ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ನಲ್ಲಿ ‘ಭಾರತ ದರ್ಶನ’

Last Updated 12 ಮಾರ್ಚ್ 2017, 5:05 IST
ಅಕ್ಷರ ಗಾತ್ರ

ನಿಮ್ಮ ಈ ನಾಲ್ಕು ದಿಕ್ಕಿನ ಬೈಕ್‌ ಪಯಣ ಶುರುವಾಗಿದ್ದು ಹೇಗೆ?
ಪ್ರಶ್ನೆಗೆ ಉತ್ತರಿಸುವ ಮುನ್ನ ಚಿರಂತನ್ ಅರೆಕ್ಷಣ ನಿಟ್ಟುಸಿರುಬಿಟ್ಟರು. ‘ನಿಜ ಹೇಳಲಾ, ಕಾಲೇಜು ಮೆಟ್ಟಿಲು ಹತ್ತುವವರೆಗೂ ಬೈಕ್ ಬಗ್ಗೆ ನನಗೆ ಏನೂ ತಿಳಿದಿರಲೇ ಇಲ್ಲ. ಸೈಕಲ್ ತುಳಿಯೋದೂ ಗೊತ್ತಿರಲಿಲ್ಲ. ಇದೆಲ್ಲಾ ಸಾಧ್ಯವಾಗಿದ್ದು ನನಗೂ ಅಚ್ಚರಿಯೇ’ ಎಂದು ನಕ್ಕರು.

ಎಸ್ಸೆಸ್ಸೆಲ್ಸಿವರೆಗೂ ಸೈಕಲ್ ಹಿಡಿದೇ ಗೊತ್ತಿರದ ಚಿರಂತನ ಅವರಿಗೆ  ಕಾಲೇಜು ಮೆಟ್ಟಿಲೇರುತ್ತಿದ್ದಂತೆ ‘ಹೀರೊ ಪುಕ್‌’ನ ಸಹವಾಸ ಜೊತೆಯಾಯಿತಂತೆ. ಅಪ್ಪ ಕೊಡಿಸಿದ ‘ಹೀರೊ ಪುಕ್‌’ನಲ್ಲೇ ವೀಕೆಂಡ್‌ಗಳಲ್ಲಿ ಸಮಯ ಕಳೆಯಲು ನಂದಿಬೆಟ್ಟ, ಮೈಸೂರು, ಹೀಗೆ ಬೆಂಗಳೂರಿನ ಸುತ್ತಮುತ್ತಲ ಜಾಗಗಳಿಗೆಲ್ಲಾ ಓಡಾಡುತ್ತಿದ್ದರು. ಬೇಸರವಾಗಲಿ, ಖುಷಿಯಾಗಲಿ ಮೊದಲು ನೆನಪಾಗುತ್ತಿದ್ದುದೇ ಬೈಕ್. ಸುಮ್ಮನೆ ಬೈಕ್ ಮೇಲೆ ಕೂತು ಎಲ್ಲಿಗೆ ಹೋಗಬೇಕನ್ನಿಸುತ್ತೋ ಅಲ್ಲಿಗೆ ಹೊರಟುಬಿಡುತ್ತಿದ್ದವರು. ಅಲೆದಾಟದ ರುಚಿ ಹತ್ತಿದ್ದು ಆಗಲೇ.

‘‘ತಿರುಗಾಟದ ಸೆಳೆತ ಸುಲಭಕ್ಕೆ ಬಿಡುವಂತಿರಲಿಲ್ಲ. ಬೆಂಗಳೂರಿನಲ್ಲಿದ್ದುದರಿಂದ ಪ್ರತಿ ವೀಕೆಂಡ್ ಬೇರೆ ಬೇರೆ ಸ್ಥಳ ನೋಡುತ್ತಿದ್ದೆ. ಹೀರೊ ಪುಕ್ ನಂತರ ಕೈನೆಟಿಕ್ ಬಾಸ್ ತೆಗೆದುಕೊಂಡಿದ್ದೆ. ಇತ್ತೀಚೆಗೆ ಯಮಾಹಾ ಎಫ್‌ಝೆಡ್ ಎಸ್‌ ಬೈಕ್ ಖರೀದಿಸಿದ್ದೆ. ಅದರಲ್ಲೇ ಕನ್ಯಾಕುಮಾರಿಗೆ ಹೋಗಿದ್ದೆ. ಅಲ್ಲಿಂದ ಬಂದಿದ್ದೇ ಮನೆ ಬಳಿ ಬೈಕ್ ನಿಲ್ಲಿಸಿದೆ.

ಬೈಕ್‌ ನನ್ನನ್ನು ನೋಡಿ, ‘ಮತ್ತೊಂದು ದೊಡ್ಡ ಟ್ರಿಪ್ ಹೊಡೆಯೋಣ, ಪ್ಲೀಸ್’ ಎಂದು ಕಣ್ಣು ಮಿಟುಕಿಸಿದಂತಾಯಿತು. ನನಗೆ ನಗು ಬಂತು. ‘ಇರು ಮಗಾ ಯೋಚನೆ ಮಾಡೋಣ’ ಅಂದೆ. ನಾನು ನನ್ನ ಬೈಕ್ ಜೊತೆ ತುಂಬಾ ಚೆನ್ನಾಗಿ ಮಾತಾಡುತ್ತೀನಿ’’ ಎಂದು ಹೇಳುತ್ತ ಚಿರಂತನ ನಕ್ಕರು.

ಹೊಸ ಟ್ರಿಪ್ ಬಗ್ಗೆ ಯೋಚಿಸತೊಡಗಿದ ಚಿರಂತನ ಅವರಿಗೆ – ಈ ಟ್ರಿಪ್ ಎಲ್ಲಕ್ಕಿಂತ ಭಿನ್ನವಾಗಿರಬೇಕು. ನಿರುದ್ದೇಶದ ರೈಡ್‌ ಬದಲು ಒಂದು ಉದ್ದೇಶದೊಂದಿಗೆ ರೈಡ್ ಮಾಡಬೇಕು; ಅದು ಗುರುತಿಸುವಂತಾಗಬೇಕು ಎನ್ನಿಸಿದೆ. ಹೀಗೆ ಯೋಚಿಸುತ್ತಿರುವಾಗಲೇ ಅವರಿಗೆ  ಗೆಳೆಯರೊಬ್ಬರಿಂದ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಬಗ್ಗೆ ಮಾಹಿತಿ ಸಿಕ್ಕಿತು.

‘ಗೆಳೆಯ ಹೇಳಿದ ನಂತರ ಲಿಮ್ಕಾದವರನ್ನು ಸಂಪರ್ಕಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆರು ದಿನದಲ್ಲಿ ಬೈಕ್ ಯಾನ ಮಾಡಿದ್ದ ದಾಖಲೆಯಿತ್ತು. ನನಗೆ 72 ಗಂಟೆಗಳ ಮಿತಿ ಇತ್ತು. ನೀವು ಪ್ರಯತ್ನಿಸಿ ಎಂದರು. ನನ್ನದು 150 ಸಿಸಿ ಬೈಕ್. ಇದರಲ್ಲಿ ಸಮಯದ ಮಿತಿಯಲ್ಲಿ ಆರೇಳು ಸಾವಿರ ಕಿಲೋ ಮೀಟರ್ ಪೂರೈಸುವುದು ಸಾಧ್ಯವಿಲ್ಲ. ಹಾಗಿದ್ದರೆ 150 ಸಿಸಿಯಲ್ಲಿ ಇರುವ ಆಯ್ಕೆಗಳಾವುವು ಎಂದು ಯೋಚಿಸಿದೆ.

ಒಂದು ತಿಂಗಳು ಸುಮ್ಮನಿದ್ದುಬಿಟ್ಟೆ. ಬೇರೆ ಏನು ಆಯ್ಕೆ ಇದೆ ಎಂದು ಮತ್ತೆ ಅವರನ್ನು ಕೇಳಿದೆ. ಆಗ ಅವರು, ‘ಇಂಡಿಯಾ ಫೋರ್ ಕಾರ್ನರ್ಸ್ ರೈಡ್’ ಇದೆ, ಇದುವರೆಗೂ ಅದನ್ನು ಯಾರೂ ಪ್ರಯತ್ನಿಸಿಲ್ಲ ಎಂದರು. ಅದರಲ್ಲಿ ‘ಅನ್‌ಅಟೆಂಪ್ಟೆಡ್’ ಎಂಬ ಪದ ನನ್ನನ್ನು ಸೆಳೆದದ್ದು. ಸಮಯ ಇನ್ನಿತರ ಕಟ್ಟುನಿಟ್ಟುಗಳಿಲ್ಲದೇ ಸುಂದರ ಸ್ಥಳಗಳನ್ನು ನೋಡಿಕೊಂಡು ಬರುವುದಕ್ಕಿಂತ ಖುಷಿ ಬೇರೆಲ್ಲಿ? ಮನಸ್ಸು ಮಾಡೇಬಿಟ್ಟೆ’ ಎನ್ನುವಾಗ ಸಂತಸ ಅವರ ಮುಖದಲ್ಲಿ ತುಂಬಿಕೊಂಡಿತ್ತು.

ದಾಖಲೆ ಎಂದರೆ ಸುಲಭವಲ್ಲ. ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಬೇಕಲ್ಲ. ಎರಡು ತಿಂಗಳಿನಿಂದ ರೂಟ್ ಪ್ಲಾನ್ ಆಯಿತು. ಲಾಗ್ ಬುಕ್ ಜೊತೆಗಿತ್ತು. ಬೈಕ್‌ಗೆ ಜಿಪಿಎಸ್‌ ಟ್ರ್ಯಾಕರ್ ಹಾಕಿಸಿದ್ದಾಯಿತು. ಬಗಲಿಗೆ ಬ್ಯಾಗ್‌ಗಳು ಪ್ಯಾಕ್ ಆದವು. ದೇಶದ ನಾಲ್ಕು ತುದಿ ಮುಟ್ಟುವ ದಿನದ ಆರಂಭ ಬಂದೇ ಬಿಟ್ಟಿತ್ತು.

 
ಇಂಡಿಯಾ ಫೋರ್ ಕಾರ್ನರ್ಸ್ ರೈಡ್ ನಕ್ಷೆ.

*
ಭಾರತದ ನಾಲ್ಕು ಕೊನೆಗಳು 
ದೆಹಲಿ, ಚೆನ್ನೈ, ಬಾಂಬೆ, ಕೋಲ್ಕತ್ತ ಸಂಪರ್ಕಿಸುವ ದಾರಿಯ ರೈಡ್ ಅನ್ನು ‘ಗೋಲ್ಡನ್ ಕ್ವಾಡ್ರಿಲಾಟರಲ್ ರೈಡ್’ ಎನ್ನುತ್ತಾರೆ. ‘ಇಂಡಿಯಾ ಫೋರ್ ಕಾರ್ನರ್ ರೈಡ್’ ಎಂದರೆ ಗುಜರಾತ್‌ನ ಕೋಟೇಶ್ವರದ ಸಮೀಪದ ನಾರಾಯಣ ಸರೋವರ (ಪಶ್ಚಿಮ ಭಾಗ), ಜಮ್ಮು ಮತ್ತು ಕಾಶ್ಮೀರದ ಲೇಹ್ (ಉತ್ತರ ಭಾಗ), ಅರುಣಾಚಲ ಪ್ರದೇಶದ ತೇಜು (ಪೂರ್ವ ಭಾಗ), ತಮಿಳುನಾಡಿನ ಕನ್ಯಾಕುಮಾರಿ (ದಕ್ಷಿಣ ಭಾಗ).

ಇವಿಷ್ಟನ್ನೂ ಪೂರೈಸಿದರೆ ಭಾರತದ ನಾಲ್ಕೂ ಮೂಲೆಗಳನ್ನು ಮುಟ್ಟಿದಂತಾಗುತ್ತದೆ. ಇದೇ ಹಾದಿಯನ್ನು ಕ್ರಮಿಸಲು ಚಿರಂತನ, ಬೆಂಗಳೂರು – ಗುಜರಾತ್ – ಲೇಹ್ – ತೇಜು – ಕನ್ಯಾಕುಮಾರಿ – ಬೆಂಗಳೂರು –  ಈ ಹಾದಿಯ ಮೂಲಕ 18 ರಾಜ್ಯಗಳನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡರು.

ದಾಖಲೆ ಮಾಡುವುದು ಮಾತ್ರವಲ್ಲ, ಬೈಕ್ ಯಾನ ಅರ್ಥಪೂರ್ಣ ಉದ್ದೇಶವನ್ನೂ ಒಳಗೊಳ್ಳಬೇಕೆಂಬ ಕಾರಣಕ್ಕೆ ‘ರೈಡ್ ಸೇಫ್–ರೀಚ್ ಹೈಟ್ಸ್–ರೀಚ್ ಸೇಫ್’ ಎಂಬ ಸಂದೇಶದೊಂದಿಗೆ ಬೈಕ್ ಸವಾರಿ ಹೊರಟರು.

ಅನುಭವದ ಯಾನ
ಬೆಂಗಳೂರು ವಿಶ್ವವಿದ್ಯಾಲಯದಿಂದ ಜೂನ್ 18, 2016ಕ್ಕೆ ರಾತ್ರಿ 12ಕ್ಕೆ ಚಿರಂತನ ಅವರ ಬೈಕ್ ಯಾನ ಆರಂಭಗೊಂಡಿತು. ಆ ಯಾನದ  ಅನುಭವವನ್ನು ಅವರು ನೆನಪಿಸಿಕೊಂಡಿದ್ದು ಹೀಗೆ ‘‘ಮನೆಯಲ್ಲಿ ಈ ವಿಷಯವನ್ನು ಯಾರಿಗೂ ಹೇಳೇ ಇರಲಿಲ್ಲ.

ಜೂನ್ 18ರ ರಾತ್ರಿ ಹೊರಟು ನಿಂತಾಗ, ಇದೂ ಒಂದು ವೀಕೆಂಡ್ ಟ್ರಿಪ್ ಎಂದು ಅಮ್ಮ, ಹೆಂಡತಿ ಕಳಿಸಿಕೊಟ್ಟರು. ಮಗಳು ‘ಯು ಆರ್ ಬಾರ್ನ್‌ ಟು ರೈಡ್’ ಎಂದಳು. ಗೋವಾಗೆ ಹೋಗಿಬರುತ್ತೇನೆ ಎಂದು ಹೇಳಿ ಹೊರಟೆ.  ಬೆಂಗಳೂರು ವಿಶ್ವವಿದ್ಯಾಲಯದಿಂದ ನನ್ನ ಪಯಣ ಆರಂಭಗೊಂಡಿದ್ದು.

ಗೋವಾ ತಲುಪಿದ ಮಾರನೇ ದಿನವೇ ‘ಅಂತರರಾಷ್ಟ್ರೀಯ ಮೋಟಾರು ಸೈಕಲ್ ದಿನ’ ಇತ್ತು. ನಾನು ಈ ದಿನವನ್ನು ಆಚರಿಸಬೇಕು, ಮುಂಬೈಗೆ ಹೋಗುತ್ತೇನೆ ಎಂದೆ. ಮನೆಯವರು ಸರಿ ಎಂದರು. ಇಷ್ಟು ದೂರ ಬಂದಿದ್ದೇನೆ, ಗುಜರಾತ್ ಇನ್ನು ಸ್ವಲ್ಪ ದೂರ ಇದೆ. ಅಲ್ಲಿಗೆ ಹೋಗಿ ಬರುತ್ತೇನೆ ಎಂದೆ. ಅದಕ್ಕೂ ಒಪ್ಪಿದರು. ಆದರೆ ಸುಳ್ಳು ತುಂಬಾ ದಿನ ನಡೆಯುವುದಿಲ್ಲ. ಅವರಿಗೆಲ್ಲಾ ಗೊತ್ತಾಯಿತು. ಆಮೇಲೆ ಬೈಗುಳಗಳೋ ಬೈಗುಳ. ಇದೇ ಕೊನೆ, ಇದೇ ಕೊನೆ ಎಂದು ಏನಾದರೂ ಒಂದು ನೆಪ ಹೇಳುತ್ತಲೇ ಇದ್ದೆ.

ಬೆಂಗಳೂರು–ಗೋವಾದಿಂದ ಮುಂಬೈ ಹಾದಿ ಹಿಡಿದ ನಂತರ ಮೊದಲ ತುದಿ ತಲುಪಿದ್ದು ಗುಜರಾತ್‌ನ ನಾರಾಯಣ ಸರೋವರವನ್ನು. ಯಾನದ ಒಂದೊಂದು ಕಿಲೋಮೀಟರೂ ಒಂದೊಂದು ಅನುಭವ ನೀಡಿದವು. ಬೆಳಿಗ್ಗೆ ಎದ್ದಾಕ್ಷಣ ಗಾಡಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುತ್ತಿದ್ದೆ.

ದಿನಕ್ಕೆ ಐನೂರರಿಂದ ಆರು ನೂರು ಕಿಲೋಮೀಟರ್ ಹಾದಿ ಕ್ರಮಿಸುತ್ತಿದ್ದೆ. ದಕ್ಷಿಣ ಭಾರತದಲ್ಲಿ ಪ್ರಯಾಣಕ್ಕೆ ಪೂರಕ ವಾತಾವರಣವಿದೆ. ಆದರೆ ಪಂಜಾಬ್, ಗುಜರಾತ್‌ಗೆ ಹೋಗುತ್ತಿದ್ದಂತೆ ನೆಲದಿಂದ ಹಬೆ ಏಳುವುದು ಕಾಣುತ್ತದೆ. ಬೆಳಿಗ್ಗೆ ಡ್ರೈವ್ ಮಾಡುವಾಗ ಆ ಬಿಸಿಲಲ್ಲಿ ಬೈಕ್‌ ಚಕ್ರವೇ ಕರಗಿಹೋಗುವಂತಿತ್ತು. ಅಲ್ಲಿ, ಗಂಟೆಗೆ

20–30 ಕಿ.ಮೀ ಅಷ್ಟೇ ಕ್ರಮಿಸುತ್ತಿದ್ದುದು. ನಾನು ನೀರು ಕುಡಿದಾಗ ಬೈಕ್‌ಗೂ ನೀರು ಹಾಕುತ್ತಿದ್ದೆ. ರಾತ್ರಿ 7 ಗಂಟೆ ನಂತರ ಪರಿಸರ ತಂಪಾಗಿರುತ್ತಿತ್ತು. ಆಗ ರಾತ್ರಿ ರೈಡ್ ಮಾಡುತ್ತಿದ್ದೆ. ನನ್ನ ಬೈಕ್‌ ಕೂಡ ನಾನಿದ್ದೇನೆ ಎಂದು ಸಾಥ್ ನೀಡುತ್ತಿತ್ತು.

ಮುಂದಿನ ಪಯಣ ಕಾಶ್ಮೀರದೆಡೆಗೆ. ದೆಹಲಿ ಬರುತ್ತಿದ್ದಂತೆ ಶೀತ. ಲೇಹ್‌ನಲ್ಲಿ ಹಿಮ. ಎಷ್ಟೇ ಚೆನ್ನಾಗಿ ಓಡಿಸಿದರೂ ಅಲ್ಲಿ ಗಂಟೆಗೆ 15 ಕಿ.ಮೀ. ಮಾತ್ರ ಮುಗಿಸಲು ಸಾಧ್ಯವಾಗಿದ್ದು. ಪೆಬಲ್ ರಸ್ತೆಗಳು, ಎಕ್ಸಲೇಟರ್ ಕೊಟ್ಟರೆ ಪ್ರಪಾತ. ಬ್ರೇಕ್ ಹೆಚ್ಚು ಕಡಿಮೆ ಆದರೆ ಕಣಿವೆಗಳ ಪಾಲೇ ಸರಿ. ಅಲ್ಲಿ ತುಂಬಾ ಹುಷಾರಾಗಿ ಓಡಿಸಬೇಕಿತ್ತು. ಮನಾಲಿಗೆ ಬರುವಾಗ ‘ಫಾಗ್ ವ್ಯಾಲಿ’ ಎದುರಾಯಿತು. ನನ್ನ ಕೈ ನನಗೇ ಕಾಣುತ್ತಿರಲಿಲ್ಲ.

ಎಲ್ಲಕ್ಕೂ ಸಿದ್ಧವಿದ್ದವರು ಮಾತ್ರ ಇಲ್ಲಿಗೆ ಬರಬೇಕು. ಅಲ್ಲಿ ಟೆಂಟ್‌ನಲ್ಲೇ ಮಲಗಬೇಕು. ಎಷ್ಟು ರಗ್ಗು ಕೊಟ್ಟರೂ ಹೊಳೆಯಲ್ಲಿ ಮಲಗಿದಂತೆ ಇರುತ್ತದೆ. ಗ್ಯಾಸ್ ಸ್ಟೌ ಪಂಪ್ ಮಾಡಿ ಪಕ್ಕ ಇಟ್ಟರೂ ಆಗುತ್ತಿರಲಿಲ್ಲ. ಅಷ್ಟು ಚಳಿ. ಕಾಶ್ಮೀರ ಗಡಿಗೆ ಬಂದಾಗ ಯಾವುದೇ ಮೊಬೈಲೂ ಕೆಲಸ ಮಾಡುವುದಿಲ್ಲ. ‘ಬಿಎಸ್‌ಎನ್‌ಎಲ್’ ಪೋಸ್ಟ್ ಪೇಯ್ಡ್ ಮಾತ್ರ ಕೆಲಸ ಮಾಡುವುದು. ಅದನ್ನು ನಾನು ಟ್ರ್ಯಾಕರ್‌ಗೆ ಹಾಕಿದ್ದೆ. ಗಾಡಿ ಒಳಗೆ ಸಿಕ್ಕಿಕೊಂಡ ಅದನ್ನು ತೆಗೆಯಲು ಆಗಲಿಲ್ಲ.

ಒಂದೂವರೆ ದಿನ ಯಾವ ಸಂಪರ್ಕವೂ ಇರಲಿಲ್ಲ. ಆದರೆ ಖರ್ದುಂಗ್‌ ಲಾ ತಲುಪುವ ಉತ್ಸಾಹ ಎಲ್ಲವನ್ನೂ ಮರೆಸಿತ್ತು. ಏನೋ ರೋಮಾಂಚನ. ವಿಶ್ವದ ಎತ್ತರದ ಮೋಟಾರ್ ರೈಡ್‌ ರಸ್ತೆ. ‘ರೈಡರ್‌ಗಳ ಸ್ವರ್ಗ’ ಎಂದೇ ಕರೆಸಿಕೊಂಡಿರುವ ಈ ಜಾಗಕ್ಕೆ ಬರುವಾಗ, ಆ ತುದಿ ಮುಟ್ಟಿದಾಗ ಹಿಂದೆ ಆದ ಕಷ್ಟದ ಅನುಭವಗಳೆಲ್ಲಾ ಬದಿಗೆ ಸರಿದಿದ್ದವು. ಆ ಅನುಭವಗಳ ಸುಖವನ್ನೇ ಮೆಲುಕು ಹಾಕುತ್ತಾ ಮೂರನೇ ತುದಿ ತಲುಪಲು ಹೊರಟೆ.

ಅಸ್ಸಾಂನಲ್ಲಿನ ಸ್ನೇಹಿತನ ಸಂಬಂಧಿಯ ಮನೆಗೆ ಬಂದೆ. ಆತಿಥ್ಯ ಮುಗಿದ ನಂತರ ರೆಡಿಯಾಗಿ ‘ಹೊರಡುತ್ತೇನೆ’ ಅಂದೆ. ‘ಎಲ್ಲಿಗೆ?’ ಎಂದರು. ‘ಮುಂದಿನ ದಾರಿ ಹಿಡಿಯುತ್ತೇನೆ’ ಎಂದೆ. ಅದಕ್ಕೇ ಅವರು, ‘ಎಲ್ಲಿ ಹೋಗುವುದು, ಒಮ್ಮೆ ಹೊರಗೆ ನೋಡಿ’ ಎಂದರು. ಹೊರಗೆ ನೋಡಿದರೆ ದಾರಿಯಲ್ಲಿ ಎದೆಮಟ್ಟದ ನೀರು. ರಾತ್ರಿ ಮಳೆ ಬಂದು ಅಷ್ಟು ನೀರು ತುಂಬಿಕೊಂಡಿತ್ತು. ಅಲ್ಲಿ ಅದು ಸಾಮಾನ್ಯ ನೋಟ, ಮಳೆ ಬಂದರೆ ನೀರು ತುಂಬಿ ಹೋಗಿ ಮಧ್ಯಾಹ್ನದ ಹೊತ್ತಿಗೆ ಇಳಿದುಬಿಡುತ್ತಿತ್ತು. ಮಧ್ಯಾಹ್ನ ಮೂರು ಗಂಟೆವರೆಗೂ ಕಾದೆ. ಕೊನೆಗೂ ಇಳಿಯಿತು.

ಅಲ್ಲಿ ಪೂರ್ತಿ ಮಳೆ. ‘ಕ್ಲೌಡ್‌ ಬರ್ಸ್ಟ್‌’ ಅಂತಾರಲ್ಲ – ಮಳೆ, ಬಿರುಗಾಳಿ ಒಟ್ಟಿಗೆ ಸೇರೋದು, ಅದನ್ನೂ ಕಂಡೆ. ಆದರೆ ಎಲ್ಲೂ ನನ್ನ ದೇಹವಾಗಲಿ, ಬೈಕ್ ಆಗಲೀ ಕೆಟ್ಟು ನಿಲ್ಲಲಿಲ್ಲ.

ಆಹಾರದ ವಿಚಾರದಲ್ಲೂ ಅಷ್ಟೆ. ಎಲ್ಲೂ ತೊಂದರೆಯಾಗಲಿಲ್ಲ.  ಸ್ಥಳ ನೋಡುವುದರೊಂದಿಗೆ ಅಲ್ಲಿನ ಆಹಾರ ಸಂಸ್ಕೃತಿ ಬಗ್ಗೆಯೂ ಅಲ್ಪ ಸ್ವಲ್ಪ ತಿಳಿದುಕೊಂಡೆ. ಅಲ್ಲಿನ ವಿಶೇಷ ಸ್ಥಳೀಯ ಆಹಾರವನ್ನೇ ತಿನ್ನುತ್ತಿದ್ದೆ. ಎರಡು ಮೂರು ದಿನ ಏನೂ ತಿನ್ನದೇ ಲಘು ಆಹಾರ ಸೇವಿಸುತ್ತಿದ್ದೆ. ಚಳಿ–ಬಿಸಿಲು ನಡುವಿನ ತಕ್ಷಣದ ಬದಲಾವಣೆಯ ಸಮಯದಲ್ಲಿ ಹೀಗೆ ಮಾಡುತ್ತಿದ್ದೆ. ಆದ್ದರಿಂದ ಎಲ್ಲೂ ಯಾವುದೇ ತೊಂದರೆಯೂ ಆಗಲಿಲ್ಲ.

ಅರುಣಾಚಲಂನ ತೇಜು ಕಡೆ ಪಯಣ ಮುಂದುವರೆಯಿತು. ಅದು ಮೂರನೇ ತುದಿ. ಅಲ್ಲಿಗೆ ಬಂದಾಗಲೇ ಮನೆಯವರಿಗೆ ಇಷ್ಟು ದೂರ ನಾನು ಬಂದಿರುವುದು ಗೊತ್ತಾಗಿದ್ದು. ತೇಜು ಕಡೆಗೆ ಹೊರಟಾಗ ಅಲ್ಲಿ ಸೆಕ್ಯುರಿಟಿಯವರು ತಡೆದು ನಿಲ್ಲಿಸಿದರು. ‘ಏಕೆ ಬಂದಿರಿ, ಉದ್ದೇಶ ಏನು, ಎಷ್ಟು ದಿನ ಇರುತ್ತೀರಿ...’ ಹೀಗೆ ಎಲ್ಲಾ ವಿವರಗಳನ್ನೂ ಕೊಡಬೇಕಿತ್ತು. ನಾನು ಅಲ್ಲಿಗೆ ಹೋದಾಗ ಬೆಳಿಗ್ಗೆ 8 ಗಂಟೆ. ‘ಎಷ್ಟು ಜನ ಇದ್ದೀರಿ?’ ಎಂದರು.

ನಾನೊಬ್ಬನೇ ಎಂದೆ. ತಕ್ಷಣ ಅವರ ಬಾಯಿಂದ ಬಂದ ಮಾತೆಂದರೆ – ‘ಹುಚ್ಚು ಹಿಡಿದಿದೆಯಾ?’. ‘ಎಷ್ಟು ದಿನ ಇರುತ್ತೀರಿ?’ ಎಂದರು. ಎರಡು ಮೂರು ದಿನ ಎಂದೆ. ‘ಅಷ್ಟು ದಿನಗಳು ಸಾಲುವುದಿಲ್ಲ’ ಎಂದು ಒಂದು ವಾರದ ಪರ್ಮಿಟ್ ಕೊಟ್ಟರು.

ತೇಜು ತಲುಪಲು 150 ಕಿ.ಮೀ. ದೂರ ಕ್ರಮಿಸಬೇಕಿತ್ತು. ಅಲ್ಲಿ ಭೂಕುಸಿತ ಸಂಭವಿಸುವುದು ಹೆಚ್ಚು. ಬೆಟ್ಟವೇ ಕುಸಿದು ಜಾಮ್ ಆಗಿಬಿಡುತ್ತದೆ. ಜೊತೆಗೆ ದಾರಿಯುದ್ದಕ್ಕೂ ಮಲಗಿರುವ ಹಸುಗಳು. ಅವುಗಳನ್ನು ದಾಟಿಕೊಂಡು ಹೋಗುವುದೇ ಒಂದು ಸಾಹಸ.

ನಾನು ಹೋದಾಗಲೂ ಭೂಕುಸಿತ ಸಂಭವಿಸಿತ್ತು. ಪರಶುರಾಮ್ ಕುಂಡ್ ಎನ್ನುವ ಜಾಗವೊಂದಿದೆ. ಅಲ್ಲಿ ಒಂದು ಅಣೆಕಟ್ಟು ದಾಟುತ್ತಿದ್ದಂತೆ ಬೆಟ್ಟ ಕುಸಿದುಬಿದ್ದದ್ದು ಕಾಣಿಸಿತು. ಇನ್ನೇನು ಮಾಡೋದು, ಆ ಕಡೆ 30 ಕಿ.ಮೀ ಊರಿಲ್ಲ, ಈ ಕಡೆ 30 ಕಿ.ಮೀ ಊರಿಲ್ಲ. ಸಂಪೂರ್ಣ ಕಾಡು.

ನನ್ನ ಅದೃಷ್ಟಕ್ಕೆ ಸ್ವಲ್ಪ ಸಮಯದ ನಂತರ ಅಲ್ಲಿ ರಸ್ತೆ ತೆರವು ಮಾಡುತ್ತಿದ್ದ ಜೆಸಿಬಿ ಕಾಣಿಸಿತು. ‘ನನ್ನ ಬೈಕ್‌ಗೆ ಜಾಗ ಮಾಡಿಕೊಡಿ’ ಎಂದು ಕೇಳಿಕೊಂಡೆ. ದಾಟಿ ಹೊರಟೆ. ಎರಡು ಮೂರು ದಿನ ಅಂದುಕೊಂಡಿದ್ದವನು ಅಂದು ಸಂಜೆ  7ಕ್ಕೇ ಸೆಕ್ಯುರಿಟಿ ಜಾಗಕ್ಕೆ ವಾಪಸ್ ಬಂದಿದ್ದೆ. ಅವರಿಗೆ ‘ನಮಸ್ಕಾರ’ ಹೇಳಿದೆ. ಬಿಟ್ಟ ಕಣ್ಣು ಬಿಟ್ಟಂತೆ ನನ್ನನ್ನೇ ನೋಡುತ್ತಿದ್ದರು.

ಇನ್ನೂ ಒಂದು ಸುಂದರ ಅನುಭವ ಎಂದರೆ, ಅರುಣಾಚಲಂನ ಹಳ್ಳಿಯೊಂದರಲ್ಲಿ ಈಗಲೂ ಗ್ಯಾಜೆಟ್‌ಗಳಿಲ್ಲ. ಸಂಜೆಯಾಗುತ್ತಿದ್ದಂತೆ ಮನೆಯವರೆಲ್ಲಾ ಒಂದು ಕಿಲೋಮೀಟರ್‌ ನಡೆದುಕೊಂಡು ಹೋಗುತ್ತಾರೆ. ಹರಟೆ ಹೊಡೆದುಕೊಂಡು ಮತ್ತೆ ಮನೆಗೆ ಮರಳುತ್ತಾರೆ. ಅದನ್ನು ನೋಡಿದಾಗ ನನಗೆ ಅಚ್ಚರಿಯೊಂದಿಗೆ ಸಂತಸವೂ ಆಗಿತ್ತು. ಸಿಲಿಗುರಿಯಿಂದ ನೇಪಾಳ ನೋಡುವಾ ಎಂದು ಈ ಕಡೆ ಬಂದೆ.

ನೇಪಾಳದ ನೋಡಿಕೊಂಡು ಕೋಲ್ಕತ್ತಾದೆಡೆಗೆ ಇಳಿದು ಬಂದೆ. ಒಡಿಶಾದಲ್ಲಿ ಪೂರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಿ ರಥೋತ್ಸವ ಮುಗಿಸಿದೆ. ಅಲ್ಲಿ ನಕ್ಸಲ್ ಹಾವಳಿ ಹೆಚ್ಚಂತೆ.

ಗಂಟೆಗೊಮ್ಮೆ ಬೈಕ್ ನಿಲ್ಲಿಸಿ ಗಾಡಿಗೂ, ಬಾಡಿಗೂ ವಿಶ್ರಾಂತಿ ಕೊಡುವುದು ರೂಢಿ. ಒಮ್ಮೆ ಹೋಟೆಲ್ ಹತ್ತಿರ ಕುಳಿತುಕೊಂಡಿದ್ದೆ. ಒಬ್ಬ ಮನುಷ್ಯ ಬಂದು ನನ್ನ ಬಗ್ಗೆ ವಿಚಾರಿಸಿದ. ಆರ್ಮಿ ಗ್ರೀನ್ ಪ್ಯಾಂಟ್ ಹಾಕಿದ್ದರಿಂದ ನನ್ನ ಬಳಿ ಬಂದು ಕೇಳಿದ್ದ. ಎಲ್ಲಾ ಹೇಳಿದ ಮೇಲೆ, ‘ಇಲ್ಲಿಂದ ತಿರುಗಿ ನೋಡದೇ ಹೊರಡು. ಎಲ್ಲೂ ನಿಲ್ಲಬೇಡ. ನಿನ್ನ ಜೀವದ ಬಗ್ಗೆ ಎಚ್ಚರ ಇರಲಿ’ ಎಂದು ಎಚ್ಚರಿಸಿದ. ಒಂದು ಕ್ಷಣ ಬೆಚ್ಚಿಬಿದ್ದೆ. ವಿಜಯವಾಡದವರೆಗೂ ಎಲ್ಲೂ ಬೈಕ್‌ ನಿಲ್ಲಿಸಲಿಲ್ಲ.

ಕೊನೆಗೆ ಚೆನ್ನೈಗೆ ಬಂದಮೇಲೇ ಸಮಾಧಾನ. ಅಲ್ಲಿ ಜಿಪಿಎಸ್ ಟ್ರ್ಯಾಕರ್ ರೆಡಿ ಮಾಡಿಸಿದೆ. ಇನ್ನು ಉಳಿದದ್ದು ಒಂದೇ ತುದಿ – ಕನ್ಯಾಕುಮಾರಿ. ಕೊನೆ ತಲುಪುವ ಉಲ್ಲಾಸದಲ್ಲಿ ಬೈಕ್ ಯಾನ ಮುಂದುವರೆಸಿದೆ. ಬೈಕ್‌ ಕನ್ಯಾಕುಮಾರಿ ತಲುಪಿತು. ಆದರೆ ಇದೇ ಕೊನೆಯಾಗಿರಲಿಲ್ಲ. ದಾಖಲೆ ಎಲ್ಲಿ ಆರಂಭಗೊಂಡಿತ್ತೋ ಅಲ್ಲಿಗೇ ವಾಪಸ್ ಬಂದರೆ ಮಾತ್ರ ಅದು ಪೂರ್ಣಗೊಳ್ಳುತ್ತಿತ್ತು. ಹಾಗಾಗಿ ಬೆಂಗಳೂರಿಗೇ ಬರಬೇಕಿತ್ತು. ಅಲ್ಲಿಂದ ಬೆಂಗಳೂರು 700 ಕಿಲೋಮೀಟರ್.

ಅಲ್ಲಿಂದ ಸೇಲಂ, ಬೆಂಗಳೂರು ನೇರದಾರಿ. ಕಣ್ಣುಮುಚ್ಚಿಕೊಂಡು ಓಡಿಸಬಹುದಿತ್ತು. ಆದರೆ ಮನಸ್ಸು ಕೇರಳ ಕಡೆಗೆ ಸೆಳೆಯಿತು. ಕೇರಳಕ್ಕೂ ಹೋಗಿಬಂದೆ. ‘ಥ್ಯಾಂಕಿಂಗ್ ರೈಡ್’ ಎಂದು ಶಬರಿಮಲೆಗೆ ಕೈಮುಗಿದು ಹೊರಟ ನನ್ನನ್ನು ತಡೆದು ನಿಲ್ಲಿಸಿದ್ದು ಹೊಸೂರಿನ ಟೋಲ್. ಇನ್ನು ಬಾಕಿ ಉಳಿದದ್ದು ಹದಿನೈದೇ ಕಿಲೋಮೀಟರು.

ಜುಲೈ 20. 32 ದಿನಗಳು, 14,104 ಕಿಲೋಮೀಟರು! ಜೋರು ಮಳೆ. ಸ್ವಾಗತವೃಷ್ಟಿ ಅನ್ನಿಸಿತು ನನಗೆ. ನನ್ನ ಸಂತೋಷ ಹೇಳತೀರದು. ಬೆಂಗಳೂರು ವಿಶ್ವವಿದ್ಯಾಲಯ ತಲುಪಿದಾಗ ಬೆಳಗಿನ ಜಾವ. ಮಸುಕು ಮಂಜು. ನನ್ನ ಬೈಕ್‌ನದ್ದು ಮಾತ್ರ ಸದ್ದು. ಬೈಕ್‌ ನಿಲ್ಲಿಸಿ ಇಷ್ಟು ದಿನದ ಸುಖವನ್ನು ಒಮ್ಮೆ ಮೆಲುಕು ಹಾಕಿದೆ. ನಿಟ್ಟುಸಿರುಬಿಟ್ಟು ಮನೆ ಕಡೆಗೆ ನಡೆದೆ. ಒಂದು ಗಂಟೆ ನಂತರ ಮತ್ತೆ ಕೆಲಸಕ್ಕೆ ಹಾಜರ್.

ಎರಡು ದಿನದ ನಂತರ ನನ್ನ ಹುಟ್ಟಿದ ಹಬ್ಬ ಇತ್ತು. ಎರಡೂ ಖುಷಿಗಳು ಒಟ್ಟೊಟ್ಟಿಗೇ. ಲಿಮ್ಕಾದಿಂದ ‘ಫಸ್ಟ್ ಪರ್ಸನ್ ಟು ಟಚ್ ಆಲ್ ಫೋರ್ ಕಾರ್ನರ್ಸ್‌ ಆಫ್ ಇಂಡಿಯಾ ಆನ್ ಬೈಕ್ ಸೋಲೊ’ ಎಂಬ ಇಮೇಲ್ ಗರಿ ಜೊತೆಗಿತ್ತು’’.

***
ಚಿರಂತನ್ ತಮ್ಮ ರೈಡಿಂಗ್ ಕಥನ ಮುಗಿಸಿದರು. ಅವರ ಸಾಹಸಗಾಥೆ ಕೇಳಿದ ಮೇಲೆ ಬೈಕ್‌ನ ಸದ್ದು ನಮ್ಮೊಳಗೂ ಅನುರಣಿಸತೊಡಗಿತು. 

ಕಲಾವಿದನಾಗಿ...
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ಕೆಲಸ ಮಾಡುತ್ತಿರುವ ಚಿರಂತನ ಅವರು ಸಂಸ್ಥೆಯ ‘ವಿವಿ ಕಲಾವಿದರು’ ಎಂಬ ಕ್ಲಬ್ ಮೂಲಕ ನಾಟಕಗಳನ್ನೂ ಮಾಡುತ್ತಾರೆ. ವರ್ಷಕ್ಕೊಮ್ಮೆ ಮುಂಬೈನಲ್ಲಿ ಇವರ ನಾಟಕ ಪ್ರದರ್ಶನ ನಡೆಯುತ್ತದೆ. ಇದರೊಂದಿಗೆ ‘ಡ್ರೈವರ್ಸ್ ಕ್ಲಬ್’ ಕೂಡ ಇದ್ದು, ಟ್ರಿಪ್ ಆಯೋಜನೆಯೂ ಇವರ ಹವ್ಯಾಸಗಳಲ್ಲಿ ಒಂದು. ಕಲಾವಿದೆ ಚೂಡಾಮಣಿ ಅವರ ಮಗನಾಗಿರುವ ಚಿರಂತನ ಅವರು ಧಾರಾವಾಹಿಗಳಲ್ಲೂ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT