ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲಿಗೆ ಮಾನಿನಿಯರ ಸಾರಥ್ಯ

Last Updated 7 ಮಾರ್ಚ್ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ನಿಲ್ದಾಣದೊಳಕ್ಕೆ   ಸಾಗಿಬರುವಾಗ, ಪ್ಲ್ಯಾಟ್‌ಫಾರ್ಮ್‌ನಲ್ಲಿ   ಕಾಯುತ್ತಿರುವ  ಪ್ರಯಾಣಿಕರ ದೃಷ್ಟಿ ಅಚ್ಚರಿಯಿಂದ ಚಾಲಕನ ಕ್ಯಾಬಿನ್‌ನತ್ತ ಹೊರಳುತ್ತದೆ. ಏಕೆಂದರೆ, ಅಲ್ಲಿ ಲೋಕೊಪೈಲಟ್‌ ಆಸನದಲ್ಲಿ ವಿರಾಜಮಾನರಾಗಿರುವುದು ಮಹಿಳೆ!

ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ (ಬಿಎಂಆರ್‌ಸಿಎಲ್‌) ಒಟ್ಟು 107 ಮಹಿಳಾ ಲೋಕೊಪೈಲಟ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಷ್ಟೇ ಸಮರ್ಥವಾಗಿ ಮಹಿಳೆ ಕಾರ್ಯನಿರ್ವಹಿಸಲು ಸಾಧ್ಯ ಎಂಬುದನ್ನು ನಮ್ಮ ಮೆಟ್ರೊ ಚಲಾಯಿಸುತ್ತಿರುವ ಮಹಿಳೆಯರೂ ತೋರಿಸಿಕೊಟ್ಟಿದ್ದಾರೆ.

ಏಕಾಗ್ರತೆ, ನಿಖರತೆ, ಸಮಯಪ್ರಜ್ಞೆ, ತುರ್ತು ಸಂದರ್ಭದಲ್ಲಿ  ಕಠಿಣ ನಿರ್ಧಾರ ತಳೆಯುವ ಗುಣಗಳನ್ನು ಬಯಸುವ ಈ ಸವಾಲಿನ ಕಾರ್ಯವನ್ನು ಮಹಿಳೆಯರೂ  ಕಳೆದ ಐದು ವರ್ಷಗಳಿಂದ ಅನಾಯಾಸವಾಗಿ ಮಾಡುತ್ತಾ ಬರುತ್ತಿದ್ದಾರೆ.

‘ಸ್ಕೂಟರ್‌ ಚಲಾಯಿಸಲೂ ತಿಳಿಯದ ನಾನು ಮೆಟ್ರೊ ರೈಲನ್ನು ಚಲಾಯಿಸುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಸಾವಿರಾರು ಜನರನ್ನು ಕರೆದೊಯ್ಯುವ ಮೆಟ್ರೊ ಚಲಾಯಿಸುವುದು ನಿಜಕ್ಕೂ ಖುಷಿಯ ವಿಚಾರ’ ಎನ್ನುತ್ತಾರೆ   ಲೊಕೊಪೈಲಟ್‌  ಸವಿತಾ.

‘ನಾನು ಧಾರವಾಡದವಳು. ನಮ್ಮನ್ನು ನವದೆಹಲಿಗೆ ತರಬೇತಿಗೆ ಕಳುಹಿಸುವವರೆಗೂ ಮೆಟ್ರೊ ರೈಲನ್ನೇ ನೋಡಿರಲಿಲ್ಲ. ಆರಂಭದಲ್ಲಿ ಸ್ವಲ್ವ ಭಯ ಇತ್ತು. ಆದರೆ, ತರಬೇತಿ ಪಡೆದ ಬಳಿಕ ಆತಂಕಗಳೆಲ್ಲ ದೂರವಾದವು.   ಲೋಕೊಪೈಲಟ್‌ನಂತಹ ಸವಾಲಿನ ಕೆಲಸವನ್ನು ಮಹಿಳೆಯರು ಪುರುಷರಷ್ಟೇ ಯಾಗಿ ನಿಭಾಯಿಸಬಲ್ಲರು’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಅವರು.

‘ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಮಹಾತ್ಮಗಾಂಧಿ ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ 2011ರ ಅಕ್ಟೋಬರ್‌ನಲ್ಲಿ ನಗರದ ಮೊದಲ ಮೆಟ್ರೊ ರೈಲು ಸಂಚಾರ ಆರಂಭಿಸಿದಾಗ ನಾವು ಐವರು ಮಹಿಳಾ ಲೋಕೊಪೈಲಟ್‌ಗಳಿದ್ದೆವು. ಈಗ ಬಹಳಷ್ಟು ಮಹಿಳೆಯರು ಈ ಕೆಲಸದಲ್ಲಿ ತೊಡಗಿದ್ದಾರೆ.  ನಮಗೆ ವಿಶೇಷ ಅವಕಾಶ  ಸಿಕ್ಕಿದೆ.  ಈ ಬಗ್ಗೆ ಖುಷಿ ಇದೆ’ ಎಂದರು.

ಮಹಿಳಾ ಸ್ನೇಹಿ ವಾತಾವರಣ: ‘ನಮ್ಮ ಮೆಟ್ರೊದಲ್ಲಿ ಮಹಿಳಾ ಸ್ನೇಹಿ ವಾತಾವರಣವಿದೆ. ನಾವೆಲ್ಲ ಒಂದೇ ಕುಟುಂಬದವರಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಲೈಂಗಿಕ ಕಿರುಕುಳದಂತಹ ಪ್ರಕರಣಗಳ ಬಗ್ಗೆ ವಿಚಾರಣೆಗಾಗಿ ಪ್ರತ್ಯೇಕ ಸಮಿತಿಯೂ ಇದೆ.  ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಈ ಸಂಸ್ಥೆಗೆ ಸೇರಬೇಕು’ ಎಂದು ಅವರು ತಿಳಿಸಿದರು.

ಡಿಪ್ಲೊಮಾ ಸಾಕು: ಲೋಕೊಪೈಲಟ್‌ ಆಗಲು ಡಿಪ್ಲೊಮಾ ಪದವಿ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗಮವೇ ಆರು ತಿಂಗಳ ತರಬೇತಿ ನೀಡುತ್ತದೆ.

ಸದಾ ಒತ್ತಡದ ಕೆಲಸ: ‘ಲೋಕೊಪೈಲಟ್‌ ಪಾಲಿಗೆ ಕ್ಷಣ ಕ್ಷಣವೂ ಅಮೂಲ್ಯ. ಸಾವಿರಾರು ಮಂದಿಯನ್ನು ಕರೆದೊಯ್ಯುವಾಗ ರೈಲಿನಲ್ಲಿ ಇರುವ ನಿಗಮದ ಸಿಬ್ಬಂದಿ  ಲೋಕೊಪೈಲಟ್‌ ಮಾತ್ರ.  ಬಿಕ್ಕಟ್ಟಿನಲ್ಲಿ ಕಠಿಣ ನಿರ್ಧಾರ ತಳೆಯುವ  ಸಾಮರ್ಥ್ಯ ಅವರಿಗಿರಬೇಕು. ದೂರ–ಸಾಮಿಪ್ಯದ ಬಗ್ಗೆ ನಿಖರ ಗ್ರಹಿಕೆಯನ್ನು ಹೊಂದಿರಬೇಕು. ಸದಾ ಒತ್ತಡದಲ್ಲಿ  ಅವರು ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ಸ್ವಯಂ ನಿಯಂತ್ರಣ, ಭಾವನಾತ್ಮಕ ಸ್ಥಿರತೆ, ಕಾರ್ಯತತ್ಪರತೆ, ಆದೇಶ ಪಾಲನೆ,  ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಗುಣಗಳನ್ನು ಲೊಕೊಪೈಲಟ್‌ ಹೊಂದಿರಬೇಕು.   ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಇರುವವರು, ಆತಂಕಕ್ಕೆ ಒಳಗಾಗುವವರಿಗೆ ಈ ಕೆಲಸ ಸೂಕ್ತವಲ್ಲ’ ಎಂದರು.

‘ಸಾಮಾನ್ಯವಾಗಿ ಮೂರು ಪಾಳಿಗಳಲ್ಲಿ ಕೆಲಸ ಇರುತ್ತದೆ. ಮಹಿಳೆಯರು ಹೆಚ್ಚಾಗಿ ದಿನದ ಪಾಳಿಯಲ್ಲೇ ಕೆಲಸ ಮಾಡುತ್ತಾರೆ.  ಕೆಲವೊಮ್ಮೆ, ರಾತ್ರಿ ವೇಳೆ ಟೆಸ್ಟಿಂಗ್‌ ನಡೆಯುತ್ತದೆ. ಆಗ ಅಗತ್ಯಬಿದ್ದರೆ ಮಹಿಳಾ ಲೋಕೊಪೈಲಟ್‌ಗಳೂ   ಕೆಲಸ ಮಾಡಬೇಕಾಗುತ್ತದೆ’ ಎಂದರು.

ಲೋಕೊಪೈಲಟ್‌ ಕಾರ್ಯಗಳೇನು?
ಹಳಿಯಲ್ಲಿ ಗ್ರೀಸ್‌, ಎಣ್ಣೆ, ನೀರಿನಂತಹ ಅಂಶಗಳ ಮೇಲೆ ನಿಗಾ ಇಟ್ಟು ರೈಲಿನ ವೇಗವನ್ನು ಅದಕ್ಕೆ ಸರಿಯಾಗಿ ಹೊಂದಿಸುವುದು

ನಿಗದಿತ ಅವಧಿಗೆ ಸರಿಯಾಗಿ ರೈಲು ನಿಲ್ದಾಣವನ್ನು ತಲುಪುವಂತೆ ನೋಡಿಕೊಳ್ಳುವುದು
ನಿಲ್ದಾಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲೇ ರೈಲು ನಿಲ್ಲುವಂತೆ ನೋಡಿಕೊಳ್ಳುವುದು.
ರೈಲಿನ ಬಾಗಿಲು ಹಾಕುವ ಮುನ್ನ ಯಾರಾದರೂ ಪ್ರಯಾಣಿಕರು ಕೊನೆ ಕ್ಷಣದಲ್ಲಿ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದರೆ ಆ ಬಗ್ಗೆ ನಿಗಾ ವಹಿಸುವುದು
ಬಾಗಿಲು ಸರಿಯಾಗಿ ಬೀಳದಿದ್ದರೆ ಕರೆಗಂಟೆ ಮೊಳಗುತ್ತದೆ. ಆಗ ಬಾಗಿಲನ್ನು ತೆಗೆದು ಹಾಕುವುದು
ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ನಿಯಂತ್ರಣ ಕೊಠಡಿ ಜೊತೆ  ಸಂವಹನ ನಡೆಸುವುದು
ಮಾರ್ಗವು ಸರಿಯಾಗಿ ಕಾಣಿಸದ ಸಂದರ್ಭದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರೈಲನ್ನು  ತೆಗೆದುಕೊಂಡು ಚಲಾಯಿಸುವುದು
ಸಿಗ್ನಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರೈಲು ನಿಲ್ಲಿಸಿ, ಸಂಚಾರ ನಿಯಂತ್ರಕರಿಗೆ ಮಾಹಿತಿ ನೀಡುವುದು

248 ಮಹಿಳಾ  ಉದ್ಯೋಗಿಗಳು
‘ಬಿಎಂಆರ್‌ಸಿಎಲ್‌ನಲ್ಲಿ ಒಟ್ಟು 248  ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. 108 ಮಂದಿ ನಿರ್ವಹಣಾ ವಿಭಾಗದಲ್ಲಿದ್ದಾರೆ. 14 ಮಂದಿ ಕಿರಿಯ ಎಂಜಿನಿಯರ್‌ಗಳು, ನಾಲ್ವರು ಸೆಕ್ಷನ್‌ ಎಂಜಿನಿಯರ್‌ಗಳು, ಐವರು ಸಹಾಯಕರು, ನಾಲ್ವರು ಗ್ರಾಹಕ ಸಂಪರ್ಕ ಅಧಿಕಾರಿಗಳು ಹಾಗೂ ಇತರ 7 ಮಂದಿ ಮಹಿಳೆಯರು’ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ವಸಂತರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT