ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತ ಸಾಧಕಿಯರು

Last Updated 8 ಮಾರ್ಚ್ 2017, 10:06 IST
ಅಕ್ಷರ ಗಾತ್ರ
ADVERTISEMENT

ಚೈತನ್ಯದ ಚಿಲುಮೆ

ಅಪ್ಪ ಕೇರಳದವರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದ  ನಂತರ ಬೆಂಗಳೂರಿಗೆ ಬಂದರು. ನಾನು ಹುಟ್ಟಿ– ಬೆಳೆದಿದ್ದು, ಓದಿದ್ದು ಎಲ್ಲ ಬೆಂಗಳೂರಿನಲ್ಲಿಯೇ.  2012ರಲ್ಲಿ ಮದುವೆಯ ನಾಲ್ಕನೇ ವಾರ್ಷಿಕೋತ್ಸವದ ನಿಮಿತ್ತ ಕಾಂಬೋಡಿಯಾಕ್ಕೆ ಪ್ರವಾಸ ಹೋಗಿದ್ದೆವು. ವಾಪಸಾದ ಸ್ವಲ್ಪ ದಿನಕ್ಕೆ ಜ್ವರ ಬಂತು. ತಪಾಸಣೆ ಮಾಡಿಸಿಕೊಂಡಾಗ ‘ರಿಕೆಟ್‌ಸಿಯಲ್ ಅಟ್ಮೋಸ್’ ಎಂಬ ಬ್ಯಾಕ್ಟಿರಿಯಾ ಸೋಂಕು ತಗುಲಿದ್ದು ಗೊತ್ತಾಯಿತು. ಕಾಲ ಮಿಂಚಿತ್ತು. ಗರ್ಭಪಾತವಾಯಿತು. ಕೈ ಕಾಲುಗಳು ಮರದಂತೆ ಗಟ್ಟಿಯಾದವು. ಐಸಿಯುಗೆ ದಾಖಲಿಸಿದೊಂದೇ ಗೊತ್ತು. ನಂತರ ಒಂದು ವಾರ  ಏನೇನಾಯಿತೋ ಗೊತ್ತಿಲ್ಲ. ಎರಡು ಬಾರಿ ಹೃದಯಾಘಾತವಾಗಿತ್ತು.  ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಕಿಡ್ನಿ ಕೆಲಸ ನಿಲ್ಲಿಸಿತ್ತು.

‘ಈಕೆ ಇನ್ನು ಹೆಚ್ಚೆಂದರೆ ಎರಡು ದಿನ ಬದುಕಬಹುದು. ಸಂಬಂಧಿಕರಿಗೆ ತಿಳಿಸಿ’ ಎಂದು ವೈದ್ಯರು ಹೇಳಿದ್ದರಂತೆ.  ನನ್ನ ನಿಧನದ ಸುದ್ದಿಯನ್ನು  ವೈದ್ಯರು ಘೋಷಿಸುವುದೊಂದೇ ಬಾಕಿಯಿತ್ತು.  ಏಪ್ರಿಲ್‌ 5 ನನ್ನ ಹುಟ್ಟಿದ ದಿನ. ಅಂದು ಕೋಮಾದಲ್ಲಿದ್ದ ನನಗೆ ಎಚ್ಚರವಾಗಿತ್ತು. ಕೈ ಕಾಲುಗಳೆಲ್ಲ ನೀಲಿಗಟ್ಟಿತ್ತು. ಸ್ಪರ್ಶಜ್ಞಾನವೇ ಇರಲಿಲ್ಲ. ನಾಲ್ಕು ತಿಂಗಳು ಆಕ್ಸಿಜನ್‌ ಥೆರಪಿ ಪಡೆದೆ. ಸ್ವಲ್ಪ ನೋವು ಕಡಿಮೆಯಾದರೂ ಕೈ ಕಾಲು ಗ್ಯಾಂಗ್ರಿನ್‌ಗೆ ತುತ್ತಾಯಿತು.  ಕೇರಳದ ಸ್ವಾಮೀಜಿಯೊಬ್ಬರ ಬಳಿ ಆಯುರ್ವೇದ ಚಿಕಿತ್ಸೆ ಪಡೆದೆ. ಒಂದು ತಿಂಗಳಲ್ಲಿ ಗ್ಯಾಂಗ್ರಿನ್‌ ಸಂಪೂರ್ಣವಾಗಿ ಗುಣವಾಯಿತು.
ಈ ಮಧ್ಯೆ ಕೈ ಮೂಳೆ ಮುರಿಯಿತು. ಈ ಸೋಂಕಿನಿಂದಾಗಿ ಮೂಳೆಗಳು ಸೇರುವ ಪ್ರಶ್ನೆಯೇ ಇರಲಿಲ್ಲ. ಆಸ್ಪತ್ರೆಯಲ್ಲಿ ಎಚ್ಚರಾಗುವಾಗ  ಎಡಗೈ ಅರ್ಧ ಕತ್ತರಿಸಲಾಗಿತ್ತು.  ಬಲಗೈಯನ್ನಾದರೂ ಉಳಿಸಿಕೊಳ್ಳಬೇಕು ಎಂದು  ಮತ್ತೆ ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಹೋದೆ. ಚಿಕಿತ್ಸೆ ಪಡೆಯುತ್ತಿದ್ದಾಗ ಮುಂಗೈ ಕಣ್ಣೆದುರೇ ಕಳಚಿ ಬಿತ್ತು. ನನ್ನ ದೇಹಕ್ಕೆ ಕೈ ಕಾಲು ಬೇಕಾಗಿಲ್ಲ ಎಂಬ ಅರಿವಾಯಿತು.

2013 ಸೆಪ್ಟೆಂಬರ್‌ 18ರಂದು ಮಣಿಪಾಲ ಆಸ್ಪತ್ರೆಯ ವೈದ್ಯರು ಎರಡೂ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಕೃತಕ ಕಾಲು, ಕೈ ಜೋಡಿಸಿದರು. 2014 ಮಾರ್ಚ್‌ನಲ್ಲಿ Firstsouce solutionನಿಂದ ಕೆಲಸದ ಆಫರ್‌ ಬಂತು. ಮನೆಯಿಂದಲೇ ಕೆಲಸ ಶುರು ಮಾಡಿದೆ. ನಂತರ ವಾರಕ್ಕೆ ಒಂದು ದಿನ, ಎರಡು ದಿನ ಹೀಗೆ ಹೋಗಿ ಬರುತ್ತಿದ್ದೆ. ಈಗ ಇಡೀ ವಾರ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಗೆಳೆಯರೊಡನೆ ಪಾರ್ಟಿ, ಶಾಪಿಂಗ್‌ ಅಂತ ಹೋಗುತ್ತೇನೆ.

ವಿಧಿ ನನ್ನ ಕೈ ಕಾಲು ಕಿತ್ತುಕೊಂಡರೂ ಸುತ್ತ ದೇವರಂಥ ಜನರು ಇದ್ದಾರೆ. ಗಂಡ ಪ್ರಶಾಂತ್‌ ನನ್ನ ಜೊತೆ ನಿಂತಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕೃತಕ ಕಾಲುಗಳನ್ನು (ಬ್ಲೇಡ್‌) ಅಳವಡಿಸಿ 2 ಗಂಟೆಯಲ್ಲಿ 10ಕಿ.ಮೀ ಯಶಸ್ವಿ ಓಟ ನಡೆಸಲು ಸಾಧ್ಯವಾದದ್ದು ಇದೇ ಪ್ರೀತಿ ವಿಶ್ವಾಸದಿಂದ. ಇನ್ನೇನು ಬೇಕು ಹೇಳಿ...?

*

ನಾನು ಏನನ್ನೂ ಕಳೆದುಕೊಂಡಿಲ್ಲ.  ಬದುಕು, ನಿರಂತರ ಕಲಿಕೆ ಎಂದುಕೊಂಡಿದ್ದೇನೆ. ಮನಸು ಗಟ್ಟಿ ಮಾಡಿಕೊಂಡರೆ ಎಲ್ಲವೂ ಸುಲಭ. ಇದೇ ಛಲದೊಂದಿಗೆ 2020ರಲ್ಲಿ ಟೊಕಿಯೊದಲ್ಲಿ ನಡೆಯುವ ಪ್ಯಾರಾ ಓಲಿಂಪಿಕ್ಸ್‌ಗೆ ತಯಾರಿ ನಡೆಸಿದ್ದೇನೆ.
–ಶಾಲಿನಿ ಸರಸ್ವತಿ, ಬ್ಲೇಡ್‌ ರನ್ನರ್‌,  ಬೆಂಗಳೂರು

**

ನಿಯಮಗಳ ಬೇಲಿ ಸರಿಸಿ...

ನನ್ನಪ್ಪ ಬುರ್ಹಾನುದ್ದೀನ್ ಪೊಲೀಸ್ ಇಲಾಖೆಯಲ್ಲಿದ್ದರು. ಅಪ್ಪ ವಾಲಿಬಾಲ್ ಆಟಗಾರರಾದ್ದರಿಂದ ಸಹಜವಾಗಿಯೇ ನನಗೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು. ವಾಲಿಬಾಲ್ ಮತ್ತು ಕಬಡ್ಡಿ ಕ್ರೀಡೆಯಲ್ಲಿ ನಾನು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದೇನೆ.

ಸಂಪ್ರದಾಯಸ್ಥ ಮನೆತನದ ಹೆಣ್ಣೊಬ್ಬಳು ಕ್ರೀಡಾಪಟುವಾಗಿ ಬೆಳೆಯುವುದು ಸುಲಭದ ಹಾದಿಯಾಗಿರಲಿಲ್ಲ. ಆದರೆ, ನನ್ನಮ್ಮ ಜನೀಲುನ್ನಿಸಾ ಆ ಎಲ್ಲಾ ಹಾದಿಗಳನ್ನು ದಾಟುವ, ನನ್ನತನ ಕಾಪಾಡಿಕೊಳ್ಳುವಲ್ಲಿ ನನಗೆ ಮಾರ್ಗದರ್ಶಿಯಾಗಿದ್ದರು. ಚಿಕ್ಕವಳಿದ್ದಾಗ ನೆರೆಹೊರೆಯವರಿಂದ ‘ನಿಮ್ಮ ಮಗಳು  ಹುಡುಗರ ಜತೆ ಆಟವಾಡುತ್ತಿದ್ದಾಳೆ. ಸ್ವಲ್ಪ ಬುದ್ಧಿ ಹೇಳಿ’ ಎನ್ನುವ ಮಾತುಗಳು ಕೇಳಿಬಂದಾಗ, ‘ಮಗಳ ಮೇಲೆ ನಂಬಿಕೆ ಇದೆ. ಅವಳು ಎಲ್ಲೇ ಹೋದರೂ ಮರ್ಯಾದೆಯಿಂದ ಹೋಗಿ ಮರ್ಯಾದೆಯಿಂದಲೇ ಬರುತ್ತಾಳೆ. ನನ್ನ ಮಗಳ ಜವಾಬ್ದಾರಿ ನನ್ನದು. ಅದು ನನಗೆ ಚೆನ್ನಾಗಿ ಗೊತ್ತಿದೆ’ ಎಂದು ಅಪ್ಪ ಅಷ್ಟೇ ನಿರ್ಭಿಡೆಯಿಂದ ಉತ್ತರಿಸಿದ್ದರು.

ಧರ್ಮ, ಉಡುಪು, ಲಿಂಗಭೇದ ಹೀಗೆ ಎಲ್ಲಾ ಸಮಸ್ಯೆಗಳನ್ನು ನಾನೂ ಎದುರಿಸಿದ್ದೇನೆ. ಆದರೆ, ಅವೆಲ್ಲವನ್ನೂ ಮೀರಿ ಬೆಳೆಯುವ ಛಾತಿ ರೂಢಿಸಿಕೊಂಡೆ. ವ್ಯಕ್ತಿಯಾಗಿ ನಾನು ಮೊದಲು ಮನುಷ್ಯಳು. ಮನುಷ್ಯತ್ವಕ್ಕೆ ಮೊದಲು ಬೆಲೆ ಕೊಡುತ್ತೇನೆ. ಧರ್ಮ, ದೇವರು, ಭಕ್ತಿ ಮನೆಯಲ್ಲಿರಬೇಕೇ ಹೊರತು ಹೊರಗಲ್ಲ. ಮನೆಯಿಂದ ಹೊರಗೆ ಬಂದಮೇಲೆ ಎಲ್ಲರೊಳಗೆ ಒಂದಾಗಿರುತ್ತೇನೆ. ಒಮ್ಮೆ ರಾಷ್ಟ್ರಮಟ್ಟದ ಆಯ್ಕೆಗೆ ಹೋಗಿದ್ದೆ. ಆಗ ನನ್ನನ್ನು  ಬೇರೆ ದೃಷ್ಟಿಯಿಂದಲೇ ನೋಡಿದ್ದರು. ಕೆಲ ಮಾತುಗಳನ್ನೂ ಕೇಳಿಸಿಕೊಳ್ಳಬೇಕಾಯಿತು. ಆಗ ಮರ್ಯಾದೆಗಿಂತ ಯಾವುದೂ ದೊಡ್ಡದ್ದಲ್ಲ ಎಂದು ಅವಕಾಶ ಬಿಟ್ಟು ಬಂದುಬಿಟ್ಟೆ.

ನಮ್ಮಲ್ಲಿ ಬುರ್ಖಾ ತೊಡಲೇಬೇಕೆಂಬ ಕಟ್ಟುಪಾಡು ಇದೆ. ಮನೆಯಲ್ಲಿ ಅದನ್ನು ಪಾಲಿಸುತ್ತೇನೆ. ಆಟವಾಡಲು ಹೋದಾಗ ಎಲ್ಲವನ್ನೂ ಮರೆತು ಕ್ರೀಡಾಪಟು ಮಾತ್ರವೇ ಆಗಿರುತ್ತೇನೆ. ಕ್ರೀಡಾಕ್ಷೇತ್ರವಷ್ಟೇ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಮಹಿಳೆ ಬೆಳೆಯುತ್ತಾಳೆಂದರೆ ಅವಳ ವಿರುದ್ಧ ಕೆಲವೊಂದು ಕೊಂಕು ಮಾತುಗಳು ಕೇಳುತ್ತಲೇ ಇರುತ್ತೇವೆ. ಅಂಥ ಮನಸ್ಸುಗಳಿಗೆ ನಾನು ಕೇಳಿಕೊಳ್ಳುವುದು ಇಷ್ಟೇ. ಪರಿಶ್ರಮದಿಂದ ಮೇಲೆ ಬರುವ ಮಹಿಳೆಯ ಸಾಧನೆಯನ್ನು ಗುರುತಿಸಿ ಆಕೆಯನ್ನು ಗೌರವಿಸಿ. ಅದರ ಬದಲು ಅವಳ ದೇಹ, ಬಟ್ಟೆಗಳಿಂದ ಗುರುತಿಸುವ ಮನಸ್ಥಿತಿಯನ್ನು ತೊಲಗಿಸಿ.

ನನ್ನ ಅದೃಷ್ಟವೆಂದರೆ ಗಂಡನ ಮನೆಯ ಬೆಂಬಲ ಸದಾ ಸಿಕ್ಕಿದೆ. ನನ್ನ ಕ್ರೀಡಾ ಸಾಧನೆಗೆ ಅವರೆಂದೂ ತಡೆ ಒಡ್ಡಲಿಲ್ಲ. ನಾನು ಕ್ರೀಡಾ ಕ್ಷೇತ್ರದಲ್ಲಿರುವುದರಿಂದ ಬಟ್ಟೆ ತೊಡುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಹಾಗಾಗಿ, ಅದು ನನಗೆ ಸಮಸ್ಯೆಯೇ ಆಗಲಿಲ್ಲ. ಅಂತರಕಾಲೇಜು ಸ್ಪರ್ಧೆ, ಪರ ಊರು, ಪರ ರಾಜ್ಯ ಎಲ್ಲಿಗೇ ಹೋಗಲಿ ನಾನು ಒಬ್ಬಳೇ ಹೋಗುತ್ತಿದ್ದೆ. ನನಗೆ ಮನೆಯಲ್ಲಿ  ಅಷ್ಟೊಂದು ಧೈರ್ಯವಾಗಿ ಬೆಳೆಸಿದ್ದರು. ಅಮ್ಮನಂತೂ ಈ ವಿಷಯದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಅವರು ನನ್ನ ಬೆನ್ನೆಲುಬಾಗಿದ್ದರು.

ಹೆಣ್ಣು ಎದೆಗುಂದದೆ ಧೈರ್ಯದಿಂದ ಸಮಸ್ಯೆ, ಸವಾಲುಗಳನ್ನು ಎದುರಿಸಿದಾಗ ಮಾತ್ರ ಯಶ ಸಾಧಿಸಬಲ್ಲಳು ಎಂಬುದು ನನ್ನ ಅಭಿಪ್ರಾಯ.

*

‘ಕಟ್ಟುಪಾಡುಗಳನ್ನು ಮನೆಯಲ್ಲಿ ಪಾಲಿಸುತ್ತೇನೆ. ಕ್ರೀಡೆಗೆ ಇಳಿದಾಗ ನಾನೊಬ್ಬಳು ಕ್ರೀಡಾಪಟು ಅಷ್ಟೇ...’

–ಹುಸ್ನಾ ನವಾಜ್‌, ವಾಲಿಬಾಲ್, ಕಬಡ್ಡಿ ರಾಷ್ಟ್ರೀಯ ಕ್ರೀಡಾಪಟು, ತುಮಕೂರು

**

ಜಲದ ಜೀವದಾತೆ...!

ನನ್ನಲ್ಲಿ ಐಎಎಸ್‌ ಮಾಡಬೇಕು ಎಂಬ ಕನಸು ಬಿತ್ತಿದ್ದು ನನ್ನ ತಂದೆ. ಬೆಂಗಳೂರು ಪಾಲಿಕೆಯಲ್ಲಿ ಕಂದಾಯ ಅಧಿಕಾರಿ

ಯಾಗಿದ್ದ ಅವರಿಗೆ ತಮ್ಮ ಮಕ್ಕಳಲ್ಲಿ ಒಬ್ಬರು ನಾಗರಿಕ ಸೇವಾ ಅಧಿಕಾರಿಯಾಗಬೇಕು ಎಂಬ ಹಂಬಲವಿತ್ತು. ನನ್ನಕ್ಕ ವೈದ್ಯೆ. ತಮ್ಮ ಎಂಜಿನಿಯರಿಂಗ್‌ ಕ್ಷೇತ್ರ ಆಯ್ದುಕೊಂಡ. ಕಲಾ ವಿಭಾಗ ಆಯ್ದು ಕೊಂಡಿದ್ದ ನಾನು ಐಎಎಸ್‌ನತ್ತ ದೃಷ್ಟಿಹರಿಸಿದೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ  ರಾಜ್ಯಶಾಸ್ತ್ರ ಆಯ್ಕೆಯ ವಿಷಯವಾಗಿತ್ತು. ಕಥೆ, ಕವನ ಓದುತ್ತಿದ್ದುದರಿಂದ ಕನ್ನಡ ಹೃದಯಕ್ಕೆ ಹತ್ತಿರವಾದ ವಿಷಯವಾಗಿತ್ತು. 
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇವೆರಡೂ ವಿಷಯಗಳನ್ನು ಆಯ್ಕೆ ಮಾಡಿಕೊಂಡೆ. ಐಎಎಸ್‌ನಲ್ಲಿ (2010ರ ತಂಡ) ಉತ್ತಮ ರ್‍ಯಾಂಕ್‌ ಬಂದಿದ್ದರಿಂದ ಕರ್ನಾಟಕ ಕೇಡರ್‌ ಸಿಕ್ಕಿತು. ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡಿದ್ದು ಧಾರವಾಡದಲ್ಲಿ. ನಂತರ ರಾಯಚೂರಿನಲ್ಲಿ ಉಪವಿಭಾಗಾಧಿಕಾರಿಯಾದೆ. 2012ರಲ್ಲಿ ಚಿತ್ರದುರ್ಗ ಜಿಲ್ಲಾಪಂಚಾಯಿತಿಗೆ ಕಾರ್ಯನಿರ್ವಹಣಾ  ಅಧಿಕಾರಿಯಾದೆ.

ರಾಯಚೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಯಾವುದೋ ಯೋಜನೆಯ ಫಲಾನುಭವಿಗಳಿಗೆ ನೆರವಾಗುವುದು, ಆಸ್ತಿ ವ್ಯಾಜ್ಯ ಪರಿಹರಿಸುವುದು ಇತ್ಯಾದಿ ಹೊಣೆಗಳಿರುತ್ತಿದ್ದವು. ಆದರೆ, ಚಿತ್ರದುರ್ಗ ನನ್ನ ಕರ್ಮಭೂಮಿಯಾಯಿತು. ಇಲ್ಲಿ ಸದಾ ಮಳೆಯ ಅಭಾವ. ಯಾವುದೇ ನದಿ  ಹರಿಯುತ್ತಿರಲಿಲ್ಲ. ಮಳೆ ನೀರು ಸಂಗ್ರಹದ ಯೋಜನೆಯ ಬಗ್ಗೆ ಎಲ್ಲ ‘ಸಿಇಒ’ಗಳಿಗೆ ಕಾರ್ಯಾಗಾರ ನಡೆದಿತ್ತು.  ಕೊಳವೆಬಾವಿಗೆ ಜಲಮರುಪೂರಣ ಮಾಡುವ ಯೋಜನೆ ನನ್ನನ್ನು ಸೆಳೆಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಆ ಯೋಜನೆ ಮಾಡುವ ಪಣತೊಟ್ಟೆ. ಹಳ್ಳಿಗಳನ್ನು ತಿರುಗಿ  ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡಿಸಿದೆ. ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಉತ್ತಮ ಜಿಲ್ಲಾ ಪಂಚಾಯಿತಿ ಪ್ರಶಸ್ತಿ ಚಿತ್ರದುರ್ಗಕ್ಕೆ ಬಂತು. ಇದಕ್ಕಿಂತ ತೃಪ್ತಿ ಮತ್ತೇನಿದೆ? ಈಗಲೂ ವಾರಕ್ಕೆ ಎರಡು–ಮೂರು ಕರೆ ಚಿತ್ರದುರ್ಗದಿಂದ ಬರುತ್ತದೆ. ‘ನರೇಗಾ’ ಅಡಿ ರಾಷ್ಟ್ರಮಟ್ಟದಲ್ಲಿ ಕೊಳವೆಬಾವಿ ಜಲಮರುಪೂರಣ ಯೋಜನೆಗೆ ಚಿತ್ರದುರ್ಗ ಮಾದರಿಯನ್ನು  ಅಳವಡಿಸಿಕೊಳ್ಳಲಾಗಿದೆ. ‘ಚಿತ್ರದುರ್ಗ ಮಾಡೆಲ್‌’ ಎಂದೇ ಅದು ಹೆಸರಾಗಿದೆ.

ಮಹಿಳೆಯರು ದೊಡ್ಡ ಆದರ್ಶಗಳ ಬೆನ್ನು ಹತ್ತುವುದು ಬೇಡ. ತಮ್ಮ ಸುತ್ತಲೂ ಕಣ್ಣಾಡಿಸಿದರೆ ಅವರಿಗೆ ಸಾಕಷ್ಟು ಮಾದರಿಗಳು ಸಿಗುತ್ತವೆ. ಹಳ್ಳಿಗಳಲ್ಲೇ ಸ್ವಯಂ ಉದ್ಯೋಗ ಮಾಡುವವರು, ಸ್ವಸಹಾಯ ಸಂಘಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಕೃಷಿಯಲ್ಲಿ ಸಾಧನೆ ಮಾಡುವ ಮಹಿಳೆಯರು ಎಲ್ಲ ಕಡೆಯೂ ಇದ್ದಾರೆ. ಸಾಧಿಸುವ ಛಲ ಬೇಕು ಅಷ್ಟೆ.

**

ಕಾಲ ಬದಲಾಗಿದೆ. ಹೆಣ್ಣು ಮಕ್ಕಳು  ಯಾವುದಕ್ಕೂ ಹಿಂಜರಿಯ­ಬಾರದು. ಯಾರಿಗೇ ಅನ್ಯಾಯವಾದರೂ ಧ್ವನಿ ಎತ್ತಬೇಕು. ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು.

–ಎನ್‌.ಮಂಜುಶ್ರೀ, 
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

**

ಮರಳು ಶಿಲ್ಪ ಪ್ರತಿಭೆ
ನನ್ನ ಹೆಸರು ಗೌರಿ ಎಂ.ಎನ್.  ಎಲ್ಲರೂ ನನ್ನನ್ನು ‘ಸ್ಯಾಂಡ್‌ ಮ್ಯೂಸಿಯಂ ಗೌರಿ’ ಅಂತ ಕರೀತಾರೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವಾಗ  ಮರಳು ಮ್ಯೂಸಿಯಂ ನೋಡಿರಬೇಕಲ್ಲ? ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುವಾಗ ಒಮ್ಮೆ ಏನೋ ಗೂಗಲಿಸುತ್ತಿದ್ದೆ. ವಿದೇಶಗಳಲ್ಲಿ ಮನೆಮಾತಾಗಿರುವ ಮರಳು ಶಿಲ್ಪದ ಮಾಹಿತಿ, ವಿಡಿಯೊಗಳನ್ನು ನೋಡಿದ್ದೇ   ನನಗೂ ಮರಳಿನ ಮರುಳು ಹಿಡ್ಕೊಂಬಿಡ್ತು.

ಅಪ್ಪ ಅಮ್ಮನ ಮನವೊಲಿಸಿ ಮರಳು ಶಿಲ್ಪಕಲೆ ಮಾಡಲು ಶುರು ಮಾಡಿದೆ. ಶುರುಶುರುವಿಗೆ ಶಿಲ್ಪ ಸೊಟ್ಟಗಾಗುತ್ತಿತ್ತು. ನಾನು ಛಲ ಬಿಡದೆ ಮಾಡುತ್ತಲೇ ಹೋದೆ. ಈಗ ‘ಸ್ಯಾಂಡ್‌ ಆರ್ಟ್‌’ ಅಂತ ಗೂಗಲಿಸಿದರೆ ನನ್ನ ಹೆಸರೂ ಬರುತ್ತದೆ. ಅಷ್ಟೇ ಅಲ್ಲ, ಮೈಸೂರಿನ ಜನಪ್ರಿಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನನ್ನ ಈ ಕನಸಿನ ಕೂಸು ‘ಮರಳುಶಿಲ್ಪ ಮ್ಯೂಸಿಯಂ’ ಕೂಡಾ ಸೇರಿದೆ ಗೊತ್ತಾ? ಫೇಸ್‌ಬುಕ್‌ ಪುಟವೂ ಇದೆ. ಭಾರತದ ಮೊದಲ ಮರಳು ಮ್ಯೂಸಿಯಂ ಇದು ಎಂಬುದು ನನಗೆ ಮತ್ತೊಂದು ಹೆಮ್ಮೆ.


ಮೈಸೂರು ರೈಲು ನಿಲ್ದಾಣ ರಸ್ತೆಗೆ ಹೋಗುವಾಗ ಸಿಗುವ ಕೆ.ಸಿ. ಬಡಾವಣೆಯಲ್ಲಿ ನಮ್ಮ ಮ್ಯೂಸಿಯಂ ಇದೆ. ಬರೋಬ್ಬರಿ 115 ಲೋಡು ಮರಳು  ಬಳಸಿ 16 ಥೀಮ್‌ಗಳ ಶಿಲ್ಪಗಳನ್ನು ಮಾಡಿದ್ದೇವೆ. ಈಗ ಮ್ಯೂಸಿಯಂಗೆ ಮೂರು ವರ್ಷವಾಗಿದೆ. ನಾಲ್ಕು ತಿಂಗಳು ಮೂಲಸೌಕರ್ಯ ಒದಗಿಸಿ
ಕೊಳ್ಳಲು ಬೇಕಾಯ್ತು, ಎಂಟು ತಿಂಗಳಲ್ಲಿ ಶಿಲ್ಪಗಳನ್ನು ಮಾಡಿದೆವು. ಹೆಚ್ಚುಕಡಿಮೆ ₹20 ಲಕ್ಷ ಖರ್ಚಾಯಿತು. ಮ್ಯೂಸಿಯಂ ನಿರ್ವಹಣೆ,  ರಕ್ಷಣೆ, ಸಿಬ್ಬಂದಿ ಎಲ್ಲವೂ ಸೇರಿದಾಗ ದುಬಾರಿ ಬಾಬತ್ತು ಆಗುತ್ತದೆ. ತಿಂಗಳಿಗೆ ಈಗ ₹40ಸಾವಿರ ಬಾಡಿಗೆ ನೀಡುತ್ತಿದ್ದೇನೆ. ಆದರೂ ಸ್ಥೈರ್ಯ ಕಳೆದುಕೊಂಡಿಲ್ಲ.

ಮರಳು ಶಿಲ್ಪ ಮಾಡೋದು ಸುಲಭದ ಮಾತಲ್ಲ. ಮರಳಿನ ಗುಣಮಟ್ಟ  ಮತ್ತು ಗಾತ್ರ ಮುಖ್ಯ ಪಾತ್ರ ವಹಿಸುತ್ತದೆ. ಮರಳಿನಲ್ಲಿ ಅಂದುಕೊಂಡ ಶಿಲ್ಪವನ್ನು ತಯಾರಿಸಬೇಕಾದರೆ ತಾಳ್ಮೆ, ಸಂಯಮ ಬೇಕು. ನೀರು ಮತ್ತು ಅಂಟು ಬಿಟ್ಟರೆ ಬೇರೇನೂ ಬಳಸುವಂತಿಲ್ಲ. ಶಿಲ್ಪ ತಯಾರಾದ ಮೇಲೆ ನಿರ್ವಹಣೆ ದುಬಾರಿ. ನಾಯಿ, ಇಲಿ, ಹೆಗ್ಗಣ, ಜಿರಳೆ, ಇರುವೆಗಳ ಕಾಟ ಒಂದೆಡೆಯಾದರೆ ಮಳೆ ಬಂದರೆ ತೇವ, ಮಳೆ ಮತ್ತು ಗಾಳಿಯಿಂದ ಕಾಪಾಡೋದೇ ದೊಡ್ಡ ಸವಾಲು. ಹಾನಿಯಾದರೆ ಅಲ್ಲಲ್ಲೇ ತಕ್ಷಣವೇ ತೇಪೆ ಹಾಕಬೇಕು, ಬಣ್ಣ ಬಳೀಬೇಕು...

ಈಗ ನನ್ನಕ್ಕ ನೀಲಾಂಬಿಕಾ ನೌಕರಿ ಬಿಟ್ಟು ನನ್ನೊಂದಿಗೆ ಮರಳು ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಈಗ ಕಾಲ ತುಂಬಾ ಬದಲಾಗಿದೆ. ಪ್ರತಿಭೆಗಳಿಗೆ ಸಮಾಜದ ಮನ್ನಣೆ ಸಿಗುತ್ತಿದೆ.  ನಮ್ಮಪ್ಪ ನಂಜುಂಡಸ್ವಾಮಿ ಮತ್ತು ಅಮ್ಮ ನಾಗಲಾಂಬಿಕಾ ಬೆನ್ನೆಲುಬಾಗಿ ನಿಂತಿದ್ದಾರೆ. ಸಾಧಿಸುವ ಛಲ ಇರುವ ಹೆಣ್ಣುಮಕ್ಕಳಿಗೆ ಕುಟುಂಬದ ಪ್ರೋತ್ಸಾಹ ಅತಿ ಮುಖ್ಯ. ನಾನಂತೂ ಅದೃಷ್ಟವಂತೆ.

ಕೆಆರ್‌ಎಸ್‌ಗೆ ಹೋಗುವ ದಾರಿಯಲ್ಲಿ ಶಾಶ್ವತ ಮ್ಯೂಸಿಯಂ ನಿರ್ಮಿಸುವ ದೊಡ್ಡ ಕನಸು ನನಗಿದೆ. ಏನಾಗುತ್ತೋ  ಎಂದು ನೋಡಬೇಕು. ಸಂಪರ್ಕಕ್ಕೆ: 094482 73890

*

‘ಹೆಣ್ಣು ಮಕ್ಕಳು’ ಎಂದು ಹಗುರವಾಗಿ ಮಾತನಾಡುವವರಿಗೆ ನಮ್ಮ ಕೆಲಸದ ಮೂಲಕ ಉತ್ತರ ನೀಡಬೇಕು. ಅಂದುಕೊಂಡಿದ್ದನ್ನು ಸಾಧಿಸಿ ಛಲಗಾತಿಯರು ನಾವು ಎಂಬುದನ್ನು ನಿರೂಪಿಸಬೇಕು

–ಗೌರಿ ಎಂ.ಎನ್.
ಮರಳುಶಿಲ್ಪ ಕಲಾವಿದೆ, ಮೈಸೂರು

***

ಎತ್ತರಕ್ಕೇರುವ ಹಂಬಲ...

ಮಂಡ್ಯ ಜಿಲ್ಲೆಯ ಹೆಮ್ಮಿಗೆ ನನ್ನೂರು. ನಮ್ಮೂರಿನಲ್ಲಿ ಹೆಣ್ಣು ಮಕ್ಕಳು ಅಂಗಳಕ್ಕೆ ಇಳಿಯುವುದು ತೀರಾ ಅಪರೂಪ. ನಾನೂ ವೈದ್ಯೆಯಾಗುವ ಕನಸು ಕಂಡಾಕೆ. ಆದರೆ ಬ್ಯಾಸ್ಕೆಟ್‌ಬಾಲ್‌ ಒಲಿಯಿತು.  ಬ್ಯಾಸ್ಕೆಟ್‌ಬಾಲ್‌ ನಾನಾಗೇ  ಆಯ್ದುಕೊಂಡ ಕ್ರೀಡೆ ಅಲ್ಲ. ಅದು ಆಕಸ್ಮಿಕವಾಗಿ ಸಿಕ್ಕ ವರ.  ಸದ್ಯ, ಜ್ಯೂನಿಯರ್‌ ತಂಡದ ನಾಯಕಿಯಾಗಿದ್ದರೂ ಅವಕಾಶ ಸಿಕ್ಕಾಗಲೆಲ್ಲಾ ಸೀನಿಯರ್‌ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ.

ಭಾರತದಲ್ಲಿ ಬ್ಯಾಸ್ಕೆಟ್‌ಬಾಲ್ ಅಷ್ಟೊಂದು ಜನಪ್ರಿಯ ಕ್ರೀಡೆಯಲ್ಲ. ಆಳ್ವಾಸ್ ಮೂಡುಬಿದರೆ ಕಾಲೇಜಿನಲ್ಲಿ ಮೊದಲ ಬಾರಿಗೆ  ಬ್ಯಾಸ್ಕೆಟ್‌ಬಾಲ್ ಮಹಿಳಾ ತಂಡವನ್ನು ಕಟ್ಟುವ ಮೂಲಕ ನಮ್ಮದೇ ಆದ ಅಸ್ಮಿತೆ ಕಂಡುಕೊಂಡೆವು. ಅದೆಲ್ಲ ಈಗ  ಇತಿಹಾಸ. ಐದು ಇಂಚು ನಾಲ್ಕು ಅಡಿ ಇರುವ ಚೋಟುದ್ದ ಹುಡುಗಿ ಬ್ಯಾಸ್ಕೆಟ್‌ಬಾಲ್ ಆಡುತ್ತಾಳಾ ಎಂದು ಅಚ್ಚರಿಪಟ್ಟವರೇ ಹೆಚ್ಚು. ಎತ್ತರ ಕಡಿಮೆ ಅಂತ ಆರಂಭದಲ್ಲಿ ಕ್ರೀಡಾ ಹಾಸ್ಟೆಲ್‌ಗೆ  ಅವಕಾಶ ಸಿಕ್ಕಿರಲಿಲ್ಲ. ಹೆಣ್ಣುಮಕ್ಕಳನ್ನು ಆಟಕ್ಕೆ ಕಳಿಸುವವರು ತುಂಬಾ ಕಡಿಮೆ. ಅದೃಷ್ಟವಶಾತ್‌  ನನಗೆ ಅವಕಾಶ ಸಿಕ್ಕಿತು. 

ಮಂಡ್ಯದ ಕಾರ್ಮಲ್ ಕಾನ್ವೆಂಟ್‌ನಲ್ಲಿ ಎಸ್ಸೆಸ್ಸೆಲ್ಸಿವರೆಗೂ ಓದಿದೆ.  ಹಳ್ಳಿಗಳಲ್ಲಿ ಕ್ರಿಕೆಟ್‌, ಕಬಡ್ಡಿಯನ್ನು ಹೆಚ್ಚು ಆಡುತ್ತಾರೆ. ತುಂಬಾ ಜನರಿಗೆ ಬ್ಯಾಸ್ಕೆಟ್‌ಬಾಲ್ ಬಗ್ಗೆ ಪ್ರಾಥಮಿಕ ಮಾಹಿತಿ ಕೂಡ ಇಲ್ಲ. ಆದರೂ ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಆಸೆ ಗಟ್ಟಿಯಾಯಿತು.

ವಾಣಿಜ್ಯ, ಕಲಾ ವಿಭಾಗದಲ್ಲಿ ಓದಿದರೆ ಆಡಲು ಹೆಚ್ಚು ಸಮಯ ಸಿಗುತ್ತದೆ ಎಂಬ ಲೆಕ್ಕಾಚಾರದಿಂದ ವಿಜ್ಞಾನ ಆಯ್ಕೆ ಮಾಡಿಕೊಳ್ಳಲಿಲ್ಲ. ಈ ಕಾಲೇಜಿಗೆ ಬಂದ ಬಳಿಕ ನಮ್ಮ ನಿಜವಾದ ಕ್ರೀಡಾ ಪಯಣ ಪ್ರಾರಂಭವಾಯಿತು. ನನ್ನ ಆಸೆ, ಕನಸುಗಳಿಗೆ ಪ್ರೋತ್ಸಾಹ ನೀಡಿದವರು ಕೋಚ್ ರವಿಪ್ರಕಾಶ್ ಸರ್‌. ಅವರು ಸರ್ಕಾರಿ ಕೆಲಸ ಬಿಟ್ಟು  ನಮಗಾಗಿ ಆಳ್ವಾಸ್‌ಗೆ ಬಂದರು. ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ತಂಡ 2016ರಲ್ಲಿ ಚಿನ್ನ ಗೆದ್ದುಕೊಂಡಿತು. ಆಗ  ತಂಡದ ನಾಯಕಿಯಾಗಿದ್ದೆ ಎನ್ನುವುದೇ ಹೆಮ್ಮೆ. ಅದು ನನ್ನ ವೃತ್ತಿ ಬದುಕಿಗೆ ಸಿಕ್ಕ ತಿರುವು.

ಥಾಯ್ಲೆಂಡ್‌ನಲ್ಲಿ ನಡೆದ ಫಿಬಾ ಏಷ್ಯನ್ ಟೂರ್ನಿಯಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದೆ ಎಂಬ ಮೆಚ್ಚುಗೆ ಸಿಕ್ಕಿದೆ. ಈ ಟೂರ್ನಿಯಲ್ಲಿ ಭಾರತ ಜೂನಿಯರ್ ತಂಡ ಆರನೇ ಸ್ಥಾನ ಗಳಿಸಿತು. ಬೆಂಗಳೂರಿನಲ್ಲಿ ಜೂನ್‌ನಲ್ಲಿ ಏಷ್ಯಾ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿದೆ. ಸದ್ಯಕ್ಕೆ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ನನ್ನೊಂದಿಗೆ 45 ಆಟಗಾರ್ತಿಯರು ಇದ್ದಾರೆ. ಆಡುವ 12 ಮಹಿಳೆಯರಲ್ಲಿ ನಾನೂ ಒಬ್ಬಳಾಗುವ ವಿಶ್ವಾಸ ಇದೆ.

*

‘ಚೀನಾ, ಜಪಾನ್, ಕೊರಿಯಾ ಆಟಗಾರ್ತಿಯರಂತೆ ನಾವು ಬ್ಯಾಸ್ಕೆಟ್‌ಬಾಲ್‌ ಆಡಲು ಸಾಧ್ಯವೇ ಎಂದು ಸಾಕಷ್ಟು ಬಾರಿ ಯೋಚಿಸಿದ್ದೇನೆ. ಓದು ಹಾಗೂ ಕ್ರೀಡೆ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿಕೊಂಡು ಹೋಗಬೇಕಾದ ಸವಾಲು ನಮ್ಮ ಮುಂದಿದೆ’

–ಎಚ್‌.ಎಂ. ಬಾಂಧವ್ಯ, ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಜೂನಿಯರ್ ತಂಡದ ನಾಯಕಿ, ಮಂಡ್ಯ

**

ನೂರಾರು ನಾಟಿ ಬೀಜಗಳ ಒಡತಿ

18 ವರ್ಷದ ಹಿಂದ ನಾನ್‌ ಮದ್ವಿಯಾಗಿ ಗಂಡನ ಮನೀಗೆ ಬಂದಾಗ ನಂಗ 18 ವರ್ಷ. ನನ್‌ ಅತ್ತಿ–ಮಾವ ನಾಟಿ ಬೀಜ ಕೂಡಿಡ್ತಿದ್ರು. ಅವ್ರ ಹಾದೀಲೇ ನಡ್ದು 18ವರ್ಷದಿಂದ ನನ್ ಗಂಡನ ಮನೆಯವರ ಸಹಾಯದಿಂದ ನಾನೇ ನಾಟಿಬೀಜ ರಕ್ಷಣೆ ಮಾಡಾಕತ್ತೇನ್ರಿ. ತರಕಾರಿ, ಹಣ್ಣು–ಹಂಪಲು ಅಂತ 100ಕ್ಕೂ ಹೆಚ್‌ ನಾಟಿಬೀಜ ನಮ್ ಹತ್ರ ಅದಾವ್ರಿ. 10ಎಕ್ರೆ ಭೂಮಿ. ಇವನ್ನೇ ಬೆಳೀತೀವಿ.  ನಮ್ದು ಸಾವಯವ ಬೆಳಿ. ಬೇಡಕಿನೂ ಭಾಳೈತಿ. ಮಾರ್ಕೆಟ್‌ನಾಗೂ ಮುಗಿಬಿದ್ದು ಖರೀದಿ ಮಾಡ್ತಾರ. ಹೊಲದಾಗೂ ನಮ್ಮನಿ ಮಂದಿನೇ ದುಡಿಯೋದು, ಮಾರಾಟ ಮಾಡೋದೂ ನಾವೇರಿ. ಅದ್ಕೆನೇ ಕೂಲಿ ಗೀಲಿ ಅಂತ ಹೆಚ್ಚು ಖರ್ಚು ಆಗಾಕಿಲ್ರಿ.

ನಾಟಿ ಬೀಜಾನ್ನ ಜತನದಿಂದ ಕಾಪಾಡೂದು ಕಷ್ಟಾನೇ. ಅದ್ಕೆ ಇದ್ರ ಉಸಾಬರಿನೇ ಬೇಡಾ ಅಂತ, ಲಗೂನೆ ಲಾಭಾ ಸಿಗಬೇಕು ಅಂತಾ  ಹೆಚ್ಚಿ
ನವ್ರು ಅಂಗ್ಡಿಯಲ್ಲಿ ಸಿಗೋ ರಾಸಾಯನಿಕನೇ ಖರೀದಿಸಿ ಭೂಮಿತಾಯಿಗೆ ವಿಷಾ ಉಣ್ಣಿಸಾಕತ್ತಾರೀ. ಭವಿಷ್ಯದಾಗ ಅವರಿಗೆಲ್ಲಾ ತಪ್ಪಿನ ಅರಿವಾಗ್ತೈತಿ. ನಾಟಿಬೀಜ ರಕ್ಷಣೆ ಮಾಡೂ ಮುಂದ ಅದ್ರ ಬಗ್ಗೆ ಸರಿಯಾಗಿ ತಿಳ್ಕೋಬೇಕ್‌ ನೋಡ್ರಿ... ಅವಕ್ಕೆ ಹುಳ–ಕೀಟ ಎಲ್ಲಾ ಬರದ್ಹಂಗ ಜೋಪಾನ ಮಾಡಬೇಕ್ರಿ. ಬದನಿ, ಬೆಂಡಿಕಾಯಿ ಬೀಜಾನ್ನ ಬೂದಿಯೊಳಗ ಮುಚ್ಚಿಡ್ಬೇಕು. ಸೋಡಿಗೆ, ಬೆಂಡಿ, ಹೀರೆ ಬೀಜಾನ್ನ ಸಿಪ್ಪಿಜೊತಿಗೇ ಒಣಗಿಸಿ
ಡ್ಬೇಕು, ಹಾಗಲ ಬೀಜ ಸೆಗಣಿಯೊಳಗ ಕಲಸಿ ಅಡುಗೆ ಒಲೆಯ ಹಿಂಭಾಗದ ಗೋಡೆಗೆ ಹೊಡೆದಿಡ್ಬೇಕು. ಕೃಷಿಗೆ ಉಳುಮೆ, ಗೊಬ್ಬರ, ನೀರು ನಿರ್ವಹಣೆ ಎಷ್ಟು ಮುಖ್ಯಾನೋ ಹಾಗೆನೇ ಸೂಕ್ತ ಬೀಜ ಸಂಗ್ರಹಿಸಿ ಬರುವರ್ಷಕ್ಕಾಗೋ ಥರ ಜಾಗ್ರತೆಯಲ್ಲಿ ಬಚ್ಚಿಡುವ ಜಾಣ್ಮೆನೂ ಬೇಕಾಗ್ತೈತಿ.

ಎಲ್‌ ನೋಡಿದ್ರೂ ಸಾಲ ಸಾಲ ಅಂತಾರೀ. ನಾವು ಸಾಲಾನೇ ಮಾಡಿಲ್ಲ. ಕಳೆದ ವರ್ಷ ಸ್ವಲ್ಪ ಲಾಸ್‌ ಆತು, ಅದೂ ಬರ ಇತ್ತಲ್ಲ ಅದ್ಕೆ. ಆದ್ರೆ ಜಮೀನಿನಲ್ಲಿ ನೀರಿನ ಶೇಖರಣೆ ಮಾಡಿದ್ರಿಂದ ಈ ವರ್ಷ ಇನ್ನೂ  ನೀರು ಐತಿ. ಅರಿಶಿಣದಿಂದ ಪುಡಿ, ಗೋಧಿಯಿಂದ ಹಿಟ್ಟು, ಜವೇಗೋಧಿಯಿಂದ ರವೆ... ಇವೆಲ್ಲಾ ಮಾಡಿ ನಮ್‌ ಬೆಳೆಯ ಮೌಲ್ಯವರ್ಧನೆ ಮಾಡಾಕತ್ತೀವಿ.   ಬೆಳೆಗಳ ಬೆಲೆಯಲ್ಲಿ ಏರುಪೇರಾದ್ರೂ ಇವುಗಳಿಂದ ಯಾವಾಗ್ಲೂ ಲಾಭ ಸಿಗ್ತದ. ಲುಕ್ಸಾನು ಅನ್ನೂದು ಇಲ್ವೇ ಇಲ್ಲಾ. ಸಾಲ–ಗೀಲಾ ಅನ್ನೂ ಸಮಸ್ಯೆನೂ ಇಲ್ಲ. ಸಂಪರ್ಕಕ್ಕೆ: 9008214658

*

ಲಗೂನೆ ಲಾಭ ಸಿಗ್ಬೇಕು ಅಂತ ಭೂತಾಯಿಗೆ ವಿಷ ಉಣ್ಸೋ ಬದ್ಲು ನಾಟಿ ಬೀಜದಿಂದ ಬೆಳೆ ಬೆಳೆದ್ರೆ ಲಾಭಾನೂ ಜಾಸ್ತಿ. ಆರೋಗ್ಯನೂ ಪಸಂದ್‌ ಆಗಿರ್ತೈತಿ.

–ಮೀನಾಕ್ಷಿ ಧರೆಪ್ಪ ಕಿತ್ತೂರ, 
ತೇರದಾಳ, ಜಮಖಂಡಿ ತಾಲ್ಲೂಕು, ಬಾಗಲಕೋಟೆ

***

ಆತ್ಮವಿಶ್ವಾಸವೇ ಒಡವೆ

ನಂಗೀಗ 23 ವರ್ಷ. ಜೂನ್‌ನಲ್ಲಿ ಒಡವೆ ವಿನ್ಯಾಸದ ಅಕಾಡೆಮಿ ಆರಂಭಿಸುತ್ತಿದ್ದೇನೆ. ನನ್ನದೇ ಬ್ರ್ಯಾಂಡ್‌ ‘ಅರ್ವಾ’ ಮಾರುಕಟ್ಟೆಯಲ್ಲಿದೆ. ‘ಅರ್ವಾ’ ಎಂದರೆ ಸೌಹಾರ್ದದ ವೈಭವ. ಸೌಹಾರ್ದವೇ ಬೆಳಗಲಿ ಎನ್ನುವುದು ನನ್ನ ಉದ್ದೇಶ.

ಒಮ್ಮೆ ಫೇಲಾದ ಹುಡುಗಿ, ಉದ್ಯಮಿಯಾಗಿ ಬೆಳೆದದ್ದು ಸರಳವಾಗಿರಲಿಲ್ಲ. ಬಂಡವಾಳ ತರುವುದು ದೊಡ್ಡ ಸವಾಲಾಗಿತ್ತು. ಜೊತೆಗೆ, ‘ನಿನ್ನನ್ನು ಮದುವೆಯಾಗುವವನಿಗೆ ಹುಡುಗಿ ವ್ಯಾಪಾರ ಮಾಡ್ತಾಳೆ ಅನ್ನಬೇಕಾ ಅಥವಾ ಆಚಾರಿಯಂತೆ ಒಡವೆ ಮಾಡ್ತಾಳೆ ಎನ್ನಬೇಕಾ ಎಂದು ಮನೆಯವರು ಪ್ರಶ್ನಿಸಿದ್ದರು. ಬದಲಿಗೆ ಎಂಬಿಎ ಮಾಡಿ, ನೆಲೆಗಾಣು ಎಂಬ ಉಪದೇಶಗಳೇ ಬಂದಿದ್ದವು.

ಆಭರಣ ವಿನ್ಯಾಸದ ಕೋರ್ಸ್‌ ಸೇರಿಕೊಂಡು ಅದನ್ನು ಮುಗಿಸಿದೆ.  ಮುಂದೇನು? ಯಾವುದಾದರೂ ಕಂಪೆನಿಗೆ ವಿನ್ಯಾಸಕಿಯಾಗಿ ಸೇರಬಹುದಿತ್ತು. ಆದರೆ ಅದು ನನಗಿಷ್ಟವಿರಲಿಲ್ಲ. ನಾನು ಯಾವತ್ತಿದ್ದರೂ ನನ್ನ ದಾರಿ ನಿರ್ಮಿಸಬೇಕೆಂದುಕೊಂಡಿದ್ದೆ.

ಆಭರಣಗಳ ಇಡೀ ಉದ್ಯಮ ವಿಶ್ವಾಸದ ಮೇಲೆ ನಿಂತಿದೆ. ಕಾರಿಗರ್‌ ಪರಿಚಯ ಮಾಡಿಕೊಳ್ಳುವ ಜೊತೆ ಅವರ ವಿಶ್ವಾಸ ಗಳಿಸಬೇಕಿತ್ತು. 19 ವಯಸ್ಸಿನವಳಾಗಿದ್ದ ನಾನು ಕಾರಿಗರ್‌ ಬಳಿ ತೆರಳಿ, ನನಗಾಗಿ ಕೆಲಸ ಮಾಡುವಿರಾ ಎಂದು ಕೇಳುವುದೇ ಸವಾಲಾಗಿತ್ತು. ಈ ಕುಶಲಕರ್ಮಿಗಳೆಲ್ಲ ಉಳಿಪೆಟ್ಟು ನೀಡುವುದರಲ್ಲಿ ನಿರತರಾದರೆ ಮುಂದೆ ಯಾರೇ ಬಂದು ನಿಂತರೂ ನೋಡುವುದಿಲ್ಲ. ಒಬ್ಬೊಬ್ಬರು ಒಂದೊಂದು ಕಲೆಯಲ್ಲಿ ನಿಪುಣರು. ಕೆಲವರು ಪಾಶ್ಚಿಮಾತ್ಯ ಶೈಲಿಯ ಆಭರಣಗಳನ್ನು ನಾಜೂಕಾಗಿ ನಿಭಾಯಿಸುವುದರಲ್ಲಿ ತಜ್ಞರಾದರೆ, ಇನ್ನೂ ಕೆಲವರು ಸಾಂಪ್ರದಾಯಿಕ ಆಭರಣಗಳನ್ನು ರಚಿಸುವಲ್ಲಿ ಪರಿಣತರಾಗಿದ್ದರು. ಅವರಲ್ಲಿ ಯಾರಿಗೆ, ಯಾವ ಕೆಲಸ ನೀಡಬೇಕೆಂಬುದನ್ನು ನಿಭಾಯಿಸಬೇಕಿತ್ತು.

ಆಭರಣಗಳ ಅಂಗಡಿಗಳಿವೆ. ಸಾಕಷ್ಟು ಬ್ರ್ಯಾಂಡ್‌ಗಳಿವೆ. ಹಲವಾರು ಸಿದ್ಧ ವಿನ್ಯಾಸಗಳು ಲಭ್ಯ ಇರುವಾಗ ನನ್ನನ್ನೇಕೆ ಆಯ್ಕೆ ಮಾಡಬೇಕು...? ಆಗ ಹೊಸ ತಂತ್ರಗಳನ್ನು ಆರಂಭಿಸಿದೆ. ಸಾಂಸ್ಕೃತಿಕ ಆಯಾಮಗಳನ್ನು ಅಧ್ಯಯನ ಮಾಡಿದೆ. ದಕ್ಷಿಣ ಭಾರತೀಯರಲ್ಲಿ ಚಿನ್ನ ಈಗಲೂ ಆಪದ್ಧನವೆಂದೇ ಪರಿಗಣಿಸಲಾಗುತ್ತದೆ. ಉತ್ತರ ಭಾರತೀಯರಲ್ಲಿ ಅದೊಂದು ಸಂಗ್ರಹ. ದಕ್ಷಿಣದವರಲ್ಲಿ ಪಾರಂಪರಿಕ ಉಡುಗೊರೆಯಾಗಿ ಬಂದ ಒಡವೆಗಳೂ ಇರುತ್ತವೆ. ಕೆಲವೊಮ್ಮೆ ನಾಜೂಕಾಗಿದ್ದು, ಅಲ್ಲಲ್ಲಿ ಮುಕ್ಕಾಗಿರುತ್ತವೆ. ಅದೇ ವಿನ್ಯಾಸ ಬೇಕಿರುತ್ತದೆ. ಅದೇ ಚಿನ್ನ ಬೇಕಿರುತ್ತದೆ.

ಅಲ್ಲೊಂದು ಭಾವಬಂಧ ಸೇತು ಆ ಒಡವೆ. ಅಮ್ಮನಿಗೆ, ಅಜ್ಜಿಗೆ, ಇನ್ಯಾರಿಗೋ ಸೇರಿದ್ದು. ಇವನ್ನೆಲ್ಲ ಗಮನದಲ್ಲಿರಿಸಿ ಅಂಥ ಕೆಲಸಗಳನ್ನು ಒಪ್ಪಿಕೊಳ್ಳಲಾರಂಭಿಸಿದೆ. ಅವರ ಬಜೆಟ್‌, ಅವರ ಅಭಿರುಚಿಯಂತೆ ಸಿಗುತ್ತದೆ ಎನ್ನುವುದೇ ಯಶಸ್ಸಿನ ಸೂತ್ರವಾಯಿತು. ಪ್ರೀತಿಪಾತ್ರರ ಬೆರಳಚ್ಚ ಒಡವೆ ಧರಿಸುವುದು ಟ್ರೆಂಡ್‌ ಆಗಿದೆ. ಇದನ್ನು ಹುಟ್ಟುಹಾಕಿದ್ದು ನಾನೇ. ಪುಟ್ಟ ಮಕ್ಕಳ ಅಚ್ಚನ್ನು ಒಡವೆಯಾಗಿಸಿಕೊಳ್ಳುವುದು ತಾಯಂದಿರಿಗೆ ಇಷ್ಟ. ಆ ಅಚ್ಚಿನ ಮಿನಿಯೇಚರ್‌ ಮಾಡಿ ಅದರ ಪದಕ, ಓಲೆ ಹೀಗೆ ಏನಾದರೂ ಮಾಡಿಕೊಡುವ ಕುಶಲಕರ್ಮಿಗಳು ನನ್ನ ಜೊತೆಗಿದ್ದಾರೆ. ಉತ್ಸಾಹ, ಅಚಲ ನಿರ್ಧಾರ, ಆತ್ಮವಿಶ್ವಾಸದಿಂದ ಮುನ್ನುಗ್ಗಿದ್ದೇ ಇದೆಲ್ಲ ಸಾಧ್ಯವಾಗಿಸಿತು.

ಮಾಹಿತಿಗೆ: https://m.facebook.com/Arvaa-Jewelry-619811708119250/ ಅಥವಾ http://arvaacademy.com/

ದಾರಿ ಯಾವುದೆಂದು ಅರಿಯದೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಈಗ ‘ಅರ್ವಾ’ ಹೆಸರಿನಲ್ಲಿ ನನ್ನದೇ ಮಾರ್ಗವನ್ನು ಸೃಷ್ಟಿಸಿದ್ದೇನೆ. ಇದು ಸಾಧ್ಯವಾಗಿದ್ದು ವೃತ್ತಿ ಬಗೆಗಿನ ಅಕ್ಕರಾಸ್ಥೆ, ಆಸಕ್ತಿ, ಬದ್ಧತೆಯಿಂದ. 

– ಪ್ರಜ್ಞಾ ಹೆಬ್ಬಾಲೆ, ಆಭರಣ ವಿನ್ಯಾಸಕಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT