿ ₹ 2 ಲಕ್ಷ ಮಾಡುವುದಾದರೆ ಎಷ್ಟು ಹಣ ತುಂಬಬೇಕಾದೀತು?

ಉತ್ತರ: ಕುಟುಂಬದಲ್ಲಿರುವ 1+5 ಜನರಿಗೆ ವಿಮೆ ಮಾಡುವುದಾದರೆ ಇನ್ನೂ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗುತ್ತದೆ. ನಿಮ್ಮ ವಿಚಾರದಲ್ಲಿ ನೀವು 4 ಜನರು ಸೇರಿ ಒಂದೇ ಪಾಲಿಸಿ ಮಾಡಿಸಿ. ನೀವು ಹಾಗೂ ನಿಮ್ಮ ಪತ್ನಿ ಮಾತ್ರ ವಿಮೆ ಮಾಡಿಸಿದರೂ ಕಟ್ಟುವ ಹಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಇಂದಿನ ದಿನಗಳಲ್ಲಿ ಕಾರ್ಪೊರೇಟ್‌ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಕನಿಷ್ಠ ₹ 4 ಲಕ್ಷ ವಿಮೆಯ ಅಗತ್ಯವಿದೆ. ಸಿಂಡ್‌ ಆರೋಗ್ಯ ಯೋಜನೆಯಲ್ಲಿ, ಹಣ ಕೊಡದೆ ಆಸ್ಪತ್ರೆಯಲ್ಲಿ ನಿಮ್ಮ ಮಿತಿಯೊಳಗೆ ಚಿಕಿತ್ಸೆ ಪಡೆಯಬಹುದು.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ, ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ; ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –560001
ಇ–ಮೇಲ್‌: businessdesk@prajavani.co.in  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT