ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ವಾಪಸ್: ಅಸಮಾಧಾನ ತಾತ್ಕಾಲಿಕ ಶಮನ

ಅರಣ್ಯ ಅಧಿಕಾರಿಗಳು– ಸಿಬ್ಬಂದಿ ನಡುವಿನ ಮುಸುಕಿನ ಗುದ್ದಾಟ-; ಮನವೊಲಿಕೆ ಯಶಸ್ವಿ
Last Updated 8 ಮಾರ್ಚ್ 2017, 10:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣ ಮಂಗಳವಾರ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಒಂದೆಡೆ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಧರಣಿ ನಡೆಸಿದರೆ, ಇನ್ನೊಂ ದೆಡೆ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳು ತನಗೂ ನೋವಾಗಿದೆಯೆಂದು ಕಚೇರಿ ಆವರಣದ ಅರಳಿಕಟ್ಟೆ ಮೇಲೆ ಏಕಾಂಗಿಯಾಗಿ ಕುಳಿತು ಮೌನ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಧಿಕಾರಿಯ ಸರ್ಕಾರಿ ವಸತಿ ಗೃಹದ ರಾತ್ರಿ ಕಾವಲಿಗೆ ಉಪವಲಯ ಅರಣ್ಯಾಧಿಕಾರಿ ಮತ್ತು ಅರಣ್ಯ ರಕ್ಷಕರನ್ನು ಸರದಿ ಪ್ರಕಾರ ನಿಯೋಜಿಸಿ ಆದೇಶ ಹೊರಡಿಸಿರು ವುದು ಸಿಬ್ಬಂದಿ ಮುಷ್ಕರದ ಹಾದಿ ಹಿಡಿಯುವಂತೆ ಮಾಡಿದೆ.

ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಮತ್ತು ಅರಣ್ಯ ರಕ್ಷಕರು ಹಾಗೂ ವೀಕ್ಷಕರ ಸಂಘದ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಈ ಆದೇಶ ರದ್ದುಪಡಿಸುವಂತೆ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಅರೆಬೆತ್ತಲೆ ಪ್ರತಿಭಟನೆ ಕೂಡ ನಡೆಸಿದ್ದರು.

ಮಂಗಳವಾರ ಬೆಳಿಗ್ಗೆ ಮತ್ತೆ ಕರ್ತವ್ಯಕ್ಕೆ ಗೈರು ಹಾಜರಾದ ಆಲ್ದೂರು, ಚಿಕ್ಕಮಗಳೂರು, ಮೂಡಿಗೆರೆ, ಕಡೂ ರು, ಮುತ್ತೋಡಿ ಪ್ರಾದೇಶಿಕ ವಲಯ, ಕಾರ್ಯ ಯೋಜನೆ ವಿಭಾಗ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಸಿಬ್ಬಂದಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆವರ ಣದಲ್ಲಿ ಮುಷ್ಕರ ಮುಂದುವರಿಸಿದರು.

ಚಿಕ್ಕಮಗಳೂರು ವೃತ್ತದ ವಲಯ ಅರಣ್ಯಾಧಿಕಾರಿಗಳೆಲ್ಲರೂ ಸಿಬ್ಬಂದಿ ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡಿ ದ್ದರು. ಡಿಎಫ್‌ಒ ಚಂದ್ರಣ್ಣ ಧರಣಿ ನಿರತ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಕುಳಿತು ರಾಜೀಸಂಧಾನದ ಪ್ರಯತ್ನ ನಡೆಸಿದರು. ಆದರೆ, ಸಿಬ್ಬಂದಿ ಸಂಧಾನಕ್ಕೆ ಒಪ್ಪಲಿಲ್ಲ.

ಇತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತು ಮರೆತು, ಅರಣ್ಯಕ್ಕೆ ಬೆಂಕಿ ಬಿದ್ದಿದ್ದರೂ ಲೆಕ್ಕಿಸದೆ ಮುಷ್ಕರ ನಿರತವಾಗಿರುವುದಕ್ಕೆ ಬೇಸತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗೇಗೌಡ ಅವರು ಕಚೇರಿ ಆವರಣದ ಅರಳಿಕಟ್ಟೆ ಮೇಲೆ ಏಕಾಂಕಿಯಾಗಿ ಕುಳಿತು ಪ್ರತ್ಯುತ್ತರದಂತೆ ಮೌನ ಧರಣಿ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಎಸ್ಪಿ ಕೆ.ಅಣ್ಣಾ ಮಲೈ ಮತ್ತು ಹೆಚ್ಚುವರಿ ಎಸ್ಪಿ ಅಣ್ಣಪ್ಪ ನಾಯ್ಕ ಸ್ಥಳಕ್ಕೆ ದೌಡಾಯಿಸಿ, ಮುಷ್ಕರನಿರತ ಸಿಬ್ಬಂದಿಯ ಮನವೊಲಿಸುವ ಪ್ರಯತ್ನ ನಡೆಸಿದರು.

ಕಾಡಿಗೆ ಬೆಂಕಿ ಬಿದ್ದಿರುವಾಗ ಪ್ರತಿಭಟನೆ ನಡೆಸುವ ಸಂದರ್ಭವಲ್ಲ ವೆಂದು ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಬಳಿಗೆ ಬಂದು ಮನವಿ ಸ್ವೀಕರಿಸುವಂತೆ ಪಟ್ಟುಹಿಡಿದರು. ಆದರೆ, ಇಲಾಖಾ ಶಿಸ್ತು ಉಲ್ಲಂಘಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಬಳಿಗೆ ಹೋಗಿ ಮನವಿ ಸ್ವೀಕರಿಸಲು ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಒಪ್ಪಲಿಲ್ಲ.

ಕೆಲ ಕಾಲ ಎರಡೂ ಕಡೆಯಿಂದ ಹಗ್ಗಜಗ್ಗಾಟ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆಸಿ, ಅಧಿಕಾರಿ ಮತ್ತು ಸಿಬ್ಬಂದಿ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಮತ್ತು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿದರು.

ಇದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂ ಹಿಕ ರಜೆಯನ್ನು ತಾತ್ಕಾಲಿಕವಾಗಿ ಹಿಂಪಡೆದು, ಮುಷ್ಕರ ಕೈಬಿಟ್ಟರು. ಸದ್ಯಕ್ಕೆ ಎರಡೂ ಕಡೆಯಿಂದ ಅಸಮಾ ಧಾನ ಶಮನವಾಯಿತು. ನಂತರ ಸುಮಾರು ಒಂದು ತಾಸು ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆಗೆ ಸಭೆ ನಡೆಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಇಲಾ ಖೆಯೊಳಗೆ ಹದಗೆಟ್ಟಿರುವ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು.

ಆಹೋರಾತ್ರಿ ಧರಣಿ
ಡಿಎಫ್‌ಒ ಸರ್ಕಾರಿ ನಿವಾಸವನ್ನು ಸರದಿ ಪ್ರಕಾರ ರಾತ್ರಿಕಾವಲು ಕಾಯು ವಂತೆ ಉಪ ವಲಯ ಅರಣ್ಯಾಧಿಕಾರಿ ಗಳು ಮತ್ತು ಅರಣ್ಯ ರಕ್ಷಕರನ್ನು ನಿಯೋ ಜಿಸಿರುವುದನ್ನು ವಿರೋಧಿಸಿ ನೌಕರರು ಮತ್ತು ಸಿಬ್ಬಂದಿ ಸೋಮವಾರ ಸಾಮೂ ಹಿಕ ರಜೆ ಹಾಕಿ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಕಚೇರಿ ಎದುರು ಆಹೋ ರಾತ್ರಿ ಅರೆಬೆತ್ತಲೆ ಧರಣಿ ನಡೆಸಿದ್ದರು.

ಡಿಎಫ್‌ಒ ಚಂದ್ರಣ್ಣ ಅವರ ಇಲಾ ಖಾ ವಸತಿ ಗೃಹವನ್ನು ರಾತ್ರಿ ಹೊತ್ತು ಕಾಯುವಂತೆ ಮಾ.2ರಿಂದ ಸಿಬ್ಬಂದಿ ಯನ್ನು ಸರದಿ ಪ್ರಕಾರ ನಿಯೋಜಿಸ ಲಾಗಿತ್ತು. ಮೂರು ದಿನ ಕಾಲ ಕಾವಲು ಕಾಯ್ದ ಸಿಬ್ಬಂದಿ, ಕೊನೆ ರೊಚ್ಚಿಗೆದ್ದು ಮೇಲಧಿಕಾರಿಗಳ ವಿರುದ್ಧ ಮೊದಲ ದಿನ 89 ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ದಿಢೀರ್‌ ಧರಣಿ ಆರಂಭಿಸಿದ್ದರು.

ಮಧ್ಯಾಹ್ನ ಸುಮಾರು 1.30ರಿಂದ ರಾತ್ರಿ 9.25ರವರೆಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದರು.
ಅರಣ್ಯ ಇಲಾಖೆ ಕೈಪಿಡಿಯಲ್ಲಿ ಡಿಎಫ್‌ಒ ಅಥವಾ ಯಾವುದೇ ಅಧಿ ಕಾರಿ ಮನೆ ಬಳಿ ಕಾವಲು ಕಾಯುವ ನಿಯಮ ಇಲ್ಲ. ಹಾಗಾಗಿ ಕೆಎಫ್‌ಸಿ ಪುಸ್ತಕ ದಲ್ಲಿ ಇಲ್ಲದ ನಿಯಮ ಹೇರುವುದು ಕಾನೂನು ಬಾಹಿರ ಎಂದು ಮುಷ್ಕರ ನಿರತರು ಆಕ್ರೋಶ ವ್ಯಕ್ತಪಡಿಸಿದ್ದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸುವಂತೆ ಸಿಬ್ಬಂದಿ ಪಟ್ಟುಹಿಡಿದಿದ್ದರು. ಕಾಡಿಗೆ ಬೆಂಕಿ ಬಿದ್ದು ಅರಣ್ಯ ಸಂಪತ್ತು ಹೊತ್ತಿಉರಿಯುತ್ತಿರುವಾಗ ಸಿಬ್ಬಂದಿ ಕರ್ತವ್ಯ ಮರೆತು, ಸಮವಸ್ತ್ರ ಕಳಚಿ ಧರಣಿ ಕುಳಿತ್ತಿರುವುದಕ್ಕೆ ಅಸಮಾಧಾನ ಗೊಂಡಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ರಂಗೇಗೌಡ, ಮುಷ್ಕರ ನಿರತರತ್ತ ತಿರುಗಿಯೂ ನೋಡಲಿಲ್ಲ. ಮನವಿ ಸ್ವೀಕರಿಸಿರಲಿಲ್ಲ. ಮಾಧ್ಯಮದವರಿಗೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಪ್ಪ ನಾಯ್ಕ ಬಂದ ನಂತರ, ಪೊಲೀಸ್‌ ರಕ್ಷಣೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ರಂಗೇಗೌಡ ಅವರು ತಮ್ಮ ಕಚೇರಿಯಿಂದ ಮನೆಗೆ ತೆರಳಿದ್ದರು.

ಸಿಸಿಎಫ್‌ ಪ್ರಮುಖ ಬೇಡಿಕೆ
*ಡಿಎಫ್‌ಒಗೆ ಇಬ್ಬರು ಅಧಿಕಾರಿಗಳು ಬೆದರಿಕೆ– ಈ ಬಗ್ಗೆ ತನಿಖೆಯಾಗಲಿ
*ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಆಗಲಿ
*ಮನೆಗೆ ಹೋಗದಂತೆ ತಡೆದು ದೌರ್ಜನ್ಯ ಎಸಗಿದವರ ಮೇಲೆ ಕ್ರಮ ಆಗಲಿ
*ಬಂದೂಕು ಕಳವು ಪ್ರಕರಣ– ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಿ
*ಡಿಎಫ್‌ಒ ಮನೆ ಹತ್ತಿರ ನಡೆದಿರುವ ಗಲಾಟೆ ಬಗ್ಗೆ ತನಿಖೆಯಾಗಲಿ

ಅಧಿಕಾರಿ, ಸಿಬ್ಬಂದಿ ಪ್ರಮುಖ ಬೇಡಿಕೆ
*ಡಿಎಫ್‌ ಮನೆ ಬಳಿ ಸಿಬ್ಬಂದಿ ರಾತ್ರಿ ಕಾವಲು ರದ್ದುಪಡಿಸಬೇಕು
*ಮೇಲಧಿಕಾರಿಗಳ ದೌರ್ಜನ್ಯ ಮತ್ತು ಕಿರುಕುಳ ನಿಲ್ಲಬೇಕು
*ವೇತನ, ಬಡ್ತಿ ಸೌಲಭ್ಯ ಸಕಾಲಕ್ಕೆ ಕೊಡಬೇಕು
*ಬೆಂಕಿ ನಂದಿಸುವ ಉಪಕರಣ, ಸಲಕರಣೆ ಕೊಡಬೇಕು
*ಬೆಂಕಿ ನಂದಿಸಲು ಬೆಂಕಿ ಕಾವಲುಗಾರರನ್ನು ನೇಮಿಸಬೇಕು
*ಬೆಂಕಿ ನಂದಿಸಲು ಜಿಲ್ಲೆಗೆ ಬಿಡುಗಡೆಯಾದ ಅನುದಾನ ಸದ್ಬಳಕೆಯಾಗಲಿ

*
ಅರಣ್ಯಕ್ಕೆ ಬೆಂಕಿ ಬೀಳುತ್ತಿದೆ. ಅಧಿಕಾರಿ ಮತ್ತು ಸಿಬ್ಬಂದಿ ಈ ರೀತಿ ಮುಷ್ಕರದಲ್ಲಿ ನಿರತವಾಗಿರುವುದು ಸರಿಯಲ್ಲ. ಅವರ 21 ಸಮಸ್ಯೆ ಸರ್ಕಾರ ದ ಮಟ್ಟದಲ್ಲಿ ಬಗೆಹರಿಯಬೇಕು.
-ರಂಗೇಗೌಡ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT